ಸಿನಿಮಾ ಕೇವಲ ಬೆಳ್ಳಿತೆರೆ ಮೇಲೆ ನೆರಳುಬೆಳಕು ತೋರಿಸುವ ಆಟ ಮಾತ್ರವಲ್ಲ. ಅದು ಮಾನವೀಯ ಭಾವನೆ, ಸಾಮಾಜಿಕ ವಾಸ್ತವತೆ, ಸಾಂಸ್ಕೃತಿಕ ಸಮೃದ್ಧಿಯ ಒಂದು ಸಂಯುಕ್ತ ಸ್ವರೂಪ. ಹೀಗಾಗಿ ಇಲ್ಲಿ ನಿಮಗೆ ಕನ್ನಡವನ್ನೂ ಒಳಗೊಂಡಂತೆ, 7 ವಿವಿಧ ಭಾರತೀಯ ಭಾಷೆಗಳ ವೈವಿಧ್ಯಮಯ ಚಿತ್ರಗಳ ಅನೇಕ ಮುಖಗಳನ್ನು ಒಂದೇ ದಾರದಲ್ಲಿ ಪೋಣಿಸಿ ನೀಡುತ್ತಿದ್ದೇವೆ. ಕೆಲವು ಅವಿಭಕ್ತ ಕುಟುಂಬಗಳ ಪ್ರೀತಿ ವಾತ್ಸಲ್ಯದ ದಟ್ಟ ಚಿತ್ರಣ ನೀಡಿದರೆ, ಕೆಲವು ಭಯಾನಕ, ಭೀಭತ್ಸ ರಸಗವಳ ಅಭಿವ್ಯಕ್ತಿ ಆಗಿವೆ. ಕೆಲವು ದೈನಂದಿನ ಜೀವನದ ಕಟು ವಾಸ್ತವ ಚಿತ್ರಣವಾದರೆ, ಉಳಿದ ಪ್ರೇಮಕಾಮಗಳ ವೈಭವೋಪೇತ ಪ್ರದರ್ಶನಗಳು! ಇದರಲ್ಲಿ ರಾಜಕೀಯದಿಂದ ದೆವ್ವ ಭೂತಗಳವರೆಗೂ, ಭೂಗತ ಜಗತ್ತಿನಿಂದ ಮಾನವೀಯ ಮೌಲ್ಯಗಳ ಅಭಿವ್ಯಕ್ತಿಯವರೆಗೂ ವೈವಿಧ್ಯತೆ ಕಾಣಬಹುದು, ಬನ್ನಿ, ಈ ಅದ್ಭುತ ಕಥೆಗಳ ರೋಚಕ ವಿವರಣೆ ಬಗ್ಗೆ ತಿಳಿಯೋಣ....!
ಕನ್ನಡ : ಟಾಕ್ಸಿಕ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಟಾಕ್ಸಿಕ್' ಚಿತ್ರ ಅದ್ಭುತ ಥಿಯೇಟ್ರಿಕ್ ಪ್ರದರ್ಶನ ಮುಂದುವರಿಸಿದೆ. ಆದರೆ ಬಾಕ್ಸ್ ಆಫೀಸಿನಲ್ಲಿ ಇದು ಅಂದುಕೊಂಡ ಗಳಿಕೆ ಸಾಧಿಸಿಲ್ಲ. ಭರ್ಜರಿ ಓಪನಿಂಗ್ ಇದ್ದರೂ, FB, ಇನ್ ಸ್ಟಾಗಳ ವಿಭಿನ್ನ ಮಿಶ್ರ ಪ್ರಕ್ರಿಯೆಗಳಿಂದ, ಕಲೆಕ್ಷನ್ ಕುಸಿತವಾಗಿದೆ. ಹಲವು ಭಾಷೆಗಳ ಈ ಪ್ಯಾನ್ ಇಂಡಿಯಾ ಚಿತ್ರ 2 ವಾರಕ್ಕೆ ಕೇವಲ 248 ಕೋಟಿ ಗಳಿಸಿದ್ದು ನಿರಾಶಾದಾಯಕ ಎನಿಸಿದೆ. ಹೀಗಾಗಿ ಇದನ್ನು 2 ವಾರಗಳ ನಂತರ ಮಾದರಿಯಲ್ಲೂ ಬಿಡುಗಡೆ ಮಾಡಿದ್ದಾರೆ. KGF ನಂತರ ಕನ್ನಡದ ಏಕೈಕ ನಟರಾಗಿ ಯಶ್ ಈ ಹಿರಿಮೆಗೆ ಭಾಜನರಾಗಿದ್ದಾರೆ. ಕನ್ನಡ ಚಿತ್ರರಂಗದ ತಾಂತ್ರಿಕ ಹಾಗೂ ಜಾಗತಿಕ ವ್ಯಾಪ್ತಿಯಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿರುವ ನಟ ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ. ಮೂಲಕಥೆ ಹಾಗೂ ಮಹಿಳಾ ನಿರ್ದೇಶಕಿ ಗೀತಾ ಮೋಹನ್ ದಾಸ್ ರ ಈ ಅದ್ಭುತ ಚಿತ್ರ, ಯಶ್ ರ ದ್ವಿಪಾತ್ರದಲ್ಲಿ ಕಳೆಗಟ್ಟಿದೆ. ಇವರೊಂದಿಗೆ ಕಿಯಾರಾ ಅದ್ವಾನಿ, ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ರವಿ ಬಸ್ರೂರು ಅವರ ಮ್ಯೂಸಿಕ್ ಸ್ಕೋರ್ ಹಾಗೂ ಇವರೊಂದಿಗೆ ಇತರ ನಾಲ್ವರು ಪ್ರಮುಖ ಸಂಗೀತಗಾರರ ಹಾಡುಗಳಿವೆ. 1 ಸಾವಿರ ಕೋಟಿ ಭಾರಿ ಹೂಡಿಕೆಯುಳ್ಳ ಈ ಅತಿ ದುಬಾರಿ ಭಾರತೀಯ ಚಿತ್ರ ಗೆಲ್ಲಲೇ ಬೇಕಿದೆ!
ಗುಜರಾತಿ : ಟಾಮ್ & ಚೆರ್ರಿ

ಇದೊಂದು ಅದ್ಭುತ ಮನರಂಜನೆಯ ಗುಜರಾತಿ ಚಿತ್ರ. ಪ್ರೇಕ್ಷಕರು ತಕ್ಷಣ ವಿಶ್ವವಿಖ್ಯಾತ `ಟಾಮ್ & ಜೆರ್ರಿ'ಗೆ ಹೋಲಿಸದೆ ಇರಲಾರರು. ಟೈಟಲ್ ಗೆ ತಕ್ಕಂತೆ ಈ ಚಿತ್ರ ಅತಿ ಡೈನಾಮಿಕ್ ಆಗಿದೆ. ಚಿಕ್ಕ ಹುಡುಗ ಟಾಮ್ ಇದ್ದಕ್ಕಿದ್ದಂತೆ ಕಣ್ಮರೆಯಾದಾಗ, ಅವನನ್ನು ಹುಡುಕಲು ಚೆರ್ರಿ ಕಾಣಿಸುತ್ತಾನೆ. ಈ ಭಾವನಾತ್ಮಕ ಬೆಳವಣಿಗೆ ಕೌಟುಂಬಿಕ ಬಾಂಧವ್ಯ ಹೆಚ್ಚಿಸಿ, ನಗೆಗಡಲಲ್ಲಿ ತೇಲಿಸುತ್ತದೆ. ಒಟ್ಟಾರೆ ಅಪ್ಪಟ ಕೌಟುಂಬಿಕ ಚಿತ್ರವಾಗಿ, ಮಾರಾಮಾರಿ ಚಿತ್ರಗಳನ್ನು ಸಾರಾಸಗಟಾಗಿ ಬದಿಗೆ ಸರಿಸಿದೆ. ಹೆವಿ ಮೆಲೋಡ್ರಾಮಾ ಇಲ್ಲದಿರುವುದು ಇಲ್ಲಿನ ಅತಿ ದೊಡ್ಡ ಪ್ಲಸ್ ಪಾಯಿಂಟ್. ನಿರ್ದೇಶನದ ಬಿಗಿ ಮತ್ತು ನಟನೆ ಎಲ್ಲರ ಮನಸೆಳೆಯುತ್ತದೆ. ಚಿತ್ರದ ನಿರ್ದೇಶಕರು : ಧರ್ಮೇಶ್ ಮೆಹ್ತಾ. ಪ್ರಮುಖ ತಾರಾಗಣದಲ್ಲಿ ಸಿದ್ಧಾರ್ಥ್ ರಣದೇರಿಯಾ, ಧನ್ಯಾ ದೋಶಿ, ನಿಮೇಶ್ ದಿಲೀಪ್ರೈ, ಅನುರಾಗ್ ಪ್ರಸನ್ನ ಇದ್ದಾರೆ. ಸಂಗೀತ ನಿರ್ದೇಶಕರು ಮನೀಶ್ ಭಾನುಶಾಲಿ ಕಾಶಿನಾಥ್ ಕಶ್ಯಪ್. ತೆಲುಗು : ಇರುಮುಡಿ





