ಪ್ರತಿಯೊಬ್ಬ ಮಹಿಳೆಗೂ ತಾನು ಅಂದಚೆಂದವಾಗಿ ಮೇಕಪ್‌ ಮಾಡಿಕೊಂಡು ಪಾರ್ಟಿಯ ಆಕರ್ಷಣೆಯ ಕೇಂದ್ರಬಿಂದು ಆಗಬೇಕೆಂಬ ಆಸೆ ಇರುತ್ತದೆ. ಮೇಕಪ್‌ನ ಲುಕ್ಸ್ ವ್ಯಕ್ತಿತ್ವ ಸುಧಾರಿಸುವ ಜೊತೆಯಲ್ಲೇ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಮಹಿಳೆಯರ ಈ ಆಸೆಯನ್ನು ಗಮನಲ್ಲಿರಿಸಿಕೊಂಡೇ ತಜ್ಞರ ಸಲಹೆಯಂತೆ ಇಲ್ಲಿ ಯೂರೋಪಿಯನ್‌ ಲುಕ್‌ ಮೇಕಪ್‌ ಬಗ್ಗೆ ವಿವರಿಸಲಾಗಿದೆ. ನೀವು ಮುಂದಿನ ವೆಡ್ಡಿಂಗ್‌ ಪಾರ್ಟಿಗೆ ಹೀಗೆ ಟ್ರೈ ಮಾಡಬಾರದೇಕೆ?

ಬೇಸ್‌ ಮೇಕಪ್‌

ಮೇಕಪ್‌ಗೆ ಮುಂಚೆ ಕ್ಲೆನ್ಸಿಂಗ್‌ನಿಂದ ಮುಖವನ್ನು ಚೆನ್ನಾಗಿ ಶುಚಿಗೊಳಿಸಿ. ನಂತರ ಟೋನಿಂಗ್‌, ಮಾಯಿಶ್ಚರೈಸಿಂಗ್‌ ಮಾಡಬೇಕು. ಇದಾದ ಮೇಲೆ ಕನ್ಸೀಲರ್‌ ಬಳಸಿ ಮುಖದ ಕಲೆಗುರುತು ಮರೆ ಮಾಡಿ. ಆಮೇಲೆ ಫೌಂಡೇಶನ್‌ನಿಂದ ಮುಖಕ್ಕೆ ಸ್ಮೂತ್‌ ಲುಕ್ಸ್ ನೀಡಬೇಕು. ಈ ಬೇಸ್‌ನ ಆಯ್ಕೆ ನಿಮ್ಮ ಸ್ಕಿನ್‌ಟೋನ್‌ಗೆ ಹೊಂದುವಂತಿರಲಿ. ಇದಕ್ಕಾಗಿ ತುಸು ಬೇಸ್‌ನ್ನು ಹಣೆ, ಕೆನ್ನೆಗೆ ಸವರಿ ನೋಡಿ. ಅದು ಮುಖದ ತ್ವಚೆಗೆ ಹೊಂದುವಂತಿದ್ದರೆ, ಅದನ್ನು ಇಡೀ ಮುಖಕ್ಕೆ ಹಚ್ಚಬೇಕು. ಬೇಸ್‌ ಹಚ್ಚುವಾಗ ಲಾಫಿಂಗ್‌ ಲೈನ್ಸ್, ಕಣ್ಣಿನ/ತುಟಿಗಳ ತುದಿ ಕಡೆ ವಿಶೇಷ ಗಮನವಿರಲಿ, ಅವನ್ನು ಅಪ್‌ಲಿಫ್ಟ್ ಮಾಡಿ. ಬೇಸ್‌ ಹಚ್ಚುವಾಗ ಅದನ್ನು ಚರ್ಮದಲ್ಲಿ ಚೆನ್ನಾಗಿ ಬ್ಲೆಂಡ್‌ ಆಗುವಂತೆ ಮಾಡಿ. ಓಪನ್‌ ಪೋರ್ಸ್‌ನ್ನು ಚೆನ್ನಾಗಿ ಫಿಲ್‌ ಮಾಡಿ, ಆಗ ಇಡೀ ಮುಖದ ತ್ವಚೆಗೆ ಸ್ಮೂತ್‌ ಲುಕ್ಸ್ ಬರುತ್ತದೆ. ಡ್ರೈ ತ್ವಚೆ ಆಗಿದ್ದರೆ, ಪ್ರೈಮರ್‌ ಯಾ ಮಾಯಿಶ್ಚರೈಸರ್‌ ಹಚ್ಚಬೇಕು. ಬದಲಿಗೆ ನಿಮ್ಮ ತ್ವಚೆ ಆಯ್ಲಿ ಆಗಿದ್ದರೆ, ಮ್ಯಾಟ್‌ ಫಿನಿಶ್‌ ಬೇಸ್‌ ಬಳಸಬೇಕು. ಜೊತೆಗೆ ಮೇಕಪ್‌ಗೆ ಮೊದಲು ಟೋನರ್‌ ಹಚ್ಚಲು ಮರೆಯದಿರಿ. ಇದರಿಂದ ಚರ್ಮ ಜಿಡ್ಡು ಜಿಡ್ಡಾಗುವುದು ತಪ್ಪುತ್ತದೆ. ಬೇಸ್‌ನ್ನು ಬ್ಲೆಂಡ್‌ ಮಾಡುವಾಗ ಕೈಗಳ ಒತ್ತಡ ಲಘು ಆಗಿರಬೇಕು. ಐ ಬಾಲ್ಸ್ ಏರಿಯಾ ಬಳಿ ಬೇಸ್‌ ಹಚ್ಚಬೇಡಿ, ಆಗ ಕಂಗಳು ಚಿಕ್ಕದಾಗಿ ಕಾಣಿಸುತ್ತವೆ.

ಟ್ರಾನ್ಸ್ ಲೂಶನ್‌ ಪೌಡರ್‌ : ಮುಖದಲ್ಲಿ ಬೇಸ್‌ನ್ನು ಚೆನ್ನಾಗಿ ಬ್ಲೆಂಡ್‌ ಮಾಡಿದ ನಂತರ, ಅದರ ಮೇಲೆ ಟ್ರಾನ್ಸ್ ಲೂಶನ್‌ ಪೌಡರ್‌ ಗುಂಡಗೆ ಬರುವಂತೆ ಉದುರಿಸಿ. ಅಕಸ್ಮಾತ್‌ ಇದು ಹೆಚ್ಚಾಯಿತು ಎನಿಸಿದರೆ, ಬ್ರಶ್ಶಿನ ನೆರವಿನಿಂದ ಹೆಚ್ಚುವರಿ ಪೌಡರ್‌ ತೆಗೆದುಬಿಡಿ. ಲಾಫಿಂಗ್‌ ಲೈನ್ಸ್ ಕಾಣಿಸದಿರಲು ಚೆನ್ನಾಗಿ ಬ್ಲೆಂಡಿಂಗ್‌ ಮಾಡಿ. ಪ್ಯಾನ್‌ಕೇಕ್‌ ಬಳಸುವಿರಾದರೆ, ಅದಕ್ಕೆ ನೀರನ್ನೇ ಬಳಸಿ ಹಾಗೂ ಮೇಕಪ್‌ ಕಳಚುವಾಗ ಆಯಿಲ್‌ ಸಹಾಯ ಪಡೆಯಿರಿ. ಪ್ಯಾನ್‌ಕೇಕ್‌ ಮೇಕಪ್‌ನ್ನು ವಾಟರ್‌ಪ್ರೂಫ್‌  ಲಾಂಗ್‌ಲಾಸ್ಟಿಂಗ್‌ ಮಾಡುತ್ತದೆ. ರಾತ್ರಿ ಪಾರ್ಟಿಗೆ ಹೊರಟು, ವೆಸ್ಟರ್ನ್‌ ಡ್ರೆಸ್‌ ಧರಿಸುವಿರಾದರೆ, ಇಡೀ ಮುಖಕ್ಕೆ ಮೆಟ್ಯಾಲಿಕ್‌ ಶೈನ್‌ ಹಚ್ಚಿರಿ.

ಬ್ಲಶರ್‌ : ಮೇಕಪ್‌ನಲ್ಲಿ ಬ್ಲಶರ್‌ ಬಲು ಮುಖ್ಯ. ಇದರಿಂದ ಡಲ್ ಸ್ಕಿನ್‌ಗೆ ಫ್ರೆಶ್‌ ಡೇಲಿಗ್ಲೋ ಬರುತ್ತದೆ. ಬ್ಲಶರ್‌ನಿಂದ ಫೀಚರ್ಸ್‌ಗೆ ಅಪ್‌ ಲಿಫ್ಟ್ ಮೆಂಟ್‌ ಹಾಗೂ ಮುಖಕ್ಕೆ ಹೊಸ ಡೆಫ್‌ನೇಶನ್‌ ಬರುತ್ತದೆ. ಬ್ಲಶರ್‌ನ ಸಹಾಯದಿಂದ ಮುಖಕ್ಕೆ ಶೇಪ್‌ ನೀಡುವ ಜೊತೆಗೆ ಕಂಟೂರ್‌ ಕೂಡ ಮಾಡಲಾಗುತ್ತದೆ. ಇದನ್ನು ಹಚ್ಚುವುದಕ್ಕಾಗಿ ಡೋವ್‌ ಶೇಪ್ಡ್ ಬ್ಲಶರ್‌ ಬ್ರಶ್‌ನ್ನು ಬ್ಲಶರ್‌ ಮೇಲಿರಿಸಿ ಗೋಲಾಕಾರವಾಗಿ ತಿರುಗಿಸಿ. ನಂತರ ಕೆನ್ನೆಯ ಉಬ್ಬಿದ ಭಾಗದ ಬಳಿ ಲಘುವಾಗಿ ಸ್ಟ್ರೋಕ್ಸ್ ನೀಡುತ್ತಾ ಹಚ್ಚಿರಿ. ಇದನ್ನು ಹಣೆಯ ಕಡೆ ತೆಗೆದುಕೊಂಡು ಹೋಗಿ, ಬ್ರಶ್‌ನಿಂದ ಚೆನ್ನಾಗಿ ಬ್ಲೆಂಡ್‌ ಮಾಡಿ. ಅಕಸ್ಮಾತ್‌ ಬ್ಲಶರ್‌ ಜಾಸ್ತಿ ಆದರೆ, ಪೌಡರ್‌ ಪಫ್‌ ಮೇಲೆ ಶುಭ್ರ ಟಿಶ್ಯು ಸುತ್ತಿ,  ಬ್ಲಶರ್‌ಗೆ ತುಸು ಗೋಲ್ಡನ್‌ ಶಿಮರ್‌ ಬೆರೆಸಿ ಹಚ್ಚಿರಿ. ಹೀಗೆ ಮಾಡುವುದರಿಂದ ಫೀಚರ್ಸ್‌ ಉಬ್ಬಿದಂತೆ ಕಾಣುತ್ತದೆ. ಸ್ಕಿನ್‌ಟೋನ್‌ ಡಾರ್ಕ್‌ ಆಗಿದ್ದರೆ ಪೇಲ್‌ ಪೇಸ್ಟಲ್ ಶೇಡ್ಸ್ ಬಳಸದಿರಿ. ಇದರಿಂದ ತ್ವಚೆ ಮಾಸಲು ಬಣ್ಣವಾಗಿ ಕಾಣಿಸುತ್ತದೆ.

ಹೇರ್‌ಸ್ಟೈಲ್‌ : ಯಾವುದೇ ಸ್ಟೈಲ್‌ನ ಮೇಕಪ್‌ ಹಾಗೂ ಡ್ರೆಸ್‌ನ ಪರ್ಫೆಕ್ಟ್ ಲುಕ್‌ ಬರುವುದು ಯಾವಾಗ ಗೊತ್ತೇ? ಹೇರ್‌ಸ್ಟೈಲ್‌ ಮ್ಯಾಚಿಂಗ್‌ ಪರ್ಫೆಕ್ಟ್ ಆಗಿದ್ದಾಗ ಮಾತ್ರ. ಯೂರೋಪಿಯನ್‌ ಮೇಕಪ್‌ ಜೊತೆ ಸ್ಟೈಲಿಶ್‌ ಹೇರ್‌ಸ್ಟೈಲ್‌‌ಗಾಗಿ ಎಲ್ಲಕ್ಕೂ ಮೊದಲು ಕೂದಲನ್ನು ಬ್ಲೋ ಡ್ರೈ ಮಾಡಿ. ಆಗ ಅದು ಸಿಕ್ಕಿಲ್ಲದೆ, ಸ್ಮೂತ್‌ ಆಗುತ್ತದೆ. ಅದಾದ ಮೇಲೆ ಕೂದಲನ್ನು 3 ಭಾಗ ಮಾಡಿ ಹಿಂಭಾಗದ ಕೂದಲನ್ನು ರೋಲ್‌ ಮಾಡುತ್ತಾ  ಕೊಂಡೆ ಆಕಾರ ಕೊಡಿ. ಇದಾದ ಮೇಲೆ ಉಳಿದ ಎರಡೂ ಬದಿಯ ಕೂದಲನ್ನು ಒಂದೊಂದಾಗಿ ಸೇರಿಸಿ ಹೆಣೆಯಿರಿ, ರಬ್ಬರ್‌ ಬ್ಯಾಂಡ್‌ನಿಂದ ಕಟ್ಟಿಬಿಡಿ. ಎರಡೂ ಕಡೆ ಹೆಣೆದ ಬ್ರೈಡಲ್ ಡಿಸೈನ್‌ನ್ನು ಕೊಂಡೆ ಮೇಲೆ ಇರಿಸಿ ಪಿನ್‌ಅಪ್‌ ಮಾಡಿ. ಈ ರೀತಿ ತಯಾರಾದ ಹೇರ್‌ಸ್ಟೈಲ್‌ಗೆ ಆ್ಯಕ್ಸೆಸರೀಸ್‌ಗಾಗಿ ಸಣ್ಣದಾದ ನೈಸರ್ಗಿಕ ಅಥವಾ ಕೃತಕ ಹೂಗಳನ್ನು ಸಿಗಿಸಿಡಿ.

ಐ ಮೇಕಪ್‌ : ಇದಕ್ಕಾಗಿ ಮೊದಲು ಮೇಲ್ಭಾಗದ ಕಣ್ಣು ರೆಪ್ಪೆಗೆ ಫೌಂಡೇಶನ್‌ ಹಾಗೂ ಲೂಸ್‌ ಪೌಡರ್‌ ಸಿಂಪಡಿಸಿ. ಇದಾದ ಮೇಲೆ ಐ ಪೆನ್ಸಿಲ್‌ನಿಂದ, ಅದೇ ರೆಪ್ಪೆಗೆ ತೆಳು ಲೈನ್‌ ಎಳೆದು ಅದನ್ನು ಚೆನ್ನಾಗಿ ಬ್ಲೆಂಡ್‌ ಮಾಡಿ, ಆಗ ಐ ಲಿಡ್‌ ದೊಡ್ಡದಾಗಿ ಕಾಣಿಸುತ್ತದೆ. ಇದಾದ ಮೇಲೆ ಐ ಶ್ಯಾಡೋ ಹಚ್ಚಿರಿ. ಹಗಲಿನಲ್ಲಿ ಲೈಟ್‌ ಶೇಡ್‌, ರಾತ್ರಿ ಹೊತ್ತು ಬ್ರೈಟ್‌ ಶೇಡ್ಸ್ ಬಳಸಿರಿ. ಕಂಗಳಿಗೆ ಗ್ಲಿಟರಿ ಲುಕ್ಸ್ ನೀಡಲು ಗ್ಲಿಟರ್‌ನ್ನು ಕೇವಲ ಔಟ್‌ಲೈನಿಗೆ ಮಾತ್ರ ಬಳಸಬೇಕು.

ತುಟಿಗಳ ಮೇಕಪ್‌ : ತುಟಿಗಳ ಮೇಕಪ್‌ಗಾಗಿ ಲಿಪ್‌ಸ್ಟಿಕ್‌ ಶೇಡ್ಸ್ ಗೆ ಹೊಂದುವಂಥ ಲಿಪ್‌ಲೈನರ್‌ನಿಂದ ಔಟ್‌ಲೈನ್‌ ಎಳೆಯಿರಿ. ಇದಕ್ಕಾಗಿ ಎಂದೂ ಡಾರ್ಕ್‌ ಶೇಡ್‌ ಬಳಸಲೇಬೇಡಿ. ತುಟಿಗಳು ತುಸು ದಪ್ಪಕ್ಕಿದ್ದು, ಅವನ್ನು ತೆಳು ತೋರಿಸಬೇಕಿದ್ದರೆ, ಲಿಪ್‌ಲೈನರ್‌ನ್ನು ತುಟಿಗಳ ಹೊರಭಾಗದಲ್ಲಿ ಮಾತ್ರ ಬಳಸಿರಿ. ಇದಾದ ಮೇಲೆ ಡ್ರೆಸ್‌ಗೆ ಮ್ಯಾಚಿಂಗ್‌ ಎನಿಸುವ ಲಿಪ್‌ಸ್ಟಿಕ್‌ ಶೇಡ್‌ ಬಳಸಿ ಇಡೀ ತುಟಿಗೆ ಬಣ್ಣ ಹಚ್ಚಿರಿ. ಇದಾದ ಮೇಲೆ ಲಿಪ್‌ಗ್ಲಾಸ್‌ ನೆರವಿನಿಂದ ತುಟಿಗಳನ್ನು ಹೈಲೈಟ್‌ ಮಾಡಿ. ಅಗತ್ಯ ಎನಿಸಿದರೆ ಲಿಪ್‌ಡಸ್ಟ್ ಸಹ ಸಿಂಪಡಿಸಬಹುದು.

–  ಜಿ. ಲಲಿತಾ  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ