ಪ್ರತಿ ಮನೆಯ ಮುಂದೆ ಹೂವಿನ ತೋಟ, ಪ್ರತಿ ರಸ್ತೆಯಲ್ಲೂ ಬಿದಿರಿನ ಕಸದ ಬುಟ್ಟಿ, ವಾರಕ್ಕೊಮ್ಮೆ ಸಾಮೂಹಿಕ ಸ್ವಚ್ಛತಾ ಕಾರ್ಯ! | ಪ್ರಕೃತಿಯ ಮಡಿಲಿನಲ್ಲಿರುವ ಮಾವ್ಲಿನ್ನಾಂಗ್ ಗ್ರಾಮದ ವಿಶೇಷತೆಗಳೇನು? | ಮಹಿಳೆಯರಿಗೆ ಮಹತ್ವದ ಸ್ಥಾನವಿರುವ ಖಾಸಿ ಸಮುದಾಯದ ಜೀವನಶೈಲಿ, ಜೀವಂತ ಬೇರುಗಳ ಸೇತುವೆ ಮತ್ತು ಬಾಂಗ್ಲಾದೇಶದ ಗಡಿಯ ಸುಂದರ ನೋಟ!
ಒಂದು ಊರಿನ ಸ್ವಚ್ಛತೆಯನ್ನು ಕೇವಲ ಅಲ್ಲಿನ ಪುರಸಭೆ ಅಥವಾ ಪಂಚಾಯಿತಿಯ ಕೆಲಸವೆಂದು ಪರಿಗಣಿಸುವುದು ನಮ್ಮಲ್ಲಿ ಸಾಮಾನ್ಯ. ರಸ್ತೆಯಲ್ಲಿ ಕಸ ಬಿದ್ದರೆ ಅದನ್ನು ಸ್ವಚ್ಛಗೊಳಿಸುವುದು ಪೌರಕಾರ್ಮಿಕರ ಜವಾಬ್ದಾರಿ, ಮನೆ ಮುಂದೆ ಕಸ ಸಂಗ್ರಹವಾದರೆ ಅದನ್ನು ತೆಗೆದುಕೊಂಡು ಹೋಗುವುದು ಸ್ಥಳೀಯ ಆಡಳಿತದ ಕರ್ತವ್ಯ ಎಂದು ಭಾವಿಸುತ್ತೇವೆ. ಆದರೆ ಒಂದು ಗ್ರಾಮದ ಪ್ರತಿಯೊಬ್ಬ ನಿವಾಸಿಯೂ ಸ್ವಚ್ಛತೆಯನ್ನು ತನ್ನ ವೈಯಕ್ತಿಕ ಜವಾಬ್ದಾರಿಯೆಂದು ಪರಿಗಣಿಸಿದರೆ ಆ ಊರು ಹೇಗಿರಬಹುದು?
ರಸ್ತೆಗಳಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಕಾಣುವುದಿಲ್ಲ, ಮನೆಗಳ ಮುಂದೆ ಕಸದ ರಾಶಿ ಇರುವುದಿಲ್ಲ, ಹೂವಿನ ತೋಟಗಳು ಮತ್ತು ಹಸಿರಿನಿಂದ ಕಂಗೊಳಿಸುವ ದಾರಿಗಳು, ರಸ್ತೆಯ ಬದಿಯಲ್ಲಿ ಸುಂದರವಾದ ಬಿದಿರಿನ ಕಸದ ಬುಟ್ಟಿಗಳು, ಪ್ರತಿಯೊಬ್ಬರೂ ತಮ್ಮ ಊರಿನ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುವ ಸಂಪ್ರದಾಯ. ಇವೆಲ್ಲವನ್ನೂ ಒಂದೇ ಕಡೆ ನೋಡಬೇಕೆಂದರೆ ಮೇಘಾಲಯದ ಮಾವ್ಲಿನ್ನಾಂಗ್ ಗ್ರಾಮಕ್ಕೆ ಭೇಟಿ ನೀಡಬೇಕು.
ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ (Asia’s Cleanest Village) ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಈ ಪುಟ್ಟ ಹಳ್ಳಿ, ಸ್ವಚ್ಛತೆ ಎನ್ನುವುದು ಸರ್ಕಾರದ ಯೋಜನೆಯಾಗಿರಬೇಕಿಲ್ಲ, ಅದು ಜನರ ಜೀವನಶೈಲಿಯಾಗಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಪ್ರಕೃತಿಯ ಸೌಂದರ್ಯ, ಖಾಸಿ ಬುಡಕಟ್ಟು ಸಮುದಾಯದ ಸಂಸ್ಕೃತಿ, ಮಹಿಳಾ ಪ್ರಧಾನ ವಂಶಪಾರಂಪರ್ಯ ವ್ಯವಸ್ಥೆ, ಪರಿಸರ ಸಂರಕ್ಷಣೆಯ ಬಗ್ಗೆ ಜನರ ಕಾಳಜಿ ಮತ್ತು ಪ್ರವಾಸೋದ್ಯಮದ ಬೆಳವಣಿಗೆ, ಇವೆಲ್ಲವೂ ಸೇರಿ ಮಾವ್ಲಿನ್ನಾಂಗ್ ಗ್ರಾಮವನ್ನು ವಿಶ್ವದ ಗಮನ ಸೆಳೆದ ಪ್ರವಾಸಿ ತಾಣವನ್ನಾಗಿ ಮಾಡಿವೆ.
ಈ ಮಾವ್ಲಿನ್ನಾಂಗ್ ಗ್ರಾಮ ಎಲ್ಲಿದೆ??

ಮಾವ್ಲಿನ್ನಾಂಗ್ (Mawlynnong) ಭಾರತದ ಈಶಾನ್ಯ ರಾಜ್ಯವಾದ ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್ (East Khasi Hills) ಜಿಲ್ಲೆಯಲ್ಲಿರುವ ಒಂದು ಸುಂದರ ಗ್ರಾಮ. ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ಸುಮಾರು 76 ಕಿ.ಮೀ. ದೂರದಲ್ಲಿರುವ ಈ ಗ್ರಾಮ ಭಾರತ–ಬಾಂಗ್ಲಾದೇಶ ಗಡಿಯ ಸಮೀಪದಲ್ಲಿದೆ. ಸುತ್ತಲೂ ಹಚ್ಚಹಸಿರಿನ ಬೆಟ್ಟಗಳು, ದಟ್ಟವಾದ ಮರಗಳು, ಅಡಿಕೆ ತೋಟಗಳು, ಹೂವಿನಿಂದ ಅಲಂಕೃತವಾದ ಮನೆಗಳು ಮತ್ತು ಸ್ವಚ್ಛವಾದ ಕಿರಿದಾದ ರಸ್ತೆಗಳು ಈ ಹಳ್ಳಿಯ ಸೌಂದರ್ಯವನ್ನು ಹೆಚ್ಚಿಸಿವೆ.
ಮೇಘಾಲಯವನ್ನು ಮೇಘಗಳ ನಾಡು ಎಂದು ಕರೆಯುವುದಕ್ಕೆ ಕಾರಣವಾಗಿರುವ ಮೋಡ ಕವಿದ ವಾತಾವರಣ, ಮಳೆ, ಹಸಿರು ಪ್ರಕೃತಿ ಮತ್ತು ಸುಂದರವಾದ ಬೆಟ್ಟಗುಡ್ಡಗಳ ಸೊಬಗನ್ನು ಮಾವ್ಲಿನ್ನಾಂಗ್‌ನಲ್ಲಿ ಮನಸಾರೆ ಆಸ್ವಾದಿಸಬಹುದು. ಇಲ್ಲಿನ ಬಹುತೇಕ ನಿವಾಸಿಗಳು ಖಾಸಿ (Khasi) ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಕೃಷಿ, ಅಡಿಕೆ, ಕಾಳುಮೆಣಸು ಮತ್ತು ಇತರ ತೋಟಗಾರಿಕಾ ಉತ್ಪನ್ನಗಳ ಬೆಳೆ ಇವರ ಜೀವನೋಪಾಯದ ಪ್ರಮುಖ ಭಾಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮವೂ ಗ್ರಾಮದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆ ಬಂದಿದ್ದು ಹೇಗೆ?
ಮಾವ್ಲಿನ್ನಾಂಗ್ ಇಂದು ಜಗತ್ತಿನ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದಕ್ಕೆ ಪ್ರಮುಖ ಕಾರಣ ಅದರ ಸ್ವಚ್ಛತೆ. 2003ರಲ್ಲಿ Discover India ಎಂಬ ಪ್ರವಾಸಿ ಪತ್ರಿಕೆಯ ಬರಹಗಾರರೊಬ್ಬರು ಈ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಜನರ ಶಿಸ್ತನ್ನು ಕಂಡು ಮೆಚ್ಚಿ ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ’ಎಂದು ಬಣ್ಣಿಸಿದರು. ಆ ನಂತರ ವಿವಿಧ ಮಾಧ್ಯಮಗಳು ಮತ್ತು ಪ್ರವಾಸಿ ಪ್ರಕಟಣೆಗಳು ಈ ಹೆಸರನ್ನು ಬಳಸತೊಡಗಿದವು. ಹೀಗೆ ಮಾವ್ಲಿನ್ನಾಂಗ್ ವಿಶ್ವದ ಗಮನ ಸೆಳೆಯಿತು.





