ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ  ಏಳು ವರ್ಷದ ಬಾಲಕ ಸೇರಿದಂತೆ ತನ್ನ ಪತ್ನಿಯ ಕುಟುಂಬದ ಏಳು ಮಂದಿಯನ್ನು ಒಂದು ವಾರದ ಅವಧಿಯಲ್ಲಿ ಕೊಲೆ ಮಾಡಿರುವ ಬೆಚ್ಚಿಬೀಳಿಸುವ ಆಘಾತಕಾರಿ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

ಆರೋಪಿಯು ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ ಎನ್ನಲಾಗಿದೆ.

ಕೊಲೆಗೈದ ಆರೋಪಿ ಇಂದುಶೇಖರ್ (53)ಎಂದು ಗುರುತಿಸಲಾಗಿದ್ದು, ಪೊಲೀಸ್ ವಿಚಾರಣೆ ವೇಳೆ ಕೊಲೆಗಳನ್ನು ತಾನೇ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಈಗಾಗಲೇ ಒಂದು ಮೃತದೇಹವನ್ನು ಪತ್ತೆಹಚ್ಚಲಾಗಿದ್ದು, ಉಳಿದ ಆರು ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮೃತರನ್ನು ಆರೋಪಿಯ ಪತ್ನಿ ಸುನೀತಾ, ಅತ್ತೆ ರೂಪವತಿ, ಭಾವಮೈದುನರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಸೋದರಳಿಯ ಪುನೀತ್ ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ಸುಮಾರು 20 ವರ್ಷಗಳ ಹಿಂದೆ ಸುನೀತಾರನ್ನು ವಿವಾಹವಾಗಿದ್ದ ಶೇಖರ್, ಆಕೆ ತವರು ಮನೆಗೆ ಹೋಗುವ ವಿಚಾರವಾಗಿ ಆಗಾಗ್ಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ದಂಪತಿಯನ್ನು ಮತ್ತೆ ಒಂದುಗೂಡಿಸಲು ಕುಟುಂಬದ ಸದಸ್ಯರು ಹಲವು ಬಾರಿ ಪ್ರಯತ್ನಿಸಿದರೂ ಅವರ ನಡುವಿನ ಭಿನ್ನಾಭಿಪ್ರಾಯಗಳು ಮುಂದುವರಿದಿದ್ದವು. ಸುನೀತಾಳ ತಾಯಿ ಮತ್ತು ಸಹೋದರರು ಆಕೆಗೆ ಬೆಂಬಲ ನೀಡುತ್ತಿದ್ದುದರಿಂದ ಶೇಖರ್ ಕೋಪಗೊಂಡಿದ್ದ. ಹೀಗಾಗಿ ಪತ್ನಿಯ ಕುಟುಂಬದವರನ್ನೇ ಹತ್ಯೆ ಮಾಡಲು ನಿರ್ಧರಿಸಿದ್ದ ಎನ್ನಲಾಗಿದೆ.

ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಂ ವೃತ್ತದ ಸಮೀಪದ 59ನೇ ಕ್ರಾಸ್‌ನ ವಸತಿ ಪ್ರದೇಶದಲ್ಲಿ ಈ ಕೊಲೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಮೂಲಗಳ ಪ್ರಕಾರ, ಶೇಖರ್ ಮೊದಲು ಒರಳುಕಲ್ಲಿನಿಂದ ಸುನೀತಾಳನ್ನು ಕೊಲೆ ಮಾಡಿ, ಆಕೆಯ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ನಂದಿ ಬೆಟ್ಟದ ಸಮೀಪ ಎಸೆದಿದ್ದಾನೆ. ಬಳಿಕ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ, ಅನುಮಾನ ಬಾರದಂತೆ ಸುನೀತಾ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಾನೆ.

ಮರುದಿನ ತನ್ನ ಭಾವಮೈದುನರಾದ ಶಿವಕುಮಾರ್ ಮತ್ತು ಶಂಕರ್ ಅವರನ್ನು ಪಾರ್ಟಿಗಾಗಿ ಮನೆಗೆ ಆಹ್ವಾನಿಸಿ, ಒರಳುಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಅವರ ಪತ್ನಿಯರಾದ ದಿವ್ಯಾ ಮತ್ತು ನಳಿನಿ, ಅತ್ತೆ ರೂಪವತಿ ಹಾಗೂ ಶಿವಕುಮಾರ್ ಅವರ ಏಳು ವರ್ಷದ ಪುತ್ರ ಪುನೀತ್‌ನನ್ನೂ ಹತ್ಯೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ನಳಿನಿಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ಕೈಗೊಂಡ ಪೊಲೀಸರು ನಾಪತ್ತೆಯಾದವರ ವಿವರಗಳನ್ನು ಪರಿಶೀಲಿಸಿ, ಇಂದುಶೇಖರ್‌ನ ಮೇಲೆ ಅನುಮಾನಗೊಂಡು ಎರಡು ದಿನಗಳ ಹಿಂದೆ ಆತನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಆತ ಏಳು ಕೊಲೆಗಳ ಬಗ್ಗೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಕೊಲೆ ಮಾಡಿದ ಬಳಿಕ ಮನೆಯನ್ನು ಸ್ವಚ್ಛಗೊಳಿಸಲು ಮತ್ತು ರಕ್ತದ ಕಲೆಗಳನ್ನು ಅಳಿಸಲು ಆರೋಪಿ ರಾಸಾಯನಿಕಗಳನ್ನು ಬಳಸಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆಗಳಿಗೆ ಬಳಸಲಾಗಿದೆ ಎನ್ನಲಾದ ಒರಳುಕಲ್ಲು ಮತ್ತು ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ ಮೃತದೇಹಗಳನ್ನು ಪತ್ತೆಹಚ್ಚಲು ಸಹಾಯವಾಗುವಂತೆ ಆರೋಪಿಯನ್ನು ಶಂಕಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ