ಅಂದವಾಗಿ ಕಾಣಬೇಕೆಂಬ ಧಾವಂತದಲ್ಲಿ ಹೆಂಗಸರು ಮೇಕಪ್ ಮಾಡಿಕೊಳ್ಳುವಾಗ ಸುರಕ್ಷತಾ ಕ್ರಮಗಳತ್ತ ಗಮನ ಕೊಡುವುದಿಲ್ಲ.  ಇಲ್ಲಿ ಹೈಜೀನ್ ಪಾತ್ರವೇನು ಎಂಬುದನ್ನು ವಿವರವಾಗಿ ಅರಿಯೋಣವೇ………..?

ಮೇಕಪ್‌ ಮಾಡಿಕೊಳ್ಳುವಾಗ ನೀವು ಎಚ್ಚರಿಕೆ ವಹಿಸದಿದ್ದರೆ ದುರ್ಘಟನೆ ಸಂಭವಿಸಬಹುದು. ಅದರ ಅನುಭವವನ್ನು ನೀವು ನಿಮ್ಮ ಫ್ರೆಂಡ್ಸ್ ಅಥವಾ ಬಂಧು ಬಳಗದವರ ಸಮ್ಮುಖದಲ್ಲಿ ಕಾಣಬಹುದು. ಬಾಚಣಿಗೆ, ಲಿಪ್‌ಸ್ಟಿಕ್‌, ಮಸ್ಕರಾ, ಕಾಜಲ್, ಬ್ಲಶರ್‌, ಫೌಂಡೇಶನ್‌, ಐಶ್ಯಾಡೋ ಇತ್ಯಾದಿಗಳನ್ನು ಫ್ರೆಂಡ್ಸ್ ಅಥವಾ ಮದುವೆ ಮನೆಯಲ್ಲಿ ಬಂಧುಗಳು ಪರಸ್ಪರ ಬದಲಿಸಿ ಬಳಸುವುದು ಮಾಮೂಲು ಸಂಗತಿ. ನಿಮ್ಮ ಈ ಅಭ್ಯಾಸವನ್ನು ಖಂಡಿತಾ ಬದಲಿಸಬೇಕು, ಇಲ್ಲದಿದ್ದರೆ ಅದರ ಪರಿಣಾಮ ನಿಮ್ಮ ಆರೋಗ್ಯದ ಮೇಲಾಗುವುದು. ನಿಮ್ಮ ಇಂಥ ಸಣ್ಣಪುಟ್ಟ ಅಭ್ಯಾಸಗಳನ್ನು ನೀವು ನಿರ್ಲಕ್ಷ್ಯ ಮಾಡುತ್ತಿರಬಹುದು, ಆದರೆ ಮುಂದೆ ಅದೇ ಚರ್ಮದ ತೀವ್ರ ರೋಗಗಳಿಗೆ ಕಾರಣವಾಗುತ್ತದೆ. ಆಗಲೂ ಎಚ್ಚೆತ್ತುಕೊಳ್ಳದಿದ್ದರೆ ಅದು ಗಂಭೀರ ಕಾಯಿಲೆಗೆ ತಿರುಗಬಹುದು.

ತೇವಾಂಶದಿಂದ ತೊಂದರೆ

ಎಲ್ಲಿ ತುಸು ಮಾತ್ರದ ತೇವಾಂಶ ಇರುತ್ತದೋ ಅಲ್ಲೇ ರೋಗಾಣುಗಳು ತಲೆ ಎತ್ತುತ್ತವೆ. ಈ ವಿಷಯ ನಿಮ್ಮ ವ್ಯಾನಿಟಿ ಬ್ಯಾಗಿನಲ್ಲಿರುವ ಪ್ರತಿ ಕಾಸ್ಮೆಟಿಕ್ಸ್ ಗೂ ಅನ್ವಯಿಸುತ್ತದೆ. ಬಳಸಿದ ನಂತರ ಪ್ರತಿಯೊಂದು ಪ್ರಾಡಕ್ಟ್ ನ್ನೂ ಚೆನ್ನಾಗಿ ಬಿಗಿ ಮಾಡಿ ಮುಚ್ಚಿಡಬೇಕು. ಕಾಸ್ಮೆಟಿಕ್ಸ್ ನ್ನು ಸದಾ ತೇವಾಂಶರಹಿತ ಕತ್ತಲೆ ಇರುವಂಥ, ತುಸು ಕೂಲಾದ ಜಾಗದಲ್ಲಿ ಇಡಬೇಕು.

ಒಂದು ವಿಷಯ ನೆನಪಿಡಿ, ತೇವಾಂಶದ ಲಾಭ ಪಡೆಯುವ ಕೀಟಾಣು ಮುಂದೆ ಎಲ್ಲಿಗೆ ಬೇಕಾದರೂ ದಾಳಿ ಇಡಬಹುದು. ಹೀಗಾಗಿ ನಿಮ್ಮ ಮೇಕಪ್‌ ಕಂಟೇನರ್‌ಗೆ ಚೆನ್ನಾಗಿ ಮುಚ್ಚಳ ಹಾಕಿಟ್ಟು ಅದನ್ನು ಜೋಪಾನ ಮಾಡಬೇಕೆಂಬುದನ್ನು ಮರೆಯದಿರಿ. ಅದರೊಳಗಿನ ಮೇಕಪ್‌ ಸಾಮಗ್ರಿವರೆಗೂ ತೇವಾಂಶ ತಲುಪಿದರೆ, ಕೀಟಾಣುಗಳು ಅಲ್ಲಿ ಮನೆ ಮಾಡಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಅದು ನಿಮ್ಮ ಚರ್ಮಕ್ಕೆ ತಗುಲಿದ ತಕ್ಷಣ ನಿಮಗೆ ರೋಗ ಶುರುವಾಗುವುದಲ್ಲದೆ, ಮುಂದೆ ಅದು ಕ್ಯಾನ್ಸರ್‌ಗೂ ತಿರುಗಬಹುದು.

ವ್ಯಾನಿಟಿ ಬ್ಯಾಗ್‌ ಶುಭ್ರವಾಗಿರಲಿ

ನಿಮ್ಮ ವ್ಯಾನಿಟಿ ಬಳಕೆ ಕೇವಲ ಅಲಂಕಾರಿಕ ಜಂಭದ ಚೀಲವಲ್ಲ. ವಾರದಲ್ಲಿ ಒಂದು ಸಲ ಅಗತ್ಯ ವ್ಯಾನಿಟಿಯನ್ನು ಸ್ವಚ್ಛಗೊಳಿಸಿ. ಅದರಲ್ಲಿ ಮುಖ್ಯವಾಗಿ ಮೇಕಪ್‌ನಲ್ಲಿ ಬಳಸುವ ಬ್ರಶ್ಶುಗಳನ್ನು ಕ್ಲೀನ್‌ ಮಾಡಬೇಕು. ನೀರು ಮತ್ತು ಡಿಟರ್ಜೆಂಟ್‌ ಬಳಸಿ ಬ್ರಶ್‌ ಕ್ಲೀನ್‌ ಮಾಡಿದ ನಂತರ, ಅವನ್ನು ಶುಭ್ರ ಒಣ ಬಟ್ಟೆಯಿಂದ ಒರೆಸಿ ಬಿಸಿಲಲ್ಲಿ ಒಣಗಿಸಿ. ಮೇಕಪ್‌ ಬ್ರಶ್ಶಿನ ಬ್ರಿಸಲ್ಸ್ ಮುರಿದಿದ್ದರೆ ಅಥವಾ ಬ್ರಶ್‌ ಬಹಳ ಹಳೆಯದಾಗಿದ್ದರೆ, ಆಗ ಅದರ ಬದಲಿಗೆ ಹೊಸ ಬ್ರಶ್‌ನ್ನು ಕೊಳ್ಳಬೇಕು. ಆಗಾಗ ಸಂದರ್ಭ ನೋಡಿಕೊಂಡು ಈ ಬ್ರಶ್‌ ಬದಲಿಸಿ. ಒಂದು ನೆನಪಿಡಿ, ಮೇಕಪ್‌ ಬ್ರಶ್‌ ಬಗ್ಗೆ ನೀವು ನಿರ್ಲಕ್ಷ್ಯ ವಹಿಸಿದರೆ ಅದು ನಿಮಗೆ ದುಬಾರಿ ಆದೀತು. ಅಂದರೆ ತೇವಾಂಶದ ಒಂದು ಕಣದಿಂದ ಫಂಗಲ್ ಇನ್‌ಫೆಕ್ಷನ್‌ ಆಗಿ ಗಂಭೀರ ತ್ವಚೆಯ ರೋಗ ಉಂಟಾಗಬಹುದು.

ಸ್ಪಾಂಜ್‌ನ ವ್ಯಾಮೋಹ ಒಳ್ಳೆಯದಲ್ಲ

ಮೇಕಪ್‌ಗಾಗಿ ಬ್ರಶ್‌ ನಂತರ  ನೀವು ಸ್ಪಾಂಜ್‌ ಬಳಸುವುದು ಸಾಮಾನ್ಯ. ಸ್ಪಾಂಜ್‌ನ ಕ್ಲೀನಿಂಗ್‌ನ್ನು ನಿರ್ಲಕ್ಷಿಸುವುದೂ ಒಳ್ಳೆಯದಲ್ಲ. ಕಾಂಪ್ಯಾಕ್ಟ್ ಗಾಗಿ ಬಳಸುವ ಸ್ಪಾಂಜ್‌ ಮತ್ತು ಪೌಡರ್‌ಗಾಗಿ ಬಳಸಲಾಗುವ ಪಫ್‌ಗಳನ್ನು ನಿಯಮಿತವಾಗಿ ಬದಲಾಯಿಸಬೇಕು. ಹೀಗೆ ಮಾಡದಿದ್ದರೆ, ಮುಖದಲ್ಲಿನ ಕೊಳೆ ಸ್ಪಾಂಜ್‌ ಅಥವಾ ಪಫ್‌ಗೆ ಅಂಟಿಕೊಳ್ಳುತ್ತದೆ. ಇದನ್ನು ಸ್ವಲ್ಪ ಶುಚಿಗೊಳಿಸದೆ ಬಳಸುವುದರಿಂದ ಫಂಗಸ್‌ ಇನ್‌ಫೆಕ್ಷನ್‌ ಆಗುವ ಸಂಭವವಿದೆ. ನೀವು ಇವನ್ನು ಒಗೆದು ಒಣಗಿಸುವುದಾದರೆ, ಹೆಚ್ಚು ಬಿಸಿಲಿರುವ ಕಡೆ ಒಣಗಿಸಿ

ಫೇಸ್‌ ಕ್ಲೀನಿಂಗ್‌

ಫಂಗಲ್ ಇನ್‌ಫೆಕ್ಷನ್‌ ಅಥವಾ ತ್ವಚೆಗೆ ಸಂಬಂಧಿಸಿದ ರೋಗಗಳಿಂದ ಬಚಾವಾಗಲು, ಮುಖದ ಡೀಪ್‌ ಕ್ಲೀನಿಂಗ್‌ ಅತ್ಯಗತ್ಯ. ನಿಮ್ಮ ತ್ವಚೆ ನಾರ್ಮಲ್ ಅಥವಾ ತೈಲೀಯ ಆಗಿರಲಿ, ಅದನ್ನು ಕೋಲ್ಡ್ ವೈಪ್‌ ಮಾಡಿ. ಐಸ್‌ ವಾಟರ್‌ನಲ್ಲಿ ಕರ್ಚೀಫ್‌ನ್ನು ಅದ್ದಿ ಹಿಂಡಿಕೊಂಡು, ರಾತ್ರಿ ಹೊತ್ತು ಮೇಕಪ್‌ ಕಳಚಲು ಮುಖವನ್ನು ಅದರಿಂದ ಒರೆಸಬೇಕು. ಈ ರೀತಿ ಪೋರ್ಸ್ ಶುಚಿಯಾಗುತ್ತದೆ, ಕೊಳೆಯೂ ಸೇರುವುದಿಲ್ಲ. ನಿಮ್ಮ ತ್ವಚೆ ಶುಷ್ಕವಾಗಿದ್ದರೆ, ಪ್ರತಿದಿನ ಮಾಯಿಶ್ಚರೈಸರ್‌ ಕ್ಲೆನ್ಸರ್‌ನಿಂದ ಶುಚಿಗೊಳಿಸಬೇಕು. ಇದರಿಂದ ಮುಖ ಶುಷ್ಕ ಎನಿಸುವುದಿಲ್ಲ. ಮುಖದಲ್ಲಿ ಓಪನ್‌ ಪೋರ್ಸ್‌ ಇದ್ದರೆ, ಆಗ ಮುಖವನ್ನು ಸ್ಟೆರಿಲೈಸ್‌ ಮಾಡಬಹುದು. ತೇವಾಂಶದ ಋತುವಿನಲ್ಲಿ ಈ ಓಪನ್‌ ಪೋರ್ಸ್‌ನಲ್ಲಿ ತೈಲ ಮತ್ತು ಕೊಳೆ ಜಮೆಯಾಗುತ್ತದೆ, ಅದರಿಂದ ಆ್ಯಕ್ನೆ, ಮೊಡವೆಗಳಾಗುವ ಸಂಭವಿದೆ.

ಈ ಸಲಹೆ ಅನುಸರಿಸಿ

– ಮುಖವನ್ನು ವೈಪ್‌ ಟಿಶ್ಯುವಿನಿಂದ ಕ್ಲೀನ್‌ ಮಾಡಿದ ನಂತರ ಅದನ್ನು ಎಸೆಯಿರಿ.

– ಇತ್ತೀಚೆಗೆ ಬಂದ ಅಮೆರಿಕನ್‌ ಆಪ್ಟೋಮೆಟ್ರಿಕ್‌ ಅಸೋಸಿಯೇಷನ್ನಿನ ರಿಪೋರ್ಟ್‌ ಪ್ರಕಾರ, ಪ್ರತಿ ಕಾಸ್ಮೆಟಿಕ್‌ಗೆ ಒಂದು ಎಕ್ಸ್ ಪೈರಿ ಡೇಟ್‌ ಇದ್ದೇ ಇರುತ್ತದೆ. ಆ ದಿನಾಂಕ ಮೀರಿ ಅದನ್ನು ಬಳಸಬಾರದು.

– ಕಾಸ್ಮೆಟಿಕ್‌ಗಳ ಎಕ್ಸ್ ಪೈರಿ ಡೇಟ್‌ ನೋಡಿಯೇ ಬಳಸಬೇಕು.

– ಯಾವುದೇ ಕಾಸ್ಮೆಟಿಕ್‌ ಕೊಳ್ಳುವ ಮುನ್ನ ಅದರ ಮೇಲೆ ಬರೆದಿರುವಂಥ ಬೆಸ್ಟ್ ಬಿಫೋರ್‌ ಡೇಟ್‌ನ್ನು ತಪ್ಪದೆ ಗಮನಿಸಿ.

– ಲಿಪ್‌ಸ್ಟಿಕ್‌ಗೆ 1-2 ವರ್ಷಗಳ ಆಯುಷ್ಯ ಇರುತ್ತದೆ. ಖರ್ಚಾಗದೆ ಉಳಿಯಿತೆಂದು, ಬೇಕೆಂದೇ ಅವನ್ನು ಬಳಸುತ್ತಿದ್ದರೆ, ದೇಹಕ್ಕೆ ಅದರಿಂದ ರೋಗ ತಪ್ಪಿದ್ದಲ್ಲ.

– ಉಗುರು ಬಣ್ಣನ್ನು ಒಮ್ಮೆ ತೆರೆದ ನಂತರ ವರ್ಷದ ಮೇಲೆ ಅದನ್ನು ಬಳಸಲೇಬಾರದು.

– 3 ವರ್ಷಗಳವರೆಗೂ ಹಳೆಯ ಐಶ್ಯಾಡೋ ಬಳಸಬಹುದು.

– ವಾಟರ್‌ಬೇಸ್ಡ್ ಫೌಂಡೇಶನ್‌ 12 ತಿಂಗಳು ಹಾಗೂ ಆಯಿಲ್ ಬೇಸ್ಡ್ 18 ತಿಂಗಳು ನಡೆಯುತ್ತದೆ. ಅದಕ್ಕೂ ಮೇಲೆ ಅವನ್ನು ಬಳಸಬಾರದಷ್ಟೆ.

– ಕಾಸ್ಮೆಟಿಕ್ಸ್ ನಲ್ಲಿ ಎಲ್ಲಕ್ಕಿಂತಲೂ ಕಡಿಮೆ ಆಯುಸ್ಸು ಎಂದರೆ ಮಸ್ಕರಾದ್ದು.

– ಪೌಡರ್‌ 2 ವರ್ಷ, ಕನ್ಸೀಲರ್‌ 1 ವರ್ಷ, ಕ್ರೀಂ  ಜೆಲ್‌ ಕ್ಲೆನ್ಸರ್‌ 1 ವರ್ಷ, ಪೆನ್ಸಿಲ್‌ ಐ ಲೈನರ್‌ 3 ವರ್ಷ ಹಾಗೂ ಲಿಪ್‌ ಲೈನರ್‌ 3 ವರ್ಷ ಬಾಳಿಕೆ ಬರುತ್ತವೆ, ಅದರ ಮೇಲೆ ಅವನ್ನು ಬಳಸಬಾರದು.

– ದೀಪ್ತಿ ಕುಲಕರ್ಣಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ