ಟಿ20 ವಿಶ್ವಕಪ್ 2026ರ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ತಂಡವು ಬಲಿಷ್ಠ ಇಂಗ್ಲೆಂಡ್‌ನ್ನು ರೋಚಕವಾಗಿ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ಹೈವೋಲ್ಟೇಜ್ ವಿಶ್ವಕಪ್ ಸೆಮಿಫೈನಲ್ಸ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ವಿರುದ್ಧ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 254 ರನ್ ಗಳ ಭಾರಿ ಮೊತ್ತವನ್ನು ದಾಖಲಿಸುವ ಮೂಲಕ ದೊಡ್ಡ ಟಾರ್ಗೆಟ್ ನೀಡಿತ್ತು.
42 ಎಸೆತಗಳಲ್ಲಿ 89 ರನ್ ಗಳಿಸಿದ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಪರಿಣಾಮ ಭಾರತ ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಯಿತು. ಭಾರತದ ಇನ್ನಿಂಗ್ಸ್‌ನಲ್ಲಿ ಸಂಜು ಸ್ಯಾಮ್ಸನ್ ಅವರ ಆಕರ್ಷಕ ಅರ್ಧಶತಕವು ಮುಖ್ಯ ಪಾತ್ರ ವಹಿಸಿತ್ತು. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ಇತರರ ಕೊಡುಗೆಯೊಂದಿಗೆ ಭಾರತ 250+ ರನ್‌ಗಳ ದೊಡ್ಡ ಸ್ಕೋರ್ ಕಲೆಹಾಕಿತು.
ಬೃಹತ್ ಮೊತ್ತದ ರನ್ ಚೇಸಿಂಗ್ ನಲ್ಲಿ ಇಂಗ್ಲೆಂಡ್ ತಂಡದ ಮೇಲೆ ಭಾರತದ ಬೌಲರ್ ಗಳು ಆರಂಭದಲ್ಲಿ ನಿಯಂತ್ರಣ ಸಾಧಿಸಿದ್ದರು. ಆದರೆ ಜಾಕೋಬ್ ಬೆಥೆಲ್ ಅವರ ಆಕರ್ಷಕ ಚೊಚ್ಚಲ ಶತಕ (48ಎಸೆತಗಳಲ್ಲಿ 105) ದ ನೆರವಿನಿಂದ ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡಿತ್ತು. ಆದರೂ ಇಂಗ್ಲೆಂಡ್ ತಂಡದ ಉಳಿದ ಬ್ಯಾಟ್ಸ್ಮನ್ ಗಳ ವೈಫಲ್ಯದಿಂದ ಬೆಥೆಲ್ ಏಕಾಂಗಿ ಹೋರಾಟ ವ್ಯರ್ಥವಾಗಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿ ಭಾರತದ ಎದುರು ಸೋಲೊಪ್ಪಿಕೊಂಡಿತು.
ಭಾರತ ಈ ಜಯದೊಂದಿಗೆ ಫೈನಲ್ ಪ್ರವೇಶಿಸಿದ್ದು, ಭಾನುವಾರ ನಡೆಯುವ ಫೈನಲ್ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ಕುತೂಹಲದಿಂದ ಕಾಯುತ್ತಿದೆ.





