ಚಿಕ್ಕ ಕುಟುಂಬಗಳಲ್ಲಿ ಗಂಡಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುತ್ತಾರೆ. ಅಲ್ಲಿ ಮಕ್ಕಳು ತಮ್ಮ ಸಮಸ್ಯೆ ತಾವೇ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಅವರು ಅದರಲ್ಲಿ ಯಶಸ್ವಿಯಾಗದೇ ಇದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಟು ನಿರ್ಧಾರ ತೆಗೆದುಕೊಳ್ಳುವ ಹಂತಕ್ಕೂ ತಲುಪುತ್ತಾರೆ.

ಸೀಮಾ ಸಿಂಗಲ್ ಪೇರೆಂಟ್‌. ತನ್ನ ಮಗಳು ಶ್ರೇಯಾ ಬಗ್ಗೆ ಅಪಾರ ಮಹತ್ವಾಕಾಂಕ್ಷೆ ಹೊಂದಿದ್ದಾಳೆ. ಮಗಳನ್ನು ಡಾಕ್ಟರ್‌ ಮಾಡಬೇಕೆನ್ನುವುದು ಅವಳ ಕನಸು. ಆದರೆ ಶ್ರೇಯಾಳಿಗೆ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿಯೇನೂ ಇರಲಿಲ್ಲ. ಆಕೆ ಈ ವಿಷಯBನ್ನು ತನ್ನ ತಾಯಿಯ ಮುಂದೆ ಎಂದೂ ಮನಬಿಚ್ಚಿ ಹೇಳಲಿಲ್ಲ. ಅವಳು ಕ್ರಮೇಣ ಖಿನ್ನತೆಗೆ ಸಿಲುಕುತ್ತಾ ಹೋದಳು. ರೂಮಿನಲ್ಲಿ ಗಂಟೆಗಟ್ಟಲೇ ಒಬ್ಬಳೇ ಕುಳಿತುಕೊಳ್ಳುತ್ತಿದ್ದಳು.

ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿ ಒಬ್ಬ ಯುವಕ ಹಾಗೂ ಯುವತಿ ಮೆಟ್ರೋ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆ ಕಾರಣ ಆ ಯುವತಿಯ ಮದುವೆ ಮುರಿದಿತ್ತು. ಅದರಿಂದಾಗಿ ಆಕೆ ಹಲವು ದಿನಗಳಿಂದ ಖಿನ್ನತೆಗೆ ತುತ್ತಾಗಿದ್ದಳು.

ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಮುಖ್ಯ ಕಾರಣ ನಿರುದ್ಯೋಗ. ನೌಕರಿ ದೊರೆಯದೇ ಇರುವ ಕಾರಣದಿಂದ ಅವನು ಕಳೆದ ಅನೇಕ ತಿಂಗಳುಗಳಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ.

ಎರಡೂ ಪ್ರಕರಣಗಳಲ್ಲಿ ಕುಟುಂಬದವರಿಗೆ ಹುಡುಗ-ಹುಡುಗಿ ಖಿನ್ನತೆಗೆ ತುತ್ತಾಗಿರುವುದು ತಿಳಿದಿತ್ತು. ಇಂತಹದರಲ್ಲಿ ಕುಟುಂಬದವರ ಪಾತ್ರ ಬಹು ಮುಖ್ಯವಾಗಿರುತ್ತದೆ. ಮದುವೆ ಮುರಿಯುವುದು ಹಾಗೂ ನಿರುದ್ಯೋಗ ಸಮಸ್ಯೆ ನಮ್ಮ ಕುಟುಂಬಗಳಲ್ಲಷ್ಟೇ ಅಲ್ಲ, ಬಹಳಷ್ಟು ಕುಟುಂಬಗಳಲ್ಲಿ ಇದ್ದದ್ದೇ ಎಂದು ತಿಳಿವಳಿಕೆ ಹೇಳಬಹುದಾಗಿತ್ತು. ಆದರೆ ಕುಟುಂಬದವರು ಅವರನ್ನು ಅವರ ಪಾಡಿಗೆ ಬಿಟ್ಟುಬಿಡುತ್ತಾರೆ. ಅದರ ಪರಿಣಾಮ ಈ ರೀತಿಯಲ್ಲಿ ಪ್ರತ್ಯಕ್ಷವಾಗುತ್ತದೆ.

ಇಂತಹ ಅದೆಷ್ಟೋ ಜನ ನಮ್ಮ ನಡುವೆ ಇದ್ದು, ಅವರು ಮಾನಸಿಕ ಒತ್ತಡದಿಂದ ಬಳಲುತ್ತಿರುತ್ತಾರೆ. ಕುಟುಂಬದವರಿಂದ ದೂರ ಉಳಿಯುತ್ತಾರೆ. ಇಂತಹ ಸ್ಥಿತಿಯಲ್ಲಿ ತಮ್ಮ ಮಗ ಅಥವಾ ಮಗಳನ್ನು ಮನೋತಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಕುಟುಂಬದವರ ಜವಾಬ್ದಾರಿಯಾಗಿರುತ್ತದೆ.

ಮಾನಸಿಕ ಅಸ್ವಸ್ಥತೆ ಗುಣಪಡಿಸಬಹುದು

ಕೇಂದ್ರ ಆರೋಗ್ಯ ಸಚಿವರು ರಾಜ್ಯಸಭೆಯಲ್ಲಿ ಅಂಕಿಅಂಶಗಳನ್ನು ಪ್ರಸ್ತುತಪಡಿಸುತ್ತಾ, ದೇಶದ ಶೇ.6ರಷ್ಟು ಜನರು ಯಾವುದಾದರೊಂದು ಮಾನಸಿಕ ಅಸಮತೋಲನಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು. 2 ಕೋಟಿ ಜನರು ಸ್ಕ್ರಿಜೊಫ್ರೆನಿಯಾ ಹಾಗೂ 5 ಕೋಟಿಯಷ್ಟು ಜನ ಖಿನ್ನತೆ, ಚಿಂತೆ ಹಾಗೂ ಒತ್ತಡಗ್ರಸ್ತರಾಗಿದ್ದಾರೆ. ಈ ಅಂಕಿಅಂಶಗಳು ಸಮಾಜ ಎಂತಹ ಸ್ಥಿತಿಯಲ್ಲಿದೆ ಎಂಬುದನ್ನು ಕೇಳಿ ಆತಂಕ ಉಂಟಾಗುತ್ತದೆ.

ನಮ್ಮ ಸಮಾಜದಲ್ಲಿ ಚಿಕ್ಕ ಕುಟುಂಬಗಳು ಹೆಚ್ಚುತ್ತಿರುವ ಕಾರಣದಿಂದ ಆ ಕುಟುಂಬದಲ್ಲಿ ಒಂಟಿತನದ ಸಮಸ್ಯೆಗಳು ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತವೆ. ತಮ್ಮ ಕುಟುಂಬದ ಯುವಕ/ ಯುವತಿಯರ ಕುರಿತಂತೆ ವೃದ್ಧರು ಕೂಡ ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ಪ್ರತಿಯೊಂದು ವಯೋಮಾನದವರು ತಮ್ಮದೇ ಆದ ಸಮಸ್ಯೆಗಳಿಂದ ಗ್ರಸ್ತರಾಗಿದ್ದಾರೆ. ಅವರ ಸಮಸ್ಯೆಗಳು ತುಂಬಾ ಕ್ಲಿಷ್ಟಕರವಾಗಿವೆ. ಆದರೆ ಬಗೆಹರಿಸಲಾಗದಷ್ಟು ಕ್ಲಿಷ್ಟಕರವೇನೂ ಅಲ್ಲ. ಬೆಳವಣಿಗೆ ಒಂದು ನಿರಂತರ ಪ್ರಕ್ರಿಯೆ. ಅವರು ಮಕ್ಕಳೇ ಆಗಿರಬಹುದು, ವಯಸ್ಕರೇ ಆಗಿರಬಹುದು ಇಲ್ಲವೇ ವೃದ್ಧರು, ಎಲ್ಲರೂ ಈ ಹಂತವನ್ನು ದಾಟಿ ಬಂದಿರುತ್ತಾರೆ.

ವೃದ್ಧರ ಏಕಾಂಗಿತನ

ನಮ್ಮ ದೇಶದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ವೇಗವಾಗಿ ಬದಲಾಗುತ್ತಿದೆ. ಒಂದು ಪೀಳಿಗೆ ಇನ್ನೊಂದು ಪೀಳಿಗೆಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳದೇ ಇರುವುದು ಸಂಬಂಧಗಳಲ್ಲಿ ಬಿರುಕನ್ನುಂಟು ಮಾಡುತ್ತಿದೆ. ಅದರಲ್ಲೀಗ ವೃದ್ಧರ ಏಕಾಂಗಿತನದ ಪ್ರಮಾಣ ಹೆಚ್ಚುತ್ತಲೇ ಹೊರಟಿದೆ. ಅವರ ಬಗೆಗಿನ ಉಪೇಕ್ಷೆ ಮಕ್ಕಳೊಂದಿಗಿನ ಸಂಬಂಧದಲ್ಲಿ ಕಂದಕ ನಿರ್ಮಾಣ ಮಾಡುತ್ತಿದೆ.

ಬೀದಿ ಬೀದಿಯ ಅಂಚಿನಲ್ಲಿ, ಕಟ್ಟೆಗಳ ಮೇಲೆ ಕುಳಿತು ನಗುನಗುತ್ತಾ ಕಾಲ ಕಳೆಯುತ್ತಿದ್ದ ವೃದ್ಧರ ಸಂಖ್ಯೆ ಈಗ ಗಮನಾರ್ಹವಾಗಿ ಕಡಿಮೆಯಾಗಿದೆ. ಅವರು ತಮ್ಮನ್ನು ತಾವು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸಿಕೊಂಡಿದ್ದಾರೆ.

ಇಂತಹ ಸ್ಥಿತಿಯಲ್ಲಿ ಅವರಿಗೆ ಯಾರಾದರೂ, ಕೌನ್ಸೆಲಿಂಗ್‌ ಮಾಡಬೇಕು, ಅವರು ಖಿನ್ನತೆಗೆ ತುತ್ತಾಗದಂತೆ ಜಾಗ್ರತೆ ವಹಿಸಬೇಕು. ಏಕೆಂದರೆ ಅವರು ಡಿಪ್ರೆಶನ್‌ಗೆ ಹೋಗದಂತೆ ತಡೆಯಬೇಕು. ನಮ್ಮ ಸಮಾಜದಲ್ಲಿ ಈಗಲೂ ಇರುವ ಮೂಢನಂಬಿಕೆ ಏನೆಂದರೆ, ಮನೋತಜ್ಞರ ಬಳಿ ಹೋಗುವುದು ಹುಚ್ಚು ತಗುಲಿದಾಗ ಮಾತ್ರ ಎಂಬುದು.

ನೀಲಾಳ ಅತ್ತೆಯ ನಿಧನದ ಬಳಿಕ ಆಕೆಯ ಮಾವ ಏಕಾಂಗಿಯಾದರು. ನೀಲಾ ಹಾಗೂ ಆಕೆಯ ಪತಿ ಮುಂಜಾನೆ ಹೋದರೆ ಬರುತ್ತಿದ್ದದ್ದು ರಾತ್ರಿಯೇ. ಹೀಗಾಗಿ ಮಾವ ದಿನವಿಡೀ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು.

ಅವರು ಸಿಡಿಮಿಡಿಗೊಳ್ಳುವುದನ್ನು ನೋಡಿ ಮಾವನನ್ನು ಮನೋತಜ್ಞರ ಬಳಿ ಕರೆದುಕೊಂಡು ಹೋಗಲು ನೀಲಾ, ಪತಿಗೆ ಹೇಳಿದಳು. ಆ ಮಾತಿಗೆ ಪತಿ ಕೋಪಗೊಂಡು, ಅವರಿಗೇನೂ ಆಗಿಲ್ಲ. ಅಮ್ಮನನ್ನು ಕಳೆದುಕೊಂಡು ಅವರು ಉದಾಸರಾಗಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಮೊದಲಿನಂತಾಗುತ್ತಾರೆ ಎಂದು ಹೇಳಿದರು.

ವಯಸ್ಸಾದ ಮಹಿಳೆಯರು ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆದರೆ ಪುರುಷರಿಗೆ ಮನೆಯಲ್ಲೇ ಕುಳಿತುಕೊಂಡು ಸಮಯ ಕಳೆಯುವುದು ಬಹಳ ಕಷ್ಟದ ಕೆಲಸ ಎನಿಸುತ್ತದೆ. ಅಂತಹ ಸ್ಥಿತಿಯಲ್ಲಿ ಸಂಗಾತಿ ತೀರಿಹೋದರೆ ಅವರು ಖಿನ್ನತೆಗೆ ತುತ್ತಾಗುತ್ತಾರೆ.

ಖಿನ್ನತೆ ತಡೆಯುವ ಉಪಾಯಗಳು

ಸಾಮಾನ್ಯವಾಗಿ ಖಿನ್ನತೆಗೆ ತುತ್ತಾದವರನ್ನು ಜನರು ಗುರುತಿಸುವುದು ಕಡಿಮೆಯೇ. ಅಂಥವರು ಜನರ ನಡುವೆ ಇದ್ದುಕೊಂಡು ಚಿತ್ರವಿಚಿತ್ರ ವರ್ತನೆ ತೋರುತ್ತಾರೆ. ಆದರೂ ಅವರ ಸಮಸ್ಯೆ ಏನು ಎಂದು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಯಾರಿಗಾದರೂ ಏನಾದರೂ ತೊಂದರೆ ಕೊಡುವತನಕ ಅವರನ್ನು ಮನೋಚಿಕಿತ್ಸಕರ ಬಳಿ ಕರೆದುಕೊಂಡು ಹೋಗುವುದಿಲ್ಲ. ಕೌಟುಂಬಿಕ ಸಂಬಂಧ ಕಾಯ್ದುಕೊಂಡು ಹೋಗುವುದು ಮಹತ್ವ, ಅದರ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗಬೇಕೇ ವಿನಾ ಅದು ಯಾವುದೇ ಕಾರಣಕ್ಕೂ ಕುಂಠಿತಗೊಳ್ಳಬಾರದು. ನಮ್ಮ ಸಮಾಜದಲ್ಲಿ ಮಾನಸಿಕ ರೋಗಗಳ ಬಗ್ಗೆ ಜಾಗೃತಿ ಕಡಿಮೆ ಇದೆ. ಹೀಗಾಗಿ ಮನೋರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುವುದಿಲ್ಲ.

ಹಿಂಸಾತ್ಮಕ ವರ್ತನೆ

ಕಳೆದ ವರ್ಷ ತೆಲಂಗಾಣದಲ್ಲಿ ಖಿನ್ನತೆಗೆ ತುತ್ತಾದ 26 ವರ್ಷದ ಸಾಫ್ಟ್ ವೇರ್‌ ಎಂಜಿನಿಯರ್‌ ಒಬ್ಬ ಕೈಯಲ್ಲಿ ಲಾಂಗ್‌  ಹಿಡಿದು ಅನೇಕ ಜನರನ್ನು ಗಾಯಗೊಳಿಸಿದ. ಅದರಲ್ಲಿ ಅವನ ತಂದೆತಾಯಿ ಕೂಡ ಇದ್ದರು.

ಸಿವಿಲ್ ಸರ್ವೀಸ್‌ ಪರೀಕ್ಷೆಯಲ್ಲಿ ವಿಫಲನಾದ ಬಳಿಕ ಆತ ಬಹಳ ಖಿನ್ನತೆಗೆ ಒಳಗಾಗಿದ್ದ. ಅವನು ಓದಿನಲ್ಲಿ ಸದಾ ಟಾಪ್‌ನಲ್ಲಿರುತ್ತಿದ್ದ. ಹೀಗಾಗಿ ವಿಫಲತೆಯನ್ನು ಜೀರ್ಣಿಸಿಕೊಳ್ಳಲು ಅವನಿಗೆ ಆಗಲಿಲ್ಲ.

ಸಕಾಲದಲ್ಲಿ ಅವನಿಗೆ ಚಿಕಿತ್ಸೆ ಕೊಡಿಸಿದ್ದರೆ ಆ ಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ಕೊನೆಗೆ ಆತ ಪೊಲೀಸ್‌ ಗೋಲಿಬಾರ್‌ನಲ್ಲಿ ಸತ್ತುಹೋದ.

ಕುಟುಂಬದವರ ಪಾತ್ರ

ನಮ್ಮ ದೇಶದಲ್ಲಿ ಮೊದಲಿನಿಂದಲೂ ಒಟ್ಟು ಕುಟುಂಬದಲ್ಲಿ ಬಾಳಿ ಬದುಕಿದ ಪದ್ಧತಿ ಇದೆ. ಆ ಸಮಯದಲ್ಲಿ ಕುಟುಂಬದಲ್ಲಿ ಯಾರೊಬ್ಬರೂ ಏಕಾಂಗಿಯಾಗಿ ಉಳಿಯುವ ಸಂದರ್ಭ ಒದಗಿ ಬರುತ್ತಿರಲಿಲ್ಲ. ಇಂದು ಪರಿಸ್ಥಿತಿ ಬದಲಾಗಿದೆ. ಚಿಕ್ಕ ಕುಟುಂಬಗಳು ಹಾಗೂ ಆರ್ಥಿಕ ಒತ್ತಡದ ಕಾರಣಗಳಿಂದ ಜೀವನದಲ್ಲಿ ಒತ್ತಡದ ಸನ್ನಿವೇಶ ಎದುರಾಗಿವೆ. ಇಂತಹ ಸಮಸ್ಯೆಗಳಿಂದ ಪಾರಾಗಲು ಕುಟುಂಬದ ಪರಸ್ಪರರಲ್ಲಿ ಆತ್ಮೀಯತೆ ಅತ್ಯಗತ್ಯ.

ಕುಟುಂಬದ ಯಾರೊಬ್ಬರು ಒತ್ತಡದ ಸ್ಥಿತಿಯಲ್ಲಿ ಇದ್ದಾರೆಂದರೆ, ಅವರಿಗೆ ಸಮರ್ಪಕ ಚಿಕಿತ್ಸೆ ಕೊಡಿಸಬೇಕು ಹಾಗೂ ಅವರ ಆಸಕ್ತಿ ಅನಾಸಕ್ತಿಗಳ ಬಗ್ಗೆ ಸದಾ ಗಮನಕೊಡಬೇಕು. ಏಕೆಂದರೆ ಅವರು ತಮ್ಮನ್ನು ತಾವು ಉಪೇಕ್ಷಿತರೆಂದು ಭಾವಿಸಬಾರದು. ಮಗುವೇ ಆಗಿರಬಹುದು ಅಥವಾ ವಯಸ್ಸಾದವರು, ಅವರ ಅವಶ್ಯಕತೆ ಹಾಗೂ ಕೆಲಸ ಕಾರ್ಯಗಳಿಗಾಗಿ ಸಮಯ ಹೊಂದಿಸಿಕೊಳ್ಳಿ.

ಸಾಮಾನ್ಯವಾಗಿ ಜನರು ಮನೋತಜ್ಞರ ಬಳಿ ಹೋಗುವುದನ್ನು ಒಳ್ಳೆಯದೆಂದು ಭಾವಿಸುವುದಿಲ್ಲ. ಈ ಭ್ರಮೆಯನ್ನು ಮೊದಲು ತೊರೆಯಬೇಕು. ಉಳಿದ ರೋಗಗಳು ಯಾವ ರೀತಿ ಔಷಧದಿಂದ ಗುಣವಾಗತ್ತಿವೆಯೋ ಅದೇ ರೀತಿ ಮಾನಸಿಕ ಅನಾರೋಗ್ಯಪೀಡಿತರನ್ನೂ ಸಮರ್ಪಕವಾಗಿ ಔಷಧಿಗಳ ಮುಖಾಂತರ ಚಿಕಿತ್ಸೆ ನೀಡಿ ಗುಣಪಡಿಸಬಹುದಾಗಿದೆ.

– ಕೆ. ರುಚಿತಾ ರಾವ್

ಮಾನಸಿಕ ಅನಾರೋಗ್ಯದ ಲಕ್ಷಣಗಳು

– ಯಾವುದೇ ಕೆಲಸ ಕಾರ್ಯಗಳಲ್ಲಿ ಮನಸ್ಸನ್ನು ನಿಲ್ಲಿಸಲು ಆಗದಿರುವುದು.

– ಕಾರಣವಿಲ್ಲದೆ ಅತಿಯಾಗಿ ತಿನ್ನುವುದು ಅಥವಾ ಗಂಟೆಗಟ್ಟಲೆ ಹಾಗೆಯೇ ಹಾಸಿಗೆ ಮೇಲೆ ಬಿದ್ದುಕೊಂಡಿರುವುದು.

– ಬೇರೆಯವರಿಂದ ಸದಾ ದೂರ ಉಳಿಯುವುದು.

– ಬೇರೊಬ್ಬರು ಖುಷಿಯಾಗಿರುವುದನ್ನು ಕಂಡು ಸಿಡಿಮಿಡಿಗೊಳ್ಳುವುದು.

ಈ ಮೇಲ್ಕಂಡ ಲಕ್ಷಣಗಳು ಯಾರಲ್ಲಾದರೂ ಕಂಡುಬಂದರೆ, ಅವರನ್ನು ಮನೋಚಿಕಿತ್ಸಕರ ಬಳಿ ಕರೆದುಕೊಂಡು ಹೋಗುವಲ್ಲಿ ಯಾವುದೇ ವಿಳಂಬ ಮಾಡಬಾರದು. ಅವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ