ಹಲವು ಮಕ್ಕಳು ನೋಡಲಂತೂ ಆರೋಗ್ಯದಿಂದಿರುತ್ತಾರೆ. ಆದರೆ ಅವರ ಯೋಚನೆ ಹಾಗೂ ಅರ್ಥ ಮಾಡಿಕೊಳ್ಳುವ ಅಂದರೆ ಸ್ಮರಣ ಶಕ್ತಿ ಇತರೆ ಮಕ್ಕಳಿಗಿಂತ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಇರುತ್ತದೆ. ಇಂತಹ ಮಕ್ಕಳನ್ನು ಸಾಮಾನ್ಯವಾಗಿ `ಮಂದಬುದ್ಧಿ’ಯವರೆಂದು ಕರೆಯಲಾಗುತ್ತದೆ. ವಾಸ್ತವದಲ್ಲಿ ಈ ಸಮಸ್ಯೆಗೆ ಮುಖ್ಯ ಕಾರಣ ಅವರ ದೇಹದಲ್ಲಿ ಡಿಎಚ್‌ಎಯ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಿರುತ್ತದೆ. ಈ ಕಾರಣದಿಂದ ಅವರ ಮಾನಸಿಕ ವಿಕಾಸ ಸರಿಯಾಗಿ ಆಗುವುದಿಲ್ಲ.
ಈ ಕುರಿತಂತೆ ಕ್ಲಿನಿಕ್ ಡಯಟೀಶಿಯನ್ ಹಾಗೂ ಇಂಡಿಯನ್ ಡಯಾಬಿಟಿಕ್ ಅಸೊಸಿಯೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಶ್ವೇತಾ ಅವರು ಹೀಗೆ ಹೇಳುತ್ತಾರೆ, “ಡಿಎಚ್‌ಎ (ಡೊಕೊಸಾ ಹೆಕ್ಸಾನಿಕ್ ಆ್ಯಸಿಡ್) ಒಂದು ಬಗೆಯ ಒಮೇಗಾ-3 ಫ್ಯಾಟಿ ಆ್ಯಸಿಡ್ ಆಗಿದ್ದು, ಅದನ್ನು ಲಾಂಗ್ ಚೇನ್ ಪಾಲಿ ಅನ್‌ಸ್ಯಾಚ್ಯುರೇಟೆಡ್ ಆ್ಯಸಿಡ್ ಎಂದು ಹೇಳಲಾಗುತ್ತದೆ. ಇದು ಮಾನವ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಅದನ್ನು ಆಹಾರದ ಮುಖಾಂತರವೇ ಪಡೆದುಕೊಳ್ಳಬೇಕಾಗುತ್ತದೆ. ಮಕ್ಕಳ ಹೊರತಾಗಿ ಗರ್ಭಿಣಿಯರು ಕೂಡ ಇದನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಮಕ್ಕಳ ಮಾನಸಿಕ ಬೆಳವಣಿಗೆ ಗರ್ಭಾವಸ್ಥೆಯಿಂದಲೇ ಆರಂಭವಾಗುತ್ತದೆ.
ಡಿಎಚ್‌ಎಯನ್ನು ಮುಖ್ಯವಾಗಿ ಮೆದುಳಿನ ರಚನೆ, ಕಣ್ಣಿನ ರೆಟಿನಾದ ರಚನೆ ಸಮರ್ಪಕವಾಗಿ ಇರಲು ಉಪಯೋಗಿಸಲಾಗುತ್ತದೆ. ಇದು ಮೆದುಳಿನ ಬೆಳವಣಿಗೆ ಮತ್ತು ಕೇಂದ್ರ ನರಮಂಡಲದ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಮಕ್ಕಳಿಗಾಗಿ 2 ರಿಂದ 6 ಎಂತಹ ವಯಸ್ಸೆಂದರೆ, ಈ ಅವಧಿಯಲ್ಲಿ ಅವರ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಭಾರಿ ವೇಗದಲ್ಲಿ ಆಗುತ್ತಿರುತ್ತದೆ. ಈ ವಯಸ್ಸಿನಲ್ಲಿ ಅವರಿಗೆ ಡಿಎಚ್‌ಎ ಅಂದರೆ ಒಮೆಗಾ ಫ್ಯಾಟಿ ಆ್ಯಸಿಡ್‌ರ ಸಮರ್ಪಕ ಪ್ರಮಾಣ ದೊರೆಯದಿದ್ದರೆ ಅವರ ಬೆಳವಣಿಗೆಯಲ್ಲಿ ಬಾಧಕವಾಗಬಹುದು. ದೈಹಿಕ ವಿಕಾಸಕ್ಕೆ ಕ್ಯಾಲ್ಶಿಯಂ, ಕಬ್ಬಿಣಾಂಶ, ಮೆಗ್ನಿಶಿಯಂ ಮತ್ತು ಪ್ರೋಟೀನ್ ಹೇಗೆ ಅತ್ಯವಶ್ಯಕ, ಅದೇ ರೀತಿಯಲ್ಲಿ ಬೌದ್ಧಿಕ ಬೆಳವಣಿಗೆಗೆ ಡಿಎಚ್‌ಎಯ ಪ್ರಮಾಣ ಕೂಡ ಅತ್ಯವಶ್ಯಕ. ಮಕ್ಕಳ ಸಮಗ್ರ ವಿಕಾಸಕ್ಕೆ ಇದು ಅತ್ಯಂತ ಉಪಯುಕ್ತ ಪೋಷಕಾಂಶವಾಗಿದೆ. ಇದರಿಂದ ಅವರ ಸ್ಮರಣಶಕ್ತಿಯ ವಿಕಾಸವಾಗುತ್ತದೆ. ಯಾವ ಮಕ್ಕಳಲ್ಲಿ ಡಿಎಚ್‌ಎಯ ಕೊರತೆ ಇರುತ್ತೊ,
ಅವರ ಕಲಿಯುವ ಹಾಗೂ ಯೋಚನೆ ಮಾಡುವ ಸಾಮರ್ಥ್ಯ ಉಳಿದ ಮಕ್ಕಳಿಗಿಂತ ಕಡಿಮೆ ಇರುತ್ತದೆ. ಇದು ಅವರ ಓದಿನ ಮೇಲೆ ಪರಿಣಾಮ ಬೀರುತ್ತದೆ. ಅವರು ಮಾನಸಿಕವಾಗಿಯೂ ಒತ್ತಡಗ್ರಸ್ಥರಾಗಬಹುದು.
ಗರ್ಭಿಣಿಯರಿಗೆ
ಗರ್ಭಿಣಿಯರು ಸೇವಿಸುನ ಆಹಾರ ಅವರ ಹೊಟ್ಟೆಯಲ್ಲಿ ಬೆಳವಣಿಗೆಯಾಗುತ್ತಿರುವ ಮಗುವಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಕಂದನ ಬೆಳವಣಿಗೆ ಸಾಮಾನ್ಯವಾಗಿ ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಶಿಶುಗಳಲ್ಲಿ ಡಿಎಚ್‌ಎ ನಿರ್ಮಾಣ ಪ್ರಕ್ರಿಯೆ ಇರುವುದಿಲ್ಲ. ಹೀಗಾಗಿ ಈ ಪ್ರಮಾಣವನ್ನು ಅವು ತಾಯಿಯಿಂದ ಪಡೆದುಕೊಳ್ಳುತ್ತವೆ. ಡಿಎಚ್‌ಎ ನ್ಯೂರಾನ್ ಮತ್ತು ಜೀವಕೋಶಗಳ ಅತ್ಯಂತ ತೆಳುವಾದ ಪದರವನ್ನು ಸೃಷ್ಟಿ ಮಾಡುತ್ತದೆ. ಜನಿಸಿದ ಬಳಿಕ ಮಗುವಿಗೆ ಡಿಎಚ್‌ಎ ತಾಯಿಯ ಹಾಲಿನಿಂದ ದೊರೆಯುತ್ತದೆ. ಗರ್ಭಿಣಿಯರು 5ನೇ ತಿಂಗಳು ಅಥವಾ 20ನೇ ವಾರದಿಂದ 200 ರಿಂದ 300 ಮಿಲಿಗ್ರಾಂ ಡಿಎಚ್‌ಎಯ ಪ್ರಮಾಣವನ್ನು ಸೇವಿಸಬೇಕು.
ಡಿಎಚ್ಎಯ ಮೂಲ
ಡಿಎಚ್‌ಎ ಅತಿ ಹೆಚ್ಚು ಪ್ರಮಾಣದಲ್ಲಿ ತಂಪು ನೀರಿನಲ್ಲಿ ಬೆಳವಣಿಗೆ ಹೊಂದುವ ಸಾಲ್ಮನ್ ಮೀನು, ಟೂನಾ, ಹ್ಯಾರಿಂಗ್, ಕೌಡ್‌ಮತ್ತು ಸಾರ್ಡಾಡನ್‌ನಲ್ಲಿ ಕಂಡುಬರುತ್ತದೆ. ಪಾಚಿಯಿಂದ ಲಭ್ಯವಾಗುವ ಡಿಎಚ್‌ಎ ಸಸ್ಯಾಹಾರಿಗಳು ಸೇವಿಸಬಹುದಾಗಿದೆ. ಬಹಳಷ್ಟು ಸಸ್ಯಾಹಾರಿಗಳು ಡಿಎಚ್‌ಎ ದೊರಕಿಸಿಕೊಳ್ಳಲು ಒಣಹಣ್ಣುಗಳ ಸೇವನೆ ಮಾಡುತ್ತಾರೆ. ಆದರೆ ಈ ಒಣಹಣ್ಣುಗಳಲ್ಲಿ ಡಿಎಚ್‌ಎ ಲಭಿಸುವುದಿಲ್ಲ. ಅದರಿಂದ ದೊರೆಯುವುದು ಎಎಲ್ಎ. ಅದು ಒಂದು ಒಮೆಗಾ ಫ್ಯಾಟಿ ಆ್ಯಸಿಡ್ ಆಗಿದ್ದು, ಅದು ದೇಹದಲ್ಲಿ ಪ್ರವೇಶಿಸಿ ಡಿಎಚ್‌ಎಯ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ. ಆದರೆ ಈ ಪರಿವರ್ತನೆ ಪರಿಪೂರ್ಣವಾಗಿ ಆಗುವುದಿಲ್ಲ.
ಮೊಟ್ಟೆಯಲ್ಲಿ ಒಮೇಗಾ-3 ಫ್ಯಾಟಿ ಆ್ಯಸಿಡ್ ಮತ್ತು ಪ್ರೋಟೀನ್ ಎರಡೂ ಇವೆ. ಅವುಗಳ ಸಂಪೂರ್ಣ ಲಾಭ ಪಡೆದುಕೊಳ್ಳಲು ನೀವು ಅದನ್ನು ಆಮ್ಲೆಟ್ ಮಾಡಿಕೊಂಡು ತಿನ್ನುವುದಕ್ಕಿಂತ ಬೇಯಿಸಿಕೊಂಡು ತಿನ್ನಿ. ಇದನ್ನು ಮಕ್ಕಳಿಗೆ ಮುಂಜಾನೆಯ ಸಮಯದಲ್ಲಿ ಕೊಟ್ಟರೆ ಹೆಚ್ಚು ಉಪಯುಕ್ತ.
ಡಿಎಚ್‌ಎಗಾಗಿ ಸಸ್ಯಾಹಾರದಲ್ಲಿ ನೀವು ಪನೀರ್‌ನ್ನು ಕೊಡಬಹುದು. ನೀವು ಹಸಿ ಪನೀರ್‌ನ್ನು ಬ್ರೌನ್ ಬ್ರೆಡ್‌ನೊಳಗೆ ಹಾಕಿ ಸ್ಟಫ್ ಮಾಡಿ ಸ್ಯಾಂಡ್‌ವಿಚ್ ಕೂಡ ಮಾಡಬಹುದು. ಮೊಟ್ಟೆಯಲ್ಲಿ ಒಮೇಗಾ-3ಯ ಪ್ರಮಾಣ ಇರುತ್ತದೆ. ಅದು ದೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪನೀರ್ ಮತ್ತು ಮೊಟ್ಟೆಯ ಹೊರತಾಗಿ ಶೇಂಗಾಕಾಳು, ಮೀನು, ಕಾಟೇಜ್ ಚೀಸ್‌ನಲ್ಲೂ ಕೂಡ ಪ್ರೋಟೀನ್‌ನ ಪ್ರಮಾಣ ಇರುತ್ತದೆ. ಹೀಗಾಗಿ ಇವನ್ನು ಕೂಡ ನಿಮ್ಮ ಮಗುವಿನ ಆಹಾರದಲ್ಲಿ ಸೇರ್ಪಡೆ ಮಾಡಿ. ಪೋಷಕ ತಜ್ಞೆ ಗೀತಾ ಹೇಳುವುದೇನೆಂದರೆ, ಮಕ್ಕಳು ಪ್ರತಿಯೊಂದು ಬಗೆಯ ಬಣ್ಣದ ಹಣ್ಣುಗಳನ್ನು ಸೇವಿಸಬೇಕು. ಏಕೆಂದರೆ ಪ್ರತಿಯೊಂದು ಬಗೆಯ ಹಣ್ಣಿನಲ್ಲೂ ವಿಟಮಿನ್, ಮೆಗ್ನಿಶಿಯಂ, ಕ್ಯಾಲ್ಶಿಯಂ ಹಾಗೂ ಪ್ರೋಟೀನ್ ಬೇರೆ ಬೇರೆ ಪ್ರಮಾಣದಲ್ಲಿರುತ್ತದೆ.
ಉದಾಹರಣೆಗೆ ಮಧ್ಯಮ ಗಾತ್ರದ 1 ಬಾಳೆಹಣ್ಣಿನಲ್ಲಿ 1.29 ಗ್ರಾಂ ಪ್ರೋಟೀನ್ ಹಾಗೂ 3.2 ಗ್ರಾಂ ಫೈಬರ್ ಅಂದರೆ ನಾರಿನಂಶ ಇರುತ್ತದೆ. ಅಷ್ಟೇ ಅಲ್ಲ, ವಿಟಮಿನ್ `ಎ’ 76 ಐಯು ಮತ್ತು 6 ಮಿಲಿಗ್ರಾಂ ಕ್ಯಾಲ್ಶಿಯಂ ಪ್ರಮಾಣ ಇರುತ್ತದೆ.
ಒಂದು ಮಧ್ಯಮ ಗಾತ್ರದ ಸೇಬುಹಣ್ಣಿನಲ್ಲಿ ಪ್ರೋಟೀನ್ 0.47 ಗ್ರಾಂ, ಫೈಬರ್ 4.4 ವಿಟಮಿನ್ `ಎ’ 98 ಐಯು ಮತ್ತು ಕ್ಯಾಲ್ಶಿಯಂ 11 ಮಿಲಿಗ್ರಾಂ ಇರುತ್ತದೆ. 1 ಕಪ್ ದ್ರಾಕ್ಷಿಯಲ್ಲಿ ಪ್ರೋಟೀನ್ 1.09 ಗ್ರಾಂ, ಫೈಬರ್ 1.4 ಗ್ರಾಂ ವಿಟಮಿನ್ `ಎ’ 100 ಐಯು ಮತ್ತು ಕ್ಯಾಲ್ಶಿಯಂ 15 ಮಿಲಿಗ್ರಾಂ ಇರುತ್ತದೆ. ಒಂದು ಮಧ್ಯಮ ಗಾತ್ರದ ಕಿತ್ತಳೆ ಹಣ್ಣಿನಲ್ಲಿ ಪ್ರೋಟೀನ್‌ನ ಪ್ರಮಾಣ 1.23 ಗ್ರಾಂ, ಫೈಬರ್ 3.1 ಗ್ರಾಂ, ಪೊಟ್ಯಾಶಿಯಂ 237 ಮಿ.ಗ್ರಾಂ. ವಿಟಮಿನ್ `ಎ’ 295 ಐಯು ಮತ್ತು ಕ್ಯಾಲ್ಶಿಯಂ 52 ಮಿ.ಗ್ರಾಂ ಇರುತ್ತದೆ. ನೀವು ಎಲ್ಲ ಬಗೆಯ ಹಣ್ಣುಗಳನ್ನು ಸಲಾಡ್ ರೂಪದಲ್ಲಿ ಮಾಡಿಕೊಟ್ಟರೆ ಮಕ್ಕಳು ಖಂಡಿತ ಆನಂದದಿಂದ ತಿನ್ನುತ್ತವೆ.
400 ಮಿ.ಲೀ. ಹಾಲು ಅತ್ಯಗತ್ಯ
ಸಂಪೂರ್ಣ ಪೋಷಣೆ ದೊರಕಿಸಿಕೊಳ್ಳಲು ಇಡೀ ದಿನದಲ್ಲಿ 400 ಮಿ.ಲೀ. ಅಂದರೆ 2 ಗ್ಲಾಸ್ ಕುಡಿಯಬೇಕು. ಹಾಲಿನಲ್ಲಿ ಡಿಎಚ್‌ಎಯ ಹೊರತಾಗಿ ವಿಟಮಿನ್, ಪ್ರೋಟೀನ್ ಮತ್ತು ಕ್ಯಾಲ್ಶಿಯಂ ಕೂಡ ಇರುತ್ತದೆ. ಹಾಲಿನ ಹೊರತಾಗಿ ಬೇಸಿಗೆಯಲ್ಲಿ ಮೊಸರು, ಮಜ್ಜಿಗೆ ಹಾಗೂ ಇತರೆ ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು. ಇದರಿಂದಾಗಿ ಮೂಳೆಗಳು ಬಲಿಷ್ಠವಾಗುತ್ತವೆ.
ಸಾಮಾನ್ಯವಾಗಿ ಅನೇಕ ಮಕ್ಕಳು ಹಾಲನ್ನು ಕುಡಿಯಲು ಇಷ್ಟಪಡುವುದಿಲ್ಲ. ಅಂತಹ ಮಕ್ಕಳಿಗೆ ಮಾರುಕಟ್ಟೆಯಲ್ಲಿ ದೊರೆಯುವ ಹೆಲ್ತ್ ಡ್ರಿಂಕ್‌ಗಳು, ಹಾಲಿನಲ್ಲಿ ಬೆರೆಸಿ ಕೊಡುವುದರಿಂದ ಅವು ಖುಷಿಯಿಂದ ಕುಡಿಯುತ್ತವೆ. ಇವುಗಳ ರುಚಿಯೂ ಉತ್ತಮವಾಗಿರುತ್ತದಲ್ಲದೆ, ಅದರಲ್ಲಿ ಡಿಎಚ್‌ಎಯ ಪ್ರಮಾಣ ಸಾಕಷ್ಟು ಇರುತ್ತದೆ. ನೀವು ಹಾಲಿನಿಂದ ಮ್ಯಾಂಗೋ ಶೇಕ್, ವೆನಿಲಾ ಶೇಕ್ ಅಥವಾ ಸ್ಟ್ರಾಬೆರಿ ಶೇಕ್ ಅಥವಾ ಸುವಾಸನಾಭರಿತ ಹಾಲನ್ನು ಮಕ್ಕಳಿಗೆ ಕೊಡಬಹುದು.