ಕಥೆ - ಶುಭಾ ಶ್ರೀನಾಥ್
ತಮ್ಮ ವಯೋಸಹಜ ಬದಲಾವಣೆಗಳಿಂದ ಗಾಬರಿಗೊಂಡಿದ್ದ ಪ್ರಭಾ, ಏನೇನೋ ಚಿಂತೆಗಳಿಗೆ ಒಳಗಾಗಿ ಬಸವಳಿದರು. ಅವರಿಗೆ ಸಮಾಧಾನ ಮಾಡಿದ ಪತಿ, ವೈದ್ಯರ ಬಳಿ ಕರೆದುಕೊಂಡು ಹೋದಾಗ, ಆಮೇಲೆ ನಡೆದದ್ದು ಏನು......?
ತಿಂಡಿ, ಅಡುಗೆ ಮುಗಿಸಿ ಯಜಮಾನರಿಗೆ ಮತ್ತು ಅಳಿಯಂದಿರಿಗೆ ಡಬ್ಬಿ ತುಂಬಿಸಿ ಕೊಟ್ಟು ಇಬ್ಬರನ್ನೂ ಎಂಟು ಗಂಟೆಯ ಹೊತ್ತಿಗೆ ಕಳುಹಿಸುವಷ್ಟರಲ್ಲಿ ಪ್ರಭಾರಿಗೆ ಸಾಕಾಗಿ ಹೋಯಿತು. ಏನೋ ಸುಸ್ತು, ತಲೆಸುತ್ತು, ನಿತ್ರಾಣ ಕೆಲಸ ಮಾಡಲು ಆಸಕ್ತಿಯಿಲ್ಲ, ಊಟ ತಿಂಡಿ ಸೇರುತ್ತಿಲ್ಲ. ಆದರೆ ಸುಸ್ತು ಅಂತ ಕುಳಿತುಕೊಳ್ಳುವ ಹಾಗಿಲ್ಲ. ಮೊನ್ನೆ ಹೋದ ವಾರ ಮಗಳು ಹೆರಿಗೆಗೆಂದು ಬಂದಿದ್ದಾಳೆ. ಅವಳಿಗೆ ಗರ್ಭಕೋಶದಲ್ಲಿ ತೊಂದರೆಯಂತೆ, ಹಾಗಾಗಿ ವೈದ್ಯರು ಪೂರ್ತಿ ಬೆಡ್ ರೆಸ್ಟ್ ಹೇಳಿದ್ದಾರೆ. ಅವಳು ಕುಳಿತಿರುವ ಜಾಗಕ್ಕೆ ಊಟ, ತಿಂಡಿ ಎಲ್ಲಾ ತೆಗೆದುಕೊಂಡು ಹೋಗಿ ಕೊಡಬೇಕು. ಪ್ರಭಾರಿಗೆ ಕೂಡ ಮಗಳು ಮದುವೆಯಾದ ಒಂದೂವರೆ ವರ್ಷದಲ್ಲಿಯೇ ಹೆರಿಗೆಗೆಂದು ಬಂದಿರುವುದು ಖುಷಿಯ ವಿಚಾರವೇ, ಅಜ್ಜಿ ಆಗುವ ಸಂಭ್ರಮ ಇದೆ. ಅದರಲ್ಲೂ ಒಬ್ಬಳೇ ಮಗಳು ಅಂದರೆ ಕೇಳಬೇಕೇ? ಬಿ.ಇ. ಮುಗಿದ ತಕ್ಷಣ ಒಳ್ಳೆಯ ವರ ಸಿಕ್ಕಿದ್ದರಿಂದ ಚೆನ್ನಾಗಿ ಮದುವೆ ಮಾಡಿ ಕೊಡಲಾಯಿತು. ಮಗಳು ಅಳಿಯ ಚೆನ್ನಾಗಿ ಅನ್ಯೋನ್ಯವಾಗಿದ್ದರು.
ಬಹಳ ಬೇಗ ಮಗಳು ಶುಭ ಸುದ್ದಿಯನ್ನು ಕೊಟ್ಟಾಗ ಪ್ರಭಾರಿಗೆ ಮತ್ತು ಯಜಮಾನರಿಗೆ ಸಂತೋಷವಾಯಿತು. ಮಗಳು ಮತ್ತು ಅಳಿಯ ಇಬ್ಬರೇ ಇದ್ದಿದ್ದು, ಹಾಗಾಗಿ ಈಗ ಬೆಡ್ ರೆಸ್ಟ್ ಹೇಳಿದ್ದರು. ``ನಾನು ಅಲ್ಲಿಗೆ ಬಂದರೆ ನಿಮ್ಮಪ್ಪನಿಗೆ ಊಟ, ತಿಂಡಿಗೆ ಕಷ್ಟವಾಗುತ್ತದೆ, ನೀನೇ ಇಲ್ಲಿಗೆ ಬಾ,'' ಎಂದು ಕರೆದರು.
``ಅಮ್ಮಾ, ನಾನು ಅಲ್ಲಿಗೆ ಬಂದರೆ, ಇವರಿಗೂ ಊಟ, ತಿಂಡಿಗೆ ಕಷ್ಟವಾಗುತ್ತದೆ,'' ಮಗಳು ಕೊರಳು ಕೊಂಕಿಸಿ ಹೇಳಿದಳು. ಇದು ಒಬ್ಬರನ್ನೊಬ್ಬರು ಬಿಟ್ಟಿರಲು ಆಗದೇ ಇರುವುದಕ್ಕೆ ಹೇಳುತ್ತಿರುವುದು ಅಂತ ಪ್ರಭಾರಿಗೆ ಗೊತ್ತಿಲ್ಲವೇ? ಅವರೂ ಈ ವಯಸ್ಸು ದಾಟಿ ಬಂದಿದ್ದಾರೆ ಅಲ್ವಾ.....? ಅದರಿಂದ, ``ಇಬ್ಬರೂ ಬನ್ನಿ, ಇಲ್ಲಿಯೇ ಇರಿ. ನಿಮ್ಮ ಯಜಮಾನರಿಗೆ ನಮ್ಮ ಮನೆಯಿಂದ ಆಫೀಸ್‌ಹತ್ತಿರ ಅಲ್ಲವೇನೆ....?'' ಎಂದರು.
``ಆದರೂ ಅಮ್ಮಾ ಬೇಡ, ಇವರಿಗೆ ಸಂಕೋಚವಾಗುತ್ತದೆ. ಹೋಟೆಲ್ ನಲ್ಲೇ ಊಟ ತಿಂಡಿ, ಮಾಡುತ್ತಾರೆ ಬಿಡು.''
``ಆದರೂ ಇಲ್ಲ, ಏನೂ ಇಲ್ಲ. ಇಬ್ಬರೂ ಇಲ್ಲಿಗೇ ಬನ್ನಿ. ನಮ್ಮ ಮನೆ ಇರುವಾಗ ಅಳಿಯಂದಿರು ಹೋಟೆಲ್ ನಲ್ಲಿ ಏಕೆ ಊಟ ತಿಂಡಿ ತಿನ್ನಬೇಕು?'' ಯಜಮಾನರು ಉಪಚಾರ ಮಾಡಿ ಇಬ್ಬರನ್ನೂ ಕರೆದರು.
ಮಾವ, ಅಳಿಯ ಇಬ್ಬರೂ ಫ್ರೆಂಡ್ಸ್ ತರ ರಜಾ ದಿನಗಳಲ್ಲಿ ಹರಟೆ ಹೊಡೆಯುತ್ತಾ, ಕೇರಂ, ಚೆಸ್, ಕಾರ್ಡ್ಸ್ ಆಡುತ್ತಾ, ಟಿವಿ ನೋಡುತ್ತಾ ಇರುತ್ತಾರೆ. ಇವರಿಗೂ ಅಳಿಯಂದಿರು ಬಂದಿರುವುದು ಸಂಭ್ರಮವೇ ಸರಿ. ಹೀಗೆ ಎಲ್ಲವೂ ಸಂತೋಷದಿಂದ ನಡೆಯುತ್ತಿತ್ತು.
ಕೆಲವು ದಿನಗಳಿಂದ ಪ್ರಭಾರಿಗೆ ಏಕೋ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ. ಕಾರಣ ಏನು? ಯೋಚನೆ ಮಾಡತೊಡಗಿದರು. ಹೌದು ನಾನು ಮುಟ್ಟಾಗಿ ಎರಡು ತಿಂಗಳಾಯಿತು. ಅಯ್ಯೋ ರಾಮ, ನಾನು ಮುಟ್ಟಾಗಿಲ್ಲ ಎನ್ನುವುದು ಮರೆತೇ ಹೋಗಿದ್ದೀನಿ. ಅದಕ್ಕೆ ಈ ಸುಸ್ತು, ತಲೆಸುತ್ತು ಎಲ್ಲವೂ ಬರುತ್ತಾ ಇದೆಯೇ? ನನ್ನ ವಯಸ್ಸು 45, ಮಗಳು ಹುಟ್ಟಿದ ಮೇಲೆ ಫ್ಯಾಮಿಲಿ ಪ್ಲಾನಿಂಗ್ ಅಂತ ಏನು ಮಾಡಿಕೊಳ್ಳಲಿಲ್ಲ. ಇನ್ನೊಂದು ಗಂಡು ಮಗು ಬೇಕೆನ್ನುವ ಆಸೆ ಮನೆಯಲ್ಲಿ ಎಲ್ಲರಿಗೂ ಇತ್ತು, ಆದರೆ ಏಕೋ ಮತ್ತೆ ಮಕ್ಕಳಾಗಿರಲಿಲ್ಲ. ಇಷ್ಟು ವರ್ಷಗಳಲ್ಲಿ ಒಂದು ಬಾರಿಯೂ ಹೀಗೆ ಮುಟ್ಟು ತಪ್ಪಿದ್ದಿಲ್ಲ. ಪ್ರತಿ ಬಾರಿಯೂ ಇನ್ನೂ ಒಂದು ವಾರ ಮೊದಲೇ ಹೊರಗಡೆ ಕುಳಿತುಬಿಡುತ್ತಿದ್ದರು. ಆದರೆ ಈಗ ಏಕೆ ಹೀಗಾಯಿತು ಅನಿಸಿತು. ಏನಾದರೂ ಅಯ್ಯೋ ಮಗಳು ಬಾಣಂತನಕ್ಕೆ ಬಂದಾಗ ನನಗೆ ಹೀಗೆ ಆದರೆ ಎಷ್ಟು ಅವಮರ್ಯಾದೆ, ನಾಚಿಕೆ ಅನಿಸಿತು.





