ಇಂದು ಸಿನಿಮಾ ಗೃಹಗಳಿಗಿಂತ ಮನೆಯ ಡ್ರಾಯಿಂಗ್‌ ರೂಮ್ ಸದಾ ಹೌಸ್‌ ಫುಲ್‌ ಆಗಿ ಕಾಣುತ್ತಿದೆ. ಈ ಟ್ರಾಫಿಕ್‌ ಜಂಜಾಟದ ನಡುವೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಬದಲು ಮನೆಯಲ್ಲೇ ಫ್ರೀ ಶೋ ಅಂತ ಕಿರುತೆರೆಗೆ ವೀಕ್ಷಕರು ಅಡಿಕ್ಟ್ ಆಗಿದ್ದಾರೆ. ಥಿಯೇಟರ್‌ಗೆ ಹೋಗಿ ತಮ್ಮ ಮೆಚ್ಚಿನ ಸ್ಟಾರ್‌ಗಳನ್ನು ನೋಡುವ ಕಾಲ ಹೊರಟು ಹೋದಂತಿದೆ. ಏಕೆಂದರೆ ಅವರುಗಳೇ ನಮ್ಮ ಮನೆಯೊಳಗೆ ಬರಲು ಶುರು ಮಾಡಿದ್ದಾರೆ!

ವೀಕ್ಷಕರಿಗೆ ಇನ್ನೇನು ತಾನೆ ಬೇಕು? ಮನೆಯಲ್ಲಿ ಕುಳಿತು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಅದ್ಧೂರಿ ಸೆಟ್‌ಗಳು, ರಂಗುರಂಗಿನ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು, ಎಲ್ಲವನ್ನೂ ವೀಕ್ಷಕರು ಮನೆಯಲ್ಲೇ ನೋಡುತ್ತಿದ್ದಾರೆ. ಕಿರುತೆರೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ.

`ಬಿಗ್‌ಬಾಸ್‌’ ಮೂಲಕ ಸುದೀಪ್‌ ಜನಮನ ಗೆದ್ದರು. ಗಣೇಶ್‌ರ `ಒನ್‌ ಮಿನಿಟ್‌’ ಭರ್ಜರಿ ಯಶಸ್ಸು ಕಂಡಿತ್ತು. ರಕ್ಷಿತಾ `ಸ್ವಯಂವರ’ ಮೂಲಕ ಕಿರುತೆರೆ ಹೊಕ್ಕರೆ ಈಗ `ಪುಟಾಣಿ ಪಂಟ್ರು-2′ ಸೀಸನ್‌ನಲ್ಲೂ ಜಡ್ಜ್ ಆಗಿ ಕುಳಿತಿದ್ದಾರೆ.

dancing-star

`ಡ್ಯಾನ್ಸಿಂಗ್‌ ಸ್ಟಾರ್ಸ್’ ಅದ್ಧೂರಿಯಾಗಿ ಮೂಡಿಬಂದಿತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಕ್ರೇಜಿ ಸ್ಟಾರ್‌ ರವಿಚಂದ್ರನ್ ಹಾಗೂ ಪ್ರಿಯಾಮಣಿ ಮತ್ತು ಮಯೂರಿ. ನೇರ ನುಡಿಗೆ ಹೆಸರುವಾಸಿಯಾದ ರವಿಚಂದ್ರನ್‌ ತಮ್ಮ ನೇರ ಜಡ್ಜ್ ಮೆಂಟ್‌ನಿಂದ ಎಲ್ಲರ ಗಮನಸೆಳೆದರು.  ಹೊಗಳುವಾಗ ಹೊಗಳಿ, ತೆಗಳುವಾಗ ಅಷ್ಟೇ ಪ್ರೀತಿಯಿಂದ ತೆಗಳುತ್ತಾ… ಆ್ಯಂಕರ್‌ ಅಕುಲ್ ಬಾಲಾಜಿಯನ್ನು ಸಖತ್ತಾಗಿ ಕಾಲೆಳೆದು ಹಾಸ್ಯದ ಹೊನಲನ್ನು ಹರಿಸಿದ್ದರು. ಸ್ಪರ್ಧಿಗಳ ಅಪೇಕ್ಷೆಗೆ ಮೀರಿ ಆಗಾಗ್ಗೆ ರವಿಚಂದ್ರನ್ ಒಂದೆರಡು ಹೆಜ್ಜೆ ಹಾಕಿ ಕುಣಿದದ್ದುಂಟು. ಈ ಡ್ಯಾನ್ಸಿಂಗ್‌ ಶೋ ಅತಿ ಹೆಚ್ಚು ಯಶಸ್ಸು ಗಳಿಸಿದಂಥ ಕಾರ್ಯಕ್ರಮವಾಗಿತ್ತು. ಟಿ.ಆರ್.ಪಿ. ಸಖತ್‌ ಆಗಿ ಸಿಕ್ಕಿತು. `ಡ್ಯಾನ್ಸಿಂಗ್‌ ಸ್ಟಾರ್‌’ ಶೋನಲ್ಲಿ ಗೆಲುವನ್ನು ಪಡೆದ ಮಾ. ಆನಂದ್‌ ಎಲ್ಲರಲ್ಲೂ ಅಚ್ಚರಿ ಮೂಡಿಸಿದ. ಸ್ಟ್ರಾಂಗ್‌ ಪ್ರತಿಸ್ಪರ್ಧಿಯಾಗಿದ್ದ ರಜನಿ ಶೋ ರಿಹರ್ಸಲ್ ಸಮಯದಲ್ಲಿ ಕುಣಿಯುವಾಗ ಜಾರಿಬಿದ್ದು ತನ್ನ ಕಾಲನ್ನು ಮುರಿದುಕೊಂಡು ಆಸ್ಪತ್ರೆ ಸೇರಿದಳು. ನೋವು ನಲಿವಿನ ಸಂಭ್ರಮದಲ್ಲಿ `ಡ್ಯಾನ್ಸಿಂಗ್‌ ಸ್ಟಾರ್‌’ ವೀಕ್ಷಕರನ್ನು ಆಕರ್ಷಿಸಿ ಗೆಲುವು ಕಂಡುಕೊಂಡಿತು. `ಲಿಟಲ್ ಡ್ಯಾನ್ಸಿಂಗ್‌ ಸ್ಟಾರ್‌’ ಕಾರ್ಯಕ್ರಮ ಶುರುವಾಗಲಿದ್ದು, ರವಿಚಂದ್ರನ್‌ ಅವರೇ ಜಡ್ಜ್ ಆಗಿ ಮುಂದುವರಿದಿದ್ದಾರೆ. ಕಿರುತೆರೆ ರವಿಗೂ ಇಷ್ಟವಾದಂತಿದೆ.

MajaTalkies

ಕನ್ನಡ ಕಲರ್ಸ್‌ ಟಿ.ವಿ.ಯಲ್ಲಿ ಮತ್ತೊಂದು ಕಾರ್ಯಕ್ರಮ ಎಲ್ಲರನ್ನೂ ಮೋಡಿ ಮಾಡುತ್ತಿದೆ. ಸೃಜನ್‌ ಲೋಕೇಶ್‌ ಅರ್ಪಿಸುವ `ಮಜಾ ಟಾಕೀಸ್‌’ ಇದು ಹಿಂದಿಯ `ಕಾಮಿಡಿ ನೈಟ್ಸ್ ವಿತ್‌ ಕಪಿಲ್‌’ನ ರೀಮೇಕಾಗಿದ್ದರೆ, ಸೃಜನ್‌ ಮತ್ತು ಅವರ ತಂಡದವರ ಸ್ವಂತಿಕೆಯಿಂದ ಬೇರೊಂದು ರೂಪ ಪಡೆದುಕೊಂಡು ಮುನ್ನುಗ್ಗುತ್ತಿದೆ.

`ಮಜಾ ಟಾಕೀಸ್‌’ ಕೂಡಾ ಸಾಕಷ್ಟು ಜನಪ್ರಿಯವಾಗಿದೆ. ನಟಿ, ನಿರೂಪಕಿ ಮಾತ್ರ ಆಗಿದ್ದಂಥ ಅಪರ್ಣಾಳ ಹಾಸ್ಯ ಪ್ರಜ್ಞೆಯ ಹೊಸ ರೂಪ ಮಜಾ ಟಾಕೀಸ್‌ಗೆ ಕೇಂದ್ರಬಿಂದುವಾಗಿದೆ. ತಾರೆಯರನ್ನು ಮುಲಾಜಿಲ್ಲದೆ ಕಾಲೆಳೆಯುವ ಅಪರ್ಣಾ ಸಹಜವಾಗಿ ವೀಕ್ಷಕರಿಗೆ ಇಷ್ಟವಾಗುತ್ತಾಳೆ.

ಮನೆಯಲ್ಲೇ ಕುಳಿತು `ಮಜಾ ಟಾಕೀಸ್‌’ನಿಂದ ಮಜಾ ತೆಗೆದುಕೊಳ್ಳುತ್ತಿರುವ ವೀಕ್ಷಕರಿಗೆ ಪ್ರತಿ ಶನಿವಾರ ಭಾನುವಾರ ನಗೆ ಹಬ್ಬ ಕಟ್ಟಿಟ್ಟ ಬುತ್ತಿ ಎನ್ನುವಷ್ಟು `ಮಜಾ ಟೀಕೀಸ್‌’ ಯಶಸ್ವಿಯಾಗಿದೆ.

– ಜಾಗೀರ್‌ದಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ