ಕನ್ನಡದ ಮೊಟ್ಟ ಮೊದಲ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ತಮ್ಮ ಕೆರಿಯರ್ ಬಗ್ಗೆ ಇಲ್ಲಿ ಏನು ಹೇಳಿಕೊಂಡಿದ್ದಾರೆ.....?
`ನನ್ನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಿಗುವ ಕಲ್ಪನೆಯೂ ನನಗಿರಲಿಲ್ಲ, ಹಾಗೊಮ್ಮೆ ಟಿವಿಯಲ್ಲಿ ನನ್ನ ಹೆಸರು ಘೋಷಣೆಯಾದಾಗ ನನ್ನ ಸಂತೋಷ ತಾಳಲಾಗದೆ ಗಟ್ಟಿಯಾಗಿ ಕೂಗಿದ್ದೂ ಇದೆ. ದೇವರ ಮುಂದೆ ಹಲವು ಘಳಿಗೆ ಕುಳಿತು ಗಟ್ಟಿಯಾಗಿ ಅವನನ್ನು ಕರೆದದ್ದೂ ಇದೆ. ನನಗೆ ನನ್ನ ಅಭಿನಯಕ್ಕೆ ಪ್ರಶಸ್ತಿ ಲಭಿಸಿರುವುದನ್ನು ನಂಬಲು ಸಹ ಹಲವು ಗಂಟೆಗಳ ಕಾಲ ಸಮಯ ಹಿಡಿಯಿತು,' ಎಂದು ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ನಟಿ ರೂಪಶ್ರೀ ವರ್ಕಾಡಿ ಹೇಳಿದ್ದಾರೆ. ಈ ಪ್ರಶಸ್ತಿ ದೊರಕಿರುವುದು ಅತ್ಯಂತ ಖುಷಿ ನೀಡಿದೆ. ವೃತ್ತಿ ಜೀವನದಲ್ಲಿನ ಸಾಕಷ್ಟು ಏಳುಬೀಳುಗಳ ನಡುವೆ ಈ ಪ್ರಶಸ್ತಿ ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ.
ಗಡಿನಾಡು ಕಾಸರಗೋಡಿನ ಮಂಜೇಶ್ವರ ತಾಲ್ಲೂಕಿನ ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ ಅವರಿಗೆ `ಮಿಥ್ಯ' ಕನ್ನಡ ಚಿತ್ರದ ಅಭಿನಯಕ್ಕಾಗಿ `ಅತ್ಯುತ್ತಮ ಪೋಷಕ ನಟಿ' ಚಲನಚಿತ್ರ ರಾಷ್ಟ್ರ ಪ್ರಶಸ್ತಿ ದೊರಕಿದೆ.

92 ವರ್ಷಗಳ ಸುದೀರ್ಘ ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯನ್ನು ಕರಾವಳಿಯ ಪ್ರತಿಭೆಯೊಂದು ಮಾಡಿ ತೋರಿಸಿದ್ದಾರೆ. ಅದೆಷ್ಟೋ ನಟಿಯರು ತೆರೆಯ ಮೇಲೆ ಮಿಂಚಿ ಮರೆಯಾಗಿದ್ದರೂ, ಕನ್ನಡದ ಪೋಷಕ ನಟಿಯೊಬ್ಬರಿಗೆ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯ ಮನ್ನಣೆ ಈವರೆಗೆ ಸಿಕ್ಕಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ `ಮಿಥ್ಯ' ಕನ್ನಡ ಸಿನಿಮಾದ ಅದ್ಭುತ ಅಭಿನಯಕ್ಕಾಗಿ ಕರಾವಳಿಯ ಹೆಮ್ಮೆಯ ನಟಿ ರೂಪಶ್ರೀ ವರ್ಕಾಡಿರಿಗೆ ರಾಷ್ಟ್ರೀಯ ಪ್ರಶಸ್ತಿ ಒಲಿದುಬಂದಿದ್ದು, ಇಡೀ ಕರ್ನಾಟಕವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಈ ಹಿಂದೆ ಅರುಂಧತಿ ನಾಗ್ ರಿಗೆ ಬಾಲಿವುಡ್ ನ `ಪಾ' ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರಕಿತ್ತು. ಆದರೆ ಕನ್ನಡ ಚಿತ್ರಕ್ಕೆ ದೊರೆತಿದ್ದು ಇದೇ ಮೊದಲು.
ಎರಡೂವರೆ ದಶಕಗಳಿಗೂ ಹೆಚ್ಚಿನ ಕಾಲದ ಕಲಾ ಪಯಣದಲ್ಲಿ ಕನ್ನಡ, ತುಳು ಭಾಷೆಗಳ 700ಕ್ಕೂ ಅಧಿಕ ನಾಟಕಗಳಲ್ಲಿ 4000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ರೂಪಶ್ರೀಯರದಾಗಿದೆ. ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ರ `ಸಂಸಾರದ ಸರ್ಕಸ್' ನಾಟಕದ ಮೂಲಕ ವೃತ್ತಿಪರ ರಂಗಭೂಮಿಗೆ ಕಾಲಿಟ್ಟಿದ್ದು, ಹಲವು ತಂಡಗಳ ನಾಟಕಗಳಲ್ಲಿ ಪಾತ್ರ ನಿರ್ವಹಿಸಿರುವ ರೂಪಶ್ರೀ ಕ್ರಿಸ್ಟೋಫರ್ ನೀನಾಸಂ ಹಾಗೂ ವಿದ್ದು ಉಚ್ಚಿಲ್ ರಂಗಾಯಣರಿಂದ ರಂಗ ತರಬೇತಿ ಪಡೆದಿದ್ದಾರೆ.
ರೂಪಶ್ರೀ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ವರ್ಕಾಡಿ ಗ್ರಾಮದ ಹರೀಶ್ ಶೆಟ್ಟಿಗಾರ್ ಹಾಗೂ ದಿ. ಹೇಮಾವತಿ ದಂಪತಿ ಪುತ್ರಿ. ತುಳು, ಕನ್ನಡ, ಕೊಂಕಣಿ, ಬ್ಯಾರಿ, ಅರೆಭಾಷೆ ಸೇರಿದಂತೆ 85ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2017-2025ರಲ್ಲಿ ರೆಡ್ ಎಫ್ ಎಂ ತುಳು ಫಿಲಂ ಅವಾರ್ಡ್ ನಲ್ಲಿ ಉತ್ತಮ ಪೋಷಕ ನಟಿ, ಸ್ಯಾಂಡಿಸ್ ಕಂಪನಿ ಆಯೋಜಿಸಿರು ಸಿಎಫ್ಎನಲ್ಲಿ ಸತತ ಮೂರು ಬಾರಿ ಉತ್ತಮ ಪೋಷಕ ನಟಿ ಹಾಗೂ ವರ್ಸಟೈಲ್ ಅಕ್ಬರ್ ಪ್ರಶಸ್ತಿ ಪಡೆದಿರು ರೂಪಶ್ರೀ ವರ್ಕಾಡಿ ಅಭಿನಯದ `ಬ್ಯಾರಿ' ಚಿತ್ರ ಸ್ವರ್ಣ ಕಮಲ ಪ್ರಶಸ್ತಿ ಹಾಗೂ `ಟ್ರಿಪಲ್ ತಲಾಖ್' ಚಿತ್ರ ರಾಜ್ಯ ಪ್ರಶಸ್ತಿಯನ್ನೂ ಪಡೆದಿದೆ.





