- ರಾಘವೇಂದ್ರ ಅಡಿಗ ಎಚ್ಚೆನ್.
ಸ್ತನ ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವತಿಯರು ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಗಾಆವಿವಿ) ವಿನೂತನ ಉಪಕ್ರಮಕ್ಕೆ ಮುಂದಾಗಿದೆ. ಸ್ತನ ಕ್ಯಾನ್ಸರ್ನ ಆರಂಭಿಕ ಪತ್ತೆ, ಸಕಾಲಿಕ ಚಿಕಿತ್ಸೆ ಹಾಗೂ ಮಹಿಳೆಯರ ಆರೋಗ್ಯದ ಮಹತ್ವವನ್ನು ಸಾರಲು ಅಕ್ಟೋಬರ್ 29ರಂದು ಬೆಂಗಳೂರಿನ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಗುಲಾಬಿ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲು ಉದ್ದೇಶಿಸಿದೆ.
ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ವಿಧಾನಸೌಧ, ಹಡ್ಸನ್ ವೃತ್ತದಲ್ಲಿರುವ ಟೌನ್ ಹಾಲ್, ಕಬ್ಬನ್ ಪಾರ್ಕ್ನಲ್ಲಿರುವ ಸರ್ ಶೇಷಾದ್ರಿ ಅಯ್ಯರ್ ಸ್ಮಾರಕ ಗ್ರಂಥಾಲಯ ಹಾಗೂ ರಾಜ್ಯ ವಸ್ತುಸಂಗ್ರಹಾಲಯಗಳಿಗೆ ಪಿಂಕ್ ಲೈಟಿಂಗ್ ಮಾಡಲು ಪ್ರಸ್ತಾವಿಸಲಾಗಿದೆ. ಈ ಮೂಲಕ ಸ್ತನ ಕ್ಯಾನ್ಸರ್ ಜಾಗೃತಿಯ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವುದು ವಿಶ್ವವಿದ್ಯಾಲಯದ ಆಶಯವಾಗಿದೆ.
ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಅವರು ಸಲ್ಲಿಸಿದ ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಹಾಗೂ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಂದ ಅನುಮೋದನೆ ದೊರೆತಿದೆ.

*ಸ್ತನ ಕ್ಯಾನ್ಸರ್: ಆರಂಭಿಕ ಪತ್ತೆಯೇ ಮಹತ್ವ*
ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ. ಜಾಗತಿಕವಾಗಿ ಮಹಿಳೆಯರಲ್ಲಿ ಪ್ರಮುಖವಾಗಿ ಕಂಡುಬರುವ ಕ್ಯಾನ್ಸರ್ಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದಾಗಿದೆ. ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಹಾಗೂ ಜೀವಗಳನ್ನು ಉಳಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕರ ಗಮನ ಸೆಳೆಯುವ ಪಿಂಕ್ ಲೈಟಿಂಗ್ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ವಿಶ್ವವಿದ್ಯಾಲಯ ಮುಂದಾಗಿದೆ.
*ಸಂಯೋಜಿತ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು*
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ಇತರ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಎಲ್ಲಾ ಸಂಯೋಜಿತ ಕಾಲೇಜುಗಳಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಸ್ತನಗಳಲ್ಲಿ ಕಂಡುಬರುವ ಅಸಹಜ ಬದಲಾವಣೆಗಳನ್ನು ಗುರುತಿಸುವುದು, ವೈದ್ಯಕೀಯ ಸಲಹೆ ಪಡೆಯುವುದು, ಸೂಕ್ತ ತಪಾಸಣೆ ಹಾಗೂ ಆರಂಭಿಕ ಪತ್ತೆಯ ಮಹತ್ವದ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ.

*ಜಾಗೃತಿಯಿಂದ ಆರೋಗ್ಯದ ಕಡೆಗೆ*
ಪಿಂಕ್ ಲೈಟಿಂಗ್ ಕೇವಲ ಕಟ್ಟಡಗಳ ಅಲಂಕಾರಕ್ಕೆ ಸೀಮಿತವಾಗದೆ, ಸ್ತನ ಕ್ಯಾನ್ಸರ್ ಕುರಿತು ಮುಕ್ತವಾಗಿ ಮಾತನಾಡಲು, ಆರೋಗ್ಯದ ಬಗ್ಗೆ ಜಾಗೃತರಾಗಿರಲು ಮತ್ತು ಅಗತ್ಯವಿದ್ದಾಗ ವೈದ್ಯಕೀಯ ನೆರವು ಪಡೆಯಲು ಪ್ರೇರೇಪಿಸುವ ಸಂಕೇತವಾಗಬೇಕು ಎಂಬುದು ವಿಶ್ವವಿದ್ಯಾಲಯದ ಆಶಯವಾಗಿದೆ.
ಮಹಿಳೆಯರ ಆರೋಗ್ಯ ಸಂರಕ್ಷಣೆ ಮತ್ತು ತಡೆಗಟ್ಟಬಹುದಾದ ಆರೋಗ್ಯ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ತನ್ನ ಬದ್ಧತೆಯ ಭಾಗವಾಗಿ ರಾಗಾಆವಿವಿ ಈ ಉಪಕ್ರಮವನ್ನು ಕೈಗೊಂಡಿದೆ. “ಜಾಗೃತಿ, ಆರಂಭಿಕ ಪತ್ತೆ ಮತ್ತು ಸಕಾಲಿಕ ಚಿಕಿತ್ಸೆ—ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಜೀವ ಉಳಿಸುವ ಪ್ರಮುಖ ಹೆಜ್ಜೆಗಳು” ಎಂಬ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.





