ಕೆಲವು ತಿಂಗಳುಗಳ ಹಿಂದೆ ಏರ್ ಇಂಡಿಯಾದ ಮಹಿಳಾ ಪೈಲಟ್ ಮತ್ತು ಕ್ರೂದಲ್ಲಿರುವ ಒಬ್ಬ ಸಿಬ್ಬಂದಿಯನ್ನು ‘ಪ್ರೀಫ್ಲೈಟ್‌ಆಲ್ಕೋಹಾಲ್ ಟೆಸ್ಟ್ ‘ನಲ್ಲಿ ಫೇಲ್ ಆದ ಕಾರಣದಿಂದ ಶಿಕ್ಷೆ ಎಂಬಂತೆ ಅವರನ್ನು 3 ತಿಂಗಳ ಮಟ್ಟಿಗೆ ಗ್ರೌಂಡ್ ಡ್ಯೂಟಿಗೆ ಕಳಿಸಲಾಯಿತು. ಈ ಪ್ರಕರಣ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್ ತನಕ ತಲುಪಿತು. ಏಕೆಂದರೆ ವಿಮಾನಯಾನ ನಿಯಮಗಳ ಪ್ರಕಾರ ಕ್ರೂ ಸದಸ್ಯರು ವಿಮಾನ ಹಾರುವ 12 ಗಂಟೆಗಳ ತನಕ ಯಾವುದೇ ಮದ್ಯಪಾನ ಮಾಡಿರಬಾರದು ಎಂಬ ನಿಯಮವಿದೆ.
ಅದೇ ರೀತಿಯ ಘಟನೆಯೊಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ ಘಟಿಸಿತು. ಪ್ರೀತಿ ಎಂಬ 36 ವರ್ಷದ ಮಹಿಳೆ ಮದ್ಯದ ನಶೆಯಲ್ಲಿ ಗಾಡಿ ಓಡಿಸಿ ಐವರು ಕಾರ್ಮಿಕರನ್ನು ಸಾಯಿಸಿದಳು. ಈ ಘಟನೆ ನಡೆದದ್ದು ರಾತ್ರಿ 11.30ಕ್ಕೆ. ಕಾರಿನಲ್ಲಿ ಏಕಾಂಗಿಯಾಗಿದ್ದ ಆಕೆ ಮನಬಂದಂತೆ ಗಾಡಿ ಓಡಿಸಿ ಹರಿಯಾಣ ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದ 5 ಕಾರ್ಮಿಕರಿಗೆ ಯಮಸ್ವರೂಪಿ ಆದಳು.
ಇಂತಹ ಅದೆಷ್ಟೋ ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿವೆ. ನಶೆಯಲ್ಲಿರುವ ಮಹಿಳೆಯರು ಕೇವಲ ತಮ್ಮ ಪ್ರತಿಷ್ಠೆ ಹಾಳು ಮಾಡಿಕೊಳ್ಳುವುದಷ್ಟೇ ಅಲ್ಲ, ಇತರರ ಜೀವಕ್ಕೂ ಕುತ್ತು ತರುತ್ತಿದ್ದಾರೆ. ಕೆಲವೊಮ್ಮೆ ತಮ್ಮ ಬಳಿ ಇರುವುದೆಲ್ಲವನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಕೂಡ ಬರುತ್ತಿದೆ. ಮದ್ಯ ಸೇವನೆಯ ಬಗ್ಗೆ ಹೇಳಬೇಕೆಂದರೆ, ಭಾರತ ಸಹಿತ ಇಡೀ ವಿಶ್ವದಲ್ಲಿ ಮಹಿಳೆಯರು ಮದ್ಯ ಸೇವನೆಯ ಆರೋಪವನ್ನು ಪುರುಷರ ಮೇಲೆಯೇ ಹೊರಿಸುತ್ತಾರೆ. ಆದರೆ ಮಹಿಳೆಯರು ಕೂಡ ಭಾರಿ ಪ್ರಮಾಣದಲ್ಲಿ ಮದ್ಯದ ನಶೆಗೆ ತುತ್ತಾಗುತ್ತಿದ್ದಾರೆ.
ಕೆಲವು ತಿಂಗಳುಗಳ ಹಿಂದೆ `ಆರ್ಗನೈಜೇಶನ್ ಫಾರ್ ಎಕನಾಮಿಕ್ ಕಾರ್ಪೋರೇಷನ್ ಅಂಡ್ ಡೆವಲಪ್‌ಮೆಂಟ್’ ಮುಖಾಂತರ ಹೊರಡಿಸಲ್ಪಟ್ಟ ಜಾಗತಿಕ ವರದಿಯಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸಲಾಗಿದೆ. ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಮದ್ಯಸೇವನೆಯ ಪ್ರಮಾಣ ಶೇ.55ರಷ್ಟು ಹೆಚ್ಚಳ ಕಂಡಿದೆ. ಮದ್ಯಸೇವನೆಯ 40 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಮೂರನೆಯ ಸ್ಥಾನ ಲಭಿಸಿದೆ. ಮಹಿಳೆಯರಲ್ಲಿ ಇದರ ಬಳಕೆಯ ಪ್ರಮಾಣ ಭಾರಿ ಏರಿಕೆಯಾಗುತ್ತಿದೆ. ಅಂಕಿಅಂಶಗಳ ಪ್ರಕಾರ, ಕಳೆದ 10 ವರ್ಷಗಳಲ್ಲಿ ಮಹಿಳೆಯರ ಮದ್ಯ ಸೇವನೆಯ ಪ್ರಮಾಣ ದ್ವಿಗುಣಗೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ, ಭಾರತದಲ್ಲಿ ಶೇ.11ರಷ್ಟು ಮಹಿಳೆಯರು ಮದ್ಯಸೇವನೆ ಮಾಡುತ್ತಿದ್ದಾರೆ. ಇಂದಿನ ವಸ್ತುಸ್ಥಿತಿ ಹೇಗಿದೆಯೆಂದರೆ, ಕೆಲವು ಮಹಿಳೆಯರು ಇದನ್ನು ಪ್ರತಿಷ್ಠೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದೊಂದಿಗೆ ಹೋಲಿಸಿ ನೋಡುತ್ತಾರೆ. ಮದ್ಯಸೇವನೆ ಒಳ್ಳೆಯದಲ್ಲ, ಅದು ಹಾನಿಕಾರಕ ಎಂದು ಯಾರಾದರೂ ಅವರ ಮುಂದೆ ಹೇಳಿದರೆ, ಅವರು ಅದನ್ನು ಪರಂಪರವಾದಿ ಯೋಚನೆ ಮತ್ತು ಮಹಿಳೆಯರ ಬಗ್ಗೆ ನಡೆಸುತ್ತಿರುವ ಸಂಚು ಎಂದು ಹೇಳಿ ಆ ಕುರಿತಂತೆ ರಂಪ ಎಬ್ಬಿಸುತ್ತಾರೆ. ಮದ್ಯ ಸೇವನೆ ಮಾಡಿ ಅವರು ತಮ್ಮನ್ನು ತಾವು ಸ್ವತಂತ್ರ ಹಾಗೂ ಆಧುನಿಕ ಎಂದು ಭಾವಿಸುತ್ತಾರೆ.
ಮಹಿಳೆಯರಿಗೆ ಮದ್ಯ ಅಪಾಯಕಾರಿ
ಮದ್ಯ ಸೇವನೆ ಪುರುಷರು ಹಾಗೂ ಮಹಿಳೆಯರಿಗೆ ಇಬ್ಬರಿಗೂ ಹಾನಿಕಾರಕ. ಆದರೆ ಮಹಿಳೆಯರ ವಿಭಿನ್ನ ದೈಹಿಕ ರಚನೆಯ ಕಾರಣದಿಂದಾಗಿ ಅದು ಪರುಷರಿಗಿಂತ ಮಹಿಳೆಯರಿಗೇ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ.
ರಾಜೀವ್ ಗಾಂಧಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಅಂಡ್ ರಿಸರ್ಚ್ ಸೆಂಟರಿನ ಡಾ. ಇಂದೂ ಹೀಗೆ ಹೇಳುತ್ತಾರೆ, ಮಹಿಳೆಯರ ದೇಹ ಮದ್ಯದ ಪ್ರಭಾವಗಳಿಗೆ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಸಮಪ್ರಮಾಣದಲ್ಲಿ ಮದ್ಯಸೇವನೆ ಮಾಡುವುದರಿಂದ ಮಹಿಳೆಯರ ರಕ್ತದಲ್ಲಿ ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದುಷ್ಪರಿಣಾಮಗಳು ಗೋಚರಿಸುತ್ತವೆ. ಅದರ ಜೈವಿಕ ಕಾರಣಗಳು ಈ ಕೆಳಕಂಡಂತಿವೆ.
ದೇಹದಲ್ಲಿ ಫ್ಯಾಟ್: ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರ ತೂಕ ಕಡಿಮೆ. ಪುರುಷನಿಗೆ ಸರಿಸಮಾನ ತೂಕ ಹೊಂದಿರುವ ಮಹಿಳೆಯೊಬ್ಬಳ ದೇಹದಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಫ್ಯಾಟಿ ಟಿಶ್ಶೂಗಳಿರುತ್ತವೆ. ಅಂದರೆ ನೀರು ಮದ್ಯದ ಘನತ್ವವನ್ನು ಕುಗ್ಗಿಸುತ್ತದೆ. ಹೀಗಾಗಿ ಮಹಿಳೆಯರ ದೇಹದಲ್ಲಿ ಮದ್ಯದ ಘನತ್ವ ಹೆಚ್ಚು ಹೊತ್ತಿನ ತನಕ ಹಾಗೆಯೇ ಉಳಿದಿರುತ್ತದೆ.
ಎಂಜೈಮ್ಸ್ : ಮಹಿಳೆಯರಲ್ಲಿ ಕಿಣ್ವಗಳ (ಎಂಜೈಮ್ಸ್) ಸಂಖ್ಯೆ ಕಡಿಮೆ ಇರುತ್ತದೆ. ಅದು ಪ್ಯಾಂಕ್ರಿಯಾಸ್ ಮತ್ತು ಜಠರದಲ್ಲಿ ಚಯಾಪಚಯ ಪ್ರಕ್ರಿಯೆಗೊಳಪಡಬೇಕು. ಇದರ ಪರಿಣಾಮವೆಂಬಂತೆ ಮಹಿಳೆಯರ ರಕ್ತದಲ್ಲಿ ಮದ್ಯದ ಪ್ರಮಾಣ ಜಾಸ್ತಿಯಾಗುತ್ತದೆ.
ಹಾರ್ಮೋನು : ಋತುಚಕ್ರದ ಸಂದರ್ಭದಲ್ಲಿ ಹಾರ್ಮೋನು ಸ್ರಾವಗಳಲ್ಲಿ ಏರಿಳಿತ ಉಂಟಾಗುವುದರಿಂದ ಮಹಿಳೆಯರಲ್ಲಿ ಮದ್ಯದ ಚಯಾಪಚಯ ಪ್ರಕ್ರಿಯೆಯ ಮೇಲೆ ಪರಿಣಾಮ ಉಂಟಾಗುತ್ತದೆ.
ಮದ್ಯ ಸೇವನೆಯ ದುಷ್ಪರಿಣಾಮಗಳು : ಮದ್ಯ ಸೇವನೆಯಿಂದ ಕೇವಲ ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಅದು ಆ ವ್ಯಕ್ತಿಯ ಖಾಸಗಿ ಹಾಗೂ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ದೈಹಿಕ ಆರೋಗ್ಯದ ಮೇಲೆ ಪರಿಣಾಮ
ಲಿವರ್ ಕಾಯಿಲೆಗಳು : ಯಾರು ಅಧಿಕ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುತ್ತಿರುತ್ತಾರೊ, ಅವರಲ್ಲಿ ಕರುಳಿಗೆ ಊತ ಮತ್ತು ಲಿವರ್ ಸಿರೋಸಿಸ್ ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಒಂದು ವೇಳೆ ಅದಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯದೇ ಇದ್ದರೆ ಲಿವರ್ ಸಂಪೂರ್ಣವಾಗಿ ಹಾಳಾಗುತ್ತದೆ. ಅದು ಅವರ ಜೀವಿತಕ್ಕೆ ಕುತ್ತನ್ನುಂಟು ಮಾಡಬಹುದು.
ರಕ್ತದೊತ್ತಡ ಹೆಚ್ಚಳ : ಮದ್ಯ ಸೇವನೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಮಹಿಳೆಯರಲ್ಲಿ ಮದ್ಯ ಸೇವನೆಯಿಂದ ಉಂಟಾಗುವ ಅಪಾಯ ಪುರುಷರಿಗೆ ಹೋಲಿಸಿದಲ್ಲಿ ದ್ವಿಗುಣವಾಗಿರುತ್ತದೆ.
ದಣಿವು : ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವುದರಿಂದ ವಿಟಮಿನ್ ಬಿ12ನ ಪ್ರಮಾಣ ಕಡಿಮೆಯಾಗುತ್ತದೆ. ಆ ಕಾರಣದಿಂದ ತೀವ್ರ ದಣಿವಾಗುತ್ತದೆ. ತಲೆ ಸುತ್ತಿದಂತಾಗುವ ಸಮಸ್ಯೆ ಕೂಡ ಕಂಡುಬರುತ್ತದೆ.
ಬೊಜ್ಜು : ಮದ್ಯ ದೇಹದಲ್ಲಿನ ಲೆಪ್ಟಿನ್‌ನ ಮಟ್ಟವನ್ನು ಕಡಿಮೆಗೊಳಿಸುತ್ತದೆ. `ಲೆಪ್ಟಿನ್’ ಇದು ಹಸಿವನ್ನು ನಿಯಂತ್ರಣದಲ್ಲಿಡುವ ಹಾರ್ಮೋನಾಗಿದೆ. ಅದರ ಪ್ರಮಾಣ ಕಡಿಮೆಯಾಗುವುದರಿಂದ ವಿಪರೀತ ಹಸಿವಾಗುತ್ತದೆ. ಅದರಿಂದಾಗಿ ಕ್ಯಾಲೋರಿ ಇನ್‌ಟೇಕ್‌ಅಧಿಕವಾಗಿರುವ ಆಹಾರ ಪದಾರ್ಥಗಳನ್ನು ತಿನ್ನಬೇಕೆಂಬ ತುಡಿತ ಹೆಚ್ಚುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವ ಅಪಾಯ ಇನ್ನೂ ಹೆಚ್ಚುತ್ತದೆ.
ಸಂತಾನೋತ್ಪತ್ತಿ ಸಾಮರ್ಥ್ಯ ಕುಗ್ಗುವ ಸಾಧ್ಯತೆ : ಫರ್ಟಿಲಿಟಿ ಎಕ್ಸ್ ಪರ್ಟ್ ಡಾ. ಅರವಿಂದ್ ಹೀಗೇ ಹೇಳುತ್ತಾರೆ, “ಮದ್ಯ ಸೇವನೆಯಿಂದ ಅವಧಿಗೆ ಮುನ್ನ ಮೆನೋಪಾಸ್, ಬಂಜೆತನ ಹಾಗೂ ಗರ್ಭಪಾತದ ಅಪಾಯ ಹೆಚ್ಚುತ್ತದೆ. ಯಾವ ಮಹಿಳೆಯರು ನಿಯಮಿತವಾಗಿ ಮದ್ಯ ಸೇವಿಸುತ್ತಿರುತ್ತಾರೊ, ಅವರ ಮುಟ್ಟಿನಲ್ಲೂ ಏರುಪೇರಾಗುತ್ತದೆ. ಮದ್ಯ ಸೇವನೆಯಿಂದ ಅದು ಬಿಡುಗಡೆ ಪ್ರಕ್ರಿಯೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಅಂಡಾಣುವಿನ ಗುಣಮಟ್ಟ ಕುಸಿಯುತ್ತದೆ.
“ಗರ್ಭಾವಸ್ಥೆಯಲ್ಲಿ ಯಾವ ಮಹಿಳೆಯರು ಮದ್ಯ ಸೇವನೆಯ ಅಭ್ಯಾಸ ಮುಂದವರಿಸಿರುತ್ತಾರೋ, ಅವರ ಗರ್ಭಸ್ಥ ಶಿಶುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಕಳೆದ 5 ವರ್ಷಗಳವಲ್ಲಿ ಬಂಜೆತನದ ಸಮಸ್ಯೆ ಶೇ.20 ರಿಂದ 30 ರಷ್ಟು ಹೆಚ್ಚಿದೆ. ಇದಕ್ಕೆ ಮುಖ್ಯ ಕಾರಣ ಮದ್ಯದ ನಿರಂತರ ಸೇವನೆ.”
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ನಿದ್ರಾಹೀನತೆ ಮತ್ತು ಖಿನ್ನತೆ : ಮನೋತಜ್ಞ ಡಾ. ಸಂದೀಪ್ ಹೀಗೆ ಹೇಳುತ್ತಾರೆ, “ಮದ್ಯ ಸೇವನೆಯಿಂದಾಗಿ ನಿದ್ರಾಹೀನತೆಯ ಸಮಸ್ಯೆ ಹೆಚ್ಚುತ್ತದೆ. ನಿರಂತರ ಒತ್ತಡದ ಸ್ಥಿತಿ ಖಿನ್ನತೆಯಲ್ಲಿ ಬದಲಾಗುತ್ತದೆ. ಒಂದು ವೇಳೆ ಖಿನ್ನತೆ ಸ್ಥಿತಿಯಿಂದ ಹೊರಬರಲು ಪ್ರಯತ್ನ ಮಾಡದೇ ಇದ್ದರೆ, ಮದ್ಯ ಸೇವನೆಯನ್ನು ಹಾಗೆಯೇ ಮುಂದುವರಿಸಿದಲ್ಲಿ ವ್ಯಕ್ತಿ ಗಾಢ ಖಿನ್ನತೆಗೆ ಈಡಾಗಿ ಅದು ಒಮ್ಮೊಮ್ಮೆ ಆತ್ಮಹತ್ಯೆಗೂ ಪ್ರಮುಖ ಕಾರಣವಾಗುತ್ತದೆ.
ಮೆದುಳಿಗೆ ಹಾನಿ : ಡಾ. ಸಂದೀಪ್‌ಹೀಗೆ ಹೇಳುತ್ತಾರೆ, ಮದ್ಯದಿಂದಾಗಿ ಮೆದುಳಿನಲ್ಲಿ ವಿಷಕಾರಕ ಘಟಕಗಳು ಹೆಚ್ಚುತ್ತವೆ. ಆ ಕಾರಣದಿಂದಾಗಿ ನೆನಪಿನ ಶಕ್ತಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಅಷ್ಟೇ ಅಲ್ಲ, ಡಿಮೆನ್ಶಿಯಾದಂತಹ ಸಮಸ್ಯೆಗೂ ಅದು ಕಾರಣವಾಗುತ್ತದೆ. ಮದ್ಯ ಮೆದುಳಿನ ನರಕೋಶಗಳನ್ನು ಹಾಳುಗೆಡಹುತ್ತದೆ. ಇದರಿಂದ ಎಪಿಲೆಪ್ಸಿ ಎಂಬ ಕಾಯಿಲೆಯ ಅಪಾಯ ಹೆಚ್ಚುತ್ತದೆ.
ಗರ್ಭಾವಸ್ಥೆಯಲ್ಲಿ ಮದ್ಯ ಸೇವನೆ ಬೇಡ
ಡಾ. ಸುರೇಶ್‌ಹೇಳುತ್ತಾರೆ, “ಗರ್ಭಾವಸ್ಥೆಯಲ್ಲಿ ಮದ್ಯ ಸೇವನೆ ಮಾಡಲೇಬಾರದು. ಗರ್ಭಿಣಿ ಮದ್ಯ ಸೇವನೆ ಮಾಡಿದಾಗ, ಅದು ಪ್ಲೆಸೆಂಟಾ ಮೂಲಕ ಭ್ರೂಣಕ್ಕೂ ತಲುಪುತ್ತದೆ. ಇದರಿಂದ ಗರ್ಭಸ್ಥ ಶಿಶುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಹಲವಾರು ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಭ್ರೂಣದ ಪಚನಾಂಗಗಳು ಬೆಳವಣಿಗೆಯಾಗದ ಹೊತ್ತಿನಲ್ಲಿ ಮದ್ಯ ಸೇವನೆ ಹಲವು ಪರಿಣಾಮಗಳನ್ನು ಉಂಟು ಮಾಡುತ್ತದೆ. ವಯಸ್ಕನೊಬ್ಬನ ದೇಹದಲ್ಲಿ ಮದ್ಯ ಬ್ರೇಕ್‌ಡೌನ್ ಆಗುವ ಪ್ರಮಾಣಕ್ಕಿಂತ ಶಿಶುವಿನ ದೇಹದಲ್ಲಿ ಮದ್ಯದ ಪ್ರಭಾವ ಬಹಳ ಸಮಯದವರೆಗೆ ಹಾಗೆಯೇ ಉಳಿದಿರುತ್ತದೆ. ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ಮಾಡುವ ಮದ್ಯ ಸೇವನೆ ಗರ್ಭಸ್ಥ ಶಿಶುವಿಗೆ ಮಾರಕ ಪರಿಣಾಮ ಉಂಟು ಮಾಡುತ್ತದೆ.
ಮದ್ಯದಿಂದ ಕ್ಯಾನ್ಸರ್
`ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಟು ಕ್ಯಾನ್ಸರ್’ (ಐಎಆರ್‌ಸಿ ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಂಗಸಂಸ್ಥೆ). ಈ ಸಂಸ್ಥೆಯು ಮದ್ಯವನ್ನು ಗ್ರೂಪ್ 1 ಕಾರ್ಸಿನೋಜೆನ್‌ನ ರೂಪದಲ್ಲಿ ವರ್ಗೀಕರಣ ಮಾಡಿದೆ. ಇದರರ್ಥ ಇಷ್ಟೇ. ಮದ್ಯದಿಂದ ಕ್ಯಾನ್ಸರ್‌ಆಗುತ್ತದೆ ಎಂಬುದಕ್ಕೆ ಅದೇ ಪುರಾವೆಯಾಗಿದೆ. ಮದ್ಯ ತಲೆ, ಕತ್ತು, ಅನ್ನನಾಳ, ಯಕೃತ್, ಕರುಳು ಹಾಗೂ ಸ್ತನ ಕ್ಯಾನ್ಸರಿಗೂ ಒಂದು ಪ್ರಮುಖ ಕಾರಣವಾಗಿದೆ.
ಡಾ. ಜಯಗೋಪಾಲ್ ಹೀಗೆ ಹೇಳುತ್ತಾರೆ, “ಮದ್ಯದಿಂದ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಹಾಗೂ ಇತರೆ ಬಗೆಯ ಕ್ಯಾನ್ಸರ್‌ಗಳ ಅಪಾಯ ಹೆಚ್ಚುತ್ತದೆ. ಮದ್ಯದ ಪ್ರಮಾಣಕ್ಕನುಗುಣವಾಗಿ ಕ್ಯಾನ್ಸರ್‌ನ ಅಪಾಯ ಕೂಡ ಹೆಚ್ಚುತ್ತದೆ.
ಪ್ರಯತ್ನ ಮಾಡಿದರೆ ಮದ್ಯದ ಚಟದಿಂದ ಸುಲಭವಾಗಿ ಮುಕ್ತಿ ಕಂಡುಕೊಳ್ಳಬಹುದಾಗಿದೆ. ಕೆಲವು ವರ್ಷಗಳ ಹಿಂದೆ ಹಿಂದಿ ಸಿನಿಮಾ ತಾರೆ ಪೂಜಾ ಭಟ್ ಡಿಸೆಂಬರ್ 25ರಿಂದ ಮದ್ಯವನ್ನು ತೊರೆದರು. ತಂದೆಯ ಒಂದು ಸಂದೇಶ ತನಗೆ ಮದ್ಯದ ವ್ಯಸನದಿಂದ ಹೊರಗೆ ಬರಲು ಪ್ರೇರಣೆ ನೀಡಿತೆಂದು ಆಕೆ ಹೇಳಿಕೊಂಡಿದ್ದಾರೆ. ಇನ್ನು ಮುಂದಿನ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ಕಳೆಯುವ ತಮ್ಮ ನಿರ್ಧಾರದ ಬಗ್ಗೆ ಅವರಿಗೆ ಬಹಳ ಖುಷಿ ಇದೆ.
ವಾಸ್ತವದಲ್ಲಿ ದೃಢ ನಿರ್ಧಾರದೊಂದಿಗೆ ಮದ್ಯ ಸೇವನೆ ನಿಲ್ಲಿಸುವ ಬಗ್ಗೆ ಪ್ರಯತ್ನಪಟ್ಟರೆ, ಆ ಚಟದಿಂದ ಹೊರ ಬರುವುದು ಖಂಡಿತ ಕಠಿಣವೇನಲ್ಲ.
– ಜಿ. ದಿವ್ಯಾ