ಕಾಲಿವುಡ್ ಸಿನಿಮಾದ ಇಬ್ಬರು ದಂತಕಥೆಗಳಾದ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್, ಬರೋಬ್ಬರಿ 47 ವರ್ಷಗಳ ನಂತರ ಮತ್ತೊಮ್ಮೆ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಇದೀಗ ಈ ಸಿನಿಮಾದ ಪ್ರೋಮೋ ಕೂಡ ರಿಲೀಸ್ ಆಗಿದೆ.
ಭಾರತೀಯ ಚಿತ್ರರಂಗವು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು 'KHxRK' ಎಂದು ತಾತ್ಕಾಲಿಕವಾಗಿ ಹೆಸರಿಸಲಾದ ಪ್ರತಿಷ್ಠಿತ ಸಿನಿಮಾಗಾಗಿ ಒಂದಾಗುತ್ತಿದ್ದಾರೆ. ರಜನಿಕಾಂತ್ ಮತ್ತು ಕಮಲ್ ಹಾಸನ್, ಈ ಇಬ್ಬರು ಮಹಾನ್ ನಟರು ಕೊನೆಯದಾಗಿ 1970ರಲ್ಲಿ ಉತ್ತರಾರ್ಧದಲ್ಲಿ ಒಟ್ಟಿಗೆ ನಟಿಸಿದ್ದರು. ಈಗ ದಶಕಗಳ ನಂತರ ಇವರ ಪುನರ್ಮಿಲನವು ಭಾರತೀಯ ಚಲನಚಿತ್ರ ಇತಿಹಾಸದ ಮಹತ್ವದ ಘಟನೆಗಳಲ್ಲಿ ಒಂದು .
ʻರೆಡ್ ಜೈಂಟ್ ಮೂವೀಸ್ʼ ಸಂಸ್ಥೆಯು ಈ ಐತಿಹಾಸಿಕ ಸಾಹಸಕ್ಕೆ ಕೈಹಾಕಿದ್ದು, ಈ ಇಬ್ಬರು ಸಿನಿಮಾ ದೈತ್ಯರನ್ನ ಒಂದೇ ಪರದೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರವನ್ನ ಅದ್ಧೂರಿತನ, ಪರಂಪರೆ ಮತ್ತು ಅತ್ಯುತ್ತಮ ಕಥೆ ಹೇಳುವಿಕೆಯ ಸಂಭ್ರಮವಾಗಿ ನಿರ್ಮಾಣ ಮಾಡಲು ಸಂಸ್ಥೆ ಯೋಜನೆ ನಡೆಸಿದೆ.
ಈ ಕುರಿತು ರೆಡ್ ಜೈಂಟ್ ಮೂವೀಸ್‌ನ ವಕ್ತಾರರು ತಮ್ಮ ಅನಿಸಿಕೆ ಹಂಚಿಕೊಂಡಿದ್ದು, "ರಜನಿಕಾಂತ್ ಸರ್ ಮತ್ತು ಕಮಲ್ ಹಾಸನ್ ಸರ್ ಅವರನ್ನ ಈ ಸಿನಿಮಾಗಾಗಿ ಒಂದೆಡೆ ಸೇರಿಸಿರುವುದು ರೆಡ್ ಜೈಂಟ್ ಮೂವೀಸ್‌ನ ಪಾಲಿಗೆ ನಿಜಕ್ಕೂ ಕನಸು ನನಸಾದ ಕ್ಷಣ. 47 ವರ್ಷಗಳ ನಂತರ ಈ ಪುನರ್ಮಿಲನಕ್ಕೆ ವೇದಿಕೆ ಕಲ್ಪಿಸುತ್ತಿರುವುದಕ್ಕಾಗಿ ನಮಗೆ ಹೆಮ್ಮೆ, ಕೃತಜ್ಞತೆ ಮತ್ತು ಅಪಾರ ಉತ್ಸಾಹವಿದೆ. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಐತಿಹಾಸಿಕ ಮತ್ತು ಭಾವುಕ ಕ್ಷಣವಾಗಿದೆ. ನಾವು ಈ ಪ್ರಯಾಣವನ್ನ ಜವಾಬ್ದಾರಿಯಿಂದ ಪ್ರಾರಂಭಿಸುತ್ತಿದ್ದೇವೆ. ಅವರ ಪರಂಪರೆಯನ್ನು ಅತ್ಯಂತ ಶಕ್ತಿಯುತವಾಗಿ ಬಿಂಬಿಸುವ ಸಿನಿಮಾ ಅನುಭವವನ್ನ ನೀಡಲು ನಾವು ಬದ್ಧರಾಗಿದ್ದೇವೆ” ಎಂದರು.
ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಬೃಹತ್ ಪ್ರಮಾಣದ ಚಿತ್ರಗಳಿಗೆ ತಮ್ಮ ಅದ್ಭುತ ಸಂಗೀತದ ಮೂಲಕ ಜೀವ ತುಂಬುವ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.





