ಫ್ಯಾಷನ್‌, ಮಾಡೆಲಿಂಗ್‌ ಮತ್ತು ಅಭಿನಯಕ್ಕೆ ಮಹಿಳೆಯರ ವಯಸ್ಸು 20 ರಿಂದ 30 ಪರ್ಫೆಕ್ಟ್ ಎಂದು ಹೇಳಲಾಗುತ್ತಿತ್ತು. ಆದರೆ ಈಗ 35 ದಾಟಿದ ಬಳಿಕ ಮಹಿಳೆಯರು ಮಾಡೆಲ್‌ ಅಥವಾ ನಟಿಯರಿಗಿಂತ ತಮ್ಮನ್ನು ತಾವು ಕಡಿಮೆ ಎಂದು ಭಾವಿಸುವುದಿಲ್ಲ. ಅವಕಾಶ ಸಿಕ್ಕರೆ ಬೆಳ್ಳಿ ಪರದೆಯಿಂದ ರಾಂಪ್‌ ಶೋ, ಕ್ಯಾಟ್‌ವಾಕ್‌ ಮತ್ತು ಮಾಡೆಲಿಂಗ್‌ನಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ನಲ್ಲೂ ಸಾಕಷ್ಟು ಎಂಜಾಯ್‌ ಮಾಡುತ್ತಿದ್ದಾರೆ.

ಈ ಬದಲಾಣೆಯ ಪರಿಣಾಮ ಬಾಲಿವುಡ್‌ಗಷ್ಟೇ ಸೀಮಿತಗೊಂಡಿಲ್ಲ. ದೊಡ್ಡ ಹಾಗೂ ಚಿಕ್ಕ ನಗರಗಳ ಮಹಿಳೆಯರು ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಈ ಕಾರಣದಿಂದ ದೇಶದಲ್ಲಿ ಬ್ಯೂಟಿ ಮತ್ತು ಫ್ಯಾಷನೆಬಲ್ ಡ್ರೆಸ್‌ ಮತ್ತು ವೆಲ್‌ನೆಸ್‌ನ ಬಿಸ್‌ನೆಸ್‌ ಬಹಳ ಜೋರಾಗಿ ನಡೆಯುತ್ತಿದೆ.

ಇದು ಹೇಮಾಮಾಲಿನಿ, ಮಾಧುರಿದೀಕ್ಷಿತ್‌, ಮಲೈಕಾ ಅರೋರಾ, ಕಾಜೋಲ್‌, ಜೂಹಿ ಚಾವ್ಲಾ ಮುಂತಾದವರಿಗಷ್ಟೇ ಸೀಮಿತವಾಗುಳಿದಿಲ್ಲ. ಚಿಕ್ಕಪುಟ್ಟ ನಗರಗಳ ಮಹಿಳೆಯರು ಕೂಡ ಎರಡನೇ ಇನ್ನಿಂಗ್ಸ್ ನಲ್ಲೂ ಮೊದಲಿಗಿಂತಲೂ ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫಿಟ್‌ನೆಸ್‌ ಹಾಗೂ ಸೌಂದರ್ಯದ ಬಾಬತ್ತಿನಲ್ಲೂ ಅವರು ಮೊದಲಿಗಿಂತಲೂ ಹೆಚ್ಚು ಸುಂದರ ಮತ್ತು ಗ್ಲಾಮರ್‌ ಆಗಿ ಕಂಡುಬರುತ್ತಿದ್ದಾರೆ. ಇದೇ ಕಾರಣವೆಂಬಂತೆ ಚಿಕ್ಕಪುಟ್ಟ ನಗರಗಳಲ್ಲೂ ಕೂಡ `ಶ್ರೀಮತಿ’ಯರಿಗೆ ಅನೇಕ ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಮದುವೆಯ ಬಳಿಕ ಮಹಿಳೆಯರ ಕ್ರಿಯಾಶೀಲತೆ ಮೊದಲು ಒಂದಿಷ್ಟು ಸಾಮಾಜಿಕ ಕೆಲಸ ಕಾರ್ಯಗಳಿಗಷ್ಟೇ ಸೀಮಿತವಾಗಿರುತ್ತಿತ್ತು. ಈಗ ಅವರ ಗಮನ ಫ್ಯಾಷನ್‌, ಬ್ಯೂಟಿ, ರಾಂಪ್‌ ಶೋ ಮುಂತಾದವುಗಳ ಕಡೆಯೂ ಹೋಗುತ್ತಿದೆ. ಅದರಲ್ಲಿ ಅವರು ತಮ್ಮ ಸೌಂದರ್ಯ ಮತ್ತು ಫಿಟ್‌ನೆಸ್‌ನ ಮಿಂಚು ಹರಿಸುತ್ತಿದ್ದಾರೆ.

ಈ ಕುರಿತಂತೆ ದೊರೆತ ಮಾಹಿತಿಗಳಿಂದ ತಿಳಿದುಬರುವುದೇನೆಂದರೆ, ಮದುವೆಯ ಬಳಿಕ ಕೆರಿಯರ್‌, ಕುಟುಂಬ, ಮಕ್ಕಳ ಒತ್ತಡ ಬಹಳಷ್ಟು ಸ್ವಾತಂತ್ರ್ಯದಲ್ಲಿ ಅಡೆತಡೆಯುಂಟು ಮಾಡುತ್ತವೆ. 35ನೇ ವರ್ಷದ ಬಳಿಕ ಎಲ್ಲ ತಮ್ಮ ತಮ್ಮ ಲೆಕ್ಕಾಚಾರದಲ್ಲಿ ನಡೆಯತೊಡಗಿದಾಗ ಒಂದು ರೀತಿಯ ಮಾನಸಿಕ ನಿರಾಳತೆಯ ಭಾವನೆ ಮೂಡುತ್ತದೆ. ಇದೇ ಕಾರಣವೆಂಬಂತೆ ಮಹಿಳೆಯರು ಮದುವೆಗೂ ಮುಂಚಿನ ದಿನಗಳ ಹಾಗೆಯೇ ಎರಡನೇ ಇನ್ನಿಂಗ್ಸ್ ನಲ್ಲೂ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.

ರಾಂಪ್‌ ಶೋ ಮತ್ತು ಬ್ಯೂಟಿ ಶೋಗಳಿಗಷ್ಟೇ ಅವರ ಸಕ್ರಿಯತೆ ಸೀಮಿತವಾಗಿಲ್ಲ. ಈಚೆಗೆ ಹೋಟೆಲ್‌ಗಳಲ್ಲಿ ನಡೆಯುತ್ತಿರುವ ಪಾರ್ಟಿಗಳ ಮೇಲೆ ಗಮನಹರಿಸಿದರೆ, ಈ ತೆರನಾದ ಮಹಿಳೆಯರೇ ಇಂತಹ ಪಾರ್ಟಿಗಳನ್ನು ಆಯೋಜಿಸುತ್ತಿರುವುದು ತಿಳಿದುಬರುತ್ತದೆ. ಅವರೇ ಈ ತೆರನಾದ ಪಾರ್ಟಿಗಳ ಭಾಗವಾಗಿರುತ್ತಾರೆ. ಮೊದಲು ಕಿಟಿಪಾರ್ಟಿಗಳು ತಂಬೋಲಾದಂತಹ ಆಟಗಳಿಗಷ್ಟೇ ಸೀಮಿತವಾಗಿರುತ್ತಿದ್ದವು. ಈಗ ಕಿಟಿಪಾರ್ಟಿಗಳು ಗ್ಲಾಮರಸ್‌ ಆಗಿವೆ. ಇದರಲ್ಲಿ ಥೀಮ್ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಪಾರ್ಟಿಯ ಥೀಮ್ ಹೇಗಿರುತ್ತದೆ ಎಂದರೆ, ಅದರಲ್ಲಿ ಮಹಿಳೆಯರು ತಮ್ಮ ಫಿಟ್‌ನೆಸ್‌ ಮತ್ತು ಬ್ಯೂಟಿಯನ್ನು ಬಿಂಬಿಸುವಂತಿರುತ್ತವೆ. ಥೀಮ್ ಪಾರ್ಟಿಯಲ್ಲಿ ಪೂಲ್‌ ಪಾರ್ಟಿ ಕೂಡ ಇರುತ್ತದೆ. ಅದರಲ್ಲಿ ಮಹಿಳೆಯರು ಈಜುಡುಗೆ ಧರಿಸಿ ಬರಬೇಕಾಗುತ್ತದೆ. ಇನ್ನೊಮ್ಮೆ ಸ್ಕರ್ಟ್‌ ಧರಿಸಿ ಬರಬೇಕಾಗಿರುತ್ತದೆ. ಥೀಮ್ ಪಾರ್ಟಿಯ ವಿಜೇತರನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂದರೆ, ಯಾರ ಸ್ಕರ್ಟ್‌ ಎಷ್ಟು ಮೇಲೆ ಇದೆ ಹಾಗೂ ಮಹಿಳೆ ಎಂತಹ ಸ್ವಿಮ್ ವೇರ್‌ ಧರಿಸಿದ್ದಳು ಎಂಬುದನ್ನು ಗಮನಿಸಲಾಗುತ್ತದೆ.

ಫಿಟ್‌ನೆಸ್‌ನ ಚಮತ್ಕಾರ

ಮಹಿಳೆಯರಲ್ಲಿ ಈ ಬದಲಾವಣೆ ಫಿಟ್‌ನೆಸ್‌ನಿಂದಾಗಿ ಬಂದಿದೆ. ಫಿಟ್‌ನೆಸ್‌ನ ಮಾನದಂಡವನ್ನು ಅವಲೋಕಿಸಿದಾಗ, ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಫಿಟ್‌ನೆಸ್‌ ಬಗ್ಗೆ ಗಮನಕೊಡುತ್ತಾರೆ. ಜಿಮ್ ನಿಂದ ಹಿಡಿದು ಬ್ಯೂಟಿ ಪಾರ್ಲರ್‌ತನಕ, ಸ್ಕಿನ್‌ ಸ್ಪೆಷಲಿಸ್ಟ್ ರಿಂದ ಹಿಡಿದು ಪ್ಲಾಸ್ಟಿಕ್‌ ಸರ್ಜನ್ನರ ತನಕ ಈ ಮಹಿಳೆಯರು ಧಾವಿಸುತ್ತಿದ್ದಾರೆ. ಅವರ ಇದೇ ಯೋಚನೆಯ ಕಾರಣದಿಂದಾಗಿ ಬ್ಯೂಟಿ ಹಾಗೂ ಫಿಟ್‌ನೆಸ್‌ ಕಾಪಾಡಲು ನೆರವಾಗುವ ಬಿಸ್‌ನೆಸ್‌ಗಳಲ್ಲಿ ಭಾರಿ ಹೆಚ್ಚಳ ಉಂಟಾಗಿದೆ. ಯಾವುದೇ ಮಹಿಳೆಯ ದೇಹದಲ್ಲಿ ಒಂದಿಷ್ಟು ಬೊಜ್ಜು ಹೆಚ್ಚಾದರೂ ಅವಳ ತೊಂದರೆ ಹೆಚ್ಚಾಗುತ್ತದೆ. ಅವಳು ತನ್ನ ತೂಕವನ್ನು ಹೇಗಾದರೂ ಮಾಡಿ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಮಾಧುರಿ ದೀಕ್ಷಿತ್‌, ಮಲೈಕಾ ಅರೋರಾ, ಕಾಜೋಲ್, ಜೂಹಿ ಚಾವ್ಲಾರಂತಹ ಸೆಲೆಬ್ರೆಟಿ ಮಹಿಳೆಯರು ಇವರ ರೋಲ್‌ ಮಾಡೆಲ್‌ ಆಗಿದ್ದಾರೆ. ಅವರನ್ನು ನೋಡಿ ತಮ್ಮನ್ನು ಅವರಂತೆಯೇ ರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ.

ಮದುವೆಯ 20 ವರ್ಷದ ಬಳಿಕ `ಮಿಸೆಸ್‌ ಯೂನಿರ್ಸ್‌’ತನಕದ ಪ್ರವಾಸ ಗೈದ ರಶ್ಮಿ ಸಚದೇವ್‌ ಮೊದಲ ನಾನ್‌ ಸೆಲೆಬ್ರಿಟಿ ಆದರು. ಅವರಿಗೆ ಚಲನ ಚಿತ್ರೋತ್ಸವದಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ವಾಕ್‌ ಮಾಡುವ ಅವಕಾಶ ದೊರೆಯಿತು.

ಈ ಕುರಿತಂತೆ ರಶ್ಮಿ ಸಚದೇವ್ ಹೀಗೆ ಹೇಳುತ್ತಾರೆ, “ನಾವೊಮ್ಮೆ ಹಿಂತಿರುಗಿ ನೋಡಿದಾಗ ನಾವು ಮೊದಲಿಗಿಂತ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದೇವೆ ಎಂಬ ಅನುಭೂತಿ ಉಂಟಾಗುತ್ತದೆ. ಈ ವ್ಯತ್ಯಾಸ ನಮ್ಮೊಳಗೆ ಬಂದಿರುವ ಆತ್ಮವಿಶ್ವಾಸದ ಕಾರಣದಿಂದಲೂ ಅನುಭವಕ್ಕೆ ಬರುತ್ತದೆ. ಈಗ ನಾವು ಯಾವುದೇ ತೆರನಾದ ಡಿಸೈನರ್‌ ಡ್ರೆಸ್‌ ಧರಿಸಬಹುದಾಗಿದೆ. ಈಗ ನಾವು ಫಿಟ್‌ನೆಸ್‌ನಲ್ಲಿ ಯಾವುದೇ ಮಾಡೆಲ್‌ಗಿಂತ ಕಡಿಮೆ ಏನಿಲ್ಲ. ನಮ್ಮ ಮತ್ತು ಅವರ ಸೈಜ್‌ನಲ್ಲಿ ಯಾವುದೇ ವ್ಯತ್ಯಾಸ ಎನಿಸುವುದಿಲ್ಲ.

“ನಾನು ಭಾರತದ ಬೇರೆ ಬೇರೆ ಭಾಗಗಳಲ್ಲಿ ಸಂಚರಿಸಿ, ಅಲ್ಲಿನ ಮಹಿಳೆಯರ ಜೊತೆ ಚರ್ಚಿಸಿದಾಗ, ಅವರ ವಿಚಾರಗಳನ್ನು ಕೇಳಿದಾಗ ಬದಲಾವಣೆ ಮನೆ ಮನೆಗೂ ತಲುಪಿರುವುದು ಅರಿವಿಗೆ ಬಂತು. ಅವಳು ರಾಂಪ್‌ ಮೇಲೆ ಇಲ್ಲದೆ ಇರಬಹುದು. ಆದರೆ ಮನೆಯಲ್ಲಿ ಈಗ ಮೊದಲಿಗಿಂತ ಹೆಚ್ಚು ಅಂದವಾಗಿ ಫಿಟ್‌ ಆಗಿ ಕಾಣಿಸುತ್ತಿದ್ದಾಳೆ. ಇದಕ್ಕೆ ಮುಖ್ಯ ಕಾರಣ ಮೀಡಿಯಾ, ಅದರಲ್ಲೂ ಮಹಿಳೆಯರು ಓದುವ ಪತ್ರಿಕೆಗಳು ಅವರಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿವೆ. ಮನೆಮನೆಗೆ ತಲುಪಿದ ಜಾಗರೂಕತೆಯು ಪ್ರತಿಯೊಬ್ಬ ಮಹಿಳೆಯನ್ನು ಹೆಚ್ಚು ಆಕರ್ಷಕಗೊಳಿಸಿದೆ. ಆ ಕಾರಣದಿಂದಾಗಿ ಗಾರ್ಮೆಂಟ್‌ ಉದ್ಯಮದಲ್ಲೂ ಸಾಕಷ್ಟು ಬದಲಾವಣೆ ಉಂಟಾಗಿದೆ.”

ಸೆಕೆಂಡ್‌ ಇನ್ನಿಂಗ್ಸ್ ಆಕರ್ಷಣೆ

ಮದುವೆಯ ಬಳಿಕ ಸೌಂದರ್ಯ ಸ್ಪರ್ಧೆಗಳಲ್ಲಿ ವಿಜೇತರಾಗಿ ಮಿಂಚಿದ ರಿಚಾ ಶರ್ಮ ಸಿನಿಮಾಗಳಲ್ಲೂ ನಟಿಸಿದ್ದಾರೆ, ಮದುವೆಯ ಅನೇಕ ವರ್ಷಗಳ ಬಳಿಕ `ಮಿಸೆಸ್‌ ಇಂಡಿಯಾ’ದಲ್ಲಿ ಪಾಲ್ಗೊಂಡು ಅದರಲ್ಲಿ ಗೆದ್ದ ಬಳಿಕ ಮಾಡೆಲಿಂಗ್‌ ಮತ್ತು ಆ್ಯಕ್ಟಿಂಗ್‌ ಶುರು ಮಾಡಿದರು. ಸನ್ನಿ ಲಿಯೋನ್‌ ಜೊತೆ `ತೇರಾ ಇಂತಜಾರ್‌’ ಸಿನಿಮಾದಲ್ಲಿ ನಟಿಸಿದರು.

ಈ ಕುರಿತಂತೆ ಅವರು ಹೀಗೆ ಹೇಳುತ್ತಾರೆ, “ಮೊದಲು ಮದುವೆಯ ಬಳಿಕದ ಕೆರಿಯರ್‌ನಲ್ಲಿ ಮಾಡೆಲಿಂಗ್‌ ಮತ್ತು ಆ್ಯಕ್ಟಿಂಗ್‌ನ ಆಪ್ಶನ್‌ ಇರುತ್ತಲೇ ಇರಲಿಲ್ಲ. ಈಗ ಈ ಆಪ್ಶನ್‌ ತೆರೆದುಕೊಳ್ಳುತ್ತಿದೆ. ನಾನು `ಮಿಸೆಸ್‌ ಇಂಡಿಯಾ’ದಲ್ಲಿ ಪಾಲ್ಗೊಂಡಾಗ ನನಗೆ ಮುಂದೆ ಆ್ಯಕ್ಟಿಂಗ್‌ ಹಾಗೂ ಮಾಡೆಲಿಂಗ್‌ನಲ್ಲಿ ಅವಕಾಶಗಳು ಸಿಗಬಹುದು ಎಂದು ಯೋಚಿಸಿಯೇ ಇರಲಿಲ್ಲ. ಆದರೆ ಕ್ರಮೇಣ ಅವಕಾಶಗಳು ದೊರಕುತ್ತಾ ಹೋದವು. ನನಗೂ ಮದುವೆ ಹಾಗೂ ಮಕ್ಕಳಾದ ಬಳಿಕ ನನ್ನ ಕೆರಿಯರ್‌ನ ಎರಡನೇ ಇನ್ನಿಂಗ್‌ ಬಹಳ ಹಿತಕರ ಎನ್ನಿಸುತ್ತಿದೆ. ಇದರಲ್ಲಿ ಕುಟುಂಬದವರ ಪಾತ್ರ ಬಹಳ ಮಹತ್ವದ್ದು.”`

ಮಿಸೆಸ್‌ ಇಂಡಿಯಾ’ದಲ್ಲಿ ಚಾತುರ್ಯ ಮೆರೆದ ಅರ್ಚನಾ ಪ್ರಸಾದ್‌ ಹೀಗೆ ಹೇಳುತ್ತಾರೆ, “ನಿಮಗೆ ಒಂದು ವಿಷಯ ಕೇಳಿ ಆಶ್ಚರ್ಯವಾಗಬಹುದು. ಮಾಡೆಲಿಂಗ್‌ ಹಾಗೂ ಆ್ಯಕ್ಟಿಂಗ್‌ನಲ್ಲಿ ಮಹಿಳೆಯೊಬ್ಬಳ ಲೈಫ್‌ ಯಾವ ವಯಸ್ಸಿನಲ್ಲಿ ಕೊನೆಗೊಳ್ಳುತ್ತದೆಂದು ಹೇಳುತ್ತಾರೋ ಆ ವಯಸ್ಸಿನಲ್ಲಿ ನನ್ನ ಲೈಫ್‌ ಶುರುವಾಯಿತು! ಮದುವೆ ಹಾಗೂ 2 ಮಕ್ಕಳಾದ ಬಳಿಕ ಮಾಡೆಲಿಂಗ್‌ನಲ್ಲಿ ನನ್ನ ಕೆರಿಯರ್‌ ಶುರುವಾಯಿತು.

“ನಾನು ಮಿಸೆಸ್‌ ಇಂಡಿಯಾದಲ್ಲಿ ಪಾಲ್ಗೊಂಡಾಗ ನನ್ನ ಮಗ 15 ವರ್ಷದವನಾಗಿದ್ದ, ಮಗಳಿಗೆ 11 ವರ್ಷವಾಗಿತ್ತು. ನನ್ನ ಬಗ್ಗೆ ಕೇಳಿದವರೆಲ್ಲ ನನ್ನ ಬಗ್ಗೆ ತಮಾಷೆ ಮಾಡುತ್ತಿದ್ದರು. ನನ್ನ ಪತಿ ಸರ್ಕಾರಿ ಅಧಿಕಾರಿ. ಅವರ ಗೌರವವನ್ನು ಗಮನದಲ್ಲಿಟ್ಟುಕೊಂಡು ನಾನು ಮುಂದೆ ಹೆಜ್ಜೆ ಇಡಬೇಕಾಗಿತ್ತು. ನಾನು ಆ ಸ್ಪರ್ಧೆಯಲ್ಲಿ ಗೆದ್ದಾಗ ಜನ ನನ್ನ ಬಗ್ಗೆ ಗೇಲಿ ಮಾಡುವುದನ್ನು ನಿಲ್ಲಿಸಿದರು. ನಾವು ಗೆಲುವು ಸಾಧಿಸಿದಾಗ ನಮಗೆ ಹಿಂದಿನ ಸಂಘರ್ಷ ಮರೆತು ಹೋಗುತ್ತದೆ ಎಂಬ ವಿಷಯ ಸತ್ಯ. ಆದರೆ ನನಗೆ ನನ್ನ ಪಯಣದ ಬಗ್ಗೆ ಬಹಳ ಖುಷಿಯಾಗುತ್ತದೆ. ಆ ಬಳಿಕ ನನಗೆ ಮಾಡೆಲಿಂಗ್‌ನಲ್ಲಿ ಬಹಳಷ್ಟು ಆಫರ್‌ಗಳು ಸಿಗತೊಡಗಿದವು. ಧಾರಾವಾಹಿ ಮತ್ತು ಬ್ಯೂಟಿ ಫಿಲಂಗಳಲ್ಲೂ ನಟಿಸಿದೆ.”

ಅರ್ಚನಾ ಪ್ರಸಾದ್‌ ಇಂದೋರ್‌ನಲ್ಲಿ ತಮ್ಮದೇ ಆದ ಬ್ಯೂಟಿ ಸೆಲೂನ್‌ ನಡೆಸುತ್ತಾರೆ. ಈ ಕುರಿತಂತೆ ಅವರು ಹೀಗೆ ಹೇಳುತ್ತಾರೆ, “ನಾನು ಹೆಮ್ಮೆಯಿಂದ ಹೇಳುವ ಸಂಗತಿಯೇನೆಂದರೆ, ನಾನು ಏನನ್ನು ಪಡೆದುಕೊಳ್ಳಬೇಕೆಂದು ಬಯಸಿದ್ದೇನೊ ಅದನ್ನೆಲ್ಲ ಪಡೆದುಕೊಂಡುಬಿಟ್ಟೆ. ಅದರ ಅಪೇಕ್ಷೆ ಪ್ರತಿಯೊಬ್ಬ ಯುವತಿ ಹಾಗೂ ಗೃಹಿಣಿಗೆ ಇರುತ್ತದೆ.

“ಇಂದಿನ ಯುಗದ ಸೆಕೆಂಡ್‌ ಇನ್ನಿಂಗ್ಸ್ ನ ಮಹಿಳೆಯರು ಕನಸು ಕಾಣಲು ವಯಸ್ಸಿನ ಯಾವುದೇ ಮಿತಿ ಇಲ್ಲ, ಅದನ್ನು ಈಡೇರಿಸಿಕೊಳ್ಳುವ ಧೈರ್ಯ ಇರಬೇಕು ಎಂದು ಹೇಳುತ್ತಾರೆ. ಈಗ ಏನೆಲ್ಲ ಸಾಧ್ಯ. ಬದಲಾವಣೆಯ ಪರಿಣಾಮ ಬಹಳ ಉತ್ತಮವಾಗಿದೆ. ಅದು ಆತ್ಮವಿಶ್ವಾಸವನ್ನು ಭರ್ತಿ ಮಾಡುತ್ತದೆ. ಮೊದಲು ಮದುವೆಯಾಗುತ್ತಿದ್ದಂತೆ ನಾಯಕಿಯೊಬ್ಬಳ ಕೆರಿಯರ್‌ ಮುಗಿದೇ ಹೋಗುತ್ತಿತ್ತು. ಈಗ ಮದುವೆ ಅಷ್ಟೇ ಏಕೆ ಮಕ್ಕಳಾದ ಬಳಿಕ ಟೀನ್‌ ಏಜರ್‌ಳ ಹಾಗೆ ಬೇರೆಯವರಿಗೆ ಇಷ್ಟವಾಗುತ್ತಾಳೆ.”

ಫಿಟ್‌ನೆಸ್‌ನಿಂದ ಸರ್ಜರಿತನಕ

ಮೊದಲು ಹಲವು ರೀತಿಯ ತೊಂದರೆಗಳಿಂದಾಗಿ ಮಹಿಳೆಯರು ಫ್ಯಾಷನ್‌ನ ಕೆರಿಯರ್‌ನಲ್ಲಿ ಬರಲು ಹಿಂದೇಟು ಹಾಕುತ್ತಿದ್ದರು. ಈಗ ಫಿಟ್‌ನೆಸ್‌ನಿಂದ ಹಿಡಿದು ಸರ್ಜರಿತನಕ ಏನೆಲ್ಲ ಉಪಾಯಗಳಿವೆ ಎಂದರೆ, ನಮಗೆ ಬೇಕಾದ ರೀತಿಯಲ್ಲಿ ಸೌಂದರ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈಗ ದೇಹದ ಯಾವುದೇ ಭಾಗದಲ್ಲಿ ಜಮೆಗೊಂಡ ಫ್ಯಾಟ್‌ನ್ನು ನಿವಾರಿಸಬಹುದಾಗಿದೆ. ಅಂತಹ ಭಾಗಗಳೆಂದರೆ ಹಿಪ್ಸ್, ಬ್ರೆಸ್ಟ್, ವೆಯ್ಸ್ಟ್ ಮತ್ತು ಕೈಗಳ ಬಳಿ ಜಮೆಗೊಂಡ ಫ್ಯಾಟ್‌ ದೇಹದ ಅಂದಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಅಷ್ಟೇ ಅಲ್ಲ, ಕೆಲವು ಅಂಗಗಳ ಹಿಡಿತ ತಪ್ಪುತ್ತದೆ.

ಈಗ ಮಹಿಳೆಯರು ಮದುವೆಯಾದ ಬಳಿಕ ತಾಯಿಯಾದಾಗ ಮಗುವಿಗೆ ಸಂಪೂರ್ಣವಾಗಿ ಸ್ತನ್ಯಪಾನ ಮಾಡಿಸುತ್ತಾರೆ. ಆದರೆ ಅದರ ಪರಿಣಾಮ ದೇಹದ ಮೇಲೆ ಗೋಚರಿಸದಂತೆ ನೋಡುತ್ತಾರೆ. ಅಷ್ಟೇ ಅಲ್ಲ, ಮದುವೆಯ ಬಳಿಕ ಸ್ತನ ಹಾಗೂ ಸ್ತನದ ಭಾಗದಲ್ಲಿ ಕಂಡುಬರುವ ಸ್ಟ್ರೆಚ್‌ ಮಾರ್ಕ್‌ಗಳನ್ನು ನಿವಾರಿಸಲು ಪ್ರಯತ್ನಶೀಲರಾಗಿದ್ದಾರೆ. ಗರ್ಭಾವಸ್ಥೆಯಲ್ಲೂ ಎಂತಹ ಕೆಲವು ಉಪಾಯಗಳನ್ನು ಅನುಸರಿಸುತ್ತಿದ್ದಾರೆಂದರೆ, ಬ್ರೆಸ್ಟ್, ವೆಯ್ಸ್ಟ್ ನ ಭಾಗದಲ್ಲಿ ಕಂಡು ಬರುವ ಸ್ಟ್ರೆಚ್‌ ಮಾರ್ಕ್‌ಗಳನ್ನು ಈಗ ನಿವಾರಿಸಬಹುದಾಗಿದೆ.

ಹೆಚ್ಚಿನ ಮಹಿಳೆಯರಿಗೆ ಸೆಕೆಂಡ್‌ ಇನ್ನಿಂಗ್ಸ್ ನಲ್ಲೂ ಹಿಪ್ಸ್, ಬ್ರೆಸ್ಟ್, ವೆಯ್ಸ್ಟ್, ಅಂಡರ್‌ ಆರ್ಮ್ಸ್, ಲಿಪ್ಸ್ ಮುಂತಾದ ಭಾಗಗಳನ್ನು ಸರಿಪಡಿಸಲು ಈಗ ವೈದ್ಯರ ಬಳಿ ಹೋಗಬೇಕಾದ ಅವಶ್ಯಕತೆಯಿಲ್ಲ. ಬಗೆಬಗೆಯ ವ್ಯಾಯಾಮಗಳಿಂದಲೇ ಅವು ಫಿಟ್‌ ಆಗುತ್ತವೆ.

ಫಿಗರ್‌ನ ಚಮತ್ಕಾರ

ಫ್ಯಾಟ್‌ ಒಂದೇ ಅಲ್ಲ, ಒಂದು ವೇಳೆ ನಿಮ್ಮ ಬ್ರೆಸ್ಟ್, ಹಿಪ್ಸ್ ಮತ್ತು ವೆಯ್ಸ್ಟ್ ಸರಿಯಾದ ಅನುಪಾತದಲ್ಲಿ ಇರದೇ ಇದ್ದರೆ ಅದರ ಆಕಾರವನ್ನು ಸರಿಪಡಿಸಬಹುದಾಗಿದೆ. ಚಿಕ್ಕ ಗಾತ್ರದ ಬ್ರೆಸ್ಟ್ ನ್ನು ಮತ್ತಷ್ಟು ದೊಡ್ಡದಾಗಿ ಕಾಣುವಂತೆ ಮಾಡಬಹುದಾಗಿದೆ. ಅದರಿಂದಾಗಿ ನೀವು ರಾಂಪ್‌ ಹಾಗೂ ಮಾಡೆಲಿಂಗ್‌ನಲ್ಲಿ ನಿಮಗೆ ಬೇಕಾದ ಡ್ರೆಸ್‌ನ್ನು ಸುಲಭವಾಗಿ ಧರಿಸಬಹುದು. ಅಂಡರ್‌ ಆರ್ಮ್ಸ್ ಬಗ್ಗೆ ಹಿಂಜರಿಕೆ ಇದ್ದೇ ಇರುತ್ತದೆ. ಈಗ ಅದರ ಬಗ್ಗೆ ಕೂಡ ಚಿಂತಿಸಬೇಕಾದ ಅಗತ್ಯವಿಲ್ಲ. ಅಂಡರ್‌ ಆರ್ಮ್ಸ್ ನ ಕೆಳಭಾಗದಲ್ಲಿ ಜಮೆಗೊಂಡ ಫ್ಯಾಟ್‌ನ್ನು ಕೂಡ ಈಗ ಕಡಿಮೆಗೊಳಿಸಬಹುದಾಗಿದೆ. ಅಲ್ಲಿ ಕಂಡುಬರುವ ಕಪ್ಪು ಗುರುತನ್ನು ಸಹ ನಿವಾರಿಸಿ ಶಾರ್ಟ್‌ ಡ್ರೆಸ್‌ನ್ನಷ್ಟೇ ಅಲ್ಲ, ಗೃಹಿಣಿಯರು ಈಗ ಈಜುಡುಗೆಯನ್ನು ಅಷ್ಟೇ ಆತ್ಮವಿಶ್ವಾಸದಿಂದ ಧರಿಸುತ್ತಿದ್ದಾರೆ. ಮೊದಲು ಹೋಟೆಲ್‌‌ಗಳಲ್ಲಿ ಎಲ್ಲೋ ಒಂದೊಂದು ಕಡೆ ಸ್ವಿಮಿಂಗ್‌ ಪೂಲ್‌ಗಳಿರುತ್ತಿದ್ದವು. ಈಗ ಪ್ರತಿಯೊಂದು ದೊಡ್ಡ ದೊಡ್ಡ ಹೋಟೆಲ್‌ಗಳೂ ಸ್ವಿಮಿಂಗ್‌ ಪೂಲ್‌‌ನ ಆಕರ್ಷಣೆ ಹೊಂದುತ್ತಿವೆ. ಇಂತಹ ಹೋಟೆಲ್‌ಗಳಿಗೆ ಈಗ ಮಹಿಳೆಯರು ಹೆಚ್ಚಾಗಿ ಭೇಟಿ ಕೊಟ್ಟು ಈಜಾಡುತ್ತಿದ್ದಾರೆ. ಇದರಿಂದ ಮಹಿಳೆಯರು ತಮ್ಮ ಫಿಗರ್‌ ಬಗ್ಗೆ ಅದೆಷ್ಟು ಕಾಳಜಿ ಹೊಂದಿದ್ದಾರೆ ಎಂಬುದು ಗೊತ್ತಾಗುತ್ತದೆ.

ತಾಯಿಯಾಗುವುದು ಕೆರಿಯರ್‌ನ ಅಂತ್ಯವಲ್ಲ

ದಿನವಿಡೀ ತಮ್ಮ ಕ್ಲಿನಿಕ್‌ನಲ್ಲಿ ರೋಗಿಗಳ ನೋವಿಗೆ ಸ್ಪಂದಿಸುವ ಡಾ. ಮೇಘನಾ ಹೀಗೆ ಹೇಳುತ್ತಾರೆ, “ನನ್ನ ಮದುವೆ 30ನೇ ವಯಸ್ಸಿಗೆ ಆಯಿತು. ಅದೇ ಅವಧಿಯಲ್ಲಿ ನಾನು ನನ್ನ ಕೆರಿಯರ್‌ ಶುರು ಮಾಡಿದ್ದೆ. ಆ ಸಮಯ ನನಗೆ ಬಹಳ ಸವಾಲಿನಿಂದ ಕೂಡಿತ್ತು. ಏಕೆಂದರೆ ಕುಟುಂಬ ಹಾಗೂ ಕೆರಿಯರ್‌ನಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ನನಗೆ ಅತ್ಯವಶ್ಯವಾಗಿತ್ತು. ಆ ಬಳಿಕ ಮಗಳ ಜನನದಿಂದಾಗಿ ನನ್ನ ದಿನಚರಿ ಅಸ್ತವ್ಯಸ್ತವಾಯಿತು. ನಾನೂ ಕೂಡ ಸಾಮಾನ್ಯ ಮಹಿಳೆಯರ ಹಾಗೆ ಫಿಟ್‌ನೆಸ್‌ ಬಗ್ಗೆ ನಿರ್ಲಕ್ಷ್ಯ ಮಾಡತೊಡಗಿದೆ.

“ಆದರೆ ಬಹುಬೇಗನೇ ನನ್ನನ್ನು ನಾನು ಸುಧಾರಿಸಿಕೊಂಡೆ. ನಿಯಮಿತ ವ್ಯಾಯಾಮ ಹಾಗೂ ಧ್ಯಾನ ಮಾಡತೊಡಗಿದೆ. ಅದರ ಪರಿಣಾಮ ನನಗೆ ನನ್ನ ಕೆರಿಯರ್‌ನ ಮೇಲೆ ಗೋಚರಿಸತೊಡಗಿತು. ನನ್ನ ಬಳಿ ಎಂತೆಂತಹ ರೋಗಿಗಳು ಬರುತ್ತಾರೆಂದರೆ ಅವರು ನನಗಿಂತ 10-12 ವರ್ಷ ಚಿಕ್ಕವರಿರುತ್ತಾರೆ. ಆದರೆ ಫಿಟ್‌ನೆಸ್‌ನಿಂದಾಗಿ ನಾನೇ ಅವರಿಗಿಂತ ಚಿಕ್ಕವಳಂತೆ ಗೋಚರಿಸುತ್ತೇನೆ.

“ತಾಯಿಯಾದ ಬಳಿಕ ನನ್ನ ವಯಸ್ಸು 40+ ಆಯಿತು ಎಂದು ಒಮ್ಮೆ ಸಹ ನನ್ನ ಅನುಭವಕ್ಕೆ ಬರಲಿಲ್ಲ. ಏಕೆಂದರೆ ನನ್ನನ್ನು ನಾನು ಈಗಲೂ ಪ್ರೀತಿಸುತ್ತೇನೆ. ಈಗ ಸೆಕೆಂಡ್‌ ಇನ್ನಿಂಗ್ಸ್ ನಲ್ಲೂ ಅದೇ ಆತ್ಮವಿಶ್ವಾಸ ಹಾಗೂ ಸ್ಛೂರ್ತಿ ನನ್ನಲ್ಲಿ ಚಿಮ್ಮುತ್ತಿರುತ್ತದೆ. ಮಗಳ ಆರೈಕೆಯಲ್ಲಿ ನನ್ನನ್ನು ನಾನು ನಿರ್ಲಕ್ಷಿಸಲಿಲ್ಲ. ಮದುವೆ ಹಾಗೂ ಮಗು ಆದ ಬಳಿಕ ಕೆರಿಯರ್‌ ಹಾಗೂ ಗ್ಲಾಮರ್‌ ಕೊನೆಗೊಳ್ಳುತ್ತದೆ ಎಂಬ ಮಾತು ಸುಳ್ಳು!”

ಇತ್ತೀಚೆಗೆ ನಗರಗಳಲ್ಲಿ ಲೇಡೀಸ್‌ ಜಿಮ್ ಗಳು ತೆರೆಯುತ್ತಿವೆ. ಅಲ್ಲಿ ಮಹಿಳೆಯರು ವರ್ಕ್‌ಔಟ್‌ ಮಾಡುವುದರ ಮೂಲಕ ತಮ್ಮನ್ನು ತಾವು ಫಿಟ್‌ ಆಗಿಟ್ಟುಕೊಳ್ಳುತ್ತಾರೆ. ಮಹಿಳೆಯೊಬ್ಬಳು ರಾಂಪ್‌ ವಾಕ್‌ ಅಥವಾ ಸಿನಿಮಾ ಮತ್ತು ಮಾಡೆಲಿಂಗ್‌ಗೆ ಹೋಗಲು ಮಾತ್ರ ಫಿಟ್‌ ಆಗಿರಬೇಕೆಂದಲ್ಲ, ಮನೆ ನಿರ್ವಹಣೆ ಮಾಡಲು ಬಿಸ್‌ನೆಸ್‌ನ್ನು ಸಂಭಾಳಿಸಲು ಅವಳು ಮೊದಲಿಗಿಂತ ಹೆಚ್ಚು ಫಿಟ್‌ ಆಗಿರಲು ಇಷ್ಟಪಡುತ್ತಾಳೆ. ಪಾರಂಪರಿಕ ಸೀರೆಯ ಜೊತೆಗೆ ಅವಳು ಬಗೆಬಗೆಯ ಡಿಸೈನರ್‌ ಡ್ರೆಸ್‌ಗಳನ್ನು ಧರಿಸಲು ಇಷ್ಟಪಡುತ್ತಾಳೆ.

ಫಿಟ್‌ನೆಸ್‌ ಈಗ ಮಹಿಳೆಯರ ಅತಿದೊಡ್ಡ ಅವಶ್ಯಕತೆಯಾಗಿದೆ. ಹೀಗಾಗಿ ಆಕೆ ಜೀವನದ ಎರಡನೇ ಇನ್ನಿಂಗ್ಸ್ ನಲ್ಲೂ ಅಷ್ಟೇ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾಳೆ. ಸೋಶಿಯಲ್ ಮೀಡಿಯಾ ಅವರ ಈ ಟ್ರೆಂಡ್‌ನ್ನು ಮತ್ತಷ್ಟು ಹೆಚ್ಚಿಸುತ್ತ ಹೊರಟಿದೆ. ಆ ಕಾರಣದಿಂದ ಮಹಿಳೆಯರು ತಮ್ಮ ಫಿಗರ್‌ ಮತ್ತು ಫಿಟ್‌ನೆಸ್‌ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಇದಕ್ಕಾಗಿ ಅವರು ಯಾವುದೇ ರಾಜಿಗೂ ತಯಾರಿಲ್ಲ.

– ಶೈಲಜಾ ಮೂರ್ತಿ

ನಿಯಮಿತ ವ್ಯಾಯಾಮ ಅತ್ಯಗತ್ಯ

ಮದುವೆಯಾದ 23 ರ್ಷದ ಬಳಿಕ ತಮ್ಮನ್ನು ತಾವು ಹೊಸ ಮಾಡೆಲ್‌‌ನಂತೆ ಫಿಟ್‌ ಆಗಿಟ್ಟುಕೊಳ್ಳುವ ರಶ್ಮಿ ಸಚದೇವ್‌ ಸೆಲೆಬ್ರಿಟಿಗಳಂತೆ  ಸದಾ ವ್ಯಸ್ತರಾಗಿತ್ತಾರೆ. 5 ಅಡಿ 5 ಅಂಗುಲ ಎತ್ತರವಿರುವ ರಶ್ಮಿಯವರ ತೂಕ 51 ಕಿಲೋ.

ಈ ಕುರಿತಂತೆ ಅವರು ಹೇಳುತ್ತಾರೆ, “ಗರ್ಭಾವಸ್ಥೆಯಲ್ಲಿ ನನ್ನ ತೂಕ ಹೆಚ್ಚಾಗಿತ್ತು. ನಾನು ಅದನ್ನು ಆ ಬಳಿಕ ಕಡಿಮೆ ಮಾಡಿಕೊಂಡೆ. ವ್ಯಾಯಾಮದಲ್ಲಿ ನಡಿಗೆ ಹಾಗೂ ಓಟ ಎಲ್ಲಕ್ಕೂ ಉತ್ತಮ ಎಂದು ಭಾವಿಸುವೆ. ವಾರದಲ್ಲಿ 3 ದಿನ ನಾನು ರನ್ನಿಂಗ್‌ ಮಾಡ್ತೀನಿ ಆಹಾರದಲ್ಲಿ ತರಕಾರಿಗಳು ಹಾಗೂ ಜೂಸ್‌ನ್ನು ಸೇವಿಸುವೆ. ಕೊಬ್ಬಿನ ಪದಾರ್ಥಗಳನ್ನು ಆದಷ್ಟು ಕಡಿಮೆ ಸೇವಿಸುವೆ. ಈ ಕಾರಣದಿಂದ ನನ್ನ ತೂಕ ನಿಯಂತ್ರಣದಲ್ಲಿದೆ. ನೀವು ನಿಮ್ಮ ಆಹಾರ, ವ್ಯಾಯಾಮದ ಬಗ್ಗೆ ಗಮನಕೊಟ್ಟರೆ ನಿಮಗೆ ಇಷ್ಟವಾದ ರೀತಿಯಲ್ಲಿ ಫಿಗರ್‌ ರೂಪಿಸಿಕೊಳ್ಳಬಹುದು.”

ಫಿಟ್‌ನೆಸ್‌ ಜೊತೆ ಆತ್ಮವಿಶ್ವಾಸ

`ಮಿಸೆಸ್‌ ಇಂಡಿಯಾ’ದಂತಹ ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ರಿಚಾ ಶರ್ಮ ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯ ಬಲದಿಂದ ಹಲವು ಅವಕಾಶ ಪಡೆದುಕೊಂಡರು. ಸನಿ ಲಿಯೋನ್‌ ಜೊತೆಗೂ ಅವರು ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಮದುವೆಯಾದ 18 ವರ್ಷಗಳ ಬಳಿಕ ಅಂದವಾಗಿ ತಮ್ಮ ಫಿಗರ್‌ ಕಾಯ್ದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

52 ಕಿಲೋ ತೂಕ, 5 ಅಡಿ 6 ಅಂಗಲ ಎತ್ತರದ ರಿಚಾರ ಫಿಗರ್‌ನ ಸೈಜ್‌ 34-26-36 ಇದೆ. ಅವರು ಹೇಳುವುದಿಷ್ಟು ನನಗೆ ಮೊದಲಿನ ದಿನಗಳಿಗೆ ಹೋಲಿಸಿದರೆ ಈಗ ದಿನಗಳು ಸವಾಲಿನಿಂದ ಕೂಡಿವೆ. ಈಗ ಸಿನಿಮಾಗಳಲ್ಲಿ ಅಭಿನಯಿಸಲು ನನ್ನನ್ನು ನಾನು ಫಿಟ್‌ ಆಗಿಟ್ಟುಕೊಳ್ಳುವುದು ಅತ್ಯವಶ್ಯವಾಗಿದೆ. ಬೇರೆಯವರ ಜೊತೆ ಅಭಿನಯಿಸುವಾಗ ನಮ್ಮಲ್ಲಿ ಆತ್ಮವಿಶ್ವಾಸ ಕೂಡ ಬೇಕಾಗುತ್ತದೆ. ಫಿಟ್‌ ಹಾಗೂ ಹೆಲ್ದೀ ಆಗಿರುವುದರಿಂದ ಇದೆಲ್ಲ ಸಾಧ್ಯವಾಗುತ್ತದೆ.

ಪ್ರಸ್ತುತ ನಟಿಯರು, ಮಾಡೆಲ್ಸ್ ಅಷ್ಟೇ ಅಲ್ಲ, ಗೃಹಿಣಿಯರು ಕೂಡ ತಮ್ಮ ಫಿಟ್‌ನೆಸ್‌ ಬಗ್ಗೆ ಜಾಗರೂಕರಾಗಿದ್ದಾರೆ. ಅವರ ಆತ್ಮವಿಶ್ವಾಸದಿಂದ ಅವರು ತಮ್ಮ ಫಿಗರ್‌ ಬಗ್ಗೆ ಅದೆಷ್ಟು ಎಚ್ಚರಿಕೆಯಿಂದ ಇದ್ದಾರೆ ಎಂಬುದು ತಿಳಿದುಬರುತ್ತದೆ.

ಯಶಸ್ಸಿಗೆ ಫಿಟ್‌ನೆಸ್‌ ಅಗತ್ಯ

ಅರ್ಚನಾ ಪ್ರಸಾದ್‌ `ಮಿಸೆಸ್‌ ಇಂಡಿಯಾ’ ಸ್ಪರ್ಧೆಯಲ್ಲಿ ಗೆದ್ದ ಬಳಿಕ ಹಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದರು. ಈಗ ಅವರು ಇಂದೋರ್‌ನಲ್ಲಿ ತಮ್ಮದೇ ಆದ ಬ್ಯೂಟಿ ಸೆಲೂನ್‌ ನಡೆಸುತ್ತಾರೆ. ಮದುವೆಯಾದ 24 ವರ್ಷಗಳ ಬಳಿಕ ಅವರು ತಮ್ಮ ಫಿಗರ್‌ 34-27-35 ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅವರು ಹೇಳುವುದಿಷ್ಟು, “ಸೆಕೆಂಡ್‌ ಇನ್ನಿಂಗ್ಸ್ ನಲ್ಲಿ ಯಶಸ್ಸು ಸಾಧಿಸಬೇಕೆಂಬ ಹಂಬಲ ಇದ್ದರೆ ನಿಮ್ಮನ್ನು ನೀವು ಹೆಲ್ದೀ ಮತ್ತು ಫಿಟ್‌ ಆಗಿಟ್ಟುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಸಮತೋಲಿತ ಆಹಾರಕ್ಕೆ ಮಹತ್ವ ಕೊಡಿ. ಈ ವಯಸ್ಸಿನಲ್ಲಿ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಗೋಚರಿಸುತ್ತವೆ. ಅನೇಕ ವಿಟಮಿನ್‌ ಮತ್ತು ಮಿನರಲ್‌ಗಳ ಪ್ರಮಾಣ ಕುಸಿಯುತ್ತದೆ. ಅದರಲ್ಲೂ ವಿಶೇಷವಾಗಿ ಕ್ಯಾಲ್ಶಿಯಂ ಕಡಿಮೆಯಾಗುತ್ತದೆ. ಇದರ ಬಗ್ಗೆ ಗಮನಕೊಟ್ಟರೆ ದೇಹದ ಬಳುಕುವಿಕೆ ಹಾಗೆಯೇ ಉಳಿಯುತ್ತದೆ.”

ಫಿಟ್‌ನೆಸ್‌ನ ಮಾನದಂಡವನ್ನು ಅವಲೋಕಿಸಿದಾಗ, ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಫಿಟ್‌ನೆಸ್‌ ಬಗ್ಗೆ ಜಾಗರೂಕರಾಗಿದ್ದಾರೆ ಎಂಬುದು ತಿಳಿಯುತ್ತದೆ. ಅದರಿಂದಾಗಿ ಜಿಮ್ ನಿಂದ ಬ್ಯೂಟಿ ಪಾರ್ಲರ್‌ ತನಕ ಮತ್ತು ಸ್ಕಿನ್‌ ಸ್ಪೆಷಲಿಸ್ಟ್ ರಿಂದ ಹಿಡಿದು ಪ್ಲಾಸ್ಟಿಕ್‌ ಸರ್ಜನ್‌ರ ತನಕ ಫಿಟ್‌ನೆಸ್‌ಗಾಗಿ ಅವರು ಧಾವಿಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ