ಹಿಮಂತ ಬಿಸ್ವಾ ಶರ್ಮಾ ಅವರು ಇಂದು ಸತತ ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಬಹುಮತ ಸಾಧಿಸಿದ ನಂತರ, ಶರ್ಮಾ ಅವರು ಮತ್ತೊಮ್ಮೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.
ರಾಜಧಾನಿ ಗುವಾಹಟಿಯಲ್ಲಿ ಆಯೋಜಿಸಿದ್ದ ಪ್ರಮಾಣ ವಚನ ಸಮಾರಂಭದಲ್ಲಿ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ನಾಯಕರು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇತ್ತೀಚೆಗೆ ನಡೆದ 2026ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 126 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 102 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಸಾಧಿಸಿದೆ.. ವಿಪಕ್ಷ ಕಾಂಗ್ರೆಸ್ 19 ಸ್ಥಾನಗಳನ್ನು ಮಾತ್ರ ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದಿದೆ.
ಮತ್ತೊಮ್ಮೆ ಅಧಿಕಾರ ಸ್ವೀಕರಿಸಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ ಅವರು, ಅಸ್ಸಾಂ ರಾಜ್ಯವನ್ನು ಅಭಿವೃದ್ಧಿಯ ಹೊಸ ಹಾದಿಗೆ ಕೊಂಡೊಯ್ಯುವುದಾಗಿ ಭರವಸೆ ನೀಡಿದ್ದಾರೆ.
“ಜನರ ವಿಶ್ವಾಸವೇ ನನ್ನ ಶಕ್ತಿ. ಮುಂದಿನ ವರ್ಷಗಳಲ್ಲಿ ಅಸ್ಸಾಂ ಅನ್ನು ದೇಶದ ಪ್ರಮುಖ ಅಭಿವೃದ್ಧಿಶೀಲ ರಾಜ್ಯಗಳ ಸಾಲಿನಲ್ಲಿ ನಿಲ್ಲಿಸಲು ಶ್ರಮಿಸುತ್ತೇನೆ” ಎಂದು ಹೇಳಿದರು.
ಉದ್ಯೋಗ, ಕೃಷಿ ಅಭಿವೃದ್ಧಿ, ಕೈಗಾರಿಕೆಗಳ ಉತ್ತೇಜನ ಹಾಗೂ ಪ್ರವಾಸೋದ್ಯಮ ವಿಸ್ತರಣೆಗೆ ವಿಶೇಷ ಗಮನ ನೀಡಲಾಗುವುದು. ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಒದಗಿಸುವುದು ತಮ್ಮ ಸರ್ಕಾರದ ಪ್ರಮುಖ ಗುರಿ ಎಂದರು.





