-ರಾಘವೇಂದ್ರ ಅಡಿಗ ಎಚ್ಚೆನ್.
ನಮ್ಮ ದತ್ತಾತ್ರೇಯ ವಾರ್ಡಿನ ಜೀವಿತಾ ಎಂಬ ಹುಡುಗಿ ಲೂಡೋ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅವಳು ಮುಂದೆ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನ ಅವಕಾಶ ದೊರೆತು ಎತ್ತರಕ್ಕೆ ಬೆಳೆಯಲಿ ಹಾಗೆಯೇ ಲೂಡೋ ಸಿನಿಮಾ ಸಹ ಯಶಸ್ವಿಯಾಗಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ನಡೆದ ಡಿ. ಯೋಗರಾಜ್ ನಿರ್ದೇಶನದ ಲೂಡೋ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದರು.
ಚರಣ್ ದೇವ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎಂ. ಮಹೇಂದ್ರನ್ ನಿರ್ಮಾಣ ಮಾಡಿದ ಲೂಡೋ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಜನಮನ ಸೂರೆಗೊಳ್ಳುತ್ತಿದೆ. ಸಿನಿಮಾ ಅತಿ ಶೀಘ್ರದಲ್ಲಿ ತೆರೆಗೆ ಬರುತ್ತಿದ್ದು ಸಿನಿಮಾದಲ್ಲಿ ಶರಣ್ ರಾಜ್ ಕಾಸರಗೋಡು, ಜೀವಿತಾ ಪ್ರಭಾಕರ್, ಆರ್ಯನ್ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ ನೀಡಿದ್ದಾರೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಕೂಡ ತೆರೆಗೆ ಬರುತ್ತಿದೆ.
ಈ ಚಿತ್ರ ಒಂದು ಟ್ರಯಾಂಗಲ್ ಲವ್ ಸ್ಟೋರಿ ಎನ್ನುವಂತೆ ಮೇಲ್ನೋಟಕ್ಕೆ ಕಂಡರೂ ಕಥೆ ಬೇರೆಯದೇ ಆಗಿದೆ ಎಂದು ಚಿತ್ರತಂಡ ಹೇಳಿದೆ. ಶರಣ್ ರಾಜ್ ಇದುವರೆಗೆ ಅನೇಕ ಼ಚಿತ್ರಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದು ಈ ಸಿನಿಮಾದಲ್ಲಿ ಸಹ ವಿಲನ್ ಆಗಿಯೇ ತೆರೆಮೇಲೆ ಬರುತ್ತಾರೆ. ಆದರೆ ಚಿತ್ರದ ಕ್ಲೈಮ್ಯಾಕ್ಸ್ ವೇಳೆಗೆ ಇವರ ವಿಲನ್ ಶೇಡ್ ಬೇರೆಯದೇ ತಿರುವು ಪಡೆದು ನಾಯಕನ ಪಾತ್ರವಾಗಿ ಬದಲಾಗಲಿದೆ ಎಂದು ಶರಣ್ ತಮ್ಮ ಪಾತ್ರದ ಕುರಿತು ಹೇಳಿದ್ದಾರೆ.
ನಾಯಕಿ ಜೀವಿತಾ ಮಾತನಾಡಿ ಈ ಚಿತ್ರದಲ್ಲಿ ನನ್ನ ಪಾತ್ರ ವಿಶಿಷ್ಟವಾಗಿದೆ, ಕಥೆಯಲ್ಲಿ ನನ್ನ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಸಿಕ್ಕಿದೆ ಹಾಗಾಗಿ ನನಗೆ ಈ ಚಿತ್ರ ವಿಶೇಷವಾಗಿದೆ ಎಂದರು.
ನಾನು ಮೀಡಿಯಾದಲ್ಲಿ ಕೆಲಸ ಮಾಡುತ್ತಾ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ, ಇದುವರೆಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಡಿ. ಯೋಗರಾಜ್, ನಿರ್ದೇಶಕರು ಈ ಸಿನಿಮಾದಲ್ಲಿ ನನಗೆ ಪ್ರಮುಖ ಪಾತ್ರ ಕೊಟ್ಟಿದ್ದಾರೆ. ಅವರ ಈ ಹಿಂದಿನ ಚಿತ್ರ “ಇತ್ಯಾದಿ” ಸಿನಿಮಾ ಪತ್ರಿಕಾಗೋಷ್ಟಿಯಲ್ಲಿ ಸಂದರ್ಶನ ನಡೆಸುತ್ತಿದ್ದಾಗ ಅವರು ನನ್ನನ್ನು ತಮ್ಮ ಮುಂದಿನ ಚಿತ್ರಕ್ಕೆ ಪರಿಗಣಿಸುವುದಾಗಿ ಹೇಳಿದ್ದರು. ಅದರಂತೆಯೇ “ಲೂಡೋ” ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟಿದ್ದಾರೆ. ಎಂದು ಚಿತ್ರದ ಇನ್ನೊಬ್ಬ ನಾಯಕ ಆರ್ಯನ್ ತಮ್ಮ ಮಾತುಗಳಲ್ಲಿ ಹೇಳಿದರು.
ನಿರ್ಮಾಪಕ ಎಂ. ಮಹೇಂದ್ರನ್ ಚಿತ್ರದ ಕುರಿತಂತೆ ಮಾತನಾಡುತ್ತಾ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.