- ರಾಘವೇಂದ್ರ ಅಡಿಗ ಎಚ್ಚೆನ್
‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತಿದೆ. ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ರಾವಣನ ಪಾತ್ರದಲ್ಲಿ ಯಶ್ ನೀಡಿರುವ ಅಭಿನಯವನ್ನು ವಿಶೇಷವಾಗಿ ಕೊಂಡಾಡಿದ್ದಾರೆ. ಚಿತ್ರದ ಅದ್ಧೂರಿ ದೃಶ್ಯಗಳು ಮತ್ತು ಕ್ಲೈಮ್ಯಾಕ್ಸ್ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನವೆಂಬರ್ 5ರಂದು ಬಿಡುಗಡೆಯಾಗಿರುವ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ಸಿನಿಮಾದಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬೃಹತ್ ತಯಾರಿಕೆ, ವಿಎಫ್ಎಕ್ಸ್ ಮತ್ತು ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದೀಗ ರಾಜಮೌಳಿ ಕೂಡ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಬೃಹತ್ ವ್ಯಾಪ್ತಿ ಮತ್ತು ದೊಡ್ಡ ಪರದೆಯ ಮೇಲಿನ ದೃಶ್ಯಗಳು ಅದ್ಭುತವಾಗಿವೆ ಎಂದು ಬರೆದಿದ್ದಾರೆ. ವನವಾಸದ ನಂತರದ ಭಾಗಗಳಲ್ಲಿ ರಾಮನಾಗಿ ರಣ್ಬೀರ್ ಕಪೂರ್ ಶಾಂತವಾಗಿಯೂ ಅದ್ಭುತವಾಗಿಯೂ ಕಾಣುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಯಶ್ ಅವರ ರಾವಣನ ಪಾತ್ರದ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿರುವ ರಾಜಮೌಳಿ, ರಾವಣನಾಗಿ ಯಶ್ ಭಯಾನಕ ಪ್ರಭಾವ ಬೀರುತ್ತಾರೆ ಎಂದಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಕೃಪಾಪೂರ್ಣವಾಗಿ ಕಾಣುತ್ತಾರೆ ಎಂದು ಹೊಗಳಿದ್ದಾರೆ. ಚಿತ್ರದ ಪ್ರೀ-ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ನ ಪ್ರತಿಯೊಂದು ಕ್ಷಣವೂ ತಮಗೆ ಇಷ್ಟವಾಯಿತು ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಇಂತಹ ಮಹತ್ವಾಕಾಂಕ್ಷೆಯ ದೃಶ್ಯರೂಪವನ್ನು ಅದ್ಭುತವಾಗಿ ತೆರೆಗೆ ತಂದ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ ಮತ್ತು ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಅಂದಹಾಗೆ, ಸಿನಿಮಾ ಬಿಡುಗಡೆಯಾಗುವ ಮುನ್ನವೇ ರಾಜಮೌಳಿ ಚಿತ್ರದ ಟ್ರೈಲರ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಮಾಯಣ ಪ್ರತಿಯೊಬ್ಬ ಭಾರತೀಯ ಕಥೆಗಾರನೂ ಹೇಳಲು ಬಯಸುವ ಕಥೆ ಎಂದು ಬಣ್ಣಿಸಿದ್ದರು.
ಇನ್ನು ರಾಜಮೌಳಿ ಸದ್ಯ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ ‘ವಾರಣಾಸಿ’ ಸಿನಿಮಾದ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ.





