ಮೈಸೂರಿನ ಹುಡುಗಿ ಪಾವನಾ ಚಿಕ್ಕವಳಿಂದಲೂ ತಾನೊಬ್ಬ ನಟಿಯಾಗಬೇಕೆಂದು ಆಸೆಪಟ್ಟವಳು. `ವರ್ಕ್‌ಶಾಪ್ ಅಟೆಂಡ್ ಮಾಡುತ್ತಿದ್ದೆ. ನಾನು ಜರ್ನಲಿಸಂ ಸ್ಟೂಡೆಂಟ್ ಆಗಿದ್ದರಿಂದ ನಮ್ಮ ಕಾಲೇಜಿಗೆ ಬರುತ್ತಿದ್ದ ಖ್ಯಾತ ನಿರ್ದೇಶಕರ ಮಾತುಗಳನ್ನು ಕೇಳುವ ಅವಕಾಶ ಸಿಗುತ್ತಿತ್ತು. ಒಮ್ಮೆ ನಾಗತೀಹಳ್ಳಿ ಚಂದ್ರಶೇಖರ್ ಎದುರೇ ನಾನು ನಾಟಕ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದೆ. `ಮೈತ್ರಿ’ ನಿರ್ದೇಶಕರಾದ ಗಿರಿರಾಜ್ ಕೂಡ ನನ್ನ ರಂಗಭೂಮಿ ಚಟುವಟಿಕೆ ಗಮನಿಸಿ ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದರು. ಮೊದಲ ಚಿತ್ರ `ಗೊಂಬೆಗಳ ಲವ್’ ಒಳ್ಳೆಯ ಹೆಸರು ತಂದುಕೊಟ್ಟಿತ್ತು.
`ಅವಕಾಶದ ಸಲುವಾಗಿ ನಾನು ಯಾರ ಮುಂದೆಯೂ ಕೇಳಿಕೊಂಡಳವಲ್ಲ. ಆದರೆ ಕೈಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದೆ. ಮೈಸೂರಿನಿಂದ ಬೆಂಗಳೂರಿಗೆ ಶಿಫ್ಟ್ ಆದ ಮೇಲೆ ನನ್ನ ನಟನಾ ವೃತ್ತಿ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದೇನೆ. ಸಿನಿಮಾ ರಂಗದ ಕೆಲವು ಟೆಕ್ನಿಕ್ ರೀಸನ್ಸ್ ಗೊತ್ತಿರಲಿಲ್ಲ. ಅದೆಲ್ಲವನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಕಳೆದೆರಡು ವರ್ಷಗಳಿಂದ ನಟಿಯಾಗಬೇಕೆಂಬ ನನ್ನ ಆಸೆಗೆ ಸರಿಯಾಗಿ ಪ್ಲಾನಿಂಗ್ ಮಾಡಿಕೊಳ್ಳುತ್ತೀದ್ದೇನೆ.’
ಪಾವನಾಳಿಗೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುವ ಆಸೆ ಮೊದಲಿನಿಂದಲೂ ಇತ್ತಂತೆ. ಅದಕ್ಕೆ ಸರಿಯಾಗಿ `ರುದ್ರಿ’ ಚಿತ್ರ ಸೆಟ್ಟೇರಿತು. ಆ ಚಿತ್ರ ಈಗಾಗಲೇ ಚಿತ್ರೀಕರಣ ಪೂರೈಸಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಂದಿದೆ. ಪುನೀತ್ ರಾಜ್‌ಕುಮಾರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.
ಬಡಿಗೇರ್ ದೇವೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಪಾವನಾ ರುದ್ರಿ ಅವತಾರ ತಾಳಿದ್ದಾಳೆ. ಬಹುತೇಕ ಉತ್ತರ ಕನ್ನಡ ಬ್ಯಾಕ್ ಡ್ರಾಪ್ ನಲ್ಲೇ ಚಿತ್ರ ಸಾಗಲಿದ್ದು, ಭಾಷೆ ಕೂಡ ಅಲ್ಲಿಯದ್ದೇ ಆಗಿರುತ್ತದೆ. ಒಂದು ಹೆಣ್ಣಿನ ಸುತ್ತ ಸಾಗುವ ಕಥೆಯಲ್ಲಿ ಆ ಹುಡುಗಿಯ ಬದುಕಿನಲ್ಲಾಗುವ ಒಂದು ಘಟನೆಯಿಂದ ಹೇಗೆ ಬಳಲುತ್ತಾಳೆ, ಬದುಕು ಎದುರಿಸುತ್ತಾಳೆ, ಅದರಿಂದ ಹೊರಬರುತ್ತಾಳೆ ಎಂಬುದೇ ರುದ್ರಿ ಸಿನಿಮಾದ ಕಥೆ.
ರುದ್ರಿ ಹೆಸರಿನಲ್ಲೇ ಅಂತಹ ಪವರ್ ಇದೆ. ಪ್ರತಿಯೊಬ್ಬ ಹೆಣ್ಣಿನಲ್ಲೂ ಪಾರ್ವತಿ ಜೊತೆ ಕಾಳಿಯೂ ಇರುತ್ತಾಳೆ. ಇಲ್ಲಿ ರುದ್ರಿ ಎನ್ನುವ ಆ ಹುಡುಗಿ ಬದುಕಿನಲ್ಲಿ ಸಮಸ್ಯೆ ಎದುರಾದಾಗ ಸಿಡಿದೆದ್ದು ಕಾಳಿ ರೂಪ ತಾಳುತ್ತಾಳಾ ಎಂಬುದನ್ನು ನಿರ್ದೇಶಕರು ನಿರೂಪಿಸಲಿದ್ದಾರೆ. ಬಹುತೇಕ ರಂಗಭೂಮಿ ಕಲಾವಿದರೇ ಈ ಚಿತ್ರದಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಈ ತಿಂಗಳಲ್ಲೇ ರುದ್ರಿ ತೆರೆ ಮೇಲೆ ಬರುವ ಸಾಧ್ಯತೆ ಇದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿರುವ ಪಾವನಾ ಮುಂದೊಂದು ದಿನ ತಾನೇ ಒಂದು ಚಿತ್ರ ನಿರ್ದೇಶಿಸುವ ಆಸೆಯೂ ಇಟ್ಟುಕೊಂಡಿದ್ದಾಳೆ.
ಪಾವನಾ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. `ಮೈಸೂರು ಡೈರೀಸ್, ಫೈಟರ್, ತೂತು ಮಡಕೆ ಹಾಗೂ ರುದ್ರಿ’ ರಿಲೀಸ್‌ಗೆ ತಯಾರಾಗಿರೋ ಚಿತ್ರಗಳು.
ಪಾವನಾ ರೈತ ಕುಟುಂಬಕ್ಕೆ ಸೇರಿರುವುದರಿಂದ ಮಣ್ಣಿನ ಮೇಲೆ ಪ್ರೀತಿ ಜಾಸ್ತಿಯಂತೆ. `ನಾನು ರೈತನ ಮಗಳಾಗಿರೋದ್ರಿಂದ ಹೊಲ, ಗದ್ದೆ, ತೋಟದ ಬಗ್ಗೆ ವ್ಯಾಮೋಹ ಜಾಸ್ತಿ. ಭವಿಷ್ಯದಲ್ಲಿ ನನಗೆ ರೈತಳಾಗುವ ಆಸೆಯಿದೆ,’ ಎನ್ನುತ್ತಾಳೆ ಪಾವನಾ. ಆಲ್ ದಿ ಬೆಸ್ಟ್ ಪಾವನಾ!
– ಸರಸ್ವತಿ