31 ವರ್ಷದ ಶ್ರೀಲತಾ ಹಾಗೂ ಅವರ ಕುಟುಂಬದವರ ಖುಷಿಗೆ ಮೇರೆಯೇ ಇರಲಿಲ್ಲ. ಆ ಖುಷಿಗೆ ಕಾರಣ ಶ್ರೀಲತಾ ಎರಡು ಮಕ್ಕಳಿಗೆ ಜನ್ಮ ನೀಡಲಿದ್ದಾಳೆಂಬುದು.
ಮದುವೆಯಾಗಿ 6 ವರ್ಷವಾದರೂ ಒಂದು ಮಗು ಕೂಡ ಆಗದೇ ಇರುವುದು ಅವಳಿಗೆ ಬೇಸರ ತರಿಸಿತ್ತು. ಈಗ ಅವಳಿ ಮಕ್ಕಳು ಹುಟ್ಟಲಿವೆ ಎಂದು ಕೇಳಿ ಅವಳಿಗೆ ಖುಷಿಯೋ ಖುಷಿ!
ಎರಡು ಮುದ್ದಾದ ಮಕ್ಕಳು ಹುಟ್ಟಿ ಅವಳಿಗೆ ಜೀವನದ ಒಂದು ಅತ್ಯಮೂಲ್ಯ ಕೊಡುಗೆ ನೀಡಿದಂತೆ ಭಾಸವಾಗುತ್ತಿತ್ತು. ಶ್ರೀಲತಾ ಐವಿಎಫ್ (ಇನ್‌ವಿಟ್ರೊ ಫರ್ಟಿಲೈಝೇಶನ್) ತಂತ್ರಜ್ಞಾನದ ಮುಖಾಂತರ ಯಾವುದೇ ತೊಂದರೆ ಇಲ್ಲದೆ ಮಗುವಿಗೆ ಜನ್ಮ ನೀಡಿದಳು.
ಐವಿಎಫ್ ಮುಖಾಂತರ ಗರ್ಭ ಧರಿಸಿದ ಬಳಿಕ ಶ್ರೀಲತಾ ಹಾಗೂ ಆಕೆಯ ಪತಿ ಪ್ರಶಾಂತ್ ಡಾಕ್ಟರ್ ಬಳಿ ಅಲ್ಟ್ರಾ ಸ್ಕ್ಯಾನಿಂಗ್‌ಗೆಂದು ಹೋದರು. ತನ್ನ ಹೊಟ್ಟೆಯಲ್ಲಿ ಎರಡು ಮಕ್ಕಳು ಬೆಳೆಯುತ್ತಿವೆ ಎಂಬ ಸಣ್ಣ ಕಲ್ಪನೆ ಕೂಡ ಶ್ರೀಲತಾಗೆ ಇರಲಿಲ್ಲ. ಆಕೆಯ ಪತಿ ಪ್ರಶಾಂತ್‌ಗೂ ಕೂಡ ಇದು ಅಚ್ಚರಿದಾಯಕ ಸಂಗತಿಯೇ ಆಗಿತ್ತು. ಅವರು ಏಕಕಾಲಕ್ಕೆ 2 ಮಕ್ಕಳು ಬೇಕು ಎಂದು ವೈದ್ಯರ ಮುಂದೆ ಬೇಡಿಕೆ ಕೂಡ ಇಟ್ಟಿರಲಿಲ್ಲ. ಆದರೆ ಶ್ರೀಲತಾಳ ಡಾಕ್ಟರ್ ಐವಿಎಫ್ ಮುಖಾಂತರ ಎರಡು ಭ್ರೂಣಗಳನ್ನು ಗರ್ಭಕೋಶಕ್ಕೆ ಸೇರ್ಪಡೆ ಮಾಡಿದ್ದರು. ಅದರ ಪರಿಣಾಮ ಎಂಬಂತೆ ಅವರಿಗೆ ಎರಡು ಮಕ್ಕಳು ಜನಿಸಿದ. ಅವರ ಖುಷಿ ಕೂಡ ದ್ವಿಗುಣಗೊಂಡಿತು.
ಈ ತಂತ್ರಜ್ಞಾನದಿಂದ ಇದು ಸಾಧ್ಯ!
ಆದರೆ ಶ್ರೀಲತಾ ಹಾಗೂ ಪ್ರಶಾಂತ್ ಅವರ ಹಾಗೆ ಅದೆಷ್ಟೊ ದಂಪತಿಗಳಿದ್ದು, ಅವರು ಅವಳಿ ಮಕ್ಕಳನ್ನು ಪಡೆಯುವ ದೃಷ್ಟಿಯಿಂದ ಐವಿಎಫ್ ತಂತ್ರಜ್ಞಾನವನ್ನು ಅನುಸರಿಸುತ್ತಾರೆ. ವಾಸ್ತವದಲ್ಲಿ ಐವಿಎಫ್ ತಂತ್ರಜ್ಞಾನದ ಮುಖಾಂತರ ತಂದೆತಾಯಿಯಾಗುವ ಅಪೇಕ್ಷೆ ಇಟ್ಟುಕೊಳ್ಳುವ ದಂಪತಿಗಳು ಆಸ್ಪತ್ರೆಗೆ ಬಂದಾಗ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಲು ಸಾಧ್ಯವಿದೆಯೇ ಎಂದು ಕೇಳುತ್ತಾರೆ.
ಈ ಪ್ರಶ್ನೆಯ ಉತ್ತರ ದಂಪತಿಗಳ ನಿರ್ಧಾರದ ಮೇಲೆ ಅವಲಂಬಿಸಿರುತ್ತದೆ. ದಂಪತಿಗಳು ಏಕಕಾಲಕ್ಕೆ ಎರಡು ಅಥವಾ ಮೂರು ಮಕ್ಕಳನ್ನು ಬಯಸಿದರೆ, ವೈದ್ಯರು ಅದನ್ನು ಅನುಷ್ಠಾನಕ್ಕೆ ತರುವುದು ಖಂಡಿತ ಸಾಧ್ಯವಿದೆ.
ಅದರ ಹಿಂದಿನ ಕಾರಣ ಅಷ್ಟೆ ಮಹತ್ವದ್ದಾಗಿದೆ. ಬಂಜೆತನದ ಚಿಕಿತ್ಸೆಗೆಂದು ದಂಪತಿಗಳು ಆಸ್ಪತ್ರೆಗೆ ಬಂದಾಗ ತಾವು ಪದೇ ಪದೇ ಈ ಚಿಕಿತ್ಸೆಗೊಳಪಡುವುದಕ್ಕಿಂತ ಒಂದೇ ಸಲಕ್ಕೆ ತಮ್ಮ ಕುಟುಂಬದ ಜವಾಬ್ದಾರಿಯಿಂದ ಮುಕ್ತರಾಗಲು ಬಯಸುತ್ತಾರೆ. ಐವಿಎಫ್‌ನ ಮುಖಾಂತರ ನೀವು ಹಾಗೂ ನಿಮ್ಮ ಡಾಕ್ಟರ್, ನಿಮ್ಮ ಗರ್ಭದಲ್ಲಿ ಎಷ್ಟು ಭ್ರೂಣಗಳನ್ನು ಸೇರ್ಪಡೆ ಮಾಡಬೇಕೆಂಬುದನ್ನು ನಿರ್ಧರಿಸಬಹುದು. ನಿಮಗೆ ಅವಳಿ ಅಥವಾ ತ್ರಿವಳಿ ಮಕ್ಕಳನ್ನು ಪಡೆಯಲು ಸಾಧ್ಯವಿದೆ. ಒಂದೇ ಒಂದು ಭ್ರೂಣವನ್ನು ಹಾಕಿದಾಗ ಅದರ ಯಶಸ್ಸಿನ ಸಾಧ್ಯತೆಯೂ ಕಡಿಮೆಯೇ ಇರುತ್ತದೆ. ಏಕೆಂದರೆ ನಿಮ್ಮ ಭ್ರೂಣ ಗರ್ಭಚೀಲದಲ್ಲಿ ಯಶಸ್ವಿಯಾಗಿ ಬೆಳೆದೇ ಬೆಳೆಯುತ್ತದೆ ಎಂಬ ಗ್ಯಾರಂಟಿಯೂ ಇಲ್ಲ. ಇದೇ ಕಾರಣದಿಂದ ಬಹಳಷ್ಟು ಮಹಿಳೆಯರು ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ.
ಹೆಚ್ಚುತ್ತಿರುವ ಬೇಡಿಕೆ
ಒಂದು ಅಚ್ಚರಿದಾಯಕ ಸಂಗತಿಯೆಂದರೆ, ಒಂದೇ ಭ್ರೂಣಕ್ಕಿಂತ ಹಲವು ಭ್ರೂಣಗಳನ್ನು ಗರ್ಭಕೋಶದಲ್ಲಿ ಬೆಳೆಯಲು ಅವಕಾಶ ಕೊಡುವುದರಿಂದ ಗರ್ಭಧಾರಣೆ ಮಾಡುವ ಪ್ರಮಾಣದಲ್ಲಿ ಒಂದಿಷ್ಟು ಪ್ರಮಾಣ ಹೆಚ್ಚಳವಾಗುತ್ತದೆ. ಈ ಕಾರಣದಿಂದ ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆಗಳು ಹೆಚ್ಚುತ್ತವೆ. ಐವಿಎಫ್ ಚಕ್ರದ ಯಶಸ್ಸಿನಲ್ಲಿ ಹಲವು ಕಾರಣಗಳ ಜೊತೆಗೆ ಮಹಿಳೆಯ ವಯಸ್ಸು, ಅವಳ ಆರೋಗ್ಯ, ಭ್ರೂಣದ ಸಾಮರ್ಥ್ಯ ಕೂಡ ಪ್ರಮುಖ ಪಾತ್ರ ವಹಿಸುತ್ತವೆ.
ನೀವು ನಿಮ್ಮ ಐವಿಎಫ್ ಚಕ್ರದ ಸಂದರ್ಭದಲ್ಲಿ 1ಕ್ಕಿಂತ ಹೆಚ್ಚು ಭ್ರೂಣಗಳನ್ನು ಅಳವಡಿಸಲು ಆಯ್ಕೆ ಮಾಡಿಕೊಂಡಲ್ಲಿ ನಿಮಗೆ ಅವಳಿ ಅಥವಾ ತ್ರಿವಳಿ ಮಕ್ಕಳು ಹುಟ್ಟುವ ಸಾಧ್ಯತೆಗಳು ಹೆಚ್ಚುತ್ತವೆ. ಏಕಕಾಲಕ್ಕೆ ಹಲವು ಭ್ರೂಣಗಳನ್ನು ಗರ್ಭಕೋಶದಲ್ಲಿ ಸೇರ್ಪಡೆಗೊಳಿಸುವ ಪ್ರಕ್ರಿಯೆ ಈಗ ಸಾಮಾನ್ಯ ಎಂಬಂತಾಗಿದೆ. ಏಕೆಂದರೆ ಒಂದೇ ಸಲಕ್ಕೆ ಅವರ ಮನೆಯಲ್ಲಿ ಎರಡು ಮಕ್ಕಳ ಕಿಲಕಿಲ ನಗು ರಿಂಗಣಿಸುತ್ತದೆ. ಐವಿಎಫ್‌ನ ಬೇಡಿಕೆ ಈಗ ಮತ್ತೊಂದು ಕಾರಣದಿಂದಲೂ ಹೆಚ್ಚುತ್ತಿದೆ. ಏಕೆಂದರೆ ಒಂದು ಸಾಮಾನ್ಯ ಅಭಿಪ್ರಾಯದಂತೆ, ಒಂದೇ ಮಗುವಾಗಿರಬಹುದು ಅಥವಾ ಎರಡು ಮಕ್ಕಳು, ಖರ್ಚಂತೂ ಅಷ್ಟೇ ಬರುತ್ತದೆ. ಏಕೆಂದರೆ ಐವಿಎಫ್ ಒಂದು ದುಬಾರಿ ಪ್ರಕ್ರಿಯೆ. ಆ ಕಾರಣದಿಂದ ಒಂದೇ ಸಲಕ್ಕೆ ಜನನ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕು ಎಂಬುದಾಗಿರುತ್ತದೆ.
ಇದರರ್ಥ ದಂಪತಿಗಳು ಒಂದಕ್ಕಿಂತ ಹೆಚ್ಚು ಮಕ್ಕಳಿಗಾಗಿ ಒತ್ತಡ ಹೇರುತ್ತಾರೆಂದಲ್ಲ. ಆದರೆ ಅದಕ್ಕಾಗಿ ತಮ್ಮ ಅಪೇಕ್ಷೆಯನ್ನಂತೂ ಬಹಿರಂಗಪಡಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರು ಪದೇ ಪದೇ ಹೆರಿಗೆಗೆ ರಜೆ ಹಾಕುವುದು, ಕೆರಿಯರ್‌ಗೆ ತೊಂದರೆ ಎಂಬ ದೃಷ್ಟಿಯಿಂದ ಏಕಕಾಲಕ್ಕೆ ಎರಡು ಮಕ್ಕಳು ಜನಿಸಿದರೆ ಉತ್ತಮ ಎಂದು ಭಾವಿಸುತ್ತಾರೆ.
– ಡಾ. ಅರವಿಂದ್ ವೈದ್ಯ