ಭಾರತದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮಹತ್ವವಿದೆ. ಕಾರ್ತಿಕ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುವ ಈ ಹಬ್ಬವನ್ನು 'ಕಾರ್ತಿಕ ಹುಣ್ಣಿಮೆ' ಅಥವಾ 'ದೇವ-ದೀಪಾವಳಿ' ಎಂದೂ ಕರೆಯುತ್ತಾರೆ. ಈ ದಿನವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಭ್ರಮದ ಸಂಕೇತವಾಗಿದೆ.

ಬಿಡುವಿಲ್ಲದ ಈಗಿನ ವೇಗದ ಯುಗದಲ್ಲಿ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುವುದು ಹಾಗೂ ನಮ್ಮ ಪರಂಪರೆಯನ್ನು ಎತ್ತಿಹಿಡಿಯಲು ಯುವ ಪೀಳಿಗೆಗೆ ಅವುಗಳನ್ನು ಪರಿಚಯಿಸಿ ದಾಟಿಸುವ ಉದ್ದೇಶದಿಂದ ಜನಪ್ರಿಯ ಹೆವೆನ್ಸ್ ಅಪಾರ್ಟ್‌ಮೆಂಟ್ ಸಂಘದ ಗೌರವಾನ್ವಿತ *ಅಧ್ಯಕ್ಷರಾದ ಶ್ರೀಮತಿ ಲೋಲಾಕ್ಷಿ ಬಸವರಾಜ್* ಅವರು ನಮ್ಮ ಆವರಣದಲ್ಲಿ ಕಾರ್ತಿಕ ಪೂರ್ಣಿಮೆಯನ್ನು (ಕೃತ್ತಿಕಾ ಪೂರ್ಣಿಮೆ) ಆಚರಿಸಲು ಎಲ್ಲಾ ನಿವಾಸಿಗಳನ್ನುಸಂಜೆಗೆ ೬.೩೦ ಹೊತ್ತಿಗೆ ಆಹ್ವಾನಿಸಿದ್ದರು . ಅಪಾರ್ಟ್‌ಮೆಂಟ್ ನಲ್ಲಿ ನಿವಾಸಿಗರೆಲ್ಲ ಸೇರಿ ಈ ಹಬ್ಬವನ್ನು ಅಪಾರ್ಟ್ಮೆಂಟ್ ನ ಆವರಣದಲ್ಲಿರುವ ಗಣೇಶನ ಗುಡಿಯ ಅಂಗಳದಲ್ಲಿ ನೆಲ್ಲಿಕಾಯಿ ದೀಪ, ತಂಬಿಟ್ಟಿನ ದೀಪ, ಸಾಲು ದೀಪ, ಬಹುಎಳೆಗಳ ದೀಪ, ಕಂಬದ ದೀಪ, ಇತ್ಯಾದಿ ವಿವಿಧ ಬಗೆಯ ದೀಪಗಳನ್ನು ಬೆಳಗಿದ್ದರು.

ಇಂದು ಕಾರ್ತಿಕ ಪೌರ್ಣಮಿಯ ಪ್ರಯುಕ್ತ, ನಮ್ಮ ಗಣೇಶನ ಗುಡಿಯಲ್ಲಿ *ಹಿರಿಯ ಅರ್ಚಕರಾದ ಶ್ರೀ ಸುಬ್ಬರಾಮು ಅವಧಾನಿ* ಯವರು ವಿಶೇಷ ಅಲಂಕಾರದೊಂದಿಗೆ ಸಾಂಪ್ರದಾಯಿಕವಾಗಿ ಸತ್ಯನಾರಾಯಣ ಪೂಜೆ, ಕಥಾ ಪಠಣ ನೆರವೇರಿಸಿಕೊಟ್ಟರು. ನಂತರ ತೀರ್ಥ, ಪ್ರಸಾದ, ಸಿಹಿ ವಿತರಣೆ ಮಾಡಲಾಯಿತು.

ತುಂತುರು ಮಳೆಯ ನಡುವೆಯೂ, ನಿವಾಸಿಗಳು ತಮ್ಮ ಫ್ಲಾಟ್‌ಗಳ ಒಳಗೆ ಮತ್ತು ಅಂಗಳಗಳನ್ನು ವೈವಿಧ್ಯಮಯ ಹಣತೆಗಳಿಂದ ಬೆಳಗಿಸಿ, ನೆರೆಹೊರೆಯವರೊಂದಿಗೆ ತಾಂಬೂಲ ಮತ್ತು ಸಿಹಿತಿಂಡಿಗಳನ್ನು ಹಂಚಿಕೊಂಡರು.

ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ಬೆಳಕಿನ ಹಬ್ಬಗಳಲ್ಲಿ ಒಂದಾಗಿರುವ ಈ ಹಬ್ಬವನ್ನು ಶಿವ ದೀಪ, ಅನಂತ ಜ್ಯೋತಿಯ ಹಬ್ಬ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ
ಶಿವ ದೀಪವು (ಕಾರ್ತಿಕ ದೀಪ ಅಥವಾ ಅಣ್ಣಾಮಲೈ ದೀಪ ಎಂದೂ ಕರೆಯಲ್ಪಡುತ್ತದೆ) ಕಾರ್ತಿಕ ಮಾಸದಲ್ಲಿ (ನವೆಂಬರ್–ಡಿಸೆಂಬರ್) ಕೃತ್ತಿಕಾ ನಕ್ಷತ್ರ ಮತ್ತು ಹುಣ್ಣಿಮೆ ಕೂಡಿಬರುವ ಶುಭ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಪರಮಶಿವನು ಅನಂತ ಜ್ಯೋತಿ ಸ್ವರೂಪನಾಗಿ ಪ್ರಕಟಗೊಂಡ ಸ್ಮರಣಾರ್ಥವಾಗಿ ಈ ದೀಪೋತ್ಸವವನ್ನು ಭಕ್ತಿಯಿಂದ ಆಚರಿಸಲಾಗುತ್ತದೆ.
ಕಾರ್ತಿಕ ಪೂರ್ಣಿಮಾ (Kartika Purnima) ಹಬ್ಬವನ್ನು ಭಾರತದ ವಿವಿಧ ರಾಜ್ಯಗಳು ಮತ್ತು ಸಂಪ್ರದಾಯಗಳಲ್ಲಿ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.
ವಿವಿಧ ರಾಜ್ಯಗಳಲ್ಲಿ ಕರೆಯುವ ಹೆಸರುಗಳು
ಕರ್ನಾಟಕ: ಕಾರ್ತಿಕ ಹುಣ್ಣಿಮೆ / ಕಾರ್ತಿಕ ಪೌರ್ಣಮಿ
ಆಂಧ್ರಪ್ರದೇಶ ಮತ್ತು ತೆಲಂಗಾಣ: ಕಾರ್ತಿಕ ಪುನ್ನಮಿ / ಕಾರ್ತಿಕ ದೀಪಂ
ತಮಿಳುನಾಡು: ಕಾರ್ತಿಗೈ ದೀಪಂ / ತಿರುಕಾರ್ತಿಗೈ / ಪೆರಿಯ ಕಾರ್ತಿಗೈ
ಕೇರಳ: ತ್ರಿಕ್ಕಾರ್ತಿಕಾ / ಕಾರ್ತಿಕ ವಿಳಕ್ಕು
ಮಹಾರಾಷ್ಟ್ರ: ತ್ರಿಪುರಾರಿ ಪೌರ್ಣಿಮಾ
ಉತ್ತರ ಪ್ರದೇಶ (ವಿಶೇಷವಾಗಿ ವಾರಣಾಸಿ): ದೇವ ದೀಪಾವಳಿ
ಒಡಿಶಾ: ಬೋಯಿತಾ ಬಂದನಾ / ಕಾರ್ತಿಕ ಪೂರ್ಣಿಮಾ
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ: ರಾಸ ಪೂರ್ಣಿಮಾ / ರಾಸ ಮಹೋತ್ಸವ
ಪಂಜಾಬ್ ಮತ್ತು ಉತ್ತರ ಭಾರತ: ಗುರು ನಾನಕ್ ಗುರುಪುರಬ್ / ಕಾರ್ತಿಕ ಪೂರ್ಣಿಮಾ





