ಸದಭಿರುಚಿಯ ಹಾಗೂ ಮನಮುಟ್ಟುವ ಚಿತ್ರಗಳ ನಿರ್ದೇಶಕರೆಂದೇ ಖ್ಯಾತರಾಗಿರುವ ಕಲಾಸಾಮ್ರಾಟ್ ಡಾ. ಎಸ್. ನಾರಾಯಣ್ ಅವರ ನಿರ್ದೇಶನದ ನೂತನ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ ನೆರವೇರಿತ್ತು. ಇದೀಗ ಚಿತ್ರತಂಡದಿಂದ ಮತ್ತೊಂದು ಮಹತ್ವದ ಸುದ್ದಿ ಹೊರಬಂದಿದ್ದು, ಹೆಸರಾಂತ ನಟಿ ಶ್ರುತಿ ಈ ನೂತನ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಶ್ರುತಿ, ಈ ಹಿಂದೆ ಡಾ. ಎಸ್. ನಾರಾಯಣ್ ನಿರ್ದೇಶನದ ಭಾಮಾ ಸತ್ಯಭಾಮಾ, ತವರಿನ ತೊಟ್ಟಿಲು, ವೀರಪ್ಪನಾಯಕ, ಸಿರಿವಂತ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಇದೀಗ ಮತ್ತೊಮ್ಮೆ ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಶ್ರುತಿ ಅವರ ಪಾತ್ರದ ಸ್ವರೂಪವೇನು? ಕಥೆಯಲ್ಲಿ ಅವರ ಪಾತ್ರ ಯಾವ ರೀತಿಯ ತಿರುವುಗಳನ್ನು ನೀಡಲಿದೆ? ಎಂಬ ಕುತೂಹಲ ಸಹಜವಾಗಿಯೇ ಮೂಡಿದೆ. ಈ ಕುರಿತು ಚಿತ್ರತಂಡ ಸದ್ಯಕ್ಕೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

ಈ ನೂತನ ಚಿತ್ರಕ್ಕೆ ವಿ. ಹರಿಕೃಷ್ಣ ಅವರು ಸಂಗೀತ ಸಂಯೋಜಿಸುತ್ತಿದ್ದು, ಎಸ್. ನಾರಾಯಣ್ ಹಾಗೂ ವಿ. ಹರಿಕೃಷ್ಣ ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರ ಇದಾಗಿದೆ. ಗಿರಿಧರ್ ದಿವಾನ್ ಅವರ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಅವರ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ.

ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಅಜಯ್ ಕಾರ್ಯನಿರ್ವಹಿಸುತ್ತಿದ್ದು, ಪ್ರೊಡಕ್ಷನ್ ಹೆಡ್ ಆಗಿ ಪುಷ್ಪಮಾಲಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಚಿತ್ರದ ಶೀರ್ಷಿಕೆ, ನಿರ್ಮಾಪಕರು, ನಿರ್ಮಾಣ ಸಂಸ್ಥೆ ಹಾಗೂ ಇತರ ತಾರಾಬಳಗದ ಮಾಹಿತಿಯನ್ನು ಸದ್ಯಕ್ಕೆ ಗೌಪ್ಯವಾಗಿಟ್ಟಿರುವ ಚಿತ್ರತಂಡ, ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

ನಿರ್ದೇಶನದಲ್ಲಿ ಎಸ್. ನಾರಾಯಣ್ ಅವರ ಅನುಭವ, ಶ್ರುತಿ ಅವರ ಅಭಿನಯದ ವೈಶಿಷ್ಟ್ಯ ಹಾಗೂ ವಿ. ಹರಿಕೃಷ್ಣ ಅವರ ಸಂಗೀತದ ಮೆರುಗು—ಈ ಎಲ್ಲ ಅಂಶಗಳೊಂದಿಗೆ ನೂತನ ಚಿತ್ರ ಮತ್ತೊಂದು ಸದಭಿರುಚಿಯ ಸಿನಿಮಾವಾಗಿ ಮೂಡಿಬರಲಿದೆ ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ