ಉದ್ಯೋಗಸ್ಥ ಮಹಿಳೆಯರು ತಮ್ಮ ಆಫೀಸ್‌ಮತ್ತು ಕುಟುಂಬಗಳೆರಡರ ಜವಾಬ್ದಾರಿಗಳನ್ನು ಒಟ್ಟಿಗೆ ನಿಭಾಯಿಸಬೇಕಾಗುತ್ತದೆ. ಅವರು ಒಂದಾದ ಮೇಲೊಂದು ಕೆಲಸವನ್ನು ಮಾಡುತ್ತಲೇ ಇರಬೇಕಾಗುವುದರಿಂದ ತಮಗಾಗಿ ಕೊಂಚ ಸಮಯವನ್ನು ಮೀಸಲಿಡಲು ಕಷ್ಟವಾಗುತ್ತದೆ. ಸಮಯದ ಒತ್ತಡದಿಂದಾಗಿ ಈ ಮಹಿಳೆಯರು ತಮ್ಮ ವೈಯಕ್ತಿಕ ಅಗತ್ಯಗಳಿಗೆ ಬದಲಾಗಿ ತಮ್ಮ ಕರ್ತವ್ಯಗಳಿಗೆ ಪ್ರಾಧಾನ್ಯತೆ ಕೊಡಬೇಕಾಗುತ್ತದೆ. ಸಮಯದ ಅಭಾವದಿಂದಾಗಿ ಅವರ ಆಹಾರ ಪಾನೀಯಗಳ ರೀತಿ ನೀತಿಯೂ ಅವ್ಯವಸ್ಥಿತವಾಗುತ್ತದೆ.

ತಮ್ಮ ಶರೀರ ಮತ್ತು ಆರೋಗ್ಯದ ಬಗ್ಗೆ ಗಮನ ನೀಡದಿದ್ದರೆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಹಿಂದೆ ಬೀಳುವರೆಂಬುದನ್ನು ಈ ಮಹಿಳೆಯರು ಮರೆಯುತ್ತಾರೆ. ಆದ್ದರಿಂದ ಆರೋಗ್ಯಕರ ಮತ್ತು ಆನಂದಮಯ ಜೀವನ ನಡೆಸಲು ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮೊದಲಾದ ವಿಷಯಗಳ ಬಗ್ಗೆ ಗಮನವಿರಿಸಿ ಅವುಗಳಿಗಾಗಿ ಸಮಯ ಮೀಸಲಿಡುವುದು ಅಗತ್ಯ.

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಆಹಾರದ ವಿಷಯದಲ್ಲಿ ಮಹಿಳೆಯರು ಮಿತವಾದ ಕ್ಯಾಲೋರಿಯಿಂದ ಕೂಡಿದ, ಫೈಬರ್‌ಮತ್ತು ಪೌಷ್ಟಿಕ ಸತ್ವಗಳಿಂದ ಕೂಡಿದ ತಿನಿಸುಗಳನ್ನು ಸೇವಿಸಬೇಕು. ಹೆಚ್ಚು ಕ್ಯಾಲೋರಿಯುಕ್ತ ಆಹಾರ ಸೇವನೆಯಿಂದ ತೂಕ ಹೆಚ್ಚುತ್ತದೆ ಮತ್ತು ಡಯಾಬಿಟೀಸ್‌, ಸ್ಟ್ರೋಕ್‌,  ಆಸ್ಟ್ರೋಪೊರಾಸಿಸ್‌, ಬ್ರೆಸ್ಟ್ ಕ್ಯಾನ್ಸರ್‌, ಆರ್ಥರೈಟಿಸ್‌, ಹೈ ಬ್ಲಡ್‌ಪ್ಲೆಶರ್‌ ನಂತಹ ಅನೇಕ ಕಾಯಿಲೆಗಳಿಗೆ ಕಾರಣಾಗುತ್ತದೆ.ಆದ್ದರಿಂದ ಮಹಿಳೆಯರು 30 ವರ್ಷ ವಯಸ್ಸಿನ ನಂತರ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.  ಕಾಯಿಲೆಗಳಿಂದ ತಪ್ಪಿಸಿಕೊಳ್ಳಲು, ಮೂಳೆಗಳನ್ನು ಬಲಗೊಳಿಸಲು, ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಚರ್ಮ ರಕ್ಷಣೆಗಾಗಿ ಆರೋಗ್ಯಕರ ಜೀವನಶೈಲಿಯನ್ನು ತಮ್ಮದಾಗಿಸಿಕೊಳ್ಳಬೇಕು.

ವಯಸ್ಸು 30ನ್ನು ಮುಟ್ಟಿದಾಗ ನಿಮ್ಮ ಆಹಾರ ಪದ್ಧತಿ ಹೇಗಿರಬೇಕೆಂದು ಕಂಡುಕೊಳ್ಳಿರಿ?:

ನಿಮ್ಮ ದಿನನಿತ್ಯದ ಆಹಾರದಲ್ಲಿ ಬೇಳೆಕಾಳು ಮತ್ತು ಕಾಯಿಪಲ್ಲೆಗಳು ಸೇರಿರಲಿ. ಒಣಕಾಳುಗಳು, ಬಟಾಣಿ, ಕೋಸು ಮುಂತಾದವುಗಳಲ್ಲಿ ಪ್ರೋಟೀನ್‌ ಮತ್ತು ಫೈಬರ್‌ನ ಪ್ರಮಾಣ ಹೆಚ್ಚಾಗಿರುತ್ತದೆ. ಬೇಯಿಸಿದ 1 ಕಪ್‌ ಮಸೂರ್‌ ದಾಲ್‌ನಲ್ಲಿ ಸುಮಾರು 16 ಗ್ರಾಂ ಫೈಬರ್‌ ಇರುತ್ತದೆ. ಇದು ಕೊಲೆಸ್ಟ್ರಾಲ್‌ನ ಮಟ್ಟವನ್ನು ಕಡಿಮೆ ಮಾಡಿ ಬ್ಲಡ್‌ ಶುಗರ್‌ನ್ನು ನಿಯಂತ್ರಿಸುವುದರ ಜೊತೆಗೆ ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ.

ಒಂದು ಪ್ಯಾಕೆಟ್‌ ಆಲೂ ಚಿಪ್ಸ್ ಅಥವಾ ಕುಕೀಸ್‌ನಿಂದಲೇ ಹೊಟ್ಟೆ ತುಂಬಿಸಿಕೊಳ್ಳದೆ ಜೊತೆಗೆ ಹಣ್ಣು ತರಕಾರಿಗಳನ್ನೂ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ತಾಜಾ ಹಣ್ಣುಗಳು ಸಲಾಡ್‌ ಅಥವಾ ಕ್ಯಾರೆಟ್‌, ಟೊಮೇಟೊನಂತಹ ಇತರೆ ತಾಜಾ ತರಕಾರಿಗಳ ಒಂದು ಬೌಲ್‌ನ ಸೇವನೆಯು ಬಿಎಂಐ ಮೇಂಟೇನ್‌ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತದ ಕೊಲೆಸ್ಟ್ರಾಲ್ ಮತ್ತು  ಶುಗರ್‌ಮಟ್ಟವನ್ನು ಉತ್ತಮಪಡಿಸಬಲ್ಲದು.

ಕೊಬ್ಬು ರಹಿತವಾದ ಹಾಲು, ಮೊಸರು ಮತ್ತು ಚೀಸ್‌ಗಳಲ್ಲಿ ಕ್ಯಾಲ್ಶಿಯಂನ ಅಂಶ ಹೇರಳವಾಗಿರುತ್ತದೆ. ಪೀನಟ್‌ ಬಟರ್‌ನಲ್ಲಿ ಸಹ ಕ್ಯಾಲ್ಶಿಯಂನ ಸಾಕಷ್ಟು ಪ್ರಮಾಣವಿರುವುದಲ್ಲದೆ, ಜೊತೆಗೆ ವಿಟಮಿನ್‌ ಇ, ಮೆಗ್ನೀಶಿಯಮ್, ಪೊಟಾಶಿಯಮ್ ಮತ್ತು ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಬಲ್ಲ ವಿಟಮಿನ್‌ ಬಿ6ನ ಅಂಶ ಇರುತ್ತದೆ.

ಬಾದಾಮಿ ಹಾಲು ಮತ್ತು ತೆಂಗಿನಹಾಲು ಶರೀರಕ್ಕೆ ಒಳ್ಳೆಯ ಪೋಷಣೆ ನೀಡಬಲ್ಲ ಆರೋಗ್ಯಕರ ಪಾನೀಯಗಳು. ಬಾದಾಮಿ ಹಾಲಿನಲ್ಲಿ ಕ್ಯಾಲೋರಿ ಕಡಿಮೆ ಇದ್ದು ವಿಟಮಿನ್‌ಡಿ ಅಂಶವಿರುತ್ತದೆ. ತೆಂಗಿನಹಾಲು ಲ್ಯಾಕ್ಟೋಸ್‌ ರಹಿತವಾಗಿದ್ದು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ರಕ್ತ ಸಂಚಲನ ಉತ್ತಮಗೊಂಡು ಹಾರ್ಟ್‌ ಅಟ್ಯಾಕ್‌ ಅಥವಾ ಸ್ಟ್ರೋಕ್‌ನ್ನು ತಡೆಗಟ್ಟಲು ಸಹಾಯವಾಗುತ್ತದೆ.

ಅರಿಶಿನ ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಉಪಯೋಗಕರ. ಸಾರು, ಸೂಪ್‌ಅಥವಾ ವ್ಯಂಜನಗಳಲ್ಲಿ ಈ ಹಳದಿ ಬಣ್ಣದ ಪುಡಿಯ ಒಂದು ಚಿಟಕಿಯನ್ನು ಸೇರಿಸುವುದರಿಂದ ಅನೇಕ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇದು ಈಸ್ಟ್ರೋಜನ್‌ಹಾರ್ಮೋನ್‌ಗಳನ್ನು ನಿಯಮಿತಗೊಳಿಸುತ್ತದೆ. ಸ್ತನ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ  ಸುಕ್ಕುಗಳನ್ನು ನಿವಾರಿಸುತ್ತದೆ.

ಪಾಲಕ್‌, ಎಲೆಕೋಸು, ಹೂಕೋಸುಗಳಲ್ಲಿ ಬೀಟಾ ಕೆರೊಟಿನ್‌ನ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ಆರೋಗ್ಯಕ್ಕೆ ಬಹಳ  ಪ್ರಯೋಜನವಾಗುತ್ತದೆ.

ರೆಡ್‌ಮೀಟ್‌ನಲ್ಲಿ ಹೈಕ್ವಾಲಿಟಿ ಪ್ರೋಟೀನ್‌ಇರುವುದಾದರೂ ಅದರಲ್ಲಿ ಸ್ಯಾಚುರೇಟೆಡ್‌ ಫ್ಯಾಟ್‌ ಸಹ ಇರುತ್ತದೆ. ಆದ್ದರಿಂದ ಕಡಿಮೆ ಕೊಬ್ಬಿನಿಂದ ಕೂಡಿದ ಸಾಲ್ಮನ್‌, ಟ್ಯೂನಾ ಮತ್ತು ಸಾರ್ಡಿನ್‌ನಂತಹ ಮೀನುಗಳನ್ನು ಸೇವಿಸಿ.

ದಿನ ಬಾದಾಮಿ, ಅಖರೋಟ್‌ ಬೀಜಗಳನ್ನು ತಿನ್ನಿರಿ. 1 ಹಿಡಿ ಬಾದಾಮಿ ತಿನ್ನುವುದರಿಂದ ಶರೀರಕ್ಕೆ ಫೈಬರ್‌, ಪ್ರೋಟೀನ್‌, ಜಿಂಕ್‌, ಕ್ಯಾಲ್ಶಿಯಂ, ಮೆಗ್ನೀಶಿಯಮ್, ಪೊಟ್ಯಾಶಿಯಮ್, ಫಾಸ್ಛರಸ್‌, ಕಾಪರ್‌, ಐರನ್‌ ಮತ್ತು ವಿಟಮಿನ್‌ ಬಿಗಳು ದೊರೆಯುತ್ತವೆ.

ಫ್ಲಾಕ್ಸ್ ಸೀಡ್ಸ್ ನಲ್ಲಿ ಒಮೆಗಾ 3 ಫ್ಯಾಟಿ ಆ್ಯಸಿಡ್‌, ಕ್ಯಾಲ್ಶಿಯಂ, ಜಿಂಕ್‌, ವಿಟಮಿನ್‌ ಬಿ1, ಬಿ2, ಬಿ3 ಮತ್ತು ವಿಟಮಿನ್‌ ಇ ಇರುತ್ತವೆ.

ಸೋಯಾ ಮಿಕ್ಸ್, ಅಗಸೆ, ನುಚ್ಚು, ಜವೆಗೋಧಿ, ಓಟ್ಸ್ ಮತ್ತು ಹೈ ಕ್ವಾಲಿಟಿ ಪ್ರೋಟೀನ್‌ ಸಪ್ಲಿಮೆಂಟ್‌ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಡಾರ್ಕ್‌ ಚಾಕೋಲೇಟ್‌, ಒಣದ್ರಾಕ್ಷಿ, ಅಖರೋಟ್‌, ಜವೆಗೋಧಿ, ಬ್ರೋಕ್ಲಿ, ಟೊಮೇಟೊ ಮುಂತಾದ ಹೈ ಕ್ವಾಲಿಟಿ ಆ್ಯಂಟಿ ಆಕ್ಸಿಡೆಂಟ್‌ನಿಂದ ಕೂಡಿದ್ದು, ಜೀವಕೋಶಗಳನ್ನು  ರಕ್ಷಿಸುತ್ತದೆ, ವೃದ್ಧಾಪ್ಯದ ಚಿಹ್ನೆಗಳನ್ನು ಕಡಿಮೆ ಮಾಡುತ್ತವೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ ಮತ್ತು ನಿರೋಧಕ ಗುಣವನ್ನೂ ಹೆಚ್ಚಿಸುತ್ತದೆ.

ಡಾರ್ಕ್‌ ಚಾಕೋಲೇಟ್‌ನಿಂದ ಡಯಾಬಿಟೀಸ್‌ ಮತ್ತು ಕಾರ್ಡಿಯೊ ವ್ಯಾಸ್ಕುಲರ್‌ ಕಾಯಿಲೆಯಂತಹ ಇತರೆ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಸಹಾಯವಾಗುತ್ತದೆ.

ವೃದ್ಧಾಪ್ಯದ ಗುರುತುಗಳನ್ನು ನಿವಾರಿಸಲು ಒಳ್ಳೆಯ ಉಪಾಯವೆಂದರೆ ರಾಸ್‌ಬೆರಿ, ಸ್ಟ್ರಾಬೆರಿ ಮತ್ತು ಬ್ಲೂಬೆರಿಗಳನ್ನು ತಿನ್ನುತ್ತಿರುವುದು.

ಮಹಿಳೆಯರು ತಮ್ಮ 30ನೇ ವಯಸ್ಸಿನ ನಂತರ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಆಹಾರ ಪದಾರ್ಥಗಳನ್ನು ದೂರವಿರಿಸಬೇಕಾಗುತ್ತದೆ.

ಕ್ಯಾನ್‌ ಫುಡ್‌ಗಳಾದ ಸೂಪ್‌, ಕತ್ತರಿಸಿದ ಹಣ್ಣುತರಕಾರಿಗಳು, ಸಾಸೇಜ್‌ಗಳನ್ನು ದೂರ ಮಾಡಬೇಕು. ಇವುಗಳಲ್ಲಿ ಸೋಡಿಯಮ್ ಮತ್ತು ಪ್ರಿಸರ್ವೇಟಿವ್‌ಗಳು ಹೆಚ್ಚಿನ ಅಂಶದಲ್ಲಿರುತ್ತವೆ. ಇವುಗಳನ್ನು ತುಂಬಿಸಿರುವ ಟಿನ್‌ನಲ್ಲಿನ ಲೋಹ ಅಥವಾ ಪ್ಲಾಸ್ಟಿಕ್‌ನಲ್ಲಿನ ಕೋಟಿಂಗ್‌ನಿಂದಾಗಿ ಕಲುಷಿತಗೊಂಡಿರುವ ಸಂಭವಿರುತ್ತದೆ.

ಫ್ರೋಜನ್‌ ಫುಡ್‌ ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳಲ್ಲಿ 700 ರಿಂದ 1800 ಎಂ.ಜಿ.ರವರೆಗೆ ಸೋಡಿಯಮ್ ಅಂಶವಿರುತ್ತದೆ. ಅದರಿಂದ ಬ್ಲಡ್‌ಪ್ರೆಶರ್‌ ಮತ್ತು ಇತರೆ ಕಾಯಿಲೆಗಳು ಅಪಾಯ ಹೆಚ್ಚಬಹುದು.

ಕೇಕ್‌, ಪೇಸ್ಟ್ರಿ, ಬಿಸ್ಕೆಟ್‌ನಂತಹ ಬೇಕ್ಡ್ ಫುಡ್ಸ್ ಸೇವನೆಯನ್ನು ಕಡಿಮೆ ಮಾಡಬೇಕು. ಏಕೆಂದರೆ ಇವುಗಳನ್ನು ಹೆಚ್ಚಿನ ಫ್ಯಾಟ್‌ ಮತ್ತು ಶುಗರ್‌ ಸೇರಿಸಿದ ರಿಫೈನ್ಡ್ ಹಿಟ್ಟಿನಿಂದ ತಯಾರಿಸಲಾಗಿದ್ದು, ಆರೋಗ್ಯಕ್ಕೆ ಹಿತಕರವಾಗಿರುವುದಿಲ್ಲ. ಇವುಗಳಲ್ಲಿ ಪೌಷ್ಟಿಕಾಂಶ ಕಡಿಮೆ ಮತ್ತು ಕ್ಯಾಲೋರಿ ಹೆಚ್ಚಾಗಿರುತ್ತದೆ.

ಕ್ಯಾನ್ಡ್ ಜೂಸ್‌ಮತ್ತು ಗ್ಯಾಸ್‌ ತುಂಬಿದ ಡ್ರಿಂಕ್ಸ್ ಗಳ ಸೇವನೆ ಕಡಿಮೆ ಮಾಡಿ. ಇವುಗಳಲ್ಲಿ ಹೈ ಶುಗರ್‌ ಸಾಮಗ್ರಿಗಳು ಸೇರಿದ್ದು, ಡಯಾಬಿಟೀಸ್‌ ಹೆಚ್ಚು ಸಾಧ್ಯತೆ ಇರುತ್ತದೆ. ಇದು ನಿಮ್ಮ ಹಾರ್ಟ್‌ ಮತ್ತು ಲಿವರ್‌ ಮೇಲೆ ದುಷ್ಪರಿಣಾಮ ಬೀರಬಲ್ಲದು.

– ಸ್ನೇಹಲತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ