ಅಪ್ಪ ಅಮ್ಮ ಇಬ್ಬರೂ ಕಲಾವಿದರು. ಕಲೆ ರಕ್ತಗತವಾಗಿ ಹರಿದು ಬಂದಿದೆ. ಇಷ್ಟಾದರೂ ಮೇಘನಾ ರಾಜ್‌ಗೆ ತಾನೊಬ್ಬ ಪ್ರತಿಭಾವಂತ ಕಲಾವಿದೆ ಎಂದು ಪ್ರೂವ್ ‌ಮಾಡಲು ಮಲೆಯಾಳಂ ಚಿತ್ರಗಳಲ್ಲಿ ನಟಿಸಿ ಬರಬೇಕಾಯ್ತು. ಸಿನಿಮಾ ಕುಟುಂಬದಿಂದ ಬಂದಿದ್ದರೂ ಶ್ರಮ ವಹಿಸಲೇಬೇಕು. ಅವಕಾಶಗಳು ಸುಲಭವಾಗಿ ಸಿಗುವುದಿಲ್ಲ ಎಂದು ನಂಬಿದ್ದರಿಂದ ಮೇಘನಾ ರಾಜ್‌ ತನಗೆ ಸಿಕ್ಕ ಪರಭಾಷಾ ಚಿತ್ರಗಳಲ್ಲಿ ಪ್ರತಿಭೆ ಪ್ರದರ್ಶಿಸಿ, ಕನ್ನಡಕ್ಕೆ ಬಂದಂಥ ನಟಿ, ಮೇಘನಾಳಿಗೆ ತಿರುವು ಕೊಟ್ಟ ಚಿತ್ರ `ರಾಜಾ ಹುಲಿ.’ ಯಶ್‌ ಜೊತೆ ನಟಿಸಿದ ಈ ನಟಿಗೆ `ಆಟಗಾರ,’ `ಬಹುಪರಾಕ್‌’ ಚಿತ್ರಗಳು ಒಳ್ಳೆ ಹೆಸರು ತಂದಕೊಟ್ಟಿತು. ಇದೀಗ `ಅಲ್ಲಮ’ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅನೂಪ್‌ ಜೊತೆ `ಲಕ್ಷ್ಣಣ’ ಚಿತ್ರದಲ್ಲಿ  ನಟಿಸಿ ಬಿಡುಗಡೆಗೆ ರೆಡಿಯಾಗಿರು ಈ ಚಿತ್ರ ಅದ್ಧೂರಿ ನಿರ್ಮಾಣದಿಂದ ಕೂಡಿದೆ. ಕನ್ನಡದ  ಹುಡುಗಿಯಾಗಿ ನಾಯಕನ ಜೊತೆ ನಾಯಕಿಯಾಗಿಯೂ ಕಾಣಿಸಿಕೊಂಡಿರುವ ಮೇಘನಾಳಿಗೆ ಇನ್ನಷ್ಟು ಒಳ್ಳೆ ಪಾತ್ರಗಳು ಸಿಗಲಿ.

ಸಿಂಪಲ್ ಲವ್ ಸ್ಟೋರಿ

`ಸಿಂಪ್ಲಾಗೊಂದು ಲವ್ ಸ್ಟೋರಿ’ ನಿರ್ದೇಶಿಸಿದ್ದ ಸುನಿ ಗಿಮಿಕ್‌ ಮಾಡೋದ್ರಲ್ಲಿ ಫಸ್ಟ್ ರಾಂಕ್‌. ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುವ ಕಲೆ ಇವರಿಗೆ ಗೊತ್ತಿದೆ. ಸಿನಿಮಾದ ಪ್ರೊಮೋ ರಿಲೀಸ್‌ ಮಾಡಿ ಸಿನಿಮಾ ಬಗ್ಗೆ ಸಾಕಷ್ಟು ಪ್ರಚಾರ ಪಡೆಯೋ ಕಲೆಯನ್ನು ಇವರಿಂದ ಕಲಿಯಬೇಕು. ಡೈಲಾಗ್‌ ಮೂಲಕ ಎಲ್ಲರ ಗಮನಸೆಳೆಯಲು ಸುನಿ ಸ್ಟೈಲ್‌ನಲ್ಲಿ ಈಗ ಅವರ ಹೊಸ ಚಿತ್ರ `ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ’ ಮುಂದುವರಿದಿದೆ. ಇದು ಮೊದಲ ಚಿತ್ರದ ಸೀಕ್ವೆಲ್ ‌ಅಲ್ಲದಿದ್ದರೂ ಅಲ್ಲಿನ ಅನೇಕ ಅಂಶಗಳು, ಮೋಡಿ ಮಾಡೋ ಡೈಲಾಗ್‌ಗಳು ಈ ಸಿನಿಮಾದಲ್ಲೂ ಇದೆ. ನಾಯಕಿ ಪಾತ್ರದಲ್ಲಿ ಮೇಘನಾ ಗಾವಂಕರ್‌ ಮಿಂಚಲಿದ್ದಾಳೆ. ಒಳ್ಳೆ ಪಾತ್ರಗಳಿದ್ದರೆ ಮಾತ್ರ ಸಿನಿಮಾಗಳಲ್ಲಿ ನಟಿಸುವ ಮೇಘನಾ ಸಿನಿಮಾಗಳಿಲ್ಲ ಎಂದು ಯಾವತ್ತೂ ಕೊರಗುವಂಥ ನಟಿಯಲ್ಲ.

`ಚಾರ್‌ಮಿನಾರ್‌’ ಚಿತ್ರದಲ್ಲಿ ಮಿಂಚಿದ್ದ ಮೇಘನಾಗೆ ಸಿಂಪಲ್…. ಚಿತ್ರದ ಬಗ್ಗೆ ತುಂಬಾನೆ ನಿರೀಕ್ಷೆ ಇದೆ ಅನಿಸುತ್ತೆ. ಸುನಿ ಪಾಲಿಗಿದು ಕಲರ್‌ಫುಲ್ ಚಿತ್ರ ಎನ್ನಬಹುದು. ಗಣೇಶನ ಆಟ ಮಳೆ ಹುಡುಗ ಗೋಲ್ಡನ್‌ ಸ್ಟಾರ್‌ ಗಣೇಶ್‌ನ `ಸ್ಟೈ‌ಕ್ಲಿಂಗ್‌’ ಬಿಡುಗಡೆಗೆ ರೆಡಿಯಾಗಿರುವಾಗ ಅವರು ಈಗೊಂದು ಹೊಸ ಆಟವನ್ನು ಕಿರುತೆರೆಗೆ ರೆಡಿ ಮಾಡಿಟ್ಟಿದ್ದಾರೆ. ಸೂಪರ್‌ ಮಿನಿಟ್‌ ಈಗಾಗಲೇ ಜನಪ್ರಿಯ ಗೇಮ್ ಶೋ ಆಗಿತ್ತು. ಈಗ ಇದರ ಮುಂದುವರಿದ ಭಾಗ ಶುರುವಾಗುತ್ತಿದೆ. ಗಣೇಶ್‌ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. `ಪಟಾಕಿ,’ `ಜೂಮ್, `ಮುಂಗಾರು ಮಳೆ-2′ ರಮೇಶ್‌ ಅರವಿಂದ್‌ ನಿರ್ದೇಶನದ ಹೊಸ ಚಿತ್ರ ರೆಡಿಯಾಗುತ್ತಿದೆ. `ಸ್ಟೈಕ್ಲಿಂಗ್‌’ ಚಿತ್ರದಲ್ಲಿ ಗಣೇಶ್‌ರದು ವಿಭಿನ್ನ  ಪಾತ್ರ. ಅವರ ಗೆಟಪ್‌ ಕೂಡಾ ಡಿಫರೆಂಟಾಗಿದೆ. ಪ್ರತಿಭಾವಂತ ಕಲಾವಿದ ಆಗಿರೋದ್ರಿಂದ ಹೊಸ ಪ್ರಯೋಗಗಳತ್ತ ಸದಾ ಹೆಜ್ಜೆ ಹಾಕುವ ಗಣೇಶ್‌ಗೆ ಬೆನ್ನೆಲುಬಾಗಿ ಪತ್ನಿ ಶಿಲ್ಪಾ ನಿಂತಿದ್ದಾರೆ. ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ ಎನ್ನುವಂತೆ, ಆದರ್ಶ ಕುಟುಂಬ ಹೊಂದಿರುವ ಗಣೇಶ್‌ ಗೇಮ್ ಶೋ ಹೇಗಿರುತ್ತದೆಂಬ ಕುತೂಹಲ ಎಲ್ಲರಲ್ಲೂ ಇದೆ.

ಸೈ ಆ್ಯಂಡಿ ಐಂದ್ರಿತಾ ರೇ….

ಈ ಬೆಂಗಾಲಿ ಬೆಡಗಿ ಕನ್ನಡ ಹುಡುಗಿಯಾಗಿ ತನ್ನ ಜಾದೂವನ್ನು ಕನ್ನಡ ಸಿನಿಮಾರಂಗದಲ್ಲಿ ತೋರಿಸಿದಂಥ ಮುದ್ದು ತಾರೆ. `ಮೆರವಣಿಗೆ’ ಚಿತ್ರದ ಮೂಲಕ ತೆರೆಗೆ ಬಂದ ಐಂದ್ರಿತಾ ಆ್ಯಂಡಿ ಎಂದೇ ಚಿರಪರಿಚಿತ. ಎಲ್ಲ ನಾಯಕರ ಜೊತೆ ನಟಿಸಿ ಮನಗೆದ್ದ ಆ್ಯಂಡಿ `ಮನಸಾರೆ’ ಚಿತ್ರದಲ್ಲಿ ತಾನೊಬ್ಬ ಉತ್ತಮ ನಟಿ ಎಂದು ಸಾಬೀತುಪಡಿಸಿದ್ದಳು. ಒಂದಷ್ಟು ದಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಬೆಂಗಾಲಿ ಚಿತ್ರದಲ್ಲಿ ನಟಿಸಿದ್ದಳು. ಇತ್ತೀಚೆಗೆ ಆ್ಯಂಡಿ ಕಿರುತೆರೆಯಲ್ಲಿ ಸಖತ್ತಾಗಿ ಮಿಂಚಿದ್ದು `ಸೈ’ ಎನ್ನುವ ಡ್ಯಾನ್ಸಿಂಗ್‌ ಶೋನ ಜಡ್ಜ್ ಆಗಿ. ಆ್ಯಂಡಿಗೆ ಸಿನಿಮಾಗಳೇಕೆ ಸಿಗುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಲೇ ಇತ್ತು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎನ್ನುವಂತೆ ಆ್ಯಂಡಿಗೆ ಒಳ್ಳೆ ಟೈಮ್ ಶುರುವಾಗಿದೆ. `ಮುಂಗಾರು ಮಳೆ-2′ ಚಿತ್ರದಲ್ಲಿ ಗಣೇಶ್‌ ಜೊತೆ ನಟಿಸಲಿದ್ದಾಳೆ ಎಂಬ ಸುದ್ದಿ ಹೊರ ಬಿದ್ದಿದೆ. ಕಿರುತೆರೆಯಿಂದ ಮರುಜೀವ ಪಡೆದ ಆ್ಯಂಡಿಗೆ ಗುಡ್‌ ಲಕ್‌.

ರಾಜಕೀಯದ ರಂಗು

`ಚಂದ್ರಮುಖಿ ಪ್ರಾಣಸಖಿ’ ಚಿತ್ರವೆಂದ ಕೂಡಲೇ ತಟ್ಟನೆ ನೆನಪಾಗೋದು ಭಾವನಾ. ಕನ್ನಚ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ತಾರೆ ಒಂದಷ್ಟು ಕಾಲ ಮುಂಬೈನಲ್ಲಿ ನೆಲೆಸಿ ಹಿಂದಿ ಚಿತ್ರದಲ್ಲೂ ನಟಿಸಿದ್ದಳು. ಅಮಿತಾ್ ‌ಬಚ್ಚನ್‌ರ ಮಗಳಾಗಿ `ಫ್ಯಾಮಿಲಿ’ ಚಿತ್ರದಲ್ಲಿ ನಟಿಸಿದಳು. ಮರಳಿಗೂಡಿಗೆ ಎನ್ನುವಂತೆ ಭಾವನಾ ಬೆಂಗಳೂರಿಗೆ  ಹಿಂತಿರುಗಿದಳು. ಸಿನಿಮಾಗಳಲ್ಲಿ ನಟಿಸುತ್ತಾ ಜೊತೆಗೆ ರಾಜಕೀಯ ರಂಗದಲ್ಲೂ ತನ್ನನ್ನು ಹೆಚ್ಚು ಗುರುತಿಸಿಕೊಳ್ಳುತ್ತಿರುವ ಈಕೆ, ಒಳ್ಳೆ ಹುದ್ದೆ ಕೂಡಾ ಪಡೆದಿದ್ದಾಳೆ.  ಬಾಲಭವನದ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದಾರೆ. ವಿಧಾನ ಪರಿಷತ್ತಿಗೆ ನೇಮಕವಾಗಲಿದ್ದಾರೆಂಬ ಸುದ್ದಿಯೂ ಬಂದಿತ್ತು. ಇತ್ತೀಚೆಗೆ ಭಾವನಾ ಸಿಕ್ಕಿದಾಗ ಕಂಗ್ರಾಟ್ಸ್ ಹೇಳಬಹುದಾ ಎಂದು ಕೇಳಿದಾಗ….“ನಾನು ಸುದ್ದಿ ಓದಿದ್ದೇನೆ ಅಷ್ಟೆ…..” ಎಂದು ನಗೆ ಬೀರಿದಳು.

ರಮ್ಯಾ…. ನೀ ಬೇಗನೆ ಬಾ

ಕನ್ನಡ ಸಿನಿಮಾರಂಗದ ಕ್ವೀನ್‌ ಎಂದೇ ಕರೆಯಲ್ಪಡುವ ರಮ್ಯಾ ಜನಪ್ರಿಯತೆಯ ತುಟ್ಟ ತುದಿಯಲ್ಲಿರುವಾಗಲೇ ರಾಜಕೀಯ ಕಣಕ್ಕಿಳಿದಂಥ ಗಟ್ಟಿಗಿತ್ತಿ. ಚುನಾವಣೆಯಲ್ಲಿ ಗೆದ್ದಳು… ಸೋತಳು… ಆದರೂ ರಾಜಕೀಯ ರಂಗದಿಂದ ದೂರ ಸರಿಯಲಿಲ್ಲ. ಜನಸೇವೆಯೇ ಜನಾರ್ಧನನ ಸೇವೆ ಎನ್ನುತ್ತಾ ಜನರತ್ತ ಸ್ಪಂದಿಸುವ ಈ ಸ್ಪಂದನಾಳನ್ನು ಇಂದಿಗೂ ಕನ್ನಡದ ಸಿನಿ ಪ್ರೇಕ್ಷಕರು ತುಂಬಾನೆ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಇಂದಿಗೂ ಸಹ ರಮ್ಯಾಳ ಜಾಗವನ್ನು ಬೇರೆ ಯಾವ ತಾರೆಯೂ ತುಂಬಿಸಲು ಸಾಧ್ಯವಾಗುತ್ತಿಲ್ಲ. ರಮ್ಯಾಳಿಗಾಗಿ ಕಥೆ ರೆಡಿ ಮಾಡಿಕೊಂಡು ಅನೇಕರು ಕಾದು ಕುಳಿತಿದ್ದಾರೆ. ರಮ್ಯಾ ಡೇಚ್ಸ್ ಕೊಡ್ತೀನಿ ಅಂದ್ರೆ ನಿರ್ಮಾಪಕರು ಕ್ಯೂನಲ್ಲಿ ನಿಲ್ತಾರೆ. ಆದರೆ ರಮ್ಯಾ ಮಾತ್ರ ಸಿನಿಮಾದಲ್ಲಿ ನಟಿಸುವುದರ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಕನಿಷ್ಠ ಪಕ್ಷ ವರ್ಷಕ್ಕೊಂದು ಚಿತ್ರದಲ್ಲಾದರೂ ರಮ್ಯಾ ನಟಿಸಲಿ ಎಂಬುದು ಅಭಿಮಾನಿಗಳ ಆಸೆ. ಇದೀಗ ಪುನೀತ್‌ ಜೊತೆ ನಟಿಸುವುದಾಗಿ ಹೊಸದಾಗಿ ಸುದ್ದಿ ಕೇಳಿಬರುತ್ತಿದೆ.

ಅಪ್ಪನಾದ ರೈ

ಭಾರತೀಯ ಚಿತ್ರರಂಗದಲ್ಲಿ ಉತ್ತಮ ಕಲಾವಿದ ಎಂದು ಹೆಸರು ಮಾಡಿರುವ ಪ್ರಕಾಶ್‌ ರೈ ನಮ್ಮ ಕನ್ನಡದ ಎನ್ನುವ ಹೆಮ್ಮೆ ಎಲ್ಲರಿಗೂ ಇದೆ. ಎಷ್ಟೇ ಬಿಝಿ ಇದ್ದರೂ ವರ್ಷಕ್ಕೆ ಎರಡು ಮೂರು ಕನ್ನಡ ಚಿತ್ರಗಳಲ್ಲಿ  ನಟಿಸುವ ರೂಢಿ ಇಟ್ಟುಕೊಂಡಿದ್ದಾರೆ. ಪ್ರಕಾಶ್‌ ರೈ ಮತ್ತು ಪೋನಿ ಮರ್ಮ ಮದುವೆಯಾಗಿ ವರ್ಷಗಳೇ ಕಳೆದಿದ್ದರೂ ಅವರಿಬ್ಬರೂ ಹೊಸ ಜೋಡಿಯಂತೆ ಮಿಂಚುತ್ತಲೇ ಇದ್ದರು. ಇತ್ತೀಚೆಗೆ ಪ್ರಕಾಶ್‌ ರೈ. “ನಾನು ಮತ್ತು ಪೋನಿ ಮುದ್ದಾದ ಗಂಡು ಮಗುವಿಗೆ ಅಪ್ಪ ಅಮ್ಮನಾಗಿದ್ದೇವೆ,” ಎಂದು ಟ್ವೀಟ್‌ಮಾಡುವುದರ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಪ್ರಕಾಶ್‌ ರೈ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು ಪೋನಿಯನ್ನು ಮದುವೆಯಾಗಿದ್ದರು. ಮೊದಲ ಪತ್ನಿಯಿಂದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಈಗ ಮೂರನೆಯದು ಗಂಡು ಮಗು.

ಒಟ್ಟಿನಲ್ಲಿ ಪ್ರಕಾಶ್‌ ಈಗ ಸುಖಿ ಪರಿವಾರದ ಒಡೆಯ. ಮಕ್ಕಳೆಂದರೆ ಸಾಕು, ತಮ್ಮೆಲ್ಲ ಸಮಯವನ್ನು ಅವರಿಗಾಗಿ ಮೀಸಲಿಡುವ ರೈ ಕುಟುಂಬದಲ್ಲೀಗ ಜ್ಯೂನಿಯರ್‌ ರೈನದೇ ಸಂಭ್ರಮ.

ಸಾರಿ…. ಕೇಳಿದ ಕ್ರೇಜಿ ಸ್ಟಾರ್

`ಮಾಣಿಕ್ಯ’ ಚಿತ್ರದ ನಂತರ ಇವರ ಇಮೇಜ್‌ ಬದಲಾಗಿಬಿಡ್ತು. ಕನ್ನಡದ ಎಲ್ಲ ಯುವ ನಾಯಕರೂ ಇವರೇ ಅಪ್ಪನ ಪಾತ್ರ ವಹಿಸಬೇಕು ಎಂದು ಆಸೆ ಪಡುತ್ತಾರೆ.  ಹೌದು, ರವಿಚಂದ್ರನ್‌ ಹೊಸದೊಂದು ಪ್ರಬುದ್ಧವಾದ ಇಮೇಜ್‌ನಿಂದ ಮತ್ತೇ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ರವಿಚಂದ್ರನ್‌ ಮಾತನಾಡುವಾಗ ತುಂಬಾನೆ ಭಾವುಕರಾಗಿ ಮನಮಿಡಿಯುವಂತೆ ಮಾತನಾಡುತ್ತಾರೆ. ಮಗನಿಗಾಗಿ ಪ್ರೇಮಲೋಕದಲ್ಲಿ ರಣಧೀರ ಚಿತ್ರವನ್ನು ಅದ್ಧೂರಿಯಾಗಿ ಪ್ರಾರಂಭ ಮಾಡಿದ್ದರೂ ಅಂದುಕೊಂಡಂತೆ ಮುಂದುವರಿಸಲಾಗಲಿಲ್ಲ. ಅದಕ್ಕಿನ್ನು ಟೈಮಿದೆ ಎನ್ನಲಾಗುತ್ತಿದೆ. ಈಗವರ ಮೈ ಮನಸ್ಸಿನ ತುಂಬಾ `ಅಪೂರ್ವ’ ತುಂಬಿಕೊಂಡಿದ್ದಾಳೆ. ಇದು ಅವರ ಬಹು ನಿರೀಕ್ಷಿತ ಚಿತ್ರವಾಗಲಿದೆ. `ಅಪೂರ್ವ’ ಚಿತ್ರದ ನಂತರ ಮಗನ ಚಿತ್ರ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ. ಅದಕ್ಕಾಗಿ ತಮ್ಮ ಪತ್ನಿ ಹಾಗೂ ಮಗನಲ್ಲಿ  ಕ್ರೇಜಿ ಸ್ಟಾರ್‌ ಸಾರಿ ಕೇಳಿದ್ದಾರಂತೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ