ಶ್ವಾಸ ರೋಗಗಳು : ನಿಮಗೆ ಒಸಡುಗಳ ರೋಗವಿದ್ದರೆ, ಬ್ಯಾಕ್ಟೀರಿಯಾಗಳು ರಕ್ತದ ಮುಖಾಂತರ ಶ್ವಾಸಕೋಶವನ್ನು ತಲುಪುವ ಸಾಧ್ಯತೆ ಇರುತ್ತದೆ. ಪರಿಣಾಮ ಶ್ವಾಸಕೋಶದ ಮೇಲೆ ಉಂಟಾಗುತ್ತದೆ. ಇಂತಹದರಲ್ಲಿ ಅಕ್ಯೂಟ್ ಬ್ರಾಂಕೈಟಿಸ್ ಮತ್ತು ಕ್ರಾನಿಕ್ ನ್ಯುಮೋನಿಯಾ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.
ಹೃದ್ರೋಗ ಮತ್ತು ಸ್ಟ್ರೋಕ್ : ದಂತ ರೋಗಗಳಿಂದ ತೊಂದರೆಗೀಡಾದವರಲ್ಲಿ ಹೃದ್ರೋಗ ಸಾಧ್ಯತೆ ಅಧಿಕವಾಗಿರುತ್ತದೆ. ಪ್ಲಾಕ್ ಮತ್ತು ಬ್ಯಾಕ್ಟೀರಿಯಾ ಒಸಡುಗಳ ಮುಖಾಂತರ ದೇಹದ ಒಳಭಾಗದಲ್ಲಿ ಪ್ರವೇಶಿಸುತ್ತವೆ. ಬ್ಯಾಕ್ಟೀರಿಯಾಗಳಿಂದ ರಕ್ತನಾಳಗಳು ಬ್ಲಾಕ್ ಆಗುತ್ತವೆ. ಅದರಿಂದ ಗಂಭೀರ ಹೃದ್ರೋಗಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಮೆದುಳಿಗೆ ರಕ್ತ ತಲುಪಿಸುವ ರಕ್ತನಾಳಗಳಲ್ಲಿ ಬ್ಲಾಕ್ ಉಂಟಾದರೆ ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ.
ಡಿಮೆನ್ಶಿಯಾ : ನೀವು ಬಾಯಿಯ ಸ್ವಚ್ಛತೆಯ ಬಗ್ಗೆ ಗಮನಕೊಡದೇ ಹೋದರೆ ನೀವು ಹಲ್ಲುಗಳನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ. ಇದರ ದುಷ್ಪರಿಣಾಮ ನಿಮ್ಮ ನೆನಪಿನ ಶಕ್ತಿ ಹಾಗೂ ಮೆದುಳಿನ ಹಲವು ಭಾಗಗಳ ಮೇಲೆ ಉಂಟಾಗಬಹುದಾಗಿದೆ. ಇತರೆ ಗಂಭೀರ ಸಮಸ್ಯೆಗಳು : ಬಾಯಿಯ ಆರೋಗ್ಯದ ಬಗ್ಗೆ ಗಮನಹರಿಸದೆ ಇದ್ದರೆ ಕೆಲವು ರೋಗಗಳು ಉಂಟಾಗಬಹುದು. ಉದಾ: ಬಂಜೆತನ, ಅವಧಿಗೆ ಮುನ್ನ ಹೆರಿಗೆ.
ಬಾಯಿಯ ಸ್ವಚ್ಛತೆ ಹೇಗೆ ಕಾಪಾಡುವುದು? ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಲು ಮುಂಜಾನೆ-ಸಂಜೆ ಬ್ರಶ್ ಮಾಡಿದರಷ್ಟೇ ಸಾಲದು, ಇನ್ನೂ ಹೆಚ್ಚಿನ ಎಚ್ಚರ ವಹಿಸಬೇಕು. ಅದಕ್ಕಾಗಿ ಕೆಲವು ಸುಲಭ ವಿಧಾನಗಳು.
ಸರಿಯಾಗಿ ಬ್ರಶ್ ಮಾಡಿ : ಬ್ರಶ್ ಮಾಡುವಾಗ ಹಲ್ಲುಗಳು ಒಸಡಿನಿಂದ 45 ಡಿಗ್ರಿಯಲ್ಲಿರಲಿ. ಒಸಡು ಹಾಗೂ ಹಲ್ಲುಗಳ ಕೆಳಭಾಗವನ್ನು ಬ್ರಶ್ ಮುಟ್ಟುವಂತಿರಬೇಕು. ಜೊತೆಗೆ ಹಿಂದೆ ಮುಂದೆ ಮೇಲೆ ಕೆಳಗೆ ಚೆನ್ನಾಗಿ ಬ್ರಶ್‌ನಿಂದ ಉಜ್ಜಿ. ಆದರೆ ನೀವು ಉಜ್ಜುವ ವಿಧಾನ ಹೇಗಿರಬೇಕೆಂದರೆ ಒಸಡಿನಲ್ಲಿ ರಕ್ತ ಹೊರಬರಬಾರದು. ಕೊನೆಯಲ್ಲಿ ನಾಲಿಗೆ ಹಾಗೂ ಬಾಯಿಯ ಮೇಲ್ಭಾಗ ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ಬ್ಯಾಕ್ಟೀರಿಯಾ ಹಾಗೂ ದುರ್ಗಂಧ ನಿವಾರಣೆಯಾಗುತ್ತದೆ.
ದಿನಕ್ಕೆ ಕನಿಷ್ಠ 2 ಸಲವಾದರೂ ಹಲ್ಲುಜ್ಜಿ. ಒಂದು ವೇಳೆ ಹಾಗೆ ಮಾಡಲು ಆಗದಿದ್ದರೆ ಬಾಯಿಯನ್ನಾದರೂ ಮುಕ್ಕಳಿಸಬಹುದು. ಹಾಗೆ ಮಾಡದ್ದಿದರೆ ಬ್ಯಾಕ್ಟೀರಿಯಾಗಳು ಉದ್ಭವಿಸುತ್ತವೆ.
ನಾಲಿಗೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ : ಪ್ರತಿದಿನ ನಾಲಿಗೆ ಸ್ವಚ್ಛಗೊಳಿಸಿ. ಅದಕ್ಕಾಗಿ ಟಂಗ್ ಕ್ಲೀನರ್ ಬಳಸಿ. ಬಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸದೇ ಇದ್ದರೆ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಉದ್ಭವಿಸಬಹುದು. ಅದರಿಂದ ಹಲ್ಲುಗಳ ಮತ್ತು ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಅದೇ ಬಾಯಿ ದುರ್ನಾತಕ್ಕೆ ಕಾರಣವಾಗುತ್ತದೆ.
ಫ್ಲಾಸ್ : ಫ್ಲಾಸ್‌ನ ಬಳಕೆಯಿಂದ ಬಾಯಿಯಿಂದ ಆಹಾರ ಕಣಗಳು ಹೊರಟುಹೋಗುತ್ತವೆ. ಬ್ರಶ್ ಮಾಡುವುದರಿಂದ ಮಾತ್ರ ಅವು ಹೋಗುವುದಿಲ್ಲ. ಫ್ಲಾಸ್ ಹಲ್ಲುಗಳ ನಡುವೆ ಪ್ರವೇಶಿಸುತ್ತದೆ. ಅಲ್ಲಿ ಬ್ರಶ್ ಅಥವಾ ಮೌತ್ ವಾಶ್ ತಲುಪುವುದಿಲ್ಲ. ಹೀಗಾಗಿ ದಿನಕ್ಕೆ ಕನಿಷ್ಠ 1 ಸಲ ಫ್ಲಾಸ್‌ನ್ನು ಉಪಯೋಗಿಸಬೇಕು.
ಮೌತ್‌ವಾಶ್ : ಉಗುರು ಬೆಚ್ಚಗಿನ ಸಲೈನ್ ವಾಟರ್‌ನಿಂದ ಬಾಯಿ ಮುಕ್ಕಳಿಸಿ. ಅದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸತ್ತುಹೋಗುತ್ತವೆ. ಉಸಿರಿನ ದುರ್ವಾಸನೆ ಕೂಡ ನಿವಾರಣೆ ಆಗುತ್ತದೆ. ಅದರಿಂದ ಹಲ್ಲುಗಳು ಗಟ್ಟಿಯಾಗಿರುತ್ತವೆ.
ಕ್ಯಾಲ್ಶಿಯಂ ಹಾಗೂ ಇತರೆ ವಿಟಮಿನ್ಸ್ : ಕ್ಯಾಲ್ಶಿಯಂ ಹಲ್ಲು ಹಾಗೂ ಮೂಳೆಗಳ ಆರೋಗ್ಯಕ್ಕೆ ಅತ್ಯವಶ್ಯ. ಅದಕ್ಕಾಗಿ ಹಾಲು, ಕಿತ್ತಳೆ ಜ್ಯೂಸ್, ಯೋಗರ್ಟ್, ಬ್ರೋಕ್ಲಿ, ಚೀಸ್, ಡೇರಿ ಉತ್ಪನ್ನಗಳನ್ನು ಸೇವಿಸಿ.
ಕ್ಯಾಲ್ಶಿಯಂ ಹಾಗೂ ವಿಟಮಿನ್ `ಡಿ’ ಒಸಡು ಹಾಗೂ ಹಲ್ಲುಗಳನ್ನು ಆರೋಗ್ಯದಿಂದಿಡುತ್ತದೆ. ವಿಟಮಿನ್ `ಬಿ’ ಕಾಂಪ್ಲೆಕ್ಸ್ ಕೂಡ ಹಲ್ಲು ಹಾಗೂ ಒಸಡಿನಿಂದ ರಕ್ತ ಒಸರದಂತೆ ತಡೆಯುತ್ತದೆ. ಕಾಪರ್, ಝಿಂಕ್, ಅಯೋಡಿನ್, ಕಬ್ಬಿಣಾಂಶ, ಪೊಟ್ಯಾಶಿಯಂ ಹಲ್ಲುಗಳ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಕಾಫಿ, ಟೀ ಪ್ರಮಾಣ ಸೀಮಿತವಾಗಿರಲಿ. ಈ ಪೇಯದಲ್ಲಿ ಫಾಸ್ಛರಸ್‌ನ ಪ್ರಮಾಣ ಅಧಿಕವಾಗಿರುತ್ತದೆ. ಅದು ಬಾಯಿಯ ಆರೋಗ್ಯಕ್ಕೆ ಅತ್ಯವಶ್ಯ. ಆದರೆ ಅದರ ಪ್ರಮಾಣ ಮಿತಿಮೀರಿದರೆ ಅದು ಕ್ಯಾಲ್ಶಿಯಂನ ಪ್ರಮಾಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರಿಂದ ಹಲ್ಲುಗಳ ಕೊಳೆಯುವಿಕೆ ಹಾಗೂ ಒಸಡುಗಳ ಸಮಸ್ಯೆ ಆಗಬಹುದು. ಹೀಗಾಗಿ ಹಾಲಿನ ಪದಾರ್ಥಗಳನ್ನು ಸೇವಿಸಿ, ಸಕ್ಕರೆ ಬೆರೆಸಿದ ಪೇಯಗಳ ಬದಲಿಗೆ ನೀರಿನ ಸೇವನೆ ಉತ್ತಮವಾಗಿರುತ್ತದೆ.
ತಂಬಾಕು ಸೇವನೆ ಬೇಡ : ತಂಬಾಕು ಕೇವಲ ಬಾಯಿಯ ದುರ್ವಾಸನೆಯನ್ನಷ್ಟೇ ಉಂಟು ಮಾಡುವುದಿಲ್ಲ. ಬೇರೆ ಕೆಲವು ರೋಗಗಳಿಗೆ ಕಾರಣ ಆಗುತ್ತದೆ.
ಉದಾಹರಣೆಗೆ, ನೀವು ಧೂಮಪಾನಿಗಳಾಗಿದ್ದರೆ ನೀವು ಅದರ ದುರ್ವಾಸನೆಯನ್ನು ಬಚ್ಚಿಡಲು ಕ್ಯಾಂಡಿ, ಚಹಾ ಅಥವಾ ಕಾಫಿ ಸೇವನೆ ಮಾಡುತ್ತೀರಿ. ಇದರಿಂದ ಅಪಾಯದ ಪ್ರಮಾಣ ದ್ವಿಗುಣಗೊಳ್ಳುತ್ತದೆ.
ನಿಮ್ಮ ಒಸಡಿನಲ್ಲಿ ನೋವು ಆಗುತ್ತಿದ್ದರೆ, ಬ್ರಶ್ ಮಾಡುವಾಗ ರಕ್ತ ಬರುತ್ತಿದ್ದರೆ, ಬಾಯಿಂದ ದುರ್ವಾಸನೆ ಬರುತ್ತಿದ್ದರೆ ತಕ್ಷಣವೇ ದಂತ ತಜ್ಞರನ್ನು ಭೇಟಿಯಾಗಿ. ವರ್ಷಕ್ಕೆರಡು ಸಲ ಹಲ್ಲುಗಳ ಪರೀಕ್ಷೆ ಮಾಡಿಸಬೇಕು. ಏನಾದರೂ ಸಮಸ್ಯೆ ಇದ್ದರೆ ತಕ್ಷಣವೇ ಗಮನಕ್ಕೆ ಬರುತ್ತದೆ ಹಾಗೂ ಸಕಾಲಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳಲು ಸಹಾಯವಾಗುತ್ತದೆ.
– ಡಾ. ಸುಸ್ಮಿತಾ