ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಸಂಘರ್ಷ ಮುಂದುವರೆದಿರುವಂತೆಯೇ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ನೆರೆಯ ರಾಷ್ಟ್ರಗಳಿಗೆ ಕ್ಷಮೆ ಕೋರಿದ್ದಾರೆ.
ಇರಾನ್ ಮೇಲಿನ ದಾಳಿ ಮತ್ತು ತಮ್ಮ ಸರ್ವೋಚ್ಛ ನಾಯಕ ಆಯತೊಲ್ಲ ಅಲಿ ಖಮೇನಿ ವಿಚಾರವಾಗಿ ಕೆಂಡಾಮಂಡಲವಾಗಿರುವ ಇರಾನ್, ಅಚ್ಚರಿ ಬೆಳವಣಿಗೆಯಲ್ಲಿ ತನ್ನ ನೆರೆಹೊರೆ ರಾಷ್ಟ್ರಗಳ ಕ್ಷಮೆಕೋರಿದೆ.
ನೆರೆಹೊರೆಯವರಿಗೆ ‘ಕ್ಷಮಿಸಿ’ ಎಂದು ಮಸೌದ್ ಪೆಜೆಶ್ಕಿಯಾನ್ ಹೇಳಿದ್ದು, ಆ ಮೂಲಕ ಅಮೆರಿಕ-ಇಸ್ರೇಲ್ ಜೊತೆಗಿನ ಯುದ್ಧದ ಮಧ್ಯೆ ಉದ್ವಿಗ್ನತೆಯನ್ನು ಶಮನಗೊಳಿಸಲು ಮೊದಲ ಹೆಜ್ಜೆ ಇಟ್ಟಿದೆ.
ಇರಾನ್ ಮೇಲಿನ ದಾಳಿಯು ಅವರ ಪ್ರದೇಶದಿಂದ ಹುಟ್ಟಿಕೊಳ್ಳದ ಹೊರತು ಟೆಹ್ರಾನ್ ನೆರೆಯ ರಾಷ್ಟ್ರಗಳ ವಿರುದ್ಧ ಕ್ಷಿಪಣಿ ದಾಳಿ ಅಥವಾ ದಾಳಿಗಳನ್ನು ನಡೆಸುವುದಿಲ್ಲ ಎಂದು ದೇಶದ ಮಧ್ಯಂತರ ನಾಯಕತ್ವ ಮಂಡಳಿಯ ಪ್ರಮುಖರೂ ಆಗಿರುವ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಈ ನಿರ್ಧಾರವನ್ನು ಘೋಷಿಸಿದ್ದಾರೆ.
ಕ್ಷಮಿಸೋ ಮಾತೇ ಇಲ್ಲ
ಅಂತೆಯೇ ಇರಾನ್ ಮೇಲೆ ದಾಳಿ ಮಾಡಿ ತಮ್ಮ ಸರ್ವೋಚ್ಛ ನಾಯಕ ಖಮೇನಿ ಹತ್ಯೆ ಮಾಡಿದ ಇಸ್ರೇಲ್-ಅಮೆರಿಕವನ್ನು ಕ್ಷಮಿಸುವ ಮಾತೇ ಇಲ್ಲ. ತಮ್ಮ ದೇಶವು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಶರಣಾಗುವುದಿಲ್ಲ ಎಂದೂ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ.
“ಇರಾನ್ ಜನರ ಶರಣಾಗತಿಯ ಆಶಯವನ್ನು ಶತ್ರುಗಳು ತಮ್ಮ ಸಮಾಧಿಗೆ ಕೊಂಡೊಯ್ಯಬೇಕು” ಎಂದು ಪೆಜೆಶ್ಕಿಯಾನ್ ರಾಜ್ಯ ಟಿವಿಯಲ್ಲಿ ಪ್ರಸಾರವಾದ ಭಾಷಣದಲ್ಲಿ ಹೇಳಿರುವುದಾಗಿ AFP ವರದಿ ಮಾಡಿದೆ.
ರಾಯಿಟರ್ಸ್ ಮತ್ತು ಎಎಫ್‌ಪಿ ಸುದ್ದಿ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ವರದಿ ಮಾಡಿರುವ ಈ ಹೇಳಿಕೆಯು, ಕಳೆದ ವಾರಾಂತ್ಯದಲ್ಲಿ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯಿಂದ ಉಂಟಾದ ಸಂಘರ್ಷದ ಮಧ್ಯೆ ಪ್ರಾದೇಶಿಕ ಉದ್ವಿಗ್ನತೆಯನ್ನು ಶಮನಗೊಳಿಸಲು ಟೆಹ್ರಾನ್ ಮಾಡಿದ ಸಂಭಾವ್ಯ ಪ್ರಯತ್ನವನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.
ದಾಳಿ ಸ್ಥಗಿತಕ್ಕೆ ಸೂಚನೆ: ಅಂತೆಯೇ ಈ ಮಹತ್ವದ ಸಭೆಯಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಶನಿವಾರ ತನ್ನ ತಾತ್ಕಾಲಿಕ ನಾಯಕತ್ವ ಮಂಡಳಿಯು ದಾಳಿಯನ್ನು ಸ್ಥಗಿತಗೊಳಿಸಲು ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.





