ಮಧ್ಯಮ ವರ್ಗದ ಜೀವನದಲ್ಲಿ ಹಣಕಾಸಿನ ಉಳಿತಾಯ ಎಂದೊಡನೆ ದೊಡ್ಡ ತಲೆನೋವು ಶುರುವಾಗುತ್ತದೆ. ನಮ್ಮಿಂದ ಉಳಿತಾಯ ಸಾಧ್ಯವೇ ಇಲ್ಲ ಎಂದು ನಿರ್ಲಕ್ಷಿಸುವ ಬದಲು, ಇರುವುದರಲ್ಲಿ ಹೇಗೆ ಹಣಕಾಸಿನ ನಿರ್ವಹಣೆ ಮಾಡುವುದೆಂದು ವಿವರವಾಗಿ ತಿಳಿಯೋಣವೇ....?
ಜೀವನದಲ್ಲಿ ಹಣಕಾಸಿಗೆ ಅದರದೇ ಆದ ಮಹತ್ವವಿರುವುದು ನಮಗೆಲ್ಲ ಗೊತ್ತಿರುವ ವಿಷಯವೇ! ನಮ್ಮ ಸಂಪಾದನೆಯ ಹಣದಲ್ಲಿ ನೆಮ್ಮದಿಯ ಜೀವನವನ್ನು ನಡೆಸಲು ಎಷ್ಟು ಹಣ ಖರ್ಚು ಮಾಡಬಹುದು, ಮುಂದಿನ ದಿನಗಳಲ್ಲಿ ಕೂಡ ಸುಖಮಯವಾಗಿ ಕಳೆಯಲು ಎಷ್ಟು ಹಣ ಉಳಿತಾಯ ಮಾಡಬೇಕಾಗುವುದು ಎಂಬ ವಿಷಯದಲ್ಲಿ ಹಲವರಿಗೆ ಸ್ಪಷ್ಟತೆ ಇರುವುದಿಲ್ಲ. ಈ ಕೆಳಗಿನ ಸಲಹೆಗಳನ್ನು ಗಮದಲ್ಲಿಟ್ಟುಕೊಂಡರೆ ಹಣಕಾಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗಲಿದೆ.
50-30-20ರ ನಿಯಮ ನಾವು ನಮ್ಮ ಆದಾಯವನ್ನು ಈ ನಿಯಮದಂತೆ ವಿನಿಯೋಗಿಸುವುದು ಸದಾ ಅಪೇಕ್ಷಣೀಯ. ಆದಾಯದ 50%ರಷ್ಟನ್ನು ನಮ್ಮ ಪ್ರತೀ ತಿಂಗಳಿನ ಅಗತ್ಯಗಳಾದ ಮನೆ ಬಾಡಿಗೆ, ಪ್ರಾವಿಷನ್, ಹಾಲು, ನೀರು, ವಿದ್ಯುಚ್ಛಕ್ತಿ, ಬೇರೆ ಬೇರೆ ಸಾಲಗಳಿಗೆ ಕಟ್ಟಬೇಕಾದ ಸಮಭಾಜಿತ ಮಾಸಿಕ ಕಂತುಗಳು ಇಂಥವುಗಳಿಗಾಗಿ ಮೀಸಲಿಡಬೇಕು.
ಆದಾಯದ 30%ರಷ್ಟನ್ನು ಮನರಂಜನೆ ಅಂದರೆ ಟಿವಿ ವೀಕ್ಷಣೆಯ ಕೇಬಲ್/ಡಿಶ್ ಟಿವಿಯ ಮಾಸಿಕ ಬಾಡಿಗೆ, ಸಿನಿಮಾ ಮಂದಿರದ ವೆಚ್ಚ, ಹೋಟೆಲ್ ನ ಊಟ, ತಿಂಡಿ, ಪ್ರವಾಸ ಮುಂತಾದವುಗಳಿಗೆಂದು ಖರ್ಚು ಮಾಡಬೇಕಾದೀತು. ಉಳಿದ 20%ರಷ್ಟನ್ನು ನಾವು ಉಳಿತಾಯ ಮಾಡಲೇಬೇಕು. ಇದು ಕನಿಷ್ಠ ಮೊತ್ತ. ಇದಕ್ಕಿಂತ ಹೆಚ್ಚಿಗೆ ಉಳಿತಾಯ ಮಾಡುವ ಪ್ರಯತ್ನ ಮಾಡಬೇಕು. ಹೆಚ್ಚು ಹೆಚ್ಚು ಉಳಿತಾಯ ಮಾಡಿದಷ್ಟೂ ಭವಿಷ್ಯದಲ್ಲಿ ಹೆಚ್ಚಿನ ಮೊತ್ತ ನಮ್ಮ ಬಳಿ ಇರುವಂತಾಗುವುದು. ಹಾಗೆಂದು ಈಗಲೇ ಮಾಡಬೇಕಾದ ಅನಿವಾರ್ಯವಾದ ಖರ್ಚುಗಳನ್ನು ಕಡಿಮೆಗೊಳಿಸುವುದು ಎಂದರ್ಥವಲ್ಲ.
ವ್ಯಕ್ತಿಯಿಂದ ವ್ಯಕ್ತಿಗೆ, ಕುಟುಂಬದಿಂದ ಕುಟುಂಬಕ್ಕೆ ಉಳಿತಾಯ ಮಾಡುವ ಶೇಕಡದಲ್ಲಿ ವ್ಯತ್ಯಾಸವಾಗಬಹುದು. ಆದರೂ ಉಳಿತಾಯ ಶೇ.20ಕ್ಕಿಂತ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಬ್ಯಾಂಕ್, ಅಂಚೆ ಕಛೇರಿಯಲ್ಲಿ ಸ್ಥಿರ ಠೇವಣಿಗಳು (ಫಿಕ್ಸೆಡ್ ಡೆಪಾಸಿಟ್ ಅಥವಾ ಎಫ್.ಡಿ), ಮ್ಯೂಚುವೆಲ್ ಫಂಡ್, ಷೇರು, ಚಿನ್ನ ಮುಂತಾದವುಗಳಲ್ಲಿ ಹೂಡಿಕೆಯನ್ನು ಮಾಡಬಹುದು. ಹೆಚ್ಚಿನ ಬಡ್ಡಿಯ ಆಮಿಷದಲ್ಲಿ ಮೋಸ ಹೋಗದಂತೆ, ಸೈಬರ್ ವಂಚಕರ ಜಾಲಕ್ಕೆ ಬೀಳದಂತೆ ಎಚ್ಚರ ವಹಿಸಬೇಕು.
ನಮ್ಮ ತಿಂಗಳ ಸಂಪಾದನೆ ರೂ.50,000 ಇದ್ದರೆ, 50% ಅಂದರೆ ರೂ. 25,000ನ್ನು ತಿಂಗಳ ಅಗತ್ಯ ಖರ್ಚುಗಳಿಗೆ, 30%ನ್ನು ಅಂದರೆ ರೂ.15,000ನ್ನು ಮನರಂಜನೆಗಳಿಗೆ ಹಾಗೂ ಉಳಿದ 20%ನ್ನು ಅಂದರೆ ರೂ. 10,000 ನಾವು ಉಳಿತಾಯ ಮಾಡಲೇಬೇಕಾದ ಮೊತ್ತ. ಮುಂದೆ ಈ ರೀತಿಯ ಉಳಿತಾಯದಿಂದ ದೊರೆತ ಮೊತ್ತವನ್ನು ನಮ್ಮ ಅಗತ್ಯಗಳಿಗೂ, ಸ್ಪಾಶನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಬಳಸಿಕೊಳ್ಳಬಹುದು.

72ರ ನಿಯಮ
ಸಾಮಾನ್ಯವಾಗಿ ನಮ್ಮ ಉಳಿತಾಯದ ಹಣ ದ್ವಿಗುಣಗೊಳ್ಳಲು (ಡಬಲ್ ಆಗಲು) ಎಷ್ಟು ವರ್ಷ ಬೇಕು ಎಂದು ತಿಳಿದುಕೊಳ್ಳುವ ಆಸಕ್ತಿ ನಮಗಿರುತ್ತದೆ. 72 ಎಂಬ ಸಂಖ್ಯೆಯಿಂದ ಬಡ್ಡಿ ದರವನ್ನು ಭಾಗಿಸಿದರೆ ದ್ವಿಗುಣಗೊಳ್ಳಲಿರುವ ವರ್ಷ ನಮಗೆ ತಿಳಿದು ಬರುವುದು. ಹಾಗಾಗಿಯೇ ಇದಕ್ಕೆ 72ರ ನಿಮಯ ಅನ್ನುವುದು. ಉದಾಹರಣೆಗೆ ನಾವು ಬ್ಯಾಂಕ್ ನಲ್ಲೋ, ಅಂಚೆ ಕಛೇರಿಯಲ್ಲೋ ಹಣವನ್ನು ಠೇವಣಿ (ಡೆಪಾಸಿಟ್) ಇಡುತ್ತೇವೆ ಅಂದುಕೊಳ್ಳೋಣ. ಆ ಠೇವಣಿಗೆ ವಾರ್ಷಿಕ ಬಡ್ಡಿ ದರ 8% ಎಂದಿದ್ದರೆ, ಆ ಠೇವಣಿ ಎಷ್ಟು ವರ್ಷದಲ್ಲಿ ದ್ವಿಗುಣಗೊಳ್ಳಲಿದೆ ಎಂದು ನಾವು ತಿಳಿದುಕೊಳ್ಳಬಹುದು.





