ನಾಡಿನ ಸಂಸ್ಕೃತಿ, ಜನಪದ ಕಲೆ ಮತ್ತು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕಾದ ಯುವ ದಸರಾ — ಅದ್ಧೂರಿ ಸಂಗೀತ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದು ಎಷ್ಟು ಸಮರ್ಥನೀಯ? ಹೊರರಾಜ್ಯದ ಕಲಾವಿದರಿಗೆ ಅವಕಾಶ ನೀಡುವುದರ ನಡುವೆ ಕನ್ನಡದ ನೆಲದ ಪ್ರತಿಭೆಗಳಿಗೆ ನ್ಯಾಯ ಸಿಗುತ್ತಿದೆಯೇ? ಆಯೋಜನೆಯಲ್ಲಿ ಪಾರದರ್ಶಕತೆ ಇದೆಯೇ?
ಮೈಸೂರು ದಸರಾ ಎಂದರೆ ಕೇವಲ ಒಂದು ಹಬ್ಬವಲ್ಲ. ಅದು ಕರ್ನಾಟಕದ ಇತಿಹಾಸ, ಪರಂಪರೆ, ಸಾಂಸ್ಕೃತಿಕ ವೈಭವ ಮತ್ತು ಜನಜೀವನದ ಪ್ರತೀಕ. ಒಡೆಯರ ಕಾಲದಿಂದ ನಡೆದುಬಂದಿರುವ ಈ ಉತ್ಸವವು ಸಂಗೀತ, ಸಾಹಿತ್ಯ, ನೃತ್ಯ, ರಂಗಭೂಮಿ, ಜನಪದ ಕಲೆ, ಕುಸ್ತಿ, ಕ್ರೀಡೆ ಮತ್ತು ವಿವಿಧ ಸಮುದಾಯಗಳ ಸಾಂಸ್ಕೃತಿಕ ಆಚರಣೆಗಳನ್ನು ಒಳಗೊಂಡಿದೆ. ವಿಜಯನಗರ ಸಾಮ್ರಾಜ್ಯದ ಮಹಾನವಮಿ ಉತ್ಸವದ ಸಂಪ್ರದಾಯದಿಂದ ಪ್ರೇರಣೆ ಪಡೆದ ದಸರಾ ಆಚರಣೆಯನ್ನು ರಾಜ ಒಡೆಯರ್ ಅವರು 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಮುಂದುವರಿಸಿದರು. ನಂತರ ಮೈಸೂರು ರಾಜಧಾನಿಯಾದಾಗ ದಸರಾ ಆಚರಣೆಯೂ ಮೈಸೂರಿನಲ್ಲಿ ವೈಭವದಿಂದ ಬೆಳೆದಿತು. ಇಪ್ಪತ್ತನೇ ಶತಮಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಪ್ರದರ್ಶನಗಳು, ಕ್ರೀಡೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಈ ಉತ್ಸವ ಮತ್ತಷ್ಟು ವಿಸ್ತಾರಗೊಂಡಿತು. 1970ರ ದಶಕದಿಂದ ಕರ್ನಾಟಕ ಸರ್ಕಾರ ದಸರಾವನ್ನು ರಾಜ್ಯದ ನಾಡಹಬ್ಬವಾಗಿ ಆಯೋಜಿಸುತ್ತಿದೆ.
ಇಂತಹ ದೀರ್ಘ ಇತಿಹಾಸ ಹೊಂದಿರುವ ಉತ್ಸವದ ಭಾಗವಾಗಿ ಯುವ ದಸರಾ ರೂಪುಗೊಂಡಿದೆ. ಯುವಜನರ ಆಸಕ್ತಿ, ಆಧುನಿಕ ಸಂಗೀತ ಮತ್ತು ಮನರಂಜನೆಗೆ ಅವಕಾಶ ಕಲ್ಪಿಸುವುದು ಇದರ ಪ್ರಮುಖ ಉದ್ದೇಶ. ಆದರೆ ಕಾಲಕ್ರಮೇಣ ಈ ಕಾರ್ಯಕ್ರಮದ ಸ್ವರೂಪದ ಬಗ್ಗೆ ಕೆಲವು ಪ್ರಶ್ನೆಗಳು ಎದುರಾಗಿವೆ.
ಯುವ ದಸರಾ ಯುವ ಪ್ರತಿಭೆಗಳನ್ನು ಬೆಳೆಸುವ ವೇದಿಕೆಯಾಗಬೇಕೇ? ಅಥವಾ ಜನಪ್ರಿಯ ಸಿನಿಮಾ ತಾರೆಯರನ್ನು ಕರೆಸಿ ಬೃಹತ್ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದೇ ಅದರ ಮುಖ್ಯ ಗುರಿಯಾಗಬೇಕೇ? ಸಾರ್ವಜನಿಕ ಹಣದಿಂದ ನಡೆಯುವ ಈ ಉತ್ಸವದಲ್ಲಿ ಮೈಸೂರಿನ ಮತ್ತು ಕರ್ನಾಟಕದ ಕಲಾವಿದರಿಗೆ ಎಷ್ಟು ಅವಕಾಶ ಸಿಗಬೇಕು? ಈ ಪ್ರಶ್ನೆಗಳು ಚರ್ಚೆಗೆ ಅರ್ಹವಾಗಿವೆ.
ಮೈಸೂರನ್ನು ಸಾಂಸ್ಕೃತಿಕ ರಾಜಧಾನಿಯನ್ನಾಗಿಸಿದ ಮೈಸೂರು ಅರಸರು
ಮೈಸೂರು ಕರ್ನಾಟಕದ ಸಾಂಸ್ಕೃತಿ ರಾಜಧಾನಿಯಾಗಿರುವುದರ ಹಿಂದೆ ಮೈಸೂರನ್ನು ಆಳಿದ ಅನೇಕ ಅರಸರ ಕೊಡುಗೆ ಇದೆ. ಅದರಲ್ಲೂ ಸ್ವತಃ ವೇದಪಾರಂಗತರೂ ಸಂಗೀತಗಾರರೂ ಆಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ದೇಶವಿದೇಶಗಳಿಗೆ ಪ್ರವಾಸ ಮಾಡಿ ಅಲ್ಲಿದ್ದ ಅತ್ಯುತ್ತಮ ಕಲಾವಿದರುಗಳನ್ನು ಮೈಸೂರಿಗೆ ಕರೆತಂದು ಮೈಸೂರನ್ನು ಸಾಂಸ್ಕೃತಿಕ ಕಲಾನಗರಿಯನ್ನಾಗಿ ಮಾಡುತ್ತಾರೆ. ಈ ಪ್ರೋತ್ಸಾಹದ ಪರಿಣಾಮವಾಗಿಯೇ ಇಂದೂ ಕೂಡಾ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರು ಪಡೆದಿದೆ. ಅನೇಕ ಸಂಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸಂಸ್ಥಾನದಿಂದ ಪ್ರೋತ್ಸಾಹ ಪಡೆದು ಬೆಳಕಿಗೆ ಬಂದರು. ಅದೇ ರೀತಿ ಅವರ ದರ್ಬಾರ್ ಹಾಲಿನಲ್ಲಿ ಸಂಗೀತ ಕಛೇರಿ ಇದೆ ಎಂದರೇ ಅದು ಸಭಾ ಕಛೇರಿ ಎಂದೇ ಖ್ಯಾತಿ ಪಡೆದಿರುತ್ತದೆ. ದೇಶದ ಎಲ್ಲಾ ಕಲಾವಿದರಿಗೂ ಮೈಸೂರು ಅರಮನೆಯಲ್ಲಿ ಕಾರ್ಯಕ್ರಮ ಕೊಡುವುದೇ ಒಂದು ಹೆಮ್ಮೆಯ ಮತ್ತು ಗೌರವಯುತ ಸಂಗತಿಯಾಗಿರುತ್ತದೆ.





