ಮಹಿಳೆಯರು ಕ್ಯಾನ್ಸರ್ ಕಾರಣದಿಂದ ಸಾವಿಗೀಡಾಗುವ ಪ್ರಕರಣಗಳಲ್ಲಿ ಸರ್ವೈಕಲ್ ಕ್ಯಾನ್ಸರ್‌ನ ಪ್ರಮಾಣವೇ ಹೆಚ್ಚು. ಹೀಗಾಗಿ ಇದರ ಬಗ್ಗೆ ಅರಿತುಕೊಳ್ಳುವುದು ಮತ್ತು ಎಚ್ಚರಿಕೆ ವಹಿಸುವುದರಲ್ಲಿ ಜಾಣತನವಿದೆ.....!
ಭಾರತದಲ್ಲಿ ಸರ್ವೈಕಲ್ ಕ್ಯಾನ್ಸರ್ ಮಹಿಳೆಯರು ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುವ ಪ್ರಕರಣಗಳಲ್ಲಿ ಅತಿ ಹೆಚ್ಚಿನ ಪ್ರಮಾಣ ಹೊಂದಿದೆ. ಭಾರತದಲ್ಲಿ ಪ್ರತಿ ಗಂಟೆಗೆ 8 ಮಹಿಳೆಯರು ಈ ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. 2020ರತನಕ ಈ ರೋಗದ 2,05,496 ಪ್ರಕರಣಗಳು ಪತ್ತೆಯಾಗಬಹುದೆಂದು ಅಂದಾಜು ಮಾಡಲಾಗಿದ್ದು, ಅದರಲ್ಲಿ 1,19,097 ಮಹಿಳೆಯರು. ಮೃತ್ಯುಗೀಡಾಗಬಹುದೆಂದು ಹೇಳಲಾಗಿದೆ. ಈ ರೋಗ ಏನು? ಆ ರೋಗದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ.
ಸರ್ವೈಕಲ್ ಕ್ಯಾನ್ಸರ್ ಏನಿದು?
ಇದು ಎಂತಹ ಒಂದು ಕ್ಯಾನ್ಸರ್ ಎಂದರೆ ಇದರಲ್ಲಿ ದೇಹದ ಜೀವಕೋಶಗಳು ನಿಯಂತ್ರಣದಿಂದ ಹೊರಗೆ ಇರುತ್ತವೆ. ಈ ಪ್ರಕ್ರಿಯೆ ಗರ್ಭಕೋಶದ ಕಂಠದಿಂದ ಆರಂಭವಾದರೆ ಇದನ್ನು `ಸರ್ವೈಕಲ್ ಕ್ಯಾನ್ಸರ್' ಎಂದು ಹೇಳಲಾಗುತ್ತದೆ. ಗರ್ಭಕೋಶದ ಕಂಠ ಗರ್ಭಕೋಶದ ಕೆಳಭಾಗದ ಸಂಕೀರ್ಣ ಭಾಗವಾಗಿದ್ದು, ಅದು ಯೋನಿಯನ್ನು ಗರ್ಭಕೋಶದ ಮೇಲ್ಭಾಗಕ್ಕೆ ಜೋಡಿಸುತ್ತದೆ.
ಸರ್ವೈಕಲ್ ಕ್ಯಾನ್ಸರ್ ಯಾವಾಗ ಆಗಬಹುದು ಹಾಗೂ ಇದಕ್ಕೆ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳಿ.
ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಎಚ್‌ಪಿವಿ) : ಎಚ್‌ಪಿವಿ ಎಂತಹ ಒಂದು ವೈರಸ್ ಎಂದರೆ, ಅದು ಗರ್ಭಕೋಶದ ಮೇಲ್ಭಾಗವನ್ನು ಸೋಂಕಿಗೀಡು ಮಾಡುತ್ತದೆ. ಇದೇ ಸರ್ವೈಕಲ್ ಕ್ಯಾನ್ಸರ್‌ಗೆ ಬಹುಮುಖ್ಯ ಕಾರಣ ಹಾಗೂ ಇದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ವರ್ಗಾವಣೆಯಾಗುತ್ತದೆ.
ಹಲವು ಲೈಂಗಿಕ ಸಂಗಾತಿಗಳು : ಒಬ್ಬ ವ್ಯಕ್ತಿ ಹೆಚ್ಚು ಜನರ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದರೆ ಈ ರೋಗ ತಗಲುವ ಸಾಧ್ಯತೆ ಹೆಚ್ಚು. ಹದಿವಯಸ್ಸಿನಲ್ಲಿ ಲೈಂಗಿಕ ಸಂಬಂಧ ಹೊಂದುವ ಹುಡುಗಿಯರಿಗೆ ಹಾಗೂ ಹಲವು ಲೈಂಗಿಕ ಸಂಗಾತಿಗಳನ್ನು ಹೊಂದುವ ಮಹಿಳೆಯರಿಗೆ ಎಚ್‌ಪಿವಿಯ ಸಾಧ್ಯತೆ ಹೆಚ್ಚು.
ಬಹುಬೇಗ ಲೈಂಗಿಕ ಚಟುವಟಿಕೆ ನಡೆಸುವವರಿಗೆ : ಗರ್ಭಕೋಶ ಕಂಠದ ಪದರ 18ನೇ ವಯಸ್ಸಿನ ತನಕ ಪರಿಪಕ್ವಗೊಂಡಿರುವುದಿಲ್ಲ. ಹೀಗಾಗಿ ಈ ವಯಸ್ಸಿನ ತನಕ ಲೈಂಗಿಕ ಸಂಪರ್ಕ ಹೊಂದಿರುವವರಿಗೆ ಇದರ ಅಪಾಯ ಹೆಚ್ಚುತ್ತದೆ.
ಲೈಂಗಿಕವಾಗಿ ಹರಡುವ ರೋಗ : ಸರ್ವೈಕಲ್ ಕ್ಯಾನ್ಸರ್ ಇರುವ ಮಹಿಳೆಯರಲ್ಲಿ ಸಾಮಾನ್ಯಾಗಿ ಲೈಂಗಿಕ ಸೋಂಕಿನ ಇತಿಹಾಸ ಇರುತ್ತದೆ. ಕ್ಲೈಮಿಡಿಯಾ, ಸಿಫಲಿಸ್, ಎಚ್‌ಐವಿ/ಏಡ್ಸ್ ನಂತಹ ರೋಗಗಳ ಅಪಾಯ ಹೆಚ್ಚುತ್ತದೆ.
ಧೂಮಪಾನ : ಸಿಗರೇಟು ಸೇದುವ ಮಹಿಳೆಯರಿಗೆ ಸರ್ವೈಕಲ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇರುತ್ತದೆ.
- ದೀರ್ಘಕಾಲ ಸಂತಾನ ನಿರೋಧಕ ಬಳಸುವ ಕಾರಣದಿಂದ (5 ವರ್ಷಕ್ಕೂ ಹೆಚ್ಚು ಕಾಲ) ಎಚ್‌ಪಿವಿ ಸೋಂಕು ತಗುಲುವ ಭೀತಿ ಹೆಚ್ಚಾಗುತ್ತದೆ.
- ಮೂರಕ್ಕೂ ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದರಿಂದಲೂ ಇದರ ಅಪಾಯ ಹೆಚ್ಚುತ್ತದೆ.
ಸರ್ವೈಕಲ್ ಕ್ಯಾನ್ಸರ್‌ನ ಲಕ್ಷಣಗಳು
- ಆರಂಭದಲ್ಲಿ ಇದರ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಕ್ಯಾನ್ಸರ್ ಹೆಚ್ಚುತ್ತ ಹೋದಂತೆ ಯೋನಿಯಿಂದ ರಕ್ತಸ್ರಾವ ಹೆಚ್ಚಾಗುತ್ತದೆ.
- ಮುಟ್ಟಿನ ನಡುವಿನ ದಿನಗಳಲ್ಲಿ ನಿಯಮಿತವಾಗಿ ರಕ್ತಸ್ರಾವ ಉಂಟಾಗುತ್ತದೆ. ಇದರ ಹೊರತಾಗಿಯೂ ಸಮಾಗಮದ ಬಳಿಕ ರಕ್ತಸ್ರಾವ ಇರುತ್ತದೆ.