ಮಾವಿನ ಸ್ವಾದಿಷ್ಟ ಶ್ರೀಖಂಡ

ಸಾಮಗ್ರಿ : 1 ಲೀ. ಗಟ್ಟಿ ಹಾಲು, ಒಂದಿಷ್ಟು ಏಲಕ್ಕಿಪುಡಿ, ಹಾಲಲ್ಲಿ ನೆನೆಹಾಕಿದ ಕೇಸರಿ, 2 ಮಾಗಿದ ಮಾವು, ರುಚಿಗೆ ತಕ್ಕಷ್ಟು ಸಕ್ಕರೆ, 1 ಚಮಚ ಮೊಸರು, ತುಸು ಗುಲಾಬಿ ಶರಬತ್ತು.

ವಿಧಾನ : ದಪ್ಪ ತಳದ ಸ್ಟೀಲ್ ಪಾತ್ರೆಯಲ್ಲಿ ಹಾಲು ಕಾಯಿಸಿ. ಅದರ ಅರ್ಧಕ್ಕೂ ಹೆಚ್ಚು ಭಾಗ ಹಿಂಗುವವರೆಗೂ ಮಂದ ಉರಿಯಲ್ಲಿ ಕುದಿಸುತ್ತಾ ಕೈಯಾಡಿಸಿ. ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ಇದಕ್ಕೆ ಮೊಸರು ಬೆರೆಸಿ ಹೆಪ್ಪು ಹಾಕಿ. ಹೀಗೆ ಹೆಪ್ಪಾದ ಹೊಸ ಗಟ್ಟಿ ಮೊಸರನ್ನು ತೆಳು ಬಟ್ಟೆಯಲ್ಲಿ ಗಂಟು ಕಟ್ಟಿ ತೇವಾಂಶ ಹೋಗಲಾಡಿಸಿ. ಈಗ ಮಾವಿನ ಹೋಳನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಗಟ್ಟಿ ಮೊಸರಿಗೆ ಸಕ್ಕರೆ, ಏಲಕ್ಕಿ, ಕೇಸರಿ, ಮಾವಿನ ಪೇಸ್ಟ್, ಗುಲಾಬಿ ಶರಬತ್ತು ಬೆರೆಸಿ ಗೊಟಾಯಿಸಿ. ಇದನ್ನು 2-3 ತಾಸು ಫ್ರಿಜ್‌ನಲ್ಲಿರಿಸಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಿರಿ.

ಮ್ಯಾಂಗೋ ಸ್ಯಾಂಡ್‌ವಿಚ್‌

ಸಾಮಗ್ರಿ : 1-2 ಮಾಗಿದ ಮಾವು, ಅರ್ಧ ಲೀ. ಗಟ್ಟಿ ಹಾಲು, 8-10 ಬ್ರೆಡ್‌ ಸ್ಲೈಸ್‌. ಒಂದಿಷ್ಟು ಏಲಕ್ಕಿಪುಡಿ, ಹಾಲಲ್ಲಿ ನೆನೆಸಿದ ತುಸು ಕೇಸರಿ, ಅರ್ಧ ಸೌಟು ತುಪ್ಪ, ರುಚಿಗೆ ತಕ್ಕಷ್ಟು ಸಕ್ಕರೆ.

ವಿಧಾನ : ಹಾಲನ್ನು ಕಾಯಿಸಿ ಮಂದ ಉರಿಯಲ್ಲಿ ಚೆನ್ನಾಗಿ ಕುದಿಸುತ್ತಾ ಅರ್ಧದಷ್ಟು ಹಿಂಗುವಂತೆ ಮಾಡಿ. ಸಕ್ಕರೆ ಹಾಕಿ ಕದಡಿಕೊಂಡು ಇದನ್ನು ಕೆಳಗಿಳಿಸಿ ಆರಲು ಬಿಡಿ. ಬ್ರೆಡ್‌ ಸ್ಲೈಸ್‌ನ್ನು ಗುಂಡಗೆ ಕತ್ತರಿಸಿ, ಫ್ಯಾನಿನ ಕೆಳಗೆ ಪಂಚೆಯ ಮೇಲೆ ಒಣಗಲು ಬಿಡಿ. 1-2 ಗಂಟೆಗಳ ನಂತರ ಇವನ್ನು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಮಾವಿನ ಸಿಪ್ಪೆ ಹೆರೆದು, ಹೋಳು ಮಾಡಿ, ನುಣ್ಣಗೆ ಪೇಸ್ಟ್ ಮಾಡಿ. ಒಂದು ದೊಡ್ಡ ಬಟ್ಟಲಿಗೆ ಕಾದಾರಿದ ಹಾಲು, ಮಾವಿನ ಪೇಸ್ಟ್, ನೆನೆದ ಕೇಸರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕದಡಿಕೊಳ್ಳಿ. ಕರಿದ ಬ್ರೆಡ್‌ ಸ್ಲೈಸ್‌ಗಳನ್ನು ಇದರಲ್ಲಿ ಸ್ವಲ್ಪ ಹೊತ್ತು ನೆನೆಹಾಕಿ, ಹೊರತೆಗೆದು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

 

ಮಾವು ಇಂಗಿನ ಉಪ್ಪಿನಕಾಯಿ

ಸಾಮಗ್ರಿ : 500 ಗ್ರಾಂ ಹುಳಿ ಮಾವಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಅರ್ಧ ಚಮಚ ಅರಿಶಿನ, ಅರ್ಧ ಸೌಟು ರೀಫೈಂಡ್‌ ಆಯಿಲ್‌, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ.

ವಿಧಾನ : ಮಾವನ್ನು ಶುಚಿಗೊಳಿಸಿ, ಚೆನ್ನಾಗಿ ಒರೆಸಿ, ಸಣ್ಣ ಹೋಳುಗಳಾಗಿ ಕತ್ತರಿಸಿ. ಒಂದು ಗಾಜಿನ ಭರಣಿಗೆ ಈ ಮಾವಿನ ಹೋಳು, ಉಪ್ಪು, ಅರಿಶಿನ ಹಾಕಿ, ಚೆನ್ನಾಗಿ ಕುಲುಕಿ 3-4 ದಿನ ಬಾಯಿಕಟ್ಟಿ ಬಿಸಿಲಿಗಿಡಿ. ಆಮೇಲೆ ಇದನ್ನು ಬೇಸನ್ನಿಗೆ ಹರಡಿಕೊಂಡು ಖಾರ, ಇಂಗು, ಒಗ್ಗರಣೆ ಕೊಟ್ಟು ಕಾದಾರಿದ ಎಣ್ಣೆ ಹಾಕಿ ಎಲ್ಲವನ್ನೂ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಇದನ್ನು ಭರಣಿಗೆ ತುಂಬಿಸಿ ಬಾಯಿಕಟ್ಟಿ ಮತ್ತೆ 4-5 ದಿನ ಬಿಸಿಲಿಗಿಡಿ. ಆಮೇಲೆ ಇದು ಬಳಸಲು ರೆಡಿ!

ಬೇಬಿಕಾರ್ನ್‌ ಉಪ್ಪಿನಕಾಯಿ

ಸಾಮಗ್ರಿ : 1 ಕಪ್‌ ತಾಜಾ ಅಮೆರಿಕನ್‌ ಸ್ವೀಟ್‌ ಬೇಬಿಕಾರ್ನ್‌ ದಿಂಡಿನ ಹೋಳು, 5-6 ಹಸಿ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ನಿಂಬೆರಸ, 7-8 ಎಸಳು ಜಜ್ಜಿದ ಬೆಳ್ಳುಳ್ಳಿ, ಅರ್ಧ ಸಣ್ಣ ಚಮಚ ಅರಿಶಿನ, ಒಗ್ಗರಣೆಗೆ ಅರ್ಧ ಸೌಟು ರೀಫೈಂಡ್‌ ಎಣ್ಣೆ, ಸಾಸುವೆ, ಜೀರಿಗೆ, ಮೆಂತ್ಯ, ಇಂಗು, ಸೋಂಪು.

ವಿಧಾನ : ಬೇಬಿಕಾರ್ನ್‌ ದಿಂಡನ್ನು ಶುಚಿಗೊಳಿಸಿ, ಗುಂಡಗಿನ ಬಿಲ್ಲೆಗಳಾಗಿ ಹೆಚ್ಚಿಕೊಂಡು, 1-2 ನಿಮಿಷ ಕುದಿ ನೀರಿನಲ್ಲಿ ಬೇಯಿಸಿ. ಆಮೇಲೆ ಇದು ಆರಿದ ನಂತರ ಚೆನ್ನಾಗಿ ಒರೆಸಿ, ಒಣಗಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಹೆಚ್ಚಿದ ಹಸಿಮೆಣಸು, ಬೆಳ್ಳುಳ್ಳಿ, ಉಳಿದೆಲ್ಲ ಮಸಾಲೆ ಹಾಕಿ ಕೆದಕಿ. ಬೇಬಿಕಾರ್ನ್‌ ಸೇರಿಸಿ ಹದನಾಗಿ ಬಾಡಿಸಿ, ಕೆಳಗಿಳಿಸಿ. ಇದಕ್ಕೆ ನಿಂಬೆಹಣ್ಣು ಹಿಂಡಿಕೊಂಡು ಚೆನ್ನಾಗಿ ಬೆರೆಸಿ ಜಾರ್‌ಗೆ ತುಂಬಿಸಿಡಿ.

ಮ್ಯಾಂಗೋ ಕೋಲ್ಡ್ ಸೂಪ್

ಸಾಮಗ್ರಿ : 2 ಮಾಗಿದ ಮಾವು, ಅರ್ಧ ಚಮಚ ಜಲಜೀರಾ, ಅರ್ಧ ಕಪ್‌ ಹುಳಿಮೊಸರು, 2 ಚಮಚ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಬಿಳಿ ಮೆಣಸು, 2-3 ಚಮಚ ಫ್ರೆಶ್‌ ಕ್ರೀಂ, ಅರ್ಧ ಸಣ್ಣ ಚಮಚ ಗುಲಾಬಿ ಜಲ, ಒಂದಿಷ್ಟು ಖಾರಾ ಮಿಕ್ಸ್ ಚರ್‌.

ವಿಧಾನ : ಮೊದಲು ಮಾವಿನ ಸಿಪ್ಪೆ ಹೆರೆದು, ಅದರ ತಿರುಳನ್ನು ಬೇರ್ಪಡಿಸಿ. ಆಮೇಲೆ ಮಿಕ್ಸಿಗೆ ಮಾವಿನ ತಿರುಳು, ಮೊಸರು, ಉಪ್ಪು, ಸಕ್ಕರೆ, ಬಿಳಿಮೆಣಸು, ಕ್ರೀಂ ಬೆರೆಸಿ ತಿರುವಿಕೊಳ್ಳಿ. ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಅದಕ್ಕೆ ಈ ಮಿಶ್ರಣ ಹಾಕಿ ಮಂದ ಉರಿಯಲ್ಲಿ ಕುದಿಸಬೇಕು. ಇದನ್ನು ಕೆಳಗಿಳಿಸಿ ಚೆನ್ನಾಗಿ ಆರಿದ ನಂತರ, ಫ್ರಿಜ್‌ನಲ್ಲಿರಿಸಿ ಚಿಲ್ ‌ಮಾಡಿ. ಆಮೇಲೆ ಇದಕ್ಕೆ ಚಿತ್ರದಲ್ಲಿರುವಂತೆ ಒಂದಿಷ್ಟು ಮಾವಿನ ತಿರುಳು, ಜಲಜೀರಾ ಪೌಡರ್‌, ಕ್ರೀಂ, ಮಿಕ್ಸ್ ಚರ್‌ ಸೇರಿಸಿ ಸವಿಯಲು ಕೊಡಿ.

ಮ್ಯಾಂಗೋ ಪಕೋಡ

ಸಾಮಗ್ರಿ : 2-3 ಮಾವು, 100 ಗ್ರಾಂ ಹೆಸರುಬೇಳೆ, 1 ಸಣ್ಣ ಚಮಚ ತುರಿದ ಹಸಿಶುಂಠಿ, 1 ಕಪ್‌ ಕೆನೆ ಮೊಸರು, ಕರಿಯಲು ಎಣ್ಣೆ, 2 ಚಮಚ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸಕ್ಕರೆ, ಹುಣಿಸೆಯ ಹುಳಿಸಿಹಿ ಚಟ್ನಿ, ಹುರಿದು ಪುಡಿ ಮಾಡಿದ ಜೀರಿಗೆ, ಒಂದಿಷ್ಟು ಕೊ.ಸೊಪ್ಪು.

ವಿಧಾನ : ಹೆಸರುಬೇಳೆಯನ್ನು 3-4 ತಾಸು ನೆನೆಹಾಕಿ. ಇದರ ಅರ್ಧ ಭಾಗವನ್ನು ತರಿತರಿಯಾಗಿ, ಉಳಿದರ್ಧ ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಮಾವನ್ನು ಸಣ್ಣ ಹೋಳು ಮಾಡಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಒಂದು ಬಟ್ಟಲಿಗೆ ರುಬ್ಬಿದ ಹಿಟ್ಟು, ಮಾವಿನ ಪೇಸ್ಟ್, ತುರಿದ ಶುಂಠಿ, ಕಡಲೆಹಿಟ್ಟು, ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಇದು ಪಕೋಡ ಮಿಶ್ರಣದ ಹದಕ್ಕೆ ಇರಬೇಕು, ತೆಳ್ಳಗಲ್ಲ. ಇದರಿಂದ ಪಕೋಡ ಆಕಾರದಲ್ಲಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿಯಿರಿ. ಆಮೇಲೆ ಇವನ್ನು ಬಿಸಿ ನೀರಿಗೆ ಹಾಕಿಡಿ. ಮೊಸರಿಗೆ ಉಳಿದ ಮಾವಿನ ತಿರುಳು, ಉಪ್ಪು, ಮಸಾಲೆ ಹಾಕಿ ಕಡೆಯಿರಿ. ಆಮೇಲೆ ಇದಕ್ಕೆ ಹುಳಿಸಿಹಿ ಹುಣಿಸೆ ಚಟ್ನಿ, ಉಪ್ಪು, ಜೀರಿಗೆ ಪುಡಿ, ಖಾರ ಎಲ್ಲಾ ಸೇರಿಸಿ ಬೆರೆಸಿಡಿ. ಇದರಲ್ಲಿ ನೀರಿನಂಶ ಹಿಂಡಿದ ಪಕೋಡ ಹಾಕಿರಿಸಿ, ಮೇಲೆ ಕೊ.ಸೊಪ್ಪು ಉದುರಿಸಿ. ಇದನ್ನು ಫ್ರಿಜ್‌ನಲ್ಲಿರಿಸಿ ಚಿಲ್ ‌ಮಾಡಿ, ಹೊರತೆಗೆದ ಮೇಲೆ ಇನ್ನಷ್ಟು ಜೀರಿಗೆ ಪುಡಿ ಉದುರಿಸಿ, ಬಿಸಿಲಲ್ಲಿ ಬಂದವರಿಗೆ ತಣ್ಣಗೆ ಸವಿಯಲು ಕೊಡಿ.

ಮ್ಯಾಂಗೋ ಟಿಕ್ಕಾ

ಸಾಮಗ್ರಿ : 2 ಮಾವು, ರುಚಿಗೆ ತಕ್ಕಷ್ಟು ತುರಿದ ಪನೀರ್‌, ಪುಡಿ ಸಕ್ಕರೆ, ಗಟ್ಟಿ ಕೆನೆಮೊಸರು, ಉಪ್ಪು, ಮೆಣಸು, ಜಲಜೀರಾ ಪೌಡರ್‌, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು.

ವಿಧಾನ : ಮಾವಿನ ತಿರುಳಿಗೆ ಪನೀರ್‌ ಬೆರೆಸಿ ಮಸೆದು ಸಣ್ಣ ನಿಂಬೆಗಳ ಆಕಾರ ಕೊಡಿ. ಒಂದು ಬಟ್ಟಲಿಗೆ ಕೆನೆಮೊಸರು, ಮಾವು ಪನೀರ್‌ ಉಂಡೆಗಳು, ಉಪ್ಪು, ಮೆಣಸು, ಸಕ್ಕರೆ, ಜಲಜೀರಾ ಪೌಡರ್‌ ಎಲ್ಲವನ್ನೂ ಹಾಕಿ ಚೆನ್ನಾಗಿ ಬೆರೆಸಿಕೊಂಡು ಫ್ರಿಜ್‌ನಲ್ಲಿರಿಸಿ ಚಿಲ್ ‌ಮಾಡಿ. ಇದನ್ನು 1 ತಾಸಿನ ನಂತರ ಹೊರತೆಗೆದು ಇನ್ನಷ್ಟು ಜೀರಿಗೆ, ಸೋಂಪಿನ ಪುಡಿ, ಪುಡಿಮೆಣಸು ಉದುರಿಸಿ ಸವಿಯಲು ಕೊಡಿ.

ಮಾವಿನ ಇಡ್ಲಿ

ಸಾಮಗ್ರಿ : 4-5 ದೊಡ್ಡ ಸೌಟು ಇಡ್ಲಿ ಹಿಟ್ಟು, 2 ಮಾವು, 4 ಚಮಚ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಜಲಜೀರಾ ಪೌಡರ್‌, ಫ್ರೂಟ್‌ಸಾಲ್ಟ್, ಸಕ್ಕರೆ, ಹುರಿದ ಎಳ್ಳು, ಜೀರಿಗೆ, 1 ಕಪ್‌ ತೆಂಗಿನ ತುರಿ.

ವಿಧಾನ : ಮಾವು ಹೆರೆದು, ಹೋಳನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ನಂತರ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು 1 ತಾಸು ನೆನೆಯಲು ಬಿಡಿ. ನಂತರ ಇಡ್ಲಿ ಸ್ಟ್ಯಾಂಡಿಗೆ ಜಿಡ್ಡು ಸವರಿ, ಇದರಿಂದ ಹಬೆಯಲ್ಲಿ ಇಡ್ಲಿ ತಯಾರಿಸಿ. ಮೇಲೆ ಮ್ಯಾಂಗೋ ಸಾಸ್‌ನಿಂದ ಅಲಂಕರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ