ಮುಂಜಾನೆಯ ಉಪಾಹಾರ ನಮ್ಮ ಇಡೀ ದಿನದ ಮಹತ್ವದ ಆಹಾರ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಹೀಗೆ ಹೇಳಲು ಒಂದು ಕಾರಣವಿದೆ. ಇಡೀ ರಾತ್ರಿ ನಿದ್ರೆಯಲ್ಲಿ ಕಳೆದಿರುವುದು ಹಾಗೂ 12ಕ್ಕೂ ಹೆಚ್ಚು ಗಂಟೆಗಳ ಕಾಲ ಆಹಾರ ಇಲ್ಲದೆ ಇರುವುದರಿಂದ ನಿಮ್ಮ ದೇಹ ಆಹಾರಕ್ಕಾಗಿ ಪರಿತಪಿಸುತ್ತಿರುತ್ತದೆ. ಅದನ್ನು ನಿಮ್ಮ ಮುಂಜಾನೆಯ ಉಪಾಹಾರವೇ ನೀಗಿಸುವ ಪ್ರಯತ್ನ ಮಾಡುತ್ತದೆ.
ಇದರ ಹೊರತಾಗಿ ಎಚ್ಚರದಿಂದಿದ್ದಾಗ ನಮ್ಮ ಮೆದುಳು ಕೆಲಸ ಕಾರ್ಯ ನಿರ್ವಹಿಸಲು ಗ್ಲೂಕೋಸ್‌ನ್ನು ಬಳಸುತ್ತದೆ. ಈ ಕಾರಣದಿಂದಾಗಿ ಶಕ್ತಿ ಅಥವಾ ಎನರ್ಜಿಯ ಕೊರತೆ ಉಂಟಾಗುತ್ತದೆ. ಮುಂಜಾನೆಯ ಉಪಾಹರ ಗ್ಲೂಕೋಸ್‌ನ ಪ್ರಮಾಣವನ್ನು ಬ್ಯಾಲೆನ್ಸ್ ಮಾಡುತ್ತದೆ. ಜೊತೆಗೆ ಚಯಾಪಚಯ ಕ್ರಿಯೆಯನ್ನು ಪುನಃ ಕ್ರಿಯಾಶೀಲಗೊಳಿಸುತ್ತದೆ.
ಮುಂಜಾನೆಯ ಉಪಾಹಾರದಿಂದ ಬೇರೆ ಕೆಲವು ಲಾಭಗಳೂ ಇವೆ. ಇದು ನಿಮ್ಮ ಸ್ಮರಣಶಕ್ತಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಕೂಡ ನೆರವಾಗುತ್ತದೆ.
ಮುಂಜಾನೆಯ ಉಪಾಹಾರನ್ನು ನಿಯಮಿತವಾಗಿ ಬಿಟ್ಟುಬಿಡುವವರು, ಯಾವಾಗ ಹಸಿವಾಗುತ್ತೋ, ಆಗ ಅತಿ ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡುತ್ತಾರೆ. ಇದರಿಂದಾಗಿ ಅವರ ತೂಕವಂತೂ ಹೆಚ್ಚುತ್ತದೆ. ಮುಂಜಾನೆ ಉಪಾಹಾರ ಮಾಡುವ ಒಳ್ಳೆಯ ಅಭ್ಯಾಸದಿಂದಾಗಿ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಮಧುಮೇಹ ಪೀಡಿತರಿಗೂ ಅನುಕೂಲವಾಗುತ್ತದೆ.
ಪೋಷಕಾಂಶಗಳಿಂದ ಸಮೃದ್ಧವಾಗಿರಲಿ
ಪೋಷಕಾಂಶ ತಜ್ಞರು ಹೇಳುವುದೇನೆಂದರೆ, ಮುಂಜಾನೆ ಎದ್ದ ಬಳಿಕ 2 ಗಂಟೆಯೊಳಗೆ ತಿಂಡಿ ಸೇವನೆ ಮಾಡಬೇಕು. ಇದಕ್ಕೂ ಮಹತ್ವದ ಸಂಗತಿಯೆಂದರೆ, ಉಪಾಹಾರದಲ್ಲಿ ನೀವು ಏನು ಸೇವಿಸುತ್ತೀರಿ ಎನ್ನುವುದನ್ನು ನೋಡಬೇಕಾಗುತ್ತದೆ. ದಿನದ ಮೊದಲ ಆಹಾರ ಕ್ಯಾಲ್ಶಿಯಂ, ಕಬ್ಬಿಣಾಂಶ, ಪ್ರೋಟೀನ್, ನಾರಿನಂಶ ಹಾಗೂ ವಿಟಮಿನ್ `ಬಿ’ಯಿಂದ ಸಮೃದ್ಧವಾಗಿರಬೇಕು. ಆದರೆ ಭಾರತದಲ್ಲಿ ಸೇವಿಸಲ್ಪಡುವ ಮುಂಜಾನೆ ಆಹಾರ ಒಳ್ಳೆಯ ಆರೋಗ್ಯಕ್ಕೆ ಸೂಕ್ತವಾದುದು ಆಗಿರುವುದಿಲ್ಲ. ಅದರಲ್ಲಿ ಹೇರಳ ಪ್ರಮಾಣದಲ್ಲಿ ಎಣ್ಣೆ, ಸಕ್ಕರೆ, ತುಪ್ಪ ಮುಂತಾದವನ್ನು ಬಳಸಲಾಗಿರುತ್ತದೆ. ಸ್ನಿಗ್ಧ ಮತ್ತು ತೈಲಯುಕ್ತ ಆಹಾರದಲ್ಲಿ ದೇಹಕ್ಕೆ ಹಾನಿಯುಂಟು ಮಾಡುವ ಕೊಬ್ಬು ಹೇರಳ ಪ್ರಮಾಣದಲ್ಲಿರುತ್ತದೆ. ಅದು ಆರೋಗ್ಯವನ್ನು ಏರುಪೇರು ಮಾಡುತ್ತದೆ. ಇದರಲ್ಲಿ ಹೆಚ್ಚುವರಿ ಕ್ಯಾಲೋರಿ ಮತ್ತು ಕೊಬ್ಬು ಕೂಡ ಗರಿಷ್ಠ ಪ್ರಮಾಣದಲ್ಲಿರುತ್ತದೆ. ರಕ್ತನಾಳಗಳ ಗೋಡೆಗಳ ಮೇಲೆ ಕೊಬ್ಬು ಪ್ಲಾಕ್‌ನ ಪ್ರಮಾಣ ಕ್ರಮೇಣ ಹೆಚ್ಚುತ್ತ ಹೋಗುವುದರಿಂದ ರಕ್ತ ಪರಿಚಲನೆಗೆ ಅಡ್ಡಿಯುಂಟಾಗುತ್ತದೆ. ಇದರಿಂದ ಹೃದಯಾಘಾತ ಹಾಗೂ ಸ್ಟ್ರೋಕ್‌ಗೆ ಜನ್ಮ ನೀಡುತ್ತದೆ. ಹೈ ಕೊಲೆಸ್ಚ್ರಾಲ್ ಪಿತ್ತದ ಅಸಮತೋಲನಕ್ಕೂ ಕಾರಣವಾಗುತ್ತದೆ. ಪೂರಿ, ಪರೋಟಾ, ಬ್ರೆಡ್ ರೋಲ್ ಮುಂತಾದವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಕೆಟ್ಟ ಕೊಬ್ಬಿನ ಪ್ರಮಾಣ ಏಕತ್ರಿತಗೊಳ್ಳುತ್ತದೆ.
ಸ್ನಿಗ್ಧ, ಕೊಬ್ಬುಯುಕ್ತ ಹಾಗೂ ಸಿಹಿತಿಂಡಿಗಳು ರೋಗನಿರೋಧಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅದು ಜ್ವರದಿಂದ ಹಿಡಿದು ಕ್ಯಾನ್ಸರ್‌ತನಕ ಅನೇಕ ರೋಗಗಳ ಸಾಧ್ಯತೆ ಹೆಚ್ಚುತ್ತದೆ. ದೈನಂದಿನ ಆಹಾರದಲ್ಲಿ ತುಪ್ಪ, ಬೆಣ್ಣೆಯ ಬದಲಿಗೆ ಆರೋಗ್ಯಕರ ಪರ್ಯಾಯಗಳನ್ನು ಅನುಸರಿಸುವುದು ರೋಗಮುಕ್ತ ಜೀವನದ ಬೀಗದ ಕೈ ಆಗಿದೆ.
ಸಿಹಿ ಪದಾರ್ಥ ಕಡಿಮೆಗೊಳಿಸಿ
ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ನಿಮ್ಮ ಮುಂಜಾನೆಯ ಆಹಾರದಲ್ಲಿ ಸಿಹಿಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡುವುದು ಹಾಗೂ ಸಕ್ಕರೆಯುಕ್ತ ಪದಾರ್ಥಗಳನ್ನು ಉನ್ನತ ಫೈಬರ್‌ಯುಕ್ತ ಆಹಾರಗಳಿಗೆ ಬದಲಿಸುವುದು ಅಗತ್ಯವಾಗಿದೆ. ಇದು ಮಧುಮೇಹ, ಬೊಜ್ಜು ಹಾಗೂ ಇತರೆ ಆರೋಗ್ಯ ಸಂಬಂಧಿ ತೊಂದರೆಗಳಿಗೆ ಉತ್ತಮ ಆದರ್ಶ ಆಹಾರಗಳಾಗಿವೆ. ಸ್ಟೆಮಿಯಾ, ಎಸ್ಟಾರಟೆಮ್ ಮತ್ತು ಸುಕ್ರೋಲೆಸ್ ಸಕ್ಕರೆ ಪದಾರ್ಥಗಳಿಗೆ ಉತ್ತಮ ಪರ್ಯಾಯ ಉಪಾಯಗಳಾಗಿದ್ದು, ಜಗತ್ತಿನಲ್ಲೆಲ್ಲ ಹೆಸರುವಾಸಿಯಾಗಿವೆ. ಅವು ಈಗ ಭಾರತದಲ್ಲೂ ಲಭ್ಯವಾಗುತ್ತಿವೆ. ಆದರೆ ಇವುಗಳ ಉಪಯೋಗನ್ನು ವೈದ್ಯರ ಸಲಹೆಯಿಂದಷ್ಟೇ ಬಳಸಬೇಕು. ಮುಂಜಾನೆ ಉಪಾಹಾರದಲ್ಲಿ ಏನನ್ನು ಸೇವಿಸಬೇಕು? ನೀವು ಸೇವಿಸುವ ಆಹಾರದಲ್ಲಿ ಫೈಬರ್ ಪ್ರೋಟೀನ್ ಮತ್ತು ಕಾರ್ಬೊಹೈಡ್ರೇಟ್‌ನಿಂದ ಭರ್ತಿಯಾಗಿರಬೇಕು. ಜೊತೆಗೆ ಅದರಲ್ಲಿ ಸಿಹಿಯ ಪ್ರಮಾಣ ಕಡಿಮೆಯಿರಬೇಕು. ಆಹಾರದಲ್ಲಿ ಆಗಾಗ ಬದಲಾವಣೆ ಕೂಡ ಅಗತ್ಯ. ಒಂದೇ ಪದಾರ್ಥವನ್ನು ದಿನ ಸೇವಿಸುತ್ತಿರಬೇಡಿ.
ಮುಂಜಾನೆಯ ಆರೋಗ್ಯವರ್ಧಕ ಆಹಾರದಲ್ಲಿ ಚಪಾತಿ, ರೊಟ್ಟಿ ಕಾಳಿನ ಪಲ್ಯ, ಬೇಳೆ ಪದಾರ್ಥಗಳು, ಹಣ್ಣುಗಳ ಸಲಾಡ್, ಇಡ್ಲಿ, ಅವಲಕ್ಕಿ, ಸೋಯಾ, ಮೊಳಕೆಕಾಳು, ತರಕಾರಿಗಳ ಸ್ಯಾಂಡ್‌ವಿಚ್, ಗೋವಿನ ಜೋಳ, ಕೊಬ್ಬುರಹಿತ ಹಾಲು, ಮೊಸರು, ತಾಜಾ ಹಣ್ಣುಗಳ ರಸ ಇವುಗಳಲ್ಲಿ ಯಾವುದಾದರೂ ಕೆಲವು ನಿಮ್ಮ ಆಹಾರದಲ್ಲಿ ಒಳಗೊಂಡಿರಬೇಕು.
ಅಧಿಕ ಸಕ್ಕರೆ ಅಂಶವಿರುವ ಟಿನ್‌ನಲ್ಲಿರುವ ಸಿಹಿ ಪದಾರ್ಥಗಳು, ಪ್ಯಾಕ್ ಮಾಡಿದ ಹಣ್ಣಿನ ರಸಗಳನ್ನು ಕೂಡ ಸೇವಿಸಬೇಡಿ.
ಮುಂಜಾನೆಯ ಒಂದು ಒಳ್ಳೆಯ ಉಪಾಹಾರ ಮಕ್ಕಳು ಹಾಗೂ ಹದಿಹರೆಯದವರಿಗೆ ಮತ್ತಷ್ಟು ಉಪಯುಕ್ತ. ಯಾರು ಮುಂಜಾನೆಯ ಉಪಾಹಾರವನ್ನು ಮಾಡುತ್ತಾರೊ ಅವರಿಗೆ ಹೆಚ್ಚು ಶಕ್ತಿ, ಸ್ಛೂರ್ತಿ ದೊರೆಯುತ್ತದೆ. ಅವರು ದೈಹಿಕ ಕಾರ್ಯಕಲಾಪಗಳಲ್ಲಿ ಭಾಗವಹಿಸುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಅದರಿಂದಾಗಿ ಬೊಜ್ಜು ಹಾಗೂ ಜೀವನಶೈಲಿಗೆ ಸಂಬಂಧಪಟ್ಟ ರೋಗಗಳನ್ನು ತಡೆಯಲು ಅನುಕೂಲ ಆಗುತ್ತದೆ.
ಮುಂಜಾನೆ ನಿಯಮಿತವಾಗಿ ಉಪಾಹಾರ ಸೇವಿಸುವ ಮಕ್ಕಳು ಶಾಲೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುತ್ತವೆ. ತಳಮಳ, ಸಿಡಿಮಿಡಿ ಸ್ವಭಾವವನ್ನು ಕಡಿಮೆಗೊಳಿಸುತ್ತವೆ. ಸುಸ್ತು ಕಡಿಮೆಯಾಗಿ ಲವಲವಿಕೆಯಿಂದಿಡುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಮುಂಜಾನೆಯ ಉಪಾಹಾರದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಮಕ್ಕಳೇ ಇರಬಹುದು, ಯುವಕ ಯುವತಿಯರೇ ಆಗಿರಬಹುದು ಎಲ್ಲರಿಗೂ ಶಕ್ತಿಸ್ಛೂರ್ತಿ ತುಂಬಲು ಮುಂಜಾನೆ ಉಪಾಹಾರ ಬೇಕೇಬೇಕು.
– ಜಿ.ಕೆ. ಸುಧಾ.