ಇತ್ತೀಚಿನ ವರ್ಷಗಳಲ್ಲಿ ಪ್ರತಿ ಮೂವರಲ್ಲಿ ಒಬ್ಬ ವ್ಯಕ್ತಿ ಬೆನ್ನುನೋವು, ಮೈಗ್ರೇನ್‌, ಮಂಡಿನೋವಿನಿಂದ ಬಳಲುತ್ತಿದ್ದಾರೆ. ನೀವು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಕೆಲವೊಂದು ಸಲಹೆಗಳನ್ನು ಗಮನಿಸಿ. ಅದರಿಂದಾಗಿ ನೀವು ಫಿಟ್‌ ಮತ್ತು ಹಗುರತನದ ಅನುಭೂತಿ ಪಡೆಯಬಹುದು.

ಆಲಸ್ಯತನ ಬಿಟ್ಟುಬಿಡಿ : ಎಲ್ಲಕ್ಕೂ ಮೊದಲು ಆಲಸ್ಯತನ ತೊರೆದು ಮುಂಜಾನೆ ಹೊತ್ತು ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಸುತ್ತಾಡಿ ಬನ್ನಿ. ಒಂದು ವೇಳೆ ಹವಾಮಾನ ಅದಕ್ಕೆ ಅವಕಾಶ ಕೊಡದೇ ಇದ್ದರೆ ಟ್ರೆಡ್‌ಮಿಲ್‌ ಮೇಲೆ ಸ್ವಲ್ಪ ಹೊತ್ತು ವ್ಯಾಯಾಮ ಮಾಡಿ. ಕೆಲಸಕ್ಕೆ ಹೋಗುವಾಗ ಬಸ್‌ ನಿಲ್ದಾಣ ಅಥವಾ ಮೆಟ್ರೊ ಸ್ಟೇಶನ್‌ತನಕ ಬೆಳಗ್ಗೆ ನಡೆದುಕೊಂಡೇ ಹೋಗಿ. ನಿಮ್ಮ ವಾಹನವನ್ನು ಸ್ವಲ್ಪ ದೂರ ನಿಲ್ಲಿಸಿ ಆಫೀಸಿನ ತನಕ ನಡೆದುಕೊಂಡೇ ಹೋಗಿ. ಆಫೀಸಿನಲ್ಲಿ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಉಪಯೋಗಿಸಿ.

ವಾಹನ ಚಲಾಯಿಸುವಾಗ ಗಮನಿಸಿ : ಡ್ರೈವಿಂಗ್‌ ಕೂಡ ಬೆನ್ನು ನೋವಿಗೆ ಕಾರಣ. ಯಾರು ಹೆಚ್ಚು ಹೊತ್ತು ಡ್ರೈವಿಂಗ್‌ ಮಾಡುತ್ತಿರುತ್ತಾರೋ ಅವರಿಗೆ ಇದರ ತೊಂದರೆ ಜಾಸ್ತಿ. ಸ್ಟೇರಿಂಗ್‌ ವೀಲ್‌ನಿಂದ ತಪ್ಪು ಅಂತರ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಬಹುದು. ಸ್ಟೇರಿಂಗ್‌ ವೀಲ್‌ ನಿಮ್ಮ ಎದೆಗೆ ಸಮಾನಾಂತರವಾಗಿರಬೇಕು. ಹೇಗ್ಹೇಗೊ ಕುಳಿತು ಡ್ರೈವ್‌ ಮಾಡಿದರೆ ಕತ್ತು, ಭುಜ, ಕೈ, ಮುಂಗೈ, ಭುಜ, ಮೊಣಕೈಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.

ಆಫೀಸಿನಲ್ಲಿದ್ದಾಗ : ನೀವು ಕುಳಿತುಕೊಳ್ಳುವ ಕುರ್ಚಿ ಹೇಗಿರಬೇಕೆಂದರೆ, ಅದರ ಹಿಂಭಾಗ ಬೆನ್ನಿಗೆ ಸಂಪೂರ್ಣವಾಗಿ ಸಪೋರ್ಟ್‌ ಕೊಡುವಂತಿರಬೇಕು. ಕಂಪ್ಯೂಟರ್‌ ಸ್ಕ್ರೀನ್‌ನ ಎತ್ತರ ಕಣ್ಣಿಗೆ ಸಮಾನಾಂತರದಲ್ಲಿರಬೇಕು.

ದೈಹಿಕ ಕಸರತ್ತು : ಕುರ್ಚಿಯ ಮೇಲೆ ಕುಳಿತುಕೊಂಡೇ ಕೆಲವು ಹಗುರ ವ್ಯಾಯಾಮಗಳನ್ನು ಮಾಡಬಹುದು. ನೇರವಾಗಿ ಕುಳಿತುಕೊಳ್ಳಿ ಹಾಗೂ ಕಾಲುಗಳನ್ನು ಅಗಲಗೊಳಿಸುತ್ತ ಬೆರಳುಗಳನ್ನು ಮೇಲೆತ್ತಿ, ಈಗ ಅವನ್ನು 30-40 ಡಿಗ್ರಿ ಮೇಲೆತ್ತಲು ಪ್ರಯತ್ನಿಸಿ. ಬಳಿಕ ಪುನಃ ನೆಲವನ್ನು ಮುಟ್ಟಲು ಪ್ರಯತ್ನಿಸಿ. ಇದನ್ನು 10-15 ಸಲ ಪುನರಾವರ್ತಿಸಿ. ಹೀಗೆ ಮಾಡುವುದು ನಿಮ್ಮ ಹೊಟ್ಟೆಯನ್ನು ಒಳಗಿಡುವುದಷ್ಟೇ ಅಲ್ಲದೆ, ಅದು ನಿಮ್ಮ ಬೆನ್ನಿನ ಕೆಳಭಾಗವನ್ನೂ ಬಲಿಷ್ಠಗೊಳಿಸುತ್ತದೆ.

ಇದನ್ನು ಪುನರಾವರ್ತಿಸಿ : ಇದರ ಜೊತೆಗೆ ಮತ್ತೊಂದು ವ್ಯಾಯಾಮ ಮಾಡಬಹುದು. ಪೆನ್‌ ಅಥವಾ ಪೆನ್ಸಿಲ್‌‌ನ್ನು ನೆಲದ ಮೇಲೆ ಚೆಲ್ಲಿ. ಅದನ್ನು ಕಾಲಿನ ಹೆಬ್ಬೆಟ್ಟು ಅಥವಾ ಬೆರಳಿನಿಂದ ಎತ್ತಲು ಪ್ರಯತ್ನಿಸಿ.

ನೆಲದ ಮೇಲೆ ನೇರವಾಗಿ ಬಗ್ಗಬೇಡಿ : ನೆಲದ ಮೇಲಿಂದ ಏನನ್ನಾದರೂ ಎತ್ತಲು ನೇರವಾಗಿ ಅಥವಾ ಒಮ್ಮೆಲೆ ಬಗ್ಗಬೇಡಿ. ಮೊದಲು ಸ್ವಲ್ಪ ಬಗ್ಗಿ ಆಮೇಲೆ ಮೊಣಕಾಲಿನ ಆಧಾರದ ಮೇಲೆ ನಿಧಾನವಾಗಿ ವಸ್ತುವನ್ನು ಎತ್ತಿ.

ಮುಂಗೈಗೆ ವಿಶ್ರಾಂತಿ ಕೊಡಿ : ಬೆರಳುಗಳಲ್ಲಿ ಅದರಲ್ಲೂ ವಿಶೇಷವಾಗಿ ಹೆಬ್ಬೆರಳು ಮಧ್ಯದ ಬೆರಳುಗಳಲ್ಲಿ ಜುಮ್ ಜುಮ್ ಎನ್ನುತ್ತಿದ್ದರೆ. ಅದು `ಕಾರ್ಪ್‌ ಟನ್‌ ಸಿಂಡ್ರೋಮ್’ನ ಲಕ್ಷಣವಾಗಿರಬಹುದು. ಹೀಗಾಗಿ ಮುಂಗೈಗೆ ವಿಶ್ರಾಂತಿ ಕೊಡುವುದು ಅತ್ಯವಶ್ಯ.

–  ಡಾ. ಸತ್ಯವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ