ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಶುಕ್ರವಾರ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದ್ದು, ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತ ದುರಂತ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.
ಸಂಜೆ ಸುರಿದ ಭಾರೀ ಮಳೆಗೆ ವಿಜಯನಗರದಲ್ಲಿ ಕ್ಲಬ್ ಕಾಂಪೌಂಡ್ ಗೋಡೆ ಕುಸಿದು ಆಟೋ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ.
ಗಂಗೊಂಡನಹಳ್ಳಿಯ ನಿವಾಸಿ ಶಿವಬೋರಯ್ಯ(46) ಮೃತಪಟ್ಟವರು. ವಿಜಯನಗರ ಕ್ಲಬ್ ಕಾಂಪೌಂಡ್ ಪಕ್ಕದಲ್ಲೇ ನಿಲ್ಲಿಸಿದ್ದ ಆಟೋ ಮೇಲೆ ಕಾಂಪೌಂಡ್ ಕುಸಿದು ಬಿದ್ದಿದ್ದು, ಈ ದುರಂತ ಸಂಭವಿಸಿದೆ. ಶಿವಬೋರಯ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿವಿಧೆಡೆ ಮಳೆ: ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ವಿಧಾನಸೌಧ, ಶಿವಾಜಿನಗರ, ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್, ಬಸವನಗುಡಿ, ವಿಜಯನಗರ, ಜಯನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಎಚ್.ಎಸ್.ಆರ್ ಲೇಔಟ್ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆ ಸುರಿದಿದ್ದು, ಮರಗಳು ಧರೆಗುರುಳಿವೆ.
ಭಾರೀ ಮಳೆಯಿಂದಾಗಿ ಅಂಡರ್ ಪಾಸ್ ಜಲಾವೃತಗೊಂಡಿದ್ದು, ಹಲವು ಕಡೆ ಅವಾಂತರಗಳು ಸೃಷ್ಟಿಯಾಗಿವೆ.





