ಮೊದಲಾದರೆ ಮಹಿಳಾ ನಿರ್ದೇಶಕಿ ಅಂದಾಕ್ಷಣ ಸಹಜವಾಗಿ ಎಂಥ ಚಿತ್ರ ಮಾಡಬಹುದು ಎನ್ನುವ ಕುತೂಹಲವಿದ್ದೇ ಇರುತ್ತದೆ. ಈಗ ಕಾಲ ಬದಲಾಗಿದೆ. ಎಂಥ ಬೋಲ್ಡ್ ಸಬ್ಜೆಕ್ಟ್ ನ್ನು ಕೂಡಾ ಹ್ಯಾಂಡಲ್ ಮಾಡಬಲ್ಲರು ಎಂದು ಪ್ರೂವ್ ಮಾಡಿಬಿಟ್ಟಿದ್ದಾರೆ. ನಮ್ಮ ಕನ್ನಡದಲ್ಲಿರುವ ಕೆಲವೇ ಕೆಲವು ನಿರ್ದೇಶಕಿಯರಲ್ಲಿ ತಮ್ಮ ಮೊದಲ ಚಿತ್ರದಿಂದಲೇ ಅಚ್ಚರಿ ಮೂಡಿಸಿದಂಥ ನಿರ್ದೇಶಕಿ ಸುಮನ್ ಕಿತ್ತೂರು.ಪತ್ರಕರ್ತೆಯಾಗಿ, ಸಿನಿಮಾ ಜಗತ್ತಿನ ಒಳ ಹೊರಗನ್ನು ಕಂಡಿರುವ ಸುಮನಾಗೆ ಸಿನಿಮಾ ಮಾಡುವುದಕ್ಕಿಂತ ನೋಡುವುದರ ಮೂಲಕ ಸಿನಿಮಾಗೆ ನಿಜವಾದ ಅರ್ಥ ಕಂಡುಕೊಂಡ ಬಳಿಕವೇ ಆಕೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದು.
`ಆ ದಿನಗಳು’ ಚಿತ್ರದಲ್ಲಿ ತೆರೆಹಿಂದೆ ಎಲ್ಲ ವಿಭಾಗದಲ್ಲೂ ಕೆಲಸ ಮಾಡಿದ್ದರು. ಹಾಡನ್ನು ಸಹ ಬರೆದು ಮೆಚ್ಚುಗೆ ಗಳಿಸಿದ್ದರು. ತಮ್ಮ ಮೊದಲ ನಿರ್ದೇಶನದ ಚಿತ್ರಕ್ಕೆ ವಿಭಿನ್ನವಾದ ಕಥೆಯನ್ನು ಆರಿಸಿಕೊಂಡು `ಸ್ಲಂ ಬಾಲ’ ಚಿತ್ರ ಮಾಡಿದ್ದರು. ಅದಾದ ನಂತರ `ಎದೆಗಾರಿಕ’ ಈಕೆ ನಿರ್ದೇಶನದಲ್ಲಿ ಮೂಡಿಬಂದಂಥ ಉತ್ತಮ ಚಿತ್ರ. ರಾಮ್ ಗೋಪಾಲ್ ವರ್ಮ ಬಹಳವಾಗಿ ಮೆಚ್ಚಿಕೊಂಡ ಚಿತ್ರವಿದು.
ಈಗ ಸುಮನಾ, ಪೂರ್ಣಚಂದ್ರ ತೇಜಸ್ವಿಯವರ `ಕಿರಗೂರಿನ ಗಯ್ಯಾಳಿಗಳು’ ಕಥೆಯನ್ನಾಧರಿಸಿ ಚಿತ್ರ ರೆಡಿ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಬಗ್ಗೆ ಒಂದಷ್ಟು ವಿವರಗಳು ಹೀಗಿವೆ.
“ಇತ್ತು ನಾನು ಏನೇ ಸಾಧಿಸಿರಲಿ, ಈ ಹಂತಕ್ಕೆ ತಲುಪಲು ನನ್ನ ಗುರು ಅಗ್ನಿ ಶ್ರೀಧರ್ ಕಾರಣ. ಏಳು ವರ್ಷ ಫಿಲ್ಮ್ ರಿಪೋರ್ಟಿಂಗ್ ಮಾಡಿದ್ದೆ. ಸಿನಿಮಾದ ಮೇಲಿರುವ ನನ್ನ ಆಸಕ್ತಿ ಬಗ್ಗೆ ಅವರಿಗೆ ಆಗಲೇ ಗೊತ್ತು ಅನಿಸುತ್ತೆ. `ಎದೆಗಾರಿಕೆ’ ಚಿತ್ರ ಮಾಡುವಾಗ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊತ್ತುಕೊಂಡೆ,” ಎನ್ನುತ್ತಾರೆ ಸುಮನಾ. ಗಯ್ಯಾಳಿಗಳ ಬಗ್ಗೆ ಮಾತನಾಡುತ್ತಾ, “ತೇಜಸ್ವಿಯವರ ಕಥೆಗಳಲ್ಲಿ ನವಿರಾದ ಹಾಸ್ಯ ಇರುತ್ತದೆ. ಅದನ್ನು ತೆರೆ ಮೇಲೆ ತರೋಕೆ ಪ್ರಯತ್ನಿಸಿದ್ದೇವೆ. ಒಂದು ಹಳ್ಳಿಯ ಬದುಕು ಹೇಗಿರುತ್ತೆ ಅನ್ನೋದನ್ನು ಇಲ್ಲಿ ನೋಡಬಹುದು. `ಕಿರಗೂರಿನ ಗಯ್ಯಾಳಿಗಳು’ ಕೃತಿ ಜನಪ್ರಿಯತೆ ಪಡೆದುಕೊಂಡಿತ್ತು.
“ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಿರುವ ಈ ಸಂದರ್ಭದಲ್ಲಿ ಇದು ಬಲು ಪ್ರಸ್ತುತ. ಹಳ್ಳಿಯಲ್ಲಿ ನಡೆಯುವ ರಾಜಕೀಯ, ಸಣ್ಣತನ, ಆಸೆ, ಆಕಾಂಕ್ಷೆಗಳೆಲ್ಲ ಚಿತ್ರದಲ್ಲಿ ಬಂದು ಹೋಗುತ್ತದೆ,” ಎನ್ನುವ ಸುಮನಾ, ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಂಥ ನಿರ್ದೇಶಕಿಯಾಗಿರೋದ್ರಿಂದ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಡಲಾಗಿದೆ.
ಗಯ್ಯಾಳಿಗಳಾಗಿ ಕನ್ನಡದ ಪ್ರತಿಭಾವಂತ ನಟಿಯರು ಪಾತ್ರ ವಹಿಸಿದ್ದಾರೆ. ಶ್ವೇತಾ ಶ್ರೀವಾಸ್ತ್‌ಳನ್ನು ಗ್ಲಾಮರಸ್ಸಾಗಿ ಕಂಡಿದ್ದ ಪ್ರೇಕ್ಷಕರಿಗೆ ಗಯ್ಯಾಳಿಯಾಗಿ ಶ್ವೇತಾ ಪಕ್ಕಾ ಹಳ್ಳಿ ಹೆಂಗಸಿನಂತೆ ಕಾಣುತ್ತಾಳೆ. ಈ ಚಿತ್ರದ ಸ್ಟಿಲ್‌ಗಳು ಈಗಾಗಲೇ ಸಿನಿಮಾರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.
ತೇಜಸ್ವಿಯರ ಕೃತಿಯಲ್ಲಿ ಬರುವ ಪಾತ್ರಕ್ಕೆ ಜೀವ ತುಂಬಿರುವುದರ ಬಗ್ಗೆ ಶ್ವೇತಾಗೆ ವಿಪರೀತ ಖುಷಿ ಇದೆ. “ಈ ಸಿನಿಮಾ ನನ್ನ ಸಿನಿಮಾ ವೃತ್ತಿಯ ದಿಕ್ಕನ್ನೇ ಬದಲಿಸಲಿದೆ,” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.
ಶ್ವೇತಾ ಈ ಚಿತ್ರದಲ್ಲಿ ಘಟಾಣಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾಳೆ. “ನಾನು ವಿಭಿನ್ನ ಪಾತ್ರ ಮಾಡಬೇಕೆಂದು ಆಸೆ ಪಡುತ್ತಿದ್ದಾಗ ಅದೇ ಸಮಯಕ್ಕೆ ನಿರ್ದೇಶಕಿ ಸುಮನಾ ಕರೆ ಮಾಡಿ ತಮ್ಮ ಹೊಸ ಚಿತ್ರದ ಬಗ್ಗೆ ಹೇಳಿದರು. ಅಚ್ಚುಮೆಚ್ಚಿನ ಲೇಖಕರ ಕೃತಿಗೆ ಅವರೇ ಸೃಷ್ಟಿಸಿದ ಪಾತ್ರಕ್ಕೆ ಜೀವ ತುಂಬವ ಅವಕಾಶ ಯಾರು ತಾನೇ ಬಿಡಲು ಸಾಧ್ಯ? ಅವಕಾಶ ಸಿಕ್ಕಾಗ ಥ್ರಿಲ್ ಆಗಿಬಿಟ್ಟೆ.
“ನಗರದಲ್ಲೇ ಹುಟ್ಟಿ ಬೆಳೆದ ನನಗೆ ದಾನಮ್ಮಳ ಪಾತ್ರ ಮಾಡುವಾಗ ಪಕ್ಕಾ ಬಜಾರಿ ಹಳ್ಳಿ ಹೆಂಗಸಿನಂತೆ ಮಾತನಾಡಬೇಕಿತ್ತು, ಬೈಯ ಬೇಕಿತ್ತು. ನನಗಿದು ಸವಾಲ್ ಆಗಿತ್ತು. ತುಂಬಾ ಶ್ರದ್ಧೆಯಿಂದ ಭಕ್ತಿಯಿಂದ ಈ ಪಾತ್ರ ನಿರ್ವಹಿಸಿದ್ದೇನೆ,” ಎನ್ನುತ್ತಾಳೆ ಶ್ವೇತಾ.
ಭೂಗತ ಜಗತ್ತಿನ ನೈಜ ಘಟನೆಗಳನ್ನು ತಮ್ಮ ನಿರ್ದೇಶನದ ಚಿತ್ರಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಸುಮನಾ, ಈ ಬಾರಿ ಕಾದಂಬರಿ ಆರಿಸಿಕೊಂಡಿರೋದು, ಜೊತೆಗೆ ಅದರಲ್ಲಿ ಹೆಣ್ಣುಮಕ್ಕಳದೇ ಹೆಚ್ಚು ಕಾರುಬಾರು ವಿಶೇಷವಾಗಿದೆ.
ಈ ಚಿತ್ರಕ್ಕೆ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಮತ್ತು ಸುಮನಾ ಬರೆದಿದ್ದಾರೆ. ಚಿತ್ರದಲ್ಲಿ ಶ್ವೇತಾ ಶ್ರೀವಾಸ್ತ್, ಸುಕೃತಾ ವಾನ್ಲೆ, ಸೋನು ಗೌಡ, ಕಾರುಣ್ಯ ರಾವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರಲ್ಲದೆ ಕಿಶೋರ್, ಯೋಗೀಶ್, ನಿರ್ದೇಶಕ ಎಸ್. ನಾರಾಯಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ತಾರಾಬಳಗ ದೊಡ್ಡದಾಗಿದೆ. ಗಯ್ಯಾಳಿಗಳನ್ನು ಮನೋಹರ್ ಜೋಶಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರೆ, ಸಂಗೀತ ಸಂಯೋಜನೆ ಸಾಧುಕೋಕಿಲ ಅವರದಾಗಿದೆ.
– ಸರಸ್ವತಿ