ಶಿವನು ಕಾಮದೇವನನ್ನು ಭಸ್ಮ ಮಾಡಿದ ಭಸ್ಮಾಚಲ ಸ್ಥಳ ಎಂದು ಪ್ರಸಿದ್ದಿಯಾದ, ಅಸ್ಸಾಂನ ಅಹೋಮ್ ಅರಸರು ನಿರ್ಮಿಸಿದ ಅದ್ಭುತ ಶಿವಕ್ಷೇತ್ರವಾಗಿರುವ ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಉಮಾನಂದ ದೇವಾಲಯದ ರೋಚಕ ಪೌರಾಣಿಕ ಹಿನ್ನೆಲೆ ಮತ್ತು ಇತಿಹಾಸ ತಿಳಿಯೋಣ ಬನ್ನಿ.
ಬ್ರಹ್ಮಪುತ್ರದ ನಡುವೆ ನೆಲೆಸಿರುವ ಪುಟ್ಟ ದ್ವೀಪ

ಅಸ್ಸಾಂ ರಾಜ್ಯದ ಪ್ರಮುಖ ನಗರವಾದ ಗುವಾಹಟಿಯ ಹೃದಯಭಾಗದಲ್ಲಿ ಬ್ರಹ್ಮಪುತ್ರ ನದಿಯ ನಡುವೆ ನೆಲೆಸಿರುವ ಉಮಾನಂದ ದ್ವೀಪವು ತನ್ನ ವಿಶಿಷ್ಟ ಭೌಗೋಳಿಕ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನದಿಯ ಮಧ್ಯದಲ್ಲಿರುವ ಈ ಪುಟ್ಟ ದ್ವೀಪದ ಮೇಲೆಯೇ ಪ್ರಸಿದ್ಧ ಉಮಾನಂದ ಶಿವಾಲಯವಿದೆ. ಮೇಲಿನಿಂದ ನೋಡಿದಾಗ ದ್ವೀಪದ ಆಕಾರ ನವಿಲು ತನ್ನ ಗರಿಗಳನ್ನು ಬಿಚ್ಚಿ ನಿಂತಿರುವಂತೆ ಕಾಣುವುದರಿಂದ ಬ್ರಿಟಿಷರ ಕಾಲದಲ್ಲಿ ಈ ಪುಟ್ಟ ದ್ವೀಪಕ್ಕೆ ನವಿಲು ದ್ವೀಪ (ಪೀಕಾಕ್ ಐಲ್ಯಾಂಡ್, Peacock Island) ಎಂಬ ಹೆಸರನ್ನು ಇಟ್ಟರು ಎನ್ನಲಾಗಿದೆ.

ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಈ ಪುಟ್ಟ ದ್ವೀಪವು ಇಂದು ವಿಶ್ವದ ಅತ್ಯಂತ ಚಿಕ್ಕ ಜನವಸತಿಯಿರುವ ನದಿ ದ್ವೀಪವೆಂದೇ ಪ್ರಖ್ಯಾತಿಯಾಗಿದೆ. ಈ ದ್ವೀಪದಲ್ಲಿ ಉಮಾನಂದ ದೇವಾಲಯದ ಅರ್ಚಕರು ಮತ್ತು ನಿರ್ವಹಣೆಯೊಂದಿಗೆ ಸಂಬಂಧಪಟ್ಟವರು ವಾಸಿಸುತ್ತಾರೆ. ದ್ವೀಪದ ಸುತ್ತಲೂ ಹರಿಯುವ ಬ್ರಹ್ಮಪುತ್ರ, ಹಸಿರು ಮರಗಳು ಮತ್ತು ಬಂಡೆಗಳ ನಡುವಿನ ದೇವಾಲಯದ ನೋಟವೇ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಗುವಾಹಟಿಯ ನಗರದ ಗದ್ದಲದಿಂದ ಕೆಲವೇ ನಿಮಿಷಗಳ ದೋಣಿ ಪ್ರಯಾಣ ಮಾಡಿದರೆ, ನದಿಯ ಮಧ್ಯದಲ್ಲಿರುವ ಈ ಪುಟ್ಟ ಪುಣ್ಯಕ್ಷೇತ್ರ ತಲುಪಬಹುದು. ನಗರದಿಂದ ಅಷ್ಟು ಹತ್ತಿರದಲ್ಲಿದ್ದರೂ ದ್ವೀಪಕ್ಕೆ ಕಾಲಿಟ್ಟಾಗ ಕಾಣುವ ಪ್ರಶಾಂತ ವಾತಾವರಣ ವಿಭಿನ್ನ ಅನುಭವ ನೀಡುತ್ತದೆ.
ಉಮಾನಂದ ಎಂಬ ಹೆಸರು ಬಂದಿದ್ದು ಹೇಗೆ?
ಉಮಾನಂದ ಎಂಬ ಹೆಸರಿನಲ್ಲಿಯೇ ದೇವಾಲಯದ ಪೌರಾಣಿಕ ಹಿನ್ನೆಲೆ ಅಡಗಿದೆ. ಉಮಾ ಎಂದರೆ ಪಾರ್ವತಿ ದೇವಿಯ ಮತ್ತೊಂದು ಹೆಸರು. ಆನಂದ ಎಂದರೆ ಸಂತೋಷ ಅಥವಾ ಆನಂದ. ಶಿವನು ತನ್ನ ಪತ್ನಿ ಉಮಾದೇವಿಯ ಸಂತೋಷಕ್ಕಾಗಿ ಈ ಸುಂದರ ದ್ವೀಪವನ್ನು ಸೃಷ್ಟಿಸಿ, ಇಲ್ಲಿ ನೆಲೆಸಿದನೆಂಬ ಸ್ಥಳೀಯ ಪುರಾಣಕಥೆಯಿದೆ. ಹೀಗಾಗಿ ಉಮೆಯ ಆನಂದಕ್ಕಾಗಿ ನಿರ್ಮಾಣಗೊಂಡ ಸ್ಥಳ ಎಂಬ ಅರ್ಥದಲ್ಲಿ ಈ ಪ್ರದೇಶಕ್ಕೆ ಉಮಾನಂದ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಇಲ್ಲಿನ ಪ್ರಧಾನ ದೇವತೆ ಶಿವನಾಗಿದ್ದು, ಅವರನ್ನು ಉಮಾನಂದ ರೂಪದಲ್ಲಿ ಆರಾಧಿಸಲಾಗುತ್ತದೆ. ಅಸ್ಸಾಂನ ಧಾರ್ಮಿಕ ಪರಂಪರೆಯಲ್ಲಿ ಈ ಕ್ಷೇತ್ರಕ್ಕೆ ವಿಶೇಷ ಸ್ಥಾನವಿದೆ.
ಶಿವನು ಕಾಮದೇವನನ್ನು ಭಸ್ಮ ಮಾಡಿದ ಸ್ಥಳ — ಭಸ್ಮಾಚಲ!
ಉಮಾನಂದ ದೇವಾಲಯದ ಪೌರಾಣಿಕ ಹಿನ್ನೆಲೆಯಲ್ಲಿಯೇ ಅತ್ಯಂತ ರೋಚಕವಾದದ್ದು ಶಿವ ಮತ್ತು ಕಾಮದೇವನ ಕಥೆ. ಪುರಾಣಗಳ ಪ್ರಕಾರ, ದಕ್ಷಯಜ್ಞದ ಸಂದರ್ಭದಲ್ಲಿ ಸಂಭವಿಸಿದ ಘಟನೆಗಳಿಂದಾಗಿ ಸತೀದೇವಿ ತನ್ನ ದೇಹವನ್ನು ತ್ಯಜಿಸಿದ ನಂತರ ಶಿವನು ತೀವ್ರ ವೈರಾಗ್ಯಕ್ಕೆ ಒಳಗಾಗಿ ಲೋಕದ ವ್ಯವಹಾರಗಳಿಂದ ದೂರವಾಗಿ ಆಳವಾದ ತಪಸ್ಸಿನಲ್ಲಿ ಮುಳುಗಿದನು. ಇತ್ತ ಸತೀದೇವಿಯೇ ಪಾರ್ವತಿಯಾಗಿ ಹಿಮವಂತನ ಮಗಳ ರೂಪದಲ್ಲಿ ಪುನರ್ಜನ್ಮ ಪಡೆದಿದ್ದಳು. ಶಿವ ಮತ್ತು ಪಾರ್ವತಿಯರ ವಿವಾಹವಾಗಬೇಕೆಂದು ದೇವತೆಗಳು ಬಯಸಿದ್ದರು. ಅದಕ್ಕಾಗಿ ಶಿವನ ತಪಸ್ಸನ್ನು ಭಂಗಗೊಳಿಸಿ ಆತನ ಮನಸ್ಸಿನಲ್ಲಿ ಪ್ರೇಮಭಾವವನ್ನು ಮೂಡಿಸುವ ಜವಾಬ್ದಾರಿಯನ್ನು ಕಾಮದೇವನಿಗೆ ವಹಿಸಲಾಯಿತು.
ದೇವತೆಗಳ ಇಚ್ಛೆಯಂತೆ ಕಾಮದೇವನು ತನ್ನ ಪುಷ್ಪಬಾಣವನ್ನು ಶಿವನತ್ತ ಪ್ರಯೋಗಿಸಿದನು. ಇದರಿಂದ ಶಿವನ ತಪಸ್ಸಿಗೆ ಭಂಗ ಉಂಟಾಯಿತು. ಕೋಪಗೊಂಡ ಶಿವನು ತನ್ನ ಮೂರನೇ ಕಣ್ಣನ್ನು ತೆರೆದಾಗ ಹೊರಹೊಮ್ಮಿದ ಅಗ್ನಿಯ ಜ್ವಾಲೆಗೆ ಕಾಮದೇವನು ಸುಟ್ಟು ಭಸ್ಮವಾದನೆಂಬುದು ಪೌರಾಣಿಕ ಕಥೆ. ಈ ಘಟನೆ ಸಂಭವಿಸಿದ ಸ್ಥಳವೇ ಇಂದಿನ ಉಮಾನಂದ ದ್ವೀಪದ ಬೆಟ್ಟಗುಡ್ಡದ ಪ್ರದೇಶ ಎಂದು ಸ್ಥಳೀಯ ಸ್ಥಲಪುರಾಣ ಹೇಳುತ್ತದೆ.
ಹೀಗಾಗಿ ಈ ಸ್ಥಳಕ್ಕೆ ಭಸ್ಮಾಚಲ ಅಥವಾ ಭಸ್ಮಕೂಟ ಎಂಬ ಹೆಸರು ಕೂಡ ಬಂದಿದೆ. ಭಸ್ಮ ಎಂದರೆ ಸುಟ್ಟ ನಂತರ ಉಳಿಯುವ ಬೂದಿ. ಕಾಮದೇವನು ಇಲ್ಲಿ ಭಸ್ಮವಾದನೆಂಬ ನಂಬಿಕೆಯಿಂದ ಈ ಹೆಸರು ಬಂದಿದೆ ಎನ್ನಲಾಗುತ್ತದೆ.
ಊರ್ವಶಿ ದ್ವೀಪ ಎಂಬ ಮತ್ತೊಂದು ಹೆಸರಿನ ಹಿಂದಿನ ಕಥೆ
ಉಮಾನಂದ ದ್ವೀಪಕ್ಕೆ ಭಸ್ಮಾಚಲ ಮತ್ತು ಪೀಕಾಕ್ ಐಲ್ಯಾಂಡ್ ಎಂಬ ಹೆಸರುಗಳಷ್ಟೇ ಅಲ್ಲದೆ ಊರ್ವಶಿ ದ್ವೀಪ ಎಂಬ ಹೆಸರೂ ಇದೆ. ಸ್ಥಳೀಯ ಪುರಾಣಕಥೆಯ ಪ್ರಕಾರ, ದೇವಲೋಕದ ಅಪ್ಸರೆಯಾದ ಊರ್ವಶಿಯು ಕಾಮಾಖ್ಯಾ ದೇವಿಯ ಸೇವೆಗಾಗಿ ಅಮೃತವನ್ನು ತಂದುಕೊಡುವ ಕಾರ್ಯದಲ್ಲಿ ತೊಡಗಿದ್ದಳು. ಆಕೆ ಈ ಪ್ರದೇಶದಲ್ಲಿಯೇ ನೆಲೆಸಿದ್ದಳು ಎಂಬ ನಂಬಿಕೆಯಿದೆ. ಇದರಿಂದ ಈ ದ್ವೀಪಕ್ಕೆ ಊರ್ವಶಿ ದ್ವೀಪ ಎಂಬ ಹೆಸರೂ ಪ್ರಚಲಿತಕ್ಕೆ ಬಂದಿತು. ಈ ಕಥೆಯನ್ನು ಅಸ್ಸಾಂನ ಪುರಾಣ ಪರಂಪರೆಯ ಪ್ರಮುಖ ಗ್ರಂಥವಾದ ಕಾಲಿಕಾ ಪುರಾಣದೊಂದಿಗೆ ಸಂಬಂಧಿಸಲಾಗಿದೆ. ಒಂದೇ ದ್ವೀಪಕ್ಕೆ ಉಮಾನಂದ, ಭಸ್ಮಾಚಲ, ಭಸ್ಮಕೂಟ, ಊರ್ವಶಿ ದ್ವೀಪ ಮತ್ತು ಪೀಕಾಕ್ ಐಲ್ಯಾಂಡ್ ಎಂಬ ಹಲವು ಹೆಸರುಗಳಿರುವುದು ಅದರ ಪೌರಾಣಿಕ ಹಾಗೂ ಐತಿಹಾಸಿಕ ವೈಶಿಷ್ಟ್ಯವನ್ನು ತೋರಿಸುತ್ತದೆ.
ಅಹೋಮ್ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಉಮಾನಂದ ದೇವಾಲಯ
![]()
ಉಮಾನಂದ ದೇವಾಲಯದ ಇತಿಹಾಸವು ಅಸ್ಸಾಂನ ಪ್ರಸಿದ್ಧ ಅಹೋಮ್ ರಾಜವಂಶದೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ಅಸ್ಸಾಂನಲ್ಲಿ ಸುಮಾರು ಆರು ಶತಮಾನಗಳಿಗೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ ಅಹೋಮ್ ಅರಸರು ಕೇವಲ ಆಡಳಿತ ಮತ್ತು ಯುದ್ಧಕಲೆಗಳಿಗೆ ಮಾತ್ರವಲ್ಲದೆ ದೇವಾಲಯಗಳು, ಕೆರೆಗಳು, ಸೇತುವೆಗಳು ಮತ್ತು ಇತರ ಸಾರ್ವಜನಿಕ ಕಟ್ಟಡಗಳ ನಿರ್ಮಾಣಕ್ಕೂ ಹೆಸರುವಾಸಿಯಾಗಿದ್ದರು. ಅವರ ಕಾಲದಲ್ಲಿ ನಿರ್ಮಾಣಗೊಂಡ ಪ್ರಮುಖ ಶಿವಕ್ಷೇತ್ರಗಳಲ್ಲಿ ಉಮಾನಂದ ದೇವಾಲಯವೂ ಒಂದು. ಅಹೋಮ್ ಅರಸ ಗದಾಧರ ಸಿಂಹ (1681–1696) ಅಹೋಮ್ ರಾಜವಂಶದ ಪ್ರಮುಖ ಅರಸರಲ್ಲೊಬ್ಬರು. ಅವರ ಆಳ್ವಿಕೆಯ ಅವಧಿಯಲ್ಲಿ ರಾಜ್ಯದ ಆಡಳಿತ ವ್ಯವಸ್ಥೆ ಮತ್ತು ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಮಹತ್ವ ನೀಡಲಾಗಿತ್ತು. ಅವರ ಆದೇಶದ ಮೇರೆಗೆ ಕ್ರಿ.ಶ. 1694ರಲ್ಲಿ ಬರ್ ಫುಕನ್ ಗರ್ಗನ್ಯ ಹಂಡೀಕ್ (Bar Phukan Garhganya Handique) ಎಂಬವರು ಈ ದೇವಾಲಯವನ್ನು ನಿರ್ಮಿಸಿದರು. ಮೊಘಲ್ ಸೈನ್ಯವು ಈ ದೇವಾಲಯವನ್ನು ಅಪವಿತ್ರಗೊಳಿಸಿದದ್ದು ಈ ದೇವಾಲಯದ ಕರಾಳ ಇತಿಹಾಸದ ಭಾಗವಾಗಿದೆ.
ಹಾಗೆ ನೋಡಿದರೆ, ಈ ದ್ವೀಪದಲ್ಲಿ ಇದಕ್ಕೂ ಮುಂಚೆಯೇ ಗುಪ್ತೋತ್ತರ ಕಾಲಕ್ಕೆ ಸೇರಿದ ಕಲ್ಲಿನ ದೇವಾಲಯವಿದ್ದು, ಅಹೋಮ್ ಅರಸರ ಕಾಲದಲ್ಲಿ ಹೊಸ ರೂಪ ಮತ್ತು ವಾಸ್ತುಶಿಲ್ಪದ ವಿನ್ಯಾಸದಲ್ಲಿ ಈ ದೇವಾಲಯವನ್ನು ನಿರ್ಮಿಸಿದರು.
ದೇವಾಲಯದ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ವಿಶೇಷತೆ
ಉಮಾನಂದ ದೇವಾಲಯವು ಕೇವಲ ಧಾರ್ಮಿಕ ಕ್ಷೇತ್ರವಲ್ಲ, ಅಸ್ಸಾಂನ ಪ್ರಾಚೀನ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಅಧ್ಯಯನಕ್ಕೂ ಮಹತ್ವದ ತಾಣವಾಗಿದೆ. ದೇವಾಲಯದ ಸುತ್ತಲಿನ ಬಂಡೆಗಳು ಮತ್ತು ಗೋಡೆಗಳಲ್ಲಿ ಅನೇಕ ದೇವತಾ ಶಿಲ್ಪಗಳು ಹಾಗೂ ಕೆತ್ತನೆಗಳನ್ನು ಕಾಣಬಹುದು.
ಪ್ರಮುಖವಾಗಿ:
- ಸೂರ್ಯದೇವರ ಶಿಲ್ಪಗಳು.
- ಶಿವನ ವಿವಿಧ ರೂಪಗಳನ್ನು ಬಿಂಬಿಸುವ ಕೆತ್ತನೆಗಳು.
- ಗಣಪತಿಯ ಶಿಲ್ಪಗಳು.
- ದೇವಿಯ ವಿವಿಧ ಸ್ವರೂಪಗಳ ಚಿತ್ರಣ.
- ವಿಷ್ಣುವಿನ ದಶಾವತಾರಗಳನ್ನು ಪ್ರತಿನಿಧಿಸುವ ಶಿಲ್ಪಗಳು.
- ನಾಲ್ಕು ಕೈಗಳನ್ನು ಹೊಂದಿರುವ ಸ್ತ್ರೀ ದೇವತೆಯ ಕಲ್ಲಿನ ಮೂರ್ತಿ.
- ಬಂಡೆಗಳಲ್ಲಿ ಕೆತ್ತಲಾದ ಗಣೇಶನ ಮೂರ್ತಿಗಳು ಮತ್ತು ಗುಹೆಯ ಅವಶೇಷಗಳು.
ಇವೆಲ್ಲವೂ ಈ ಪ್ರದೇಶದಲ್ಲಿ ಹಲವು ಕಾಲಘಟ್ಟಗಳಲ್ಲಿ ಶಿಲ್ಪಕಲೆಯ ಚಟುವಟಿಕೆಗಳು ನಡೆದಿರುವುದನ್ನು ಸೂಚಿಸುತ್ತವೆ. ವಾಸ್ತುಶಿಲ್ಪದ ದೃಷ್ಟಿಯಿಂದ ಮುಖ್ಯ ಉಮಾನಂದ ದೇವಾಲಯವನ್ನು ಪಂಚರಥ ವಿನ್ಯಾಸದ ರೆಖಾ ದೇವುಲ್ ಶೈಲಿಗೆ ಸೇರಿಸಲಾಗಿದೆ. ಸರಳವಾಗಿ ಹೇಳುವುದಾದರೆ, ದೇವಾಲಯದ ಹೊರವಿನ್ಯಾಸದಲ್ಲಿ ನಿರ್ದಿಷ್ಟವಾದ ಐದು ಪ್ರಕ್ಷೇಪಗಳನ್ನು ಹೊಂದಿರುವ ಸಾಂಪ್ರದಾಯಿಕ ದೇವಾಲಯ ಶೈಲಿ ಇದು. ದೇವಾಲಯದ ಒಳಗೆ ಶಾಸನ ಹೊಂದಿರುವ ಬೆಳ್ಳಿಯ ಶಿವಮೂರ್ತಿಯನ್ನು ಪೂಜಿಸಲಾಗುತ್ತದೆ.
ಒಂದೇ ದ್ವೀಪದಲ್ಲಿ ಮೂರು ದೇವಾಲಯಗಳು!
ಉಮಾನಂದ ದ್ವೀಪದಲ್ಲಿ ಪ್ರಮುಖವಾಗಿ ಮೂರು ದೇವಾಲಯಗಳಿವೆ. ಅವುಗಳೆಂದರೆ:
1. ಉಮಾನಂದ ದೇವಾಲಯ : ಇದು ದ್ವೀಪದ ಅತ್ಯಂತ ಹಳೆಯ ಮತ್ತು ಎತ್ತರವಾದ ದೇವಾಲಯ. ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವೇ ಇಲ್ಲಿನ ಪ್ರಮುಖ ಆಕರ್ಷಣೆ. 1694ರಲ್ಲಿ ಅಹೋಮ್ ಅರಸ ಗದಾಧರ ಸಿಂಹನ ಕಾಲದಲ್ಲಿ ನಿರ್ಮಾಣಗೊಂಡಿತು.
2. ಚಂದ್ರಶೇಖರ ದೇವಾಲಯ : ಅಹೋಮ್ ಅರಸ ಚಂದ್ರಕಾಂತ ಸಿಂಹನ ಕಾಲದಲ್ಲಿ ಸುಮಾರು 1820ರಲ್ಲಿ ನಿರ್ಮಾಣಗೊಂಡಿದೆ ಎಂದು ಅಸ್ಸಾಂ ಪುರಾತತ್ವ ಇಲಾಖೆಯ ದಾಖಲೆ ತಿಳಿಸುತ್ತದೆ. ಈ ದೇವಾಲಯದ ವಿನ್ಯಾಸ ಅಷ್ಟಭುಜಾಕೃತಿಯಲ್ಲಿದ್ದು, ಒಳಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

3. ಹರ-ಗೌರಿ ದೇವಾಲಯ : ಗೌರಿನಾಥ ಸಿಂಹನ ಕಾಲದ ದೇವಾಲಯವೆಂದು ಗುರುತಿಸಲಾಗಿದೆ. ಇದು ಮುಖ್ಯ ದೇವಾಲಯದ ಪ್ರವೇಶದ್ವಾರದ ಸಮೀಪದಲ್ಲಿರುವ ಸಣ್ಣ ಗುಡಿಯಾಗಿದೆ. ಈ ಮೂರು ದೇವಾಲಯಗಳು ಒಂದೇ ದ್ವೀಪದಲ್ಲಿ ವಿಭಿನ್ನ ರಾಜರ ಕಾಲದ ಧಾರ್ಮಿಕ ಮತ್ತು ವಾಸ್ತುಶಿಲ್ಪದ ಪರಂಪರೆಯನ್ನು ಪ್ರತಿನಿಧಿಸುತ್ತವೆ.

ಈ ದ್ವೀಪದಲ್ಲಿ ಉಮಾನಂದನ ಸ್ವಾಮಿಯ ಹೊರತಾಗಿ ಇನ್ನೂ 10 ಹಿಂದೂ ದೇವರುಗಳ ಸಣ್ಣ ಗುಡಿಗಳಿದ್ದು, ಅವುಗಳಲ್ಲಿ ದಶಾವತಾರದ ಜೊತೆಗೆ ಸೂರ್ಯ, ಹನುಮಂತ ಗಣೇಶ, ಶಿವ ಮತ್ತು ದೇವಿಯ ಅದರಲ್ಲೂ ವಿಶೇಷವಾಗಿ ಅನ್ನಪೂರ್ಣೆಯ ವಿಗ್ರಹಗಳನ್ನು ಇಲ್ಲಿ ಕಾಣಬಹುದಾಗಿದೆ.
1897ರ ಭೀಕರ ಭೂಕಂಪದಲ್ಲಿ ಹಾನಿಗೊಳಗಾದ ದೇವಾಲಯ

ಅಸ್ಸಾಂ ಸೇರಿದಂತೆ ಈಶಾನ್ಯ ಭಾರತವನ್ನು ತೀವ್ರವಾಗಿ ನಡುಗಿಸಿದ 1897ರ ಭೀಕರ ಭೂಕಂಪದಿಂದ ದೇವಾಲಯದ ಬಹುಭಾಗ ಹಾನಿಗೊಳಗಾಯಿತು. ಆ ಕಾಲದಲ್ಲಿ ಅಸ್ಸಾಂನಲ್ಲಿ ಅನೇಕ ದೇವಾಲಯಗಳು, ಕಟ್ಟಡಗಳು ಮತ್ತು ಐತಿಹಾಸಿಕ ಸ್ಮಾರಕಗಳು ಭೂಕಂಪದ ಪರಿಣಾಮಕ್ಕೆ ಒಳಗಾಗಿದ್ದವು. ಉಮಾನಂದ ದೇವಾಲಯದ ಹಾನಿಗೊಳಗಾದ ಭಾಗಗಳನ್ನು ನಂತರ ಸ್ಥಳೀಯ ಶ್ರೀಮಂತ ವ್ಯಾಪಾರಿಯೊಬ್ಬರು ಪುನರ್ನಿರ್ಮಾಣ ಮಾಡಿಸಿದರು ಎಂಬ ಮಾಹಿತಿ ಸರ್ಕಾರಿ ಪ್ರವಾಸೋದ್ಯಮದ ದಾಖಲೆಗಳಲ್ಲಿ ಲಭ್ಯವಿದೆ.
ಪುನರ್ನಿರ್ಮಾಣದ ಸಂದರ್ಭದಲ್ಲಿ ದೇವಾಲಯದ ಒಳಭಾಗದಲ್ಲಿ ವೈಷ್ಣವ ಪರಂಪರೆಗೆ ಸಂಬಂಧಿಸಿದ ಬರಹಗಳು ಮತ್ತು ಧಾರ್ಮಿಕ ಸಂದೇಶಗಳನ್ನೂ ಸೇರಿಸಲಾಯಿತು ಎಂದು ಹೇಳಲಾಗಿದೆ. ಇದರಿಂದ ಶಿವನ ಆರಾಧನೆಯ ಪ್ರಮುಖ ಕೇಂದ್ರವಾಗಿರುವ ಈ ದೇವಾಲಯದ ಇತಿಹಾಸದಲ್ಲಿ ವೈಷ್ಣವ ಧಾರ್ಮಿಕ ಪರಂಪರೆಯ ಗುರುತುಗಳೂ ಸೇರ್ಪಡೆಯಾಗಿವೆ. ಈ ಪುನರ್ನಿರ್ಮಾಣದ ನಂತರ ಇಂದಿನ ದೇವಾಲಯದ ರೂಪವು ಹಿಂದಿನ ಕಟ್ಟಡಕ್ಕಿಂತ ಕೆಲವು ಬದಲಾವಣೆಗಳನ್ನು ಕಂಡಿದೆ. ಆದರೂ ಅದರ ಮೂಲ ಧಾರ್ಮಿಕ ಮಹತ್ವ ಮತ್ತು ಅಹೋಮ್ ಕಾಲದ ಇತಿಹಾಸ ಉಳಿದುಕೊಂಡಿವೆ.
ಶಿವರಾತ್ರಿಯಂದು ಉಮಾನಂದ ದ್ವೀಪದಲ್ಲಿ ಭಕ್ತರ ಮಹಾಪೂರ
ಶಿವರಾತ್ರಿಯಂದು ಅಸ್ಸಾಂ ಮಾತ್ರವಲ್ಲದೆ ಈಶಾನ್ಯ ಭಾರತದ ವಿವಿಧ ಭಾಗಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶಿವನ ದರ್ಶನ ಪಡೆದು ಅಭಿಷೇಕ, ಪೂಜೆ ಮತ್ತು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಶಿವರಾತ್ರಿಯ ಸಂದರ್ಭದಲ್ಲಿ ದ್ವೀಪದ ವಾತಾವರಣವೇ ಬದಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಪ್ರಶಾಂತವಾಗಿರುವ ಪುಟ್ಟ ದ್ವೀಪ ಭಕ್ತರು, ಸಾಧುಗಳು ಮತ್ತು ಪ್ರವಾಸಿಗರಿಂದ ತುಂಬಿ ಹೋಗುತ್ತದೆ. ಇದಲ್ಲದೆ ಅಮಾವಾಸ್ಯೆ, ಅದರಲ್ಲೂ ಸೋಮವಾರದಂದು ಬರುವ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ ಎಂಬ ನಂಬಿಕೆ ಇದೆ. ಈ ದಿನ ಉಮಾನಂದನ ದರ್ಶನ ಪಡೆದರೆ ಭಕ್ತರಿಗೆ ವಿಶೇಷ ಪುಣ್ಯ ಲಭಿಸುತ್ತದೆ ಎಂದು ಸ್ಥಳೀಯ ಭಕ್ತರು ನಂಬುತ್ತಾರೆ. ಶಿವ ಚತುರ್ದಶಿಯೂ ಇಲ್ಲಿನ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ.
ಗೋಲ್ಡನ್ ಲಂಗೂರ್ಗಳಿಗೂ ಪ್ರಸಿದ್ಧವಾಗಿದ್ದ ದ್ವೀಪ!

ಉಮಾನಂದ ದ್ವೀಪದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಇಲ್ಲಿ ಒಂದು ಕಾಲದಲ್ಲಿ ಗೋಲ್ಡನ್ ಲಂಗೂರ್ (Golden Langur) ಎಂಬ ಅಪರೂಪದ ಕೋತಿಗಳ ಗುಂಪು ವಾಸಿಸುತ್ತಿತ್ತು. ಚಿನ್ನದ ಬಣ್ಣದ ದೇಹ ಮತ್ತು ಆಕರ್ಷಕ ಮುಖದ ವಿನ್ಯಾಸ ಹೊಂದಿರುವ ಗೋಲ್ಡನ್ ಲಂಗೂರ್ಗಳು ಭಾರತದ ಅತ್ಯಂತ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಪ್ರೈಮೇಟ್ ಪ್ರಾಣಿಗಳಲ್ಲಿ ಒಂದು. ಇವುಗಳ ಸ್ವಾಭಾವಿಕ ವಾಸಸ್ಥಾನ ಮುಖ್ಯವಾಗಿ ಪಶ್ಚಿಮ ಅಸ್ಸಾಂ ಮತ್ತು ಭೂತಾನ್ನ ಕೆಲವು ಪ್ರದೇಶಗಳು. ಆದರೆ ಉಮಾನಂದ ದ್ವೀಪವು ಇವುಗಳ ಸ್ವಾಭಾವಿಕ ವಾಸಸ್ಥಾನದ ವ್ಯಾಪ್ತಿಗೆ ಸೇರಿಲ್ಲ. ಸಂಶೋಧನಾ ಅಧ್ಯಯನಗಳ ಪ್ರಕಾರ, ಭೂತಾನ್ನಿಂದ ತರಲಾಗಿದ್ದ ಎರಡು ಪ್ರಾಣಿಗಳಿಂದ ಈ ದ್ವೀಪದಲ್ಲಿ ಒಂದು ಸಣ್ಣ ಗುಂಪು ರೂಪುಗೊಂಡಿತ್ತು.
ಒಂದು ಕಾಲದಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ಭಕ್ತರಿಗೆ ಗೋಲ್ಡನ್ ಲಂಗೂರ್ಗಳನ್ನು ನೋಡುವುದೂ ವಿಶೇಷ ಆಕರ್ಷಣೆಯಾಗಿತ್ತು. ಆದರೆ, ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ವರದಿಯ ಪ್ರಕಾರ, ಉಮಾನಂದ ದ್ವೀಪದಲ್ಲಿ ಉಳಿದಿದ್ದ ಕೊನೆಯ ಗೋಲ್ಡನ್ ಲಂಗೂರ್ ‘ಗೋಬಿಂದಾ’ 2020ರ ಫೆಬ್ರವರಿಯಲ್ಲಿ ಮೃತಪಟ್ಟಿತು. ಹೀಗಾಗಿ ಗೋಲ್ಡನ್ ಲಂಗೂರ್ಗಳನ್ನು ಇಂದು ಪ್ರವಾಸಿಗರು ಅಲ್ಲಿ ನೋಡಲಾಗದೇ ಇರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ.
ಬ್ರಹ್ಮಪುತ್ರದ ದೋಣಿ ಪ್ರಯಾಣವೇ ಒಂದು ಸುಂದರ ಅನುಭವ!
ಉಮಾನಂದ ದೇವಾಲಯವನ್ನು ತಲುಪಲು ರಸ್ತೆಯ ಸಂಪರ್ಕವಿಲ್ಲ. ಬ್ರಹ್ಮಪುತ್ರ ನದಿಯನ್ನು ದೋಣಿ ಅಥವಾ ಫೆರ್ರಿ ಮೂಲಕ ದಾಟಿಯೇ ದ್ವೀಪಕ್ಕೆ ಹೋಗಬೇಕು. ಗುವಾಹಟಿಯ ಕಚಾರಿ ಘಾಟ್ ಹಾಗೂ ಉಮಾನಂದ ಘಾಟ್ನಿಂದ ಮತ್ತು Gate Way of Assam ನಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಬಂದರಿನ ಮೂಲಕ ದೋಣಿ ಅಥವಾ ಫೆರ್ರಿ ಸೇವೆಗಳು ಲಭ್ಯವಿರುತ್ತವೆ. ಸಾಮಾನ್ಯವಾಗಿ ಸುಮಾರು 10 ನಿಮಿಷಗಳ ಪ್ರಯಾಣದಲ್ಲಿ ದ್ವೀಪವನ್ನು ತಲುಪಬಹುದು.
ದೋಣಿಯಲ್ಲಿ ಕುಳಿತು ಬ್ರಹ್ಮಪುತ್ರದ ವಿಶಾಲತೆಯನ್ನು ಸವಿಯುತ್ತಾ ಸಾಗುವ ಅನುಭವವೇ ವಿಶೇಷವಾಗಿದೆ. ಒಂದು ಕಡೆ ಗುವಾಹಟಿ ನಗರದ ಕಟ್ಟಡಗಳು, ಇನ್ನೊಂದು ಕಡೆ ದೂರದಲ್ಲಿ ಕಾಣುವ ಬೆಟ್ಟಗಳು, ಮಧ್ಯದಲ್ಲಿ ಹರಿಯುವ ವಿಶಾಲ ನದಿ, ಇವೆಲ್ಲವೂ ಪ್ರವಾಸಿಗರಿಗೆ ಮರೆಯಲಾಗದ ದೃಶ್ಯವನ್ನು ನೀಡುತ್ತವೆ. ದ್ವೀಪದ ಘಾಟ್ನಲ್ಲಿ ಇಳಿದ ನಂತರ ಗುಡ್ಡದ ಮೇಲಿರುವ ದೇವಾಲಯಕ್ಕೆ ಸುಮಾರು 120-150 ಮೆಟ್ಟಿಲುಗಳನ್ನು (ಬಹಳ ಕಡಿದಾಗಿದ್ದ ಹಳೆಯ ಮೆಟ್ಟಿಲುಗಳ ಜಾಗದಲ್ಲಿ ಈಗ ಹೊಸದಾಗಿ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತಿದೆ.) ಹತ್ತಿ ಹೋಗುವಾಗ ಮಾರ್ಗದಲ್ಲಿ ಸಿಗುವ ಬಂಡೆಗಳು, ವಿವಿಧ ಪ್ರಭೇಧದ ಮರಗಳು ಮತ್ತು ನದಿಯ ನೋಟ ಪ್ರವಾಸದ ಆನಂದವನ್ನು ಮತ್ತಷ್ಟೂ ಹೆಚ್ಚಿಸುತ್ತವೆ.
ಗುವಾಹಟಿಯ ಪಂಚತೀರ್ಥಗಳಲ್ಲಿ ಒಂದು
ಗುವಾಹಟಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಉಮಾನಂದ ದೇವಾಲಯಕ್ಕೂ ವಿಶೇಷ ಸ್ಥಾನವಿದೆ. ಅಸ್ಸಾಂ ಪುರಾತತ್ವ ಇಲಾಖೆಯು ಇದನ್ನು ಗುವಾಹಟಿಯ ಐದು ಪಂಚತೀರ್ಥಗಳಲ್ಲಿ ಒಂದೆಂದು ಗುರುತಿಸಿದೆ. ಕಾಮಾಖ್ಯಾ ದೇವಾಲಯದಂತೆಯೇ ಉಮಾನಂದ ಕ್ಷೇತ್ರವೂ ಶಿವಶಕ್ತಿ ಆರಾಧನೆಯ ಪ್ರಾಚೀನ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಆದರೆ ಈ ಎರಡು ಕ್ಷೇತ್ರಗಳ ಅನುಭವ ಸಂಪೂರ್ಣ ವಿಭಿನ್ನ. ಕಾಮಾಖ್ಯಾ ದೇವಾಲಯವು ನೀಲಾಚಲ ಬೆಟ್ಟದ ಮೇಲಿರುವ ಪ್ರಸಿದ್ಧ ಶಕ್ತಿಪೀಠವಾಗಿದ್ದರೆ, ಉಮಾನಂದ ದೇವಾಲಯವು ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಪುಟ್ಟ ದ್ವೀಪದ ಮೇಲಿರುವ ಶಿವಕ್ಷೇತ್ರ. ಎರಡೂ ಕ್ಷೇತ್ರಗಳು ಗುವಾಹಟಿಯ ಧಾರ್ಮಿಕ ಪ್ರವಾಸೋದ್ಯಮಕ್ಕೆ ಪ್ರಮುಖ ಆಕರ್ಷಣೆಗಳಾಗಿವೆ.
ಭಾರತದಲ್ಲಿ ಅನೇಕ ಪ್ರಸಿದ್ಧ ಶಿವಾಲಯಗಳಿವೆ. ಗುವಾಹಟಿಗೆ ತೆರಳಿದವರು ಕಾಮಾಖ್ಯಾ ದೇವಿಯ ದರ್ಶನದ ಜೊತೆಗೆ ಬ್ರಹ್ಮಪುತ್ರದಂತಹ ವಿಶಾಲ ನದಿಯ ಮಧ್ಯದಲ್ಲಿ, ನದಿ ನೀರಿನಿಂದ ಸುತ್ತುವರಿದ ಪುಟ್ಟ ದ್ವೀಪದ ಮೇಲೆ ನೆಲೆಸಿರುವ ಉಮಾನಂದ ದೇವಾಲಯಕ್ಕೂ ಭೇಟಿ ನೀಡಿದರೆ, ಅಸ್ಸಾಂನ ಪೌರಾಣಿಕ ಮತ್ತು ಐತಿಹಾಸಿಕ ಪರಂಪರೆಯ ಈ ಶಿವಾಲಯದ ಅನುಭವವೇ ವಿಶಿಷ್ಟವಾಗಿದ್ದು ಅದನ್ನು ಓದು ತಿಳಿಯುವುದಕ್ಕಿಂತಲ್ಲೂ ಸ್ವಲ್ಪ ಸಮಯ ಮಾಡಿಕೊಂಡು ದರ್ಶನ ಪಡೆದು ಬಂದರೆ ಚಂದ ಅಲ್ವೇ…. ???
ಏನಂತೀರಿ ???
ನಿಮ್ಮವನೇ
ಉಮಾಸುತ





