ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಸೋಮವಾರ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದಾಗ ಟೆಂಪೋ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, 25 ಜನ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ. ಮೃತರು ಹಾಗೂ ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಸೇರಿದ್ದಾರೆ.
ದಹನು ತಾಲೂಕಿನ ಧನಿವಾರಿ ಗ್ರಾಮದ ಬಳಿ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಟೆಂಪೋ ಬಾಪುಗಾಂವ್ ಖಡ್ಕಿಪದ ಗ್ರಾಮದ ನಿವಾಸಿ ಬಲರಾಮ್ ಜೈರಾಮ್ ದಂಡೇಕರ್ ಅವರ ನಿಶ್ಚಿತಾರ್ಥ ಸಮಾರಂಭ ಮುಗಿಸಿಕೊಂಡು ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲೇ 13 ಮಂದಿ ಸಾವನ್ನಪ್ಪಿದ್ದರೆ, ಗಾಯಗೊಂಡ 25ಕ್ಕೂ ಹೆಚ್ಚು ಮಂದಿಯನ್ನು ಚಿಕಿತ್ಸೆಗಾಗಿ ಕಾಸಾ ಉಪ-ಜಿಲ್ಲಾ ಆಸ್ಪತ್ರೆ ಮತ್ತು ಹತ್ತಿರದ ಇತರ ವೈದ್ಯಕೀಯ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ ಎಂದು ಕಾಸಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಮರ್ ಪಾಟೀಲ್ ಹೇಳಿದ್ದಾರೆ.
ಟೆಂಪೋ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ. ಅತಿವೇಗ, ಕಿರಿದಾದ ರಸ್ತೆ ಮತ್ತು ಟೆಂಪೋ ಚಾಲಕನ ನಿಯಂತ್ರಣ ತಪ್ಪಿರುವುದು ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಗಾಯಗೊಂಡ ಹಲವಾರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.





