ಸಾಮಾನ್ಯವಾಗಿ ನಮಗೆ ಸುಸ್ತು, ಸಂಕಟ, ತಲೆನೋವು ಎನಿಸಿದಾಗ ಟೀ ಕುಡಿಯುತ್ತೇವೆ. ಚಹಾದಿಂದ ನಮ್ಮ ಆಯಾಸವೇನೋ ಪರಿಹಾರವಾಗುತ್ತದೆ. ಆದರೆ ಇದರಿಂದ ಪಚನಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ತಲೆದೋರುತ್ತವೆ.
ಉದಾ : ಹೊಟ್ಟೆಯಲ್ಲಿ ಗ್ಯಾಸ್, ಹುಳಿತೇಗಿನ ಕಾರಣ ಎದೆಯುರಿ, ಅಸಿಡಿಟಿ ಹೆಚ್ಚುವಿಕೆ, ಹಸಿವು ಹಿಂಗುವಿಕೆ ಇತ್ಯಾದಿ.
ಆಗ ಎಷ್ಟೋ ಸಲ ನಾವು ಈ ಹಾಳು ಟೀ ಕುಡಿಯುವುದನ್ನೇ ಬಿಟ್ಟುಬಿಡಬೇಕು ಅಂದುಕೊಳ್ತೀವಿ. ಆದರೆ ಇದು ಬಹು ದಿನಗಳ ಅಭ್ಯಾಸವಾದ್ದರಿಂದ, ಇದನ್ನು ಬಿಡುವುದು ಖಂಡಿತಾ ಸುಲಭವಲ್ಲ. ಹೀಗಿರುವಾಗ ಒಂದು ಉತ್ತಮ ಚಹಾ ಮೇಲಿನ ಯಾವುದೇ ಬಗೆಯ ಸಮಸ್ಯೆ ನೀಡದೆ ಆರೋಗ್ಯಕ್ಕೂ ಹಿತಕರ ಎನಿಸಿದರೆ ಅದೆಷ್ಟು ಒಳ್ಳೆಯದಲ್ಲವೇ….?
ಅರೆರೆ…. ನಾವು ಗ್ರೀನ್ ಟೀ ಬಗ್ಗೆ ಮಾತನಾಡುತ್ತಿದ್ದೇವೆ ಅಂದುಕೊಂಡಿರಾ? ಖಂಡಿತಾ ಇಲ್ಲ! ಬದಲಿಗೆ ಹರ್ಬಲ್ ಟೀ ಬಗ್ಗೆ ಹೇಳುತ್ತಿದ್ದೇವೆ. ಈ ಚಹಾ ಕ್ಯಾಲೋರಿಫ್ರೀ ಎನಿಸಿದೆ. ನೋಡಲಿಕ್ಕೂ ಇದು ಮಾಮೂಲಿ ಟೀ ತರಹವೇ ಇರುತ್ತದೆ. ಆದರೆ ಸಾಮಾನ್ಯ ಟೀಯಲ್ಲಿರುವ ಅವಗುಣಗಳು ಈ ಹರ್ಬಲ್ ಟೀನಲ್ಲಿ ಇಲ್ಲ. ಇದು ಹಲವು ಬಗೆಯ ಹೂ, ಬೀಜ, ಎಲೆ, ಬೇರು, ನಾರು, ಗಿಡಮೂಲಿಕೆಗಳ ಸಮ್ಮಿಶ್ರಣ ಆಗಿರುತ್ತದೆ. ಹರ್ಬಲ್ ಟೀ ನಮ್ಮನ್ನು ಫಿಟ್ ಆಗಿ ಇಡುವುದು ಮಾತ್ರಲ್ಲವದೆ, ಇದರ ನಿಯಮಿತ ಸೇವನೆಯಿಂದ ಇನ್ನೂ ಹೆಚ್ಚಿನ ಲಾಭಗಳು ಸಿಗುವಂತೆ ಮಾಡುತ್ತದೆ. ಅವು ಯಾವುವೆಂದರೆ :
ಹರ್ಬಲ್ ಟೀನಲ್ಲಿ ಆ್ಯಂಟಿ ಆಕ್ಸಿಡೆಂಟ್, ಧಾರಾಳವಾಗಿ ತುಂಬಿರುತ್ತವೆ. ಇದು ಹೃದ್ರೋಗಕ್ಕೆ ಬಲು ಲಾಭಕಾರಿ. ಹೀಗಾಗಿ ಹರ್ಬಲ್ ಟೀ ಸೇವಿಸುವುದರಿಂದ ಹೃದ್ರೋಗದ ಯಾವ ಅಪಾಯವೂ ತಟ್ಟದು. ಜೊತೆಗೆ ಇದರಲ್ಲಿನ ಫ್ಲೇವಿನಾಯ್ಡ್ಸ್ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
ಹರ್ಬಲ್ ಟೀ ದೈಹಿಕ ಶಕ್ತಿ ಹೆಚ್ಚಿಸುತ್ತದೆ.
ಈ ಟೀ ಸೇವನೆಯು ವಾಂತಿ, ಭೇದಿ, ಮಲಬದ್ಧತೆ, ವಾಕರಿಕೆ, ಹೊಟ್ಟೆ ತೊಳೆಸುವಿಕೆ ಇತ್ಯಾದಿ ರೋಗಗಳಿಂದ ಮುಕ್ತಿ ನೀಡುತ್ತದೆ.
ಹರ್ಬಲ್ ಟೀನಲ್ಲಿ ವಿಟಮಿನ್`ಡೀ’ ಧಾರಾಳವಾಗಿದೆ. ಇದು ನಮ್ಮ ಮೂಳೆಗಳನ್ನು ಸದೃಢಗೊಳಿಸುತ್ತದೆ. ಇದು ಸಂಧಿವಾತ, ಆರ್ಥ್‌ರೈಟಿಸ್ ತಗುಲದಂತೆ ನಮ್ಮನ್ನು ರಕ್ಷಿಸುತ್ತದೆ.
ಹರ್ಬಲ್ ಟೀಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಿನರಲ್, ಐರನ್, ಕ್ಯಾಲ್ಶಿಯಂ, ಸಿಲಿಕಾ ಇತ್ಯಾದಿಗಳಿವೆ. ಈ ಟೀಯಲ್ಲಿ ಇರುವಂಥ ಐರನ್‌ರಕ್ತದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಕ್ಯಾಲ್ಶಿಯಂ ಸಿಲಿಕಾ ಸ್ವಸ್ಥ ಮೂಳೆ, ಕೂದಲು, ಉಗುರು, ಹಲ್ಲುಗಳಿಗೆ ಪೂರಕ.
ಹರ್ಬಲ್ ಟೀಯಲ್ಲಿ ಫ್ಲೋರೈಡ್‌ಗಳಿರುತ್ತದೆ, ಇದು ನಮ್ಮ ದಂತ ರಕ್ಷಣೆಗೆ ಹೆಚ್ಚು ಪೂರಕ. ಹಲ್ಲು ಕೊಳೆತು ಹೋಗದಂತೆ ರಕ್ಷಿಸುತ್ತದೆ.
ಹರ್ಬಲ್ ಟೀ ಸ್ಟ್ರೆಸ್ ಲೆವೆಲ್‌ನ್ನು ಕಡಿಮೆ ಮಾಡಿ ದೇಹ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಇದು ಚಿಂತೆ ದೂರಗೊಳಿಸಿ, ನಿದ್ರಾಹೀನತೆಯನ್ನು ಸುಧಾರಿಸುತ್ತದೆ. ಆರಂಭದ ಸೋಂಕು ಕಾಡದಂತೆ ಸಲಹುತ್ತದೆ.
ಇಂದು ಅಧಿಕ ರಕ್ತದ ಒತ್ತಡ ಹೆಚ್ಚು ಜನರನ್ನು ಕಾಡುತ್ತಿದೆ. ಹೈ ಬಿ.ಪಿ.ಯಿಂದ ಕಿಡ್ನಿ, ಹೃದಯಕ್ಕೆ ದುಷ್ಪರಿಣಾಮ ಆಗುತ್ತದೆ. ಹರ್ಬಲ್ ಟೀ ನೈಸರ್ಗಿಕವಾಗಿ ಯಾವುದೇ ಸೈಡ್ ಎಫೆಟ್ಸ್ ಇಲ್ಲದೆ, ಹೈ ಬಿ.ಪಿ.ಯನ್ನು ಕಂಟ್ರೋಲ್ ಮಾಡಲು ನೆರವಾಗುತ್ತದೆ.
ಹರ್ಬಲ್ ಟೀ ಡಯಾಬಿಟೀಸ್, ಸ್ಥೂಲತೆ, ಕೊಲೆಸ್ಟ್ರಾಲ್ ಲೆವೆಲ್ ನಿಯಂತ್ರಿಸಲು ಸಹಾಯಕ. ಹೊಟ್ಟೆ, ನಿತಂಬಗಳ ಬಳಿ ಸಂಗ್ರಹಗೊಂಡ ಕೊಬ್ಬನ್ನು ನಿವಾರಿಸುತ್ತದೆ.
ಅನೇಕ ವಿಧಗಳಲ್ಲಿ ಲಭ್ಯ
ಹರ್ಬಲ್ ಟೀ ಸಹ ಅನೇಕ ವೆರೈಟಿಗಳಲ್ಲಿ ಲಭ್ಯ. ಶುಂಠಿ, ಲೆಮನ್ ಗ್ರಾಸ್, ಪೆಪರ್‌ಮಿಂಟ್, ಕ್ಯಾರಾಮೈಲ್, ಲ್ಯಾವೆಂಡರ್, ದಾಲ್ಚಿನ್ನಿ, ಏಲಕ್ಕಿ, ಲವಂಗ ಇತ್ಯಾದಿ. ಎಷ್ಟೋ ಕಂಪನಿಗಳು ತೂಕ ನಿಯಂತ್ರಿಸಲೆಂದೇ ಸ್ಪೆಷಲ್ ಹರ್ಬಲ್ ಟೀ ತಯಾರಿಸುತ್ತಿದೆ. ನೀವು ನಿಮ್ಮ ಅಗತ್ಯ ಮತ್ತು ಆಯ್ಕೆಗೆ ತಕ್ಕಂತೆ ಸೆಲೆಕ್ಟ್ ಮಾಡಿ. ಸಾಮಾನ್ಯವಾಗಿ ಮಹಿಳೆಯರು ಒಂದು ದಿನಕ್ಕೆ 3 ಸಲ ಹರ್ಬಲ್ ಟೀ ಸೇವಿಸಲು ಆರಂಭಿಸುತ್ತಾರೆ. ಆಗ ಬೇಗ ಬೇಗ ತೂಕ ಕಡಿಮೆ ಆಗಲಿ ಎಂಬುದು ಅವರ ಉದ್ದೇಶ. ಆದರೆ ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆಧುನಿಕ ಡಯೇಟೀಶಿಯನ್‌ರ ಪ್ರಕಾರ, ಹರ್ಬಲ್ ಟೀ ಸೇವಿಸುವ ಸರಿಯಾದ ಸಮಯವೆಂದರೆ, ಊಟದ ನಂತರ. ಆದರೆ ಹೆಚ್ಚಿನ ಮಹಿಳೆಯರು ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಬೇಗ ಬೇಗ ತೂಕ ಕರಗಿಸಬಹುದೆಂದು ಲೆಕ್ಕಹಾಕುತ್ತಾರೆ. ನೀವೆಂದೂ ಇಂಥ ತಪ್ಪು ಮಾಡಬೇಡಿ. ಹೀಗೆ ಮಾಡುವುದರಿಂದ ನೀವು ಫಿಟ್ ಆಗಿರುವ ಬದಲು ದುರ್ಬಲರಾಗುತ್ತೀರಿ. ಆದ್ದರಿಂದ ಬ್ಯಾಲೆನ್ಸ್ಡ್ ಫುಡ್ ಜೊತೆ, ಪೌಷ್ಟಿಕ ಆಹಾರದ ಸರಿಯಾದ ಪ್ರಮಾಣವಿದ್ದಾಗ ಇದು ಸಹಕಾರಿ.
– ಪ್ರತಿನಿಧಿ