ಹಸುವಿನ ಹಾಲು ಪರಿಪೂರ್ಣ ಆಹಾರವೆಂದು ಖ್ಯಾತಿ ಪಡೆದಿದೆ. ಪ್ರಾಚೀನ ಕಾಲದಿಂದಲೂ ಅದನ್ನು ಉಪಯೋಗಿಸಲಾಗುತ್ತಿದೆ. ಈಗಂತೂ ವಿಶ್ವದ ಎಲ್ಲ ದೇಶಗಳಲ್ಲೂ ಇದು ಲಭಿಸುತ್ತದೆ. 1 ಗ್ಲಾಸ್ ಹಾಲು ಒಳ್ಳೆಯ ಆರೋಗ್ಯಕ್ಕೆ ಅತ್ಯಂತ ಅವಶ್ಯ. ಇದರಷ್ಟು ಪೋಷಕಾಂಶಗಳನ್ನು ಜಗತ್ತಿನ ಮತ್ತ್ಯಾವುದೇ ಪದಾರ್ಥ ಕೊಡಲಾರದು.
ಹಾಲಿನಲ್ಲಿ ಏನೇನು ಪೋಷಕಾಂಶಗಳಿವೆ?
ಕ್ಯಾಲ್ಶಿಯಂ : ಹಸುವಿನ ಹಾಲು ಕ್ಯಾಲ್ಶಿಯಂನ ಸಮೃದ್ಧ ಮೂಲವಾಗಿದೆ. ಈ ಕ್ಯಾಲ್ಶಿಯಂ ದೇಹಕ್ಕೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಇದು ಹಲ್ಲು ಮತ್ತು ಮೂಳೆಗಳನ್ನು ಆರೋಗ್ಯದಿಂದಿಡಲು ಸಹಾಯಕವಾಗಿದೆ. ಕ್ಯಾಲ್ಶಿಯಂ ರಕ್ತ ಹೆಪ್ಪುಗಟ್ಟಲು, ಗಾಯ ಮಾಗಿಸಲು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು, ಸ್ನಾಯುಗಳ ಆಗುಹೋಗುಗಳು ಮತ್ತು ಹೃದಯ ಬಡಿತವನ್ನು ಸಾಮಾನ್ಯವಾಗಿಡಲು ನೆರವಾಗುತ್ತದೆ.
ಪೊಟ್ಯಾಶಿಯಂ : ಇದನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಿದಲ್ಲಿ ಸ್ಟ್ರೋಕ್, ಹೃದ್ರೋಗಗಳು ಹಾಗೂ ಅತಿ ರಕ್ತದೊತ್ತಡದಿಂದ ರಕ್ಷಿಸುತ್ತದೆ. ಮೂಳೆಗಳ ಸಾಂದ್ರತೆ ಸಾಮಾನ್ಯವಾಗಿರಲು ಸಾಧ್ಯವಾಗುತ್ತದೆ ಹಾಗೂ ಕಿಡ್ನಿಯಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ.
ಕೊಲೈನ್ : ಹಾಲು ಕೊಲೈನ್ ನ ಸಮೃದ್ಧ ಮೂಲ ಕೂಡ ಆಗಿದೆ. ಇದು ಅಗತ್ಯ ಪೋಷಕಾಂಶವಾಗಿದ್ದು, ಅದು ನಿದ್ದೆ, ಸ್ನಾಯುಗಳ ಆಗುಹೋಗುಗಳು, ಸ್ಮರಣಶಕ್ತಿ ಮತ್ತು ಕಲಿಕೆಯ ಸಾಮರ್ಥ್ಯವನ್ನು ಸಾಮಾನ್ಯವಾಗಿಡುತ್ತದೆ. ಕೊಲೈನ್ ಇದು ಸೆಲೆಮೆಂಬ್ರೇನನ್ನು ಕಾಪಾಡಲು ನೆರವಾಗುತ್ತದೆ. ಕೊಬ್ಬಿನ ಹೀರುವಿಕೆಯಲ್ಲಿ ನೆರವು ನೀಡುತ್ತದಲ್ಲದೆ, ಕ್ರಾನಿಕ್ ಅಥವಾ ಹಳೆಯ ಊತ ಕಡಿಮೆಗೊಳಿಸಲು ಉಪಯುಕ್ತವಾಗಿದೆ.
ವಿಟಮಿನ್ `ಡಿ' : ಹಸುವಿನ ಹಾಲಿನಲ್ಲಿ ವಿಟಮಿನ್ `ಡಿ' ನೈಸರ್ಗಿಕವಾಗಿ ಇರುವುದಿಲ್ಲ. ಆದರೆ ಹಸುವಿನ ಹಾಲನ್ನು ಪೇರ್ಟಿಫೈಗೊಳಿಸಿ ಅದರಲ್ಲಿ ಸೇರ್ಪಡೆಗೊಳಿಸಬಹುದಾಗಿದೆ. ಇದು ಮೂಳೆಗಳ ದುರಸ್ತಿಗೆ ಅತ್ಯವಶ್ಯ. ಇದು ಕ್ಯಾಲ್ಶಿಯಂನ ಹೀರುವಿಕೆ ಮತ್ತು ರೋಗ ನಿರೋಧಕ ಸಾಮರ್ಥ್ಯವನ್ನು ಬಲಿಷ್ಠಗೊಳಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆ ಆಸ್ಟಿಯೊಪೊರೊಸಿಸ್, ಖಿನ್ನತೆ, ದಣಿವು, ಸ್ನಾಯುಗಳ ನೋವು, ಅತಿ ರಕ್ತದೊತ್ತಡ, ಸ್ತನ ಹಾಗೂ ಕೊಲೈನ್ ಕ್ಯಾನ್ಸರಿಗೆ ಕಾರಣವಾಗಬಹುದು.
ಮಕ್ಕಳಿಗೂ ಉಪಯುಕ್ತ ಬೆಳವಣಿಗೆ : ದೇಹದ ಬೆಳವಣಿಗೆಗೆ ಪ್ರೋಟೀನ್ ಅತ್ಯಂತ ಅವಶ್ಯಕ. ಹಸುವಿನ ಹಾಲಿನಲ್ಲಿ ದೇಹಕ್ಕೆ ಬೇಕಾದ ಎಲ್ಲ ಪ್ರೋಟೀನುಗಳೂ ಇರುತ್ತವೆ. ಹೀಗಾಗಿ ಹಸುವಿನ ಹಾಲು ದೇಹದಲ್ಲಿ ಶಕ್ತಿಯನ್ನು ಉತ್ಪತ್ತಿ ಮಾಡುವುದಿಲ್ಲ. ದೇಹದ ಬೆಳವಣಿಗೆಗೂ ಪೂರಕವಾಗಿದೆ. ಪ್ರತಿದಿನ ಹಾಲು ಕುಡಿಯುವುದು ಅತ್ಯವಶ್ಯ. ಏಕೆಂದರೆ ದೇಹ ಹಾಗೂ ಮೆದುಳಿನ ಬೆಳವಣಿಗೆಗೆ ಅದು ಸಹಾಯಕ.
ಸ್ನಾಯುಗಳ ನಿರ್ಮಾಣ : ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸಾಮಾನ್ಯವಾಗಿಡಲು ಸ್ನಾಯುಗಳ ಬೆಳವಣಿಗೆಗೆ ಅತ್ಯವಶ್ಯ. ಅದರ ಹೊರತಾಗಿ ತೂಕ ಕೂಡ ಸಾಮಾನ್ಯವಾಗಿರುತ್ತದೆ. ಸ್ನಾಯುಗಳ ಬೆಳವಣಿಗೆಗೆ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ನ್ನು ಸೇವಿಸಬೇಕು. ಸ್ನಾಯುಗಳ ಬೆಳವಣಿಗೆ ಹಾಗೂ ಅವುಗಳ ದುರಸ್ತಿಗೆ ಡೇರಿ ಪ್ರೋಟೀನ್ ಬೇಕು.
ರೋಗನಿರೋಧಕ ಶಕ್ತಿ ಬಲವರ್ಧನೆ : ಹಾಲಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳಾದ ವಿಟಮಿನ್ `ಇ,' ಸೆಲೆನಿಯಂ ಮತ್ತು ಸತುವಿನಂಶ ಇರುತ್ತದೆ. ಇವು ದೇಹಕ್ಕೆ ಹಾನಿಕಾರಕಗಳಾದ ಫ್ರೀ ರಾಡಿಕಲ್ಸ್ ನ್ನು ನಿವಾರಿಸುತ್ತವೆ ಮತ್ತು ದೇಹವನ್ನು ರೋಗದಿಂದ ರಕ್ಷಿಸುತ್ತವೆ.
ಉತ್ತಮ ನಿದ್ರೆಗೆ ಅತ್ಯವಶ್ಯಕ : ಹಸುವಿನ ಹಾಲಿನಲ್ಲಿ ಎಲ್ಲ ಬಗೆಯ ಅತ್ಯವಶ್ಯ ಪ್ರೋಟೀನುಗಳು ಇರುತ್ತವೆ. ಅವು ನಿದ್ರೆಗೆ ಅತ್ಯಂತ ಉಪಯುಕ್ತ. ಮಗುವಿಗೆ ಮಲಗುವ ಮುನ್ನ ಒಂದು ಗ್ಲಾಸ್ ಹಾಲು ಕುಡಿಸಿ, ಅದಕ್ಕೆ ಹಿತಕರ ನಿದ್ರೆ ಲಭಿಸುತ್ತದೆ.