ಛೇ… ಏನಿದು? ಅವಸರದಲ್ಲಿ ಹೊರಟಿರುವಾಗ ಧರಿಸಲು ಏನೂ ಸಿಗುತ್ತಿಲ್ಲ….. ನನಗೆ ಬೇಕಾಗಿದ್ದ ಆ ಡ್ರೆಸ್‌ಸಿಗುತ್ತಿಲ್ಲವಲ್ಲ, ಈಗ ಪಾರ್ಟಿಗೆ ಏನು ಹಾಕಿಕೊಂಡು ಹೋಗಲಿ?
ವಾರ್ಡ್‌ರೋಬ್ ಎದುರು ನಿಂತು ನೀವು ಸಹ ಎಷ್ಟೋ ಸಲ ಹೀಗೆ ಗೊಣಗಿದ್ದಿದೆಯೇ? ಹೌದು ಎಂದಾದಲ್ಲಿ ನೀವು ನಿಮ್ಮ ವಾರ್ಡ್‌ರೋಬ್‌ನ್ನು ಸರಿಯಾಗಿ ಮ್ಯಾನೇಜ್ ಮಾಡುತ್ತಿಲ್ಲ, ಅದನ್ನು ಸರಿಪಡಿಸಿ ಎಂದರ್ಥ. ಹಾಗೆ ನೋಡಿದರೆ ಪ್ರತಿ ತಿಂಗಳೂ ನೀವು ಈ ಕೆಲಸ ಮಾಡುತ್ತಿರುತ್ತೀರಿ. ಆದರೆ ವಾರ್ಡ್‌ರೋಬ್‌ನ್ನು ಮುತುವರ್ಜಿಯಿಂದ ಸರಿಯಾಗಿ ಮ್ಯಾನೇಜ್ ಮಾಡಿದ್ದಾದಲ್ಲಿ, ನಿಮಗೆ ವಾರ್ಡ್‌ರೋಬ್‌ನ ವಸ್ತುಗಳು ಸುಲಭವಾಗಿ ಹಾಗೂ ಬೇಗ ಬೇಗ ಸಿಕ್ಕಿಬಿಡುತ್ತವೆ. ಇದಕ್ಕಾಗಿ ಈ ಕೆಳಗಿನ ಕೆಲವು ಸಲಹೆಗಳನ್ನು ಅನುಸರಿಸಿ :
ಎಲ್ಲಕ್ಕೂ ಮೊದಲು ವಾರ್ಡ್‌ರೋಬ್‌ನಲ್ಲಿ ಇರಿಸಿದ್ದ ಎಲ್ಲಾ ಸಾಮಗ್ರಿಗಳನ್ನೂ ಹೊರಗೆ ತೆಗೆಯಿರಿ. ನಂತರ ವಾರ್ಡ್‌ರೋಬ್‌ನ್ನು ಚೆನ್ನಾಗಿ ಸ್ವಚ್ಛ ಮಾಡಿ. ಇದಾದ ಮೇಲೆ ಪ್ರತಿಯೊಂದು ಬಟ್ಟೆಯನ್ನೂ ನೀಟಾಗಿ ಕೊಡವಿ, ಎತ್ತಿಡಿ. ಬಟ್ಟೆಗಳನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ಇರಿಸಬಯಸಿದರೆ, ಅದನ್ನೂ ಶುಚಿಗೊಳಿಸಿಯೇ ಇಡಬೇಕು.
ಬಟ್ಟೆಗಳನ್ನು ವಾರ್ಡ್‌ರೋಬ್‌ನಲ್ಲಿ ಸುಮ್ಮನೆ ತುರುಕಬೇಡಿ. ನಿಮ್ಮ ವಾರ್ಡ್‌ರೋಬ್‌ನಲ್ಲಿ ಎಷ್ಟು ಸ್ಪೇಸ್ ಇದೆ ಎಂದು ನಿಮಗೆ ಗೊತ್ತೇ ಇರುತ್ತದೆ….. ಅದರ ಪ್ರಕಾರವೇ ವಾರ್ಡ್‌ರೋಬ್‌ನಲ್ಲಿ ಬಟ್ಟೆಗಳನ್ನಿರಿಸಿ. ಬಟ್ಟೆಗಳನ್ನು ನೀಟಾಗಿ ಮಡಿಸಿ, ಒಂದರ ಮೇಲೊಂದು ಬರುವಂತೆ ಪದರಪದರಾಗಿ ಇರಿಸಬೇಕು. ಆದರೆ ಒಂದೇ ಕಡೆ ಒಂದು ರಾಶಿ ಜಮೆಗೊಳ್ಳುವಂತೆ ಮಾಡಬೇಡಿ.
ಎಲ್ಲಾ ಬಟ್ಟೆಗಳನ್ನೂ ಹೀಗೆ ಪದರ ಮಾಡಿಯೇ ಸೇರಿಸಬೇಕು ಎಂಬ ಅಗತ್ಯವೇನೂ ಇಲ್ಲ. ಕೆಲವನ್ನು ಹ್ಯಾಂಗರ್‌ನಲ್ಲಿಯೂ ಜೋಡಿಸಬಹುದು. ಮುಖ್ಯವಾಗಿ ಕೋಟ್, ಬ್ಲೇಝರ್, ಸೀರೆಗಳು, ಈವ್ನಿಂಗ್ ಡ್ರೆಸೆಸ್ ಇತ್ಯಾದಿಗಳನ್ನೂ ಹ್ಯಾಂಗರ್‌ನಲ್ಲಿಯೇ ನೇತು ಹಾಕಿ. ಏಕೆಂದರೆ ಇಂಥವನ್ನು ಪದರ ಪದರವಾಗಿ ಜೋಡಿಸಿದರೆ ಅವುಗಳಲ್ಲಿ ಕ್ರೇಝ್ ಮೂಡಬಹುದು. ಹ್ಯಾಂಗರ್‌ನಲ್ಲಿಟ್ಟಾಗ ಹೀಗಾಗುವುದಿಲ್ಲ.
ಮಾರುಕಟ್ಟೆಯಲ್ಲಿ ವುಡನ್, ಸ್ಟೀಲ್, ಪ್ಲಾಸ್ಟಿಕ್ ಇತ್ಯಾದಿಗಳ ಬೇರೆ ಬೇರೆ ಬಗೆಯ ಹ್ಯಾಂಗರ್‌ಗಳು ಲಭ್ಯವಿವೆ. ಅಂದರೆ, ಕೋಟ್ ಸಿಗಿಸಲು ಅಗಲವಾದ ಹ್ಯಾಂಗರ್, ಸೀರೆ ಸಿಗಿಸಲು ತುಸು ತೆಳ್ಳಗಿನ ಹ್ಯಾಂಗರ್, ಶರ್ಟ್‌ಟ್ರೌಸರ್ಸ್‌ಗಾಗಿ ಕ್ಲಿಪ್‌ವುಳ್ಳ ಹ್ಯಾಂಗರ್ಸ್‌ಲಭ್ಯವಿವೆ.
ನೀವು ಬಹಳ ದಿನಗಳಿಂದ ಒಂದು ಡ್ರೆಸ್‌ನ್ನು ಧರಿಸುತ್ತಿಲ್ಲ ಅಥವಾ ಮುಂದೆ ಧರಿಸಲು ಬಯಸುವುದಿಲ್ಲ ಎಂದಾದರೆ, ಅಂಥ ಬಟ್ಟೆಗಳನ್ನು ವಾರ್ಡ್‌ರೋಬ್‌ನಲ್ಲಿಟ್ಟು ಸ್ಪೇಸ್ ಬ್ಲಾಕ್ ಮಾಡುವುದೇಕೆ? ಅಂಥವನ್ನು ತೆಗೆದುಬಿಟ್ಟರೆ ಉಳಿದ ಬಟ್ಟೆಗಳಿಗೆ ಜಾಗ ಸಿಗುತ್ತದೆ.
ನಿಮ್ಮ ವಾರ್ಡ್‌ರೋಬ್‌ನಲ್ಲಿ ಬಟ್ಟೆಗಳ ಜೊತೆ ಬೇರೆ ರಾಕ್‌ನಲ್ಲಿ ಫುಟ್‌ವೇರ್ ಇರಿಸುವ ಜಾಗವಿದ್ದರೆ, ಅದನ್ನೆಂದೂ ಓಪನ್ ಆಗಿ ಬಿಡಬೇಡಿ. ಅವನ್ನು ಅಗತ್ಯವಾಗಿ ಮುಚ್ಚಿದ ಬಾಕ್ಸ್ ಗಳಲ್ಲಿ ಇಡಿ. ಇದರಿಂದ ಬಟ್ಟೆಗಳಿಗೆ ಫುಟ್‌ವೇರ್‌ನ ವಾಸನೆ ತಗುಲುವುದಿಲ್ಲ.
ನೀವು ಬಟ್ಟೆಗಳನ್ನು ಪದರ ಪದರವಾಗಿ ಒಂದರ ಮೇಲೊಂದು ಶೆಲ್ಫ್ ನಲ್ಲಿ ಇರಿಸುವಾಗ, ಒಂದೇ ತರಹದ ಬಟ್ಟೆಗಳನ್ನು ಜೋಡಿಸಿ. ಅಂದರೆ, ಬಾಟಮ್ ಜೊತೆ ಬಾಟಮ್, ಟಾಪ್ ಜೊತೆ ಟಾಪ್ ಬರಬೇಕು. ಇದರಿಂದ ಬೇಕಾದ ಬಟ್ಟೆಗಳನ್ನು ಹುಡುಕುವುದು ಸುಲಭವಾಗುತ್ತದೆ.
ಯಾವ ಡ್ರೆಸ್ ಅಥವಾ ಐಟಂ ನೀವು ಜಾಸ್ತಿ ಬಳಸುತ್ತೀರೋ, ಅದನ್ನು ವಾರ್ಡ್‌ರೋಬ್‌ನಿಂದ ಸುಲಭವಾಗಿ ತೆಗೆದು ಇರಿಸಬಹುದಾದ ಜಾಗದಲ್ಲೇ ಇಡಿ. ಅದನ್ನು ತೆಗೆಯುವಾಗ ಬೇರೆಯವು ಡಿಸ್ಟರ್ಬ್ ಮಾಡದಂತಿರಲಿ.
ನಿಮ್ಮ ವಾರ್ಡ್‌ರೋಬ್‌ನಲ್ಲಿ ಡ್ರೆಸೆಸ್, ಫುಟ್‌ವೇರ್ ಜೊತೆ, ಬೆಡ್ ಲೈನ್ ಮತ್ತು ಟವೆಲ್ ಇಡುವಿರಾದರೆ, ಅವನ್ನೂ ಪದರ ಪದರವಾಗಿ ನೀಟಾಗಿ ಮಡಿಚಿಡಿ. ಇದರಿಂದ ಅವುಗಳ ಮಧ್ಯೆ ಮಡಿಕೆ ಬೀಳುವುದಿಲ್ಲ, ಜಾಗದ ಕೊರತೆಯೂ ಕಾಡದು.
ನಿಮ್ಮ ವಾರ್ಡ್‌ರೋಬ್‌ನಲ್ಲಿ ಲೈಟ್ ವ್ಯವಸ್ಥೆ ಇದ್ದರೆ ಬಹಳ ಒಳ್ಳೆಯದು. ಬೆಳಕಿದ್ದಾಗ ಬೇಕಾದ ಸಾಮಗ್ರಿ ತೆಗೆದುಕೊಳ್ಳಲು ಅನುಕೂಲ.
ನಿಮ್ಮ ವಾರ್ಡ್‌ರೋಬ್‌ನಲ್ಲಿ ಹೆಚ್ಚಿನ ಸ್ಪೇಸ್ ಇರದಿದ್ದರೆ, ನೀವು ಅದಕ್ಕೆ ಹುಕ್ಸ್ ಅಟ್ಯಾಚ್ ಮಾಡಿಸಬಹುದು. ಯಾವುದರಲ್ಲಿ ಅನಗತ್ಯ ಮಡಿಕೆಗಳು ಬೀಳುವುದಿಲ್ಲವೇ, ಅಂಥ ಬಟ್ಟೆಗಳನ್ನು ಇವಕ್ಕೆ ನೇತುಹಾಕಬಹುದು.
– ಅನುಪಮಾ