ರಾಜ್ಯಕ್ಕೆ ಹಬ್ಬಕ್ಕೆ ಮುನ್ನವೇ ದೀಪಾವಳಿ ಸಡಗರ ಬಂದಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 422 ಪಿಜಿ ಸೀಟುಗಳ ಸಂಖ್ಯ ಹೆಚ್ಚಳವಾಗಿದೆ. ಹಲವಾರು ವರ್ಷಗಳ ಬೇಡಿಕೆ ಈಗ ಈಡೇರಿದಂತಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಮಾಹಿತಿ ನೀಡಿದರು.
ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ನೀಡುವುದೇ ನಮ್ಮ ಸರ್ಕಾರದ ಗುರಿ ಎಂದ ಅವರು, ಪ್ರೀ ಕ್ಲೀನಿಕಲ್, ಪ್ಯಾರಾ ಕ್ಲೀನಿಕಲ್ ಮತ್ತು ಕ್ಲೀನಿಕಲ್ ವಿಭಾಗಕ್ಕೆ ಒಟ್ಟು 422 ಪಿಜಿ ಸೀಟುಗಳ ಹೆಚ್ಚಳ ಮಾಡಲಾಗಿದೆ ಎಂದು ಡಾ. ಪಾಟೀಲ್ ವಿವರಿಸಿದರು.ಪೀಡಿಯಾಟ್ರಿಕ್ಸ್, ಅನಸ್ತೇಸಿಯಾ, ಫೋರೆನ್ಸಿಕ್ ಮೆಡಿಸಿನ್, ಮೈಕ್ರೊ ಬಯಲಾಜಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವಿಭಾಗದಲ್ಲಿ ಪಿಜಿ ಸೀಟುಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
572 ಸೀಟು ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗಿತ್ತು: ಪ್ರತಿಬಾರಿಯಂತೆ ಈ ಬಾರಿಯೂ ಪಿಜಿ ಕೋರ್ಸ್ ಗೆ ಬೇಡಿಕೆ ಇತ್ತು. ಪಿಜಿಯಲ್ಲಿ 572 ಸೀಟುಗಳನ್ನು ಮಂಜೂರು ಮಾಡಲು ಮನವಿ ಮಾಡಿದ್ದೆವು. ಇದರಲ್ಲಿ ನಮಗೆ 422 ಸೀಟು ಲಭ್ಯವಾಗಿವೆ. ಕಳೆದ ವರ್ಷ 1694 ಪಿಜಿ ಸೀಟು ಇದ್ದರೆ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ 422 ಸೀಟು ಹೆಚ್ಚಳ ಆಗಲಿದೆ. ಈ ವರ್ಷ ಒಟ್ಟು 2116 ಸೀಟು ವಿದ್ಯಾರ್ಥಿಗಳಿಗೆ ಸಿಗಲಿದೆ. ಇದು ವಿದ್ಯಾರ್ಥಿಗಳಿಗೆ ದೀಪಾವಳಿ ಕೊಡುಗೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ಆದೇಶ ನೀಡಿದೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರಿಗೆ ಶೇ.15ರಷ್ಟು ಕೋಟಾ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.