ನಾಲ್ವರು ಯುವಕರು ಕುಳಿತು ಹರಟೆ ಹೊಡೆಯುತ್ತಿದ್ದರು. ನವೀನ್ ತನ್ನ ಮದುವೆಗಾಗಿ ಪ್ರಪೋಸ್ಸ್ ಬರುತ್ತಿವೆ, ಆದರೆ ತಾನೇ ಹುಡುಗಿಯನ್ನು ನೋಡಲು ಹೋಗುತ್ತಿಲ್ಲ ಎಂದ.
ರಾಜೇಶ್ : ನೀನೇಕೆ ಹುಡುಗಿ ನೋಡಲು ಹೋಗುತ್ತಿಲ್ಲ?
ನವೀನ್ : ನನಗೆ ಈ ಹುಡುಗಿ ನೋಡುವುದು, ವಧು ಪರೀಕ್ಷೆ ಇತ್ಯಾದಿಗಳಲ್ಲಿ ನಂಬಿಕೆ ಇಲ್ಲ. ನೋಡಿದ ಹುಡುಗಿ ಇಷ್ಟ ಆಗಲಿಲ್ಲ ಅಂದುಕೊ, ಆಗ ಮತ್ತೊಂದು, ಆಮೇಲೆ ಇನ್ನೊಂದು. ಹುಡುಗೀರೇನು ದಸರಾ ಗೊಂಬೆಗಳೇ, ನೋಡಿ ಇಷ್ಟ ಇಲ್ಲ ಅನ್ನೋಕ್ಕೆ?
ಉಮೇಶ್ : ಅದೆಲ್ಲ ಇರಲಿ, ಈ ಭಾಷಣ ಕೇಳೋದಿಕ್ಕೆ ಮಾತ್ರ ಚೆನ್ನ. ನೀನು ಹುಡುಗಿ ನೋಡಲು ಹೋಗದಿರಲು ಕಾರಣವೇನು?
ನವೀನ್ : ಹೇಳಿದೆನಲ್ಲ.... ಇನ್ನೆಂಥ ಅಸಲಿ ಕಾರಣ?
ಗಿರೀಶ್ : ಅದೇ ಮತ್ತೆ... ನೀನು ಹುಡುಗಿಯನ್ನು ನೋಡಿದಂತೆ ಅವಳೂ ನಿನ್ನನ್ನು ರಿಜೆಕ್ಟ್ ಮಾಡಿದರೆ.... ಆಗ ನಿನ್ನ ಗತಿ?
ಅದನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಾಗ ನವೀನ್ ಪೆಚ್ಚು ಪೆಚ್ಚಾಗಿ ಸಿಕ್ಕಿಬಿದ್ದಿದ್ದ.
ಪ್ರೇಮಾ ರಾಜುವನ್ನು ತುಂಬಾ ಪ್ರೀತಿಸುತ್ತಿದ್ದಳು. ಸದಾ ಅವನ ಸುತ್ತಲೇ ಸುತ್ತುತ್ತಿದ್ದಳು. ಒಂದು ಸಲ ಗೆಳೆಯರೆಲ್ಲ ಪಾರ್ಕಿನಲ್ಲಿ ಕುಳಿತು ಹರಟೆ ಕೊಚ್ಚುತ್ತಿದ್ದರು. ಆಗ ರಾಜು ಏಕೋ ತನ್ನ ಕಣ್ಣನ್ನು ಪದೇಪದೇ ಉಜ್ಜಿಕೊಳ್ಳುತ್ತಾ, ``ಪ್ರೇಮಿ.... ನನ್ನ ಕಣ್ಣಲ್ಲಿ ಏನಿದೆ ಅಂತ ನೋಡು,'' ಎಂದ.
ಬಲು ಭಾವುಕತೆಯಿಂದ ಅವನ ಕಂಗಳಲ್ಲಿ ಇಣುಕುತ್ತಾ ಪ್ರೇಮಾ ಹೇಳಿದಳು, ``ನಿನ್ನ ಕಂಗಳಲ್ಲಿ ನನ್ನ ಬಗ್ಗೆ ಒಲವು ಬಿಟ್ಟರೆ ಬೇರೇನೂ ಕಾಣುತ್ತಿಲ್ಲ ರಾಜು.....''
``ಏ ನಿನ್ನ.....! ಏನಾದ್ರೂ ಧೂಳು ಬಿದ್ದಿದೆಯೇ ನೋಡು ಅಂದ್ರೆ...'' ರಾಜು ನೋವಿನಲ್ಲಿ ಸಿಡುಕಿದಾಗ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕರು, ಪ್ರೇಮ ಪೆಚ್ಚಾಗಿದ್ದಳು.
ಅಂದಿನ ಫ್ರೀ ಪೀರಿಯಡ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳೆಲ್ಲ ಟೈಂಪಾಸ್‌ಗೆಂದು ಒಬ್ಬೊಬ್ಬರಾಗಿ ಹಾಡತೊಡಗಿದರು. ವೇಣು ಸರದಿ ಬಂದಾಗ, ಅವನು ಎದ್ದು ನಿಂತು, ಕಣ್ಣುಮುಚ್ಚಿ ಹಾಡತೊಡಗಿದ. ವೇಣು ಹಾಗೆ ಹಾಡುವುದನ್ನು ಗಮನಿಸಿ ಸತೀಶ್ ಕೇಳಿದ, ``ಇದ್ಯಾಕೋ ಹೀಗೆ ಕಣ್ಣು ಮುಚ್ಚಿಕೊಂಡು ಹಾಡ್ತೀಯಾ?''
ವೇಣು ಅದಕ್ಕೆ ಉತ್ತರಿಸುವ ಮೊದಲೇ ಸುಷ್ಮಾ ಥಟಕ್ಕನೆ ಹೇಳಿದಳು, ``ಏಕೆಂದರೆ, ಇಲ್ಲಿ ನಾವೆಲ್ಲ ಅವನ ಹಾಡು ಕೇಳಲಾಗದೆ ಕಣ್ಣುಮುಚ್ಚಿ ತೂಕಡಿಸುತ್ತಿರುವುದು ಅವನಿಗೆ ಗೊತ್ತಾಗಿಬಿಡುತ್ತಲ್ಲ... ಅದಕ್ಕೇ!'' ಇದನ್ನು ಕೇಳಿ ವೇಣು ಎಲ್ಲರ ಮುಂದೆ ಮಂಗಣ್ಣನಾಗಿದ್ದ.
ಮದುವೆ ಮಂಟಪಕ್ಕೆ ಬಂದಿದ್ದ ಗುಂಡ ಅಲ್ಲಿಗೆ ಬಂದಿದ್ದ ಹೆಣ್ಣುಮಕ್ಕಳನ್ನು ಚುಡಾಯಿಸುತ್ತಾ ರೇಗಿಸುತ್ತಿದ್ದ. ಯಾವುದೋ ಜೋಕಿಗೆ ಹುಡುಗಿಯರೆಲ್ಲ ನಗುತ್ತಿದ್ದಾಗ, ``ಬರೀ ನಗ್ತಾ ಇದ್ದೀರಲ್ಲ.... ಅದರಲ್ಲಿ ಹೊಟ್ಟೆ ತುಂಬಿಸಿಕೊಳ್ಳದೆ ಒಂದಿಷ್ಟು ಊಟ ಸಹ ಮಾಡಿ,'' ಎಂದು ರೇಗಿಸಿದ.
ಮುಂದೆ ವಧೂವರರ ಜೊತೆ ಹುಡುಗಿಯರು ಫೋಟೋ ತೆಗೆಸಿಕೊಂಡಾಗ, ``ಸ್ವಲ್ಪ ನಮ್ಮ ಜೊತೆಯೂ ಫೋಟೋ ತಗೋಬೇಕಪ್ಪ...'' ಎಂದು ಹಲ್ಲು ಗಿಂಜಿದ.
ಮುಂದೆ ಹುಡುಗಿಯರು ಡೈನಿಂಗ್ ಹಾಲ್ ಕಡೆ ಹೊರಟು ಇನ್ನೇನು ಪ್ಲೇಟ್ ತೆಗೆದುಕೊಳ್ಳಬೇಕು ಎಂದಾಗ, ``ಅದೇನ್ರಿ ತಿಂತಾ ಇದ್ದೀರಾ?'' ಎಂದು ವೀಣಾಳತ್ತ ಕೊಂಕು ತೆಗೆದ.
``ಇದು ಐ.ಕ್ಯೂ ಹೆಚ್ಚಿಸುವ ಮಾತ್ರೆ. ನಿಮಗೂ ಬೇಕಾ?''
``ಬೇಗ ಕೊಡಿ,'' ಎಂದು ಗುಂಡ ಕೇಳಿದಾಗ, 500/ ರೂ. ಕೊಡಿ, ಎಂದು ವೀಣಾ ಹೇಳಿದಳು.