ಉಡುಪಿ ಶ್ರೀ ಕೃಷ್ಣನ ಪರಮ ಭಕ್ತರಾಗಿದ್ದಂತಹ, ಕರ್ನಾಟಕ ಸಂಗೀತ ಮತ್ತು ಹರಿದಾಸ ಚಳುವಳಿಯ ಸ್ಥಾಪಕ ವ್ಯಕ್ತಿಯಾದ ಪುರಂದರ ದಾಸರನ್ನು ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಕರೆಯಲಾಗುತ್ತದೆ. ಉಡುಪಿಯೊಂದಿಗೆ ಆಳವಾದ ಆಧ್ಯಾತ್ಮಿಕ ಸಂಪರ್ಕವನ್ನು ಹೊಂದಿದ್ದು, ಸಂಗೀತಕಾರರಾಗಿ ಸಂಗೀತದ ಮೂಲಭೂತ ಪಾಠಗಳಾದ ಸರಳಿ ವರಿಸೆ, ಜಂಟಿ ವರಿಸೆ, ಅಲಂಕಾರಗಳು ಮತ್ತು ಗೀತೆಗಳನ್ನು ರಚಿಸಿ, ಸಂಗೀತ ಕಲಿಕೆಯ ವ್ಯವಸ್ಥಿತ ಪಠ್ಯಕ್ರಮವನ್ನು ರೂಪಿಸಿದಲ್ಲದೇ, ಭಕ್ತಿಯ ಪ್ರತಿಪಾದಕರಾಗಿ ಉಡುಪಿಯ ಶ್ರೀಕೃಷ್ಣನಿಗೆ ಸಮರ್ಪಿತವಾದ ಹಲವಾರು ದೇವರನಾಮಗಳನ್ನು ರಚಿಸಿ, ದಾಸ ಸಾಹಿತ್ಯದ ಮೂಲಕ ಸಂಗೀತವನ್ನು ಜನಸಾಮಾನ್ಯರಿಗೆ ತಲುಪಿಸಿದರು. ಅಂತಹ ಪುರಂದರದಾಸರಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿರುವ ಪುತ್ತೂರಿನ ಬಳಿಯ ಕಾಂಚನ ಎಂಬ ಹಳ್ಳಿಯು ಕರ್ನಾಟಕ ಸಂಗೀತದ ಖ್ಯಾತ ವಾಗ್ಗೇಯಕಾರರಾದ ತ್ಯಾಗರಾಜರ ಹುಟ್ಟೂರು ತಿರುವಯ್ಯಾರ್ ನಂತೆಯೇ ಕರ್ನಾಟಕದ ತಿರುವಯ್ಯಾರ್ ಎಂದು ಹೆಸರುವಾಸಿಯಾಗಿದ್ದು ಅಲ್ಲಿ ಪ್ರತೀ ವರ್ಷ ನಡೆಯುವ ಮೂದು ದಿನಗಳ ಕಾಲದ ಪ್ರತಿಷ್ಠಿತ ಶಾಸ್ತ್ರೀಯ ಸಂಗೀತೋತ್ಸವ ಕಾಂಚನೋತ್ಸವದ ಕುರಿತಾದ ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ ಬನ್ನಿ.

ಬೆಂಗಳೂರು ಮಂಗಳೂರು ರಸ್ತೆಯಲ್ಲಿರುವ ಉಪ್ಪಿನಂಗಡಿ ಹೆದ್ದಾರಿಯಿಂದ ಸುಮಾರು ಎರಡೂವರೆ ಕಿ.ಮೀ ದೂರದಲ್ಲಿರುವ ಕೃಷಿಯೇ ಪ್ರಧಾನವಾಗಿರುವ ಕಾಂಚನದಲ್ಲಿ ನಡೆಯುವ ಸಂಗೀತೋತ್ಸವಕ್ಕೆ 3 ಶತಮಾನಗಳ ಇತಿಹಾಸವಿದೆ. ಮಾಗಿಯ ಚಳಿ ಕಳೆದು ಅತ್ತ ಛಳಿಯೂ ಅಲ್ಲದ ಇತ್ತಾ ಬಿಸಿಲೂ ಇಲ್ಲದ ಕಾಲದಲ್ಲಿ ಸುಮಾರು ಮೂರು ದಿನಗಳ ಕಾಲ ವೈಭವದ ಸಂಗೀತೋತ್ಸವ ಕಾಂಚನ ಶ್ರೀಲಕ್ಷ್ಮೀನಾರಾಯಣ ಸಂಗೀತ ಅಕಾಡೆಮಿ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಾ ಬಂದಿರುವ ಹಿಂದಿನ ಕಥೆ ಅತ್ಯಂತ ರೋಚಕವಾಗಿದೆ. 1911ರಲ್ಲಿ ಕೇರಳದ ಪಾಲಘಾಟ್‌ನಿಂದ ಕಾಂಚನಕ್ಕೆ ಸೊಸೆಯಾಗಿ ಬಂದ ಲಕ್ಷ್ಮಿ ಅಮ್ಮಾಳ್ ಅವರು ಸ್ವತಃ ಉತ್ತಮ ಗಾಯಕಿಯಾಗಿದ್ದಲ್ಲದೇ ಸಂಗೀತ ಪ್ರೇಮಿ ಆಗಿದ್ದ ಕಾರಣ, ಚಕ್ರಕೋಡಿ ನಾರಾಯಣ ಶಾಸ್ತ್ರಿ ಚೆಂಬೈ ವೈದ್ಯನಾಥ ಚೌಕಟ್ಟಿ ಭಾಗವತರ್, ಜಿ.ಎನ್. ಬಾಲಸುಬ್ರಹ್ಮಣ್ಯಂ, ಪಿಟೀಲು ಚೌಡಯ್ಯ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಮುಂತಾದ ಸಂಗೀತ ದಿಗ್ಗಜರುಗಳನ್ನು ಕರೆಸಿ ಮಂಗಳೂರಿನಲ್ಲಿ ಸಂಗೀತ ಕಛೇರಿಗಳನ್ನು ಆಯೋಜಿಸುವ ಮೂಲಕ ಅಲ್ಲಿನ

ಸಂಗೀತೋತ್ಸವಕ್ಕೆ ಓಂಕಾರ ಹಾಕಿದರು. ಅವರ ನಂತರ ಅವರ ಪುತ್ರ ವೆಂಕಟಸುಬ್ರಹ್ಮಣ್ಯಂ ಅವರು ಚಕ್ರಕೋಡಿ, ಚೆಂಬೈ ವೈದ್ಯನಾಥ ಭಾಗವತರ್, ಜಿಎನ್‌ಬಿ ಅವರಲ್ಲಿ ಸಂಗೀತಾಭ್ಯಾಸವನ್ನು ಮಾಡುತ್ತಲೇ 1954ರಲ್ಲಿ ಕಾಂಚನದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸಂಗೀತ ಶಾಲೆಯನ್ನೂ ಸ್ಥಾಪಿಸುವ ಮೂಲಕ ಆ ಊರಿನಲ್ಲಿ ಅಧಿಕೃತವಾಗಿ ಶಾಸ್ತ್ರೀಯ ಸಂಗೀತದ ಪಾಠ ಮತ್ತು ಸಂಗೀತೋತ್ಸವ ಆರಂಭವಾಯಿತು. ಆದೇ ಪರಂಪರೆಯನ್ನು 1982ರಿಂದ ವೆಂಕಟಸುಬ್ರಹ್ಮಣ್ಯಂ ಪುತ್ರ ವಿದ್ವಾನ್ ವಿ. ಸುಬ್ಬರತ್ನಂ ಮತ್ತು ಅವರ ಪತ್ನಿ (ಸಂಗೀತ ವಿದ್ವಾಂಸ ರಾ. ಸತ್ಯನಾರಾಯಣ ಅವರ ಪುತ್ರಿ ಮತ್ತು ಉತ್ತಮ ಕಲಾವಿದೆ) ಮುಂದುವರೆಸಿಕೊಂಡು ಹೋಗಿ, ಪ್ರಸ್ತುತ ಅವರ ಮಕ್ಕಳಾದ ಶ್ರೀರಂಜಿನಿ, ಶ್ರುತಿರಂಜಿನಿ, ಸುಮನಸರಂಜಿನಿ ಸೇರಿದಂತೆ ಅವರ ಇಡೀ ಕುಟುಂಬವೇ ಈ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ.





