ಪುರುಷರ ಹಾಗೆ ಮಹಿಳೆಯರಿಗೂ ಜೀವನದಲ್ಲಿ ಮುಂದೆ ಮುಂದೆ ಸಾಗಬೇಕು, ಪ್ರಗತಿ ಸಾಧಿಸಬೇಕೆಂಬ ಅಪೇಕ್ಷೆ ಇರುತ್ತದೆ. ಅವರಿಗೂ ಕೂಡ ಕಂಡ ಕನಸನ್ನು ನನಸುಗೊಳಿಸುವ ಸಂಪೂರ್ಣ ಹಕ್ಕು ಇದೆ. ಅವರೂ ಕೂಡ ಮನೆಯೆಂಬ ಪಂಜರದಿಂದ ಹೊರಬಂದು ಮುಕ್ತ ಆಕಾಶದಲ್ಲಿ ಹಾರುವ ಮತ್ತು ಆದರ ಆನಂದ ಅನುಭವಿಸುವ ಅಪೇಕ್ಷೆ ಹೊಂದಿರುತ್ತಾರೆ. ಅವರು ಕಷ್ಟಪಟ್ಟು ಉನ್ನತ ಸ್ಥಾನ ತಲುಪಬೇಕೆಂದು ಇಚ್ಛೆ ಹೊಂದಿರುತ್ತಾರೆ.

ಇಂದು ಪ್ರತಿಯೊಬ್ಬ ಮಹಿಳೆಗೂ ಯಶಸ್ಸಿನ ಆಕಾಶದಲ್ಲಿ ಸೂರ್ಯನಂತೆ ಹೊಳೆಯಬೇಕೆಂಬ ಮಹದಾಸೆ ಇರುತ್ತದೆ. ಇಂತಹ ಸ್ಥಿತಿಯಲ್ಲಿ ತನ್ನ ಕುಟುಂಬ ಹಾಗೂ ಸಮಾಜದಲ್ಲಿ ತನ್ನ ಬಗೆಗೂ ಯೋಚಿಸುವ ಹಾಗೂ ಕೆಲಸ ಮಾಡುವ ಮಹಿಳೆಯರಿಗೆ ಪುರುಷರಿಗೆ ಸರಿಸಮಾನವಾಗಿ ಅವಕಾಶ ದೊರೆಯಬೇಕು.

ಸಾಲು ಸಂಘರ್ಷಗಳ ಅಡತಡೆಯಲ್ಲಿ ಮಹಿಳೆ

ಇಂದು ಎಲ್ಲರಿಗೂ ಗೊತ್ತಿರುವ ಒಂದು ಸಂಗತಿಯೆಂದರೆ ಸಮಾಜದಲ್ಲಿ ಸ್ಪರ್ಧೆ ಭಾರಿ ಪ್ರಮಾಣದಲ್ಲಿ ಇದೆ. ಯಾರೇ ಆಗಲಿ ಇನ್ನೊಬ್ಬರಿಗಿಂತ ಮುಂದೆ ಹೋಗುವ ತವಕದಲ್ಲಿರುತ್ತಾರೆ. ಇಂದು ಮಹಿಳೆ ಎಷ್ಟೇ ಎತ್ತರಕ್ಕೇರಿದ್ದರೂ ತನ್ನ ವತ್ತಿಪರ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಮಾಜ, ಕುಟುಂಬದ ಮಾನಸಿಕ ವಿಚಾರ, ವೈಚಾರಿಕ ಮತಭೇದ, ಸ್ವಾತಂತ್ರ್ಯ ಕುರಿತಾದ ಸಂಗತಿಗಳು ಅವಳಿಗೆ ಕಿರಿಕಿರಿ ಉಂಟು ಮಾಡಬಹುದು. ಇಷ್ಟೊಂದು ಅಡೆತಡೆಗಳ ನಡುವೆಯೂ ಮಹಿಳೆ ಮಾನಸಿಕವಾಗಿ ಅದೆಷ್ಟೋ ಪಟ್ಟು ದೃಢವಾಗಿರುತ್ತಾಳೆ. ಆಕೆ ಎಂಥದೇ ಪರಿಸ್ಥಿತಿಯನ್ನು ಎದುರಿಸಲು ಸಮರ್ಥಳಾಗಿರುತ್ತಾಳೆ. ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾಳೆ. ಇಂದಿನ ಮಹಿಳೆಯರ ವ್ಯಕ್ತಿತ್ವದ 3 ವಿಶೇಷತೆಗಳ ಬಗ್ಗೆ ಒಂದು ಸಕಾರಾತ್ಮಕ ಚಿತ್ರಣ.

ಬೋಲ್ಡ್ ನೆಸ್

ಪ್ರಾಚೀನ ಕಾಲದಿಂದಲೇ ಮಹಿಳೆಯರನ್ನು ಅಬಲೆ ಮತ್ತು ದುರ್ಬಲ ಎಂದು ಭಾವಿಸಲಾಗಿದೆ. ಆದರೆ ವಾಸ್ತವ ಸಂಗತಿಯೇನೆಂದರೆ, ಪ್ರಾಚೀನ ಕಾಲದಿಂದಲೇ ಮಹಿಳೆ ಸಶಕ್ತ ವ್ಯಕ್ತಿತ್ವದ ಒಡತಿಯಾಗಿದ್ದಾಳೆ. ಅಂತಹ ಅನೇಕ ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ಕಂಡುಬರುತ್ತದೆ. ಝಾನ್ಸಿ ರಾಣಿ ಲಕ್ಷೀಬಾಯಿ, ವಿಜಯಲಕ್ಷ್ಮಿ ಪಂಡಿತ್‌, ಸರೋಜಿನಿ ನಾಯ್ಡು, ಅರುಣಾ ಅಸಫ್‌ ಅಲಿ, ಸುಚೇತಾ ಕೃಪಲಾನಿ, ಕಮಲಾ ನೆಹರುರಂತಹ ಅದೆಷ್ಟೋ ಮಹಿಳೆಯರು ಸಮಾಜಕ್ಕೆ ಹಾಗೂ ಮಹಿಳೆಯರಿಗೆ ಮಾರ್ಗದರ್ಶಕರಾದರು. ಅವರ ಹೆಸರನ್ನು ಈಗಲೂ ಗೌರವಪೂರ್ವಕವಾಗಿ ಪ್ರಸ್ತಾಪಿಸಲಾಗುತ್ತದೆ. ಪ್ರಚಲಿತ ದಿನಗಳ ಬಗ್ಗೆ ಹೇಳಬೇಕೆಂದರೆ, ಮೇರಿ ಕೋಮ್, ಸಾನಿಯಾ ಮಿರ್ಜಾ, ಸೈನಾ ನೇಹ್ವಾಲ್, ಬಿಸ್‌ನೆಸ್‌ ವುಮನ್‌ಗಳಾದ ಇಂದ್ರಾ ನೂಯಿ, ಕಿರಣ್‌ ಮುಜುಂದಾರ್‌, ಸುಧಾ ಮೂರ್ತಿ ಸಮಾಜದ ಮೇಲೆ ತಮ್ಮದೇ ಆದ ಪ್ರಭಾವ ಬೀರುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ ಮುಂತಾದವರು ಕೂಡ ತಮ್ಮದೇ ಆದ ರೀತಿಯಲ್ಲಿ ಯುವ ಜನಾಂಗದ ಮೇಲೆ ಛಾಪು ಮೂಡಿಸುತ್ತಿದ್ದಾರೆ.

ಬ್ರೈಟ್‌ನೆಸ್‌

ಬ್ರೈಟ್‌ನೆಸ್‌ ಆಧುನಿಕ ಮಹಿಳೆಯ ವ್ಯಕ್ತಿತ್ವದ ಒಂದು ಮುಖ್ಯ ಗುಣವಾಗಿದೆ. ಬ್ರೈಟ್‌ ಅಂದರೆ ಪ್ರಖರ. ಅದು ಎಂತಹ ಒಂದು ಗುಣವಾಗಿದೆ ಎಂದರೆ, ಇತರರನ್ನು ಪ್ರಭಾವಿತಗೊಳಿಸುತ್ತದೆ. ಇಂದಿನ ಮಹಿಳೆ ತನ್ನ ಚುರುಕುತನ ಹಾಗೂ ಪ್ರಖರತೆಯಿಂದಾಗಿ ಎಲ್ಲರನ್ನೂ ಪ್ರಭಾವಿತಗೊಳಿಸುತ್ತಿದ್ದಾಳೆ. ಮಹಿಳೆಯರ ಈಗಿನ ಜ್ಞಾನ ಗಗನದೆತ್ತರಕ್ಕೆ ಪಸರಿಸಿದೆ. ಜ್ಞಾನದ ಹೆಸರೇ ಪ್ರತಿಭೆ ಮತ್ತು ಈ ಪ್ರತಿಭೆ ಎಂದರೆ ಪ್ರಖರತೆ. ಇಂದಿನ ಮಹಿಳೆಯ ಜ್ಞಾನ ರಾಕೆಟ್‌ ತಂತ್ರಜ್ಞಾನದವರೆಗೂ ತಲುಪಿದೆ. ಸಮಾಜದಲ್ಲಿ ಈಗ `ಮಗಳನ್ನು ಉಳಿಸಿ, ಮಗಳಿಗೆ ಓದಿಸಿ’ ಎಂಬ ಅಭಿಯಾನ ಎಲ್ಲೆಡೆ ಚಾಲ್ತಿಯಲ್ಲಿದೆ. ಮೊದಲು ತಂದೆತಾಯಿಗಳು ಹೆಣ್ಣುಮಕ್ಕಳನ್ನು `ಪರರ ಸೊತ್ತು’ ಎಂಬಂತೆ ಭಾವಿಸುತ್ತಿದ್ದರು. ಈ ಕಾರಣದಿಂದ ಅವರಿಗೆ ಓದಿಸಲು ಹಿಂದೇಟು ಹಾಕುತ್ತಿದ್ದರು. ಹುಡುಗಿಯರು ಓದಿ ಮಾಡುವುದೇನಿದೆ, ಅವರಿಗೆ ಬೇರೆ ಮನೆಗೆ ಹೋಗಿ ಕೆಲಸ ಮಾಡುವುದು ತಪ್ಪುವುದಿಲ್ಲ ಎಂದು ಹೇಳುತ್ತಿದ್ದರು.

ಆದರೆ ಈ ಹಳೆಯ ವಿಚಾರ ಮತ್ತು ಪರಿಸ್ಥಿತಿಯಲ್ಲಿ ಅಗಾಧ ಬದಲಾವಣೆ ಉಂಟಾಗಿದೆ. ಹುಡುಗರಿಗೆ ಹೋಲಿಸಿದರೆ ಹುಡುಗಿಯರು ಹೆಚ್ಚು ಗಂಭೀರವಾಗಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ತಮ್ಮ ಹೆಣ್ಣುಮಕ್ಕಳು ಓದು ಬರಹ ಬಲ್ಲವರಾಗಿದ್ದಾರೆ. ಅವರ ಜೀವನ ಮುಂದೆ ಬಹಳ ಚೆನ್ನಾಗಿ ನಡೆಯುತ್ತದೆ ಎಂಬುದು ಸ್ವತಃ ತಂದೆತಾಯಿಯರಿಗೆ ಗೊತ್ತಾಗಿದೆ.

ಇಂದು ದೇಶದಲ್ಲಿ ಅಸಹಿಷ್ಣುತೆ, ಉಗ್ರವಾದ, ಅಸಂವೇದನಾಶೀಲತೆಯಂತಹ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆ ಮತ್ತು ವಾದವಿವಾದಗಳು ನಡೆಯುತ್ತಿರುತ್ತವೆ. ಮಕ್ಕಳ ವ್ಯಕ್ತಿತ್ವ ವಿಕಾಸದಲ್ಲಿ ತಾಯಿಯ ಪಾತ್ರ ಬಹುಮುಖ್ಯ ಎನ್ನುವುದು ಪ್ರಾಚೀನ ಕಾಲದಿಂದ ತಿಳಿದಿರುವ ವಿಚಾರವೇ ಆಗಿದೆ.

ಮಹಿಳೆಯರು ಮನಸಾರೆ ನಿರ್ಧಾರ ಮಾಡಿದರೆ ಯಾವುದೇ ಕೆಲಸ ಕಷ್ಟಕರವಲ್ಲ. ಭಾವಿ ಪೀಳಿಗೆಯನ್ನು ಸಮಾಜದ ಬಗ್ಗೆ ಸಂವೇದನಾಶೀಲ, ಸಹಿಷ್ಣುಗೊಳಿಸಲು ನಾವು ಕೂಡ `ಹೆಣ್ಣು ಮಗು ಉಳಿಸಿ, ಹೆಣ್ಣು ಮಗುವನ್ನು ಓದಿಸಿ,’ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಸಶಕ್ತ ಮಹಿಳೆಯರು ಸಮಾಜಕ್ಕೆ ಸರಿಯಾದ ದಿಸೆ ತೋರಿಸಲು ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗಲು ನೆರವಾಗಬಲ್ಲರು.

ಬ್ರೇನ್‌ ವಿತ್‌ ಬ್ಯೂಟಿ

ತಮ್ಮ ಸೌಂದರ್ಯ ಹಾಗೂ ಬುದ್ಧಿಯಿಂದಾಗಿ ಮಹಿಳೆಯರು ಹತ್ತು ಹಲವು ಕ್ಷೇತ್ರದಲ್ಲಿ ಯಶಸ್ಸು ಗಳಿಸುತ್ತಿದ್ದಾರೆ. ಯಾವುದೇ ಮಹಿಳೆಯ ವ್ಯಕ್ತಿತ್ವದ ಒಂದು ವಿಶೇಷತೆಯೆಂದರೆ ಆಕೆ ತಾನು ಪ್ರಗತಿ ಪಥದಲ್ಲಿ ಸಾಗುವುದರ ಜೊತೆ ಜೊತೆ ಇತರರನ್ನು ಪ್ರಗತಿಪಥದಲ್ಲಿ ಸಾಗಲು ಪ್ರೇರಣೆ ನೀಡುತ್ತಾಳೆ. ಸೌಂದರ್ಯವನ್ನು 2 ರೀತಿಯಲ್ಲಿ ಹೇಳಬಹುದು. ಬಾಹ್ಯ ಸೌಂದರ್ಯ ಮತ್ತು ಆಂತರಿಕ ಸೌಂದರ್ಯ. ಹೆಣ್ಣಿಗೆ ನೈಸರ್ಗಿಕ ರೀತಿಯಲ್ಲಿ ಯಾವುದೇ ವ್ಯಕ್ತಿಯನ್ನು ಅರಿತುಕೊಳ್ಳುವ ಶಕ್ತಿ ಇರುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಯಾವುದೇ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಹಾಗೆಂದೇ ಒಬ್ಬ ಅಮ್ಮ ನೂರು ಶಿಕ್ಷಕರಿಗೆ ಸಮ ಎಂದು ಹೇಳಲಾಗಿದೆ.

– ಜಿ. ವನಿತಾ.

Tags:
COMMENT