ನಿಕಿಶಾ ಪ್ರೆಗ್ನೆಂಟ್‌…..!

ಇದೇನಪ್ಪ ನಿಕಿಶಾ ಬಗ್ಗೆ ಇಂಥ ಢಮಾರ್‌ ಸುದ್ದಿ ಅಂತ ಅಚ್ಚರಿಪಟ್ಟರೂ ಆಶ್ಚರ್ಯವಿಲ್ಲ. ಸಾಮಾಜಿಕ ತಾಣದಲ್ಲಿ ತಾರೆಯರು ತಮಗೆ ಇಷ್ಟ ಬಂದಂತೆ ಫೋಟೋ ಹಾಕಿಕೊಂಡು ಏನಾದರೂ ಬರೆಯುತ್ತಲೇ ಇರುತ್ತಾರೆ. ತನ್ನ ಅಭಿಮಾನಿಗಳನ್ನು ನೇರವಾಗಿ ಸಂಪರ್ಕಿಸುವ ಇವರುಗಳು ಆಗಾಗ್ಗೆ ಇಂಥ ಸುದ್ದಿ ಕೊಡುತ್ತಿರುತ್ತಾರೆ. ಇತ್ತೀಚೆಗೆ ನಿಕಿಶಾ ಲಂಡನ್‌ನಲ್ಲಿ ತನ್ನ ಕುಟುಂಬದ ಜೊತೆ ಜಾಲಿ ಟ್ರಿಪ್‌ಗೆಂದು ಹೋಗಿದ್ದಾಗ ಅಲ್ಲಿ ಸಮುದ್ರದ ತೀರದಲ್ಲಿ ಮರಳು ಗುಪ್ಪೆಯನ್ನು ಹೊಟ್ಟೆ ಮೇಲೆ ಹಾಕಿಕೊಂಡು ತಮಾಷೆ ಮಾಡುತ್ತಾ ಪ್ರೆಗ್ನೆಂಟ್‌ ಫನ್‌ ಎಂದು ಬರೆದುಕೊಂಡಿದ್ದಾಳೆ. ಮೊದಲಿಗೆ ಅಚ್ಚರಿ ಪಟ್ಟ ಆಕೆಯ ಅಭಿಮಾನಿಗಳು ಫೋಟೋ ನೋಡಿ ಬಿದ್ದು ಬಿದ್ದು ನಕ್ಕಿದ್ದರಂತೆ. ಒಟ್ಟಿನಲ್ಲಿ ನಮ್ಮ ತಾರೆಯರು ಹೇಗೋ ಅಂತೂ ಸುದ್ದಿಯಲ್ಲಿರುವುದಂತೂ ಸತ್ಯ.

Sudharani-Photos

ಎವರ್ಗ್ರೀನ್ಸುಧಾರಾಣಿ

`ಆನಂದ್‌’ ಚಿತ್ರದಲ್ಲಿ ಸ್ಕೂಲ್ ‌ಹುಡುಗಿಯಂತಿದ್ದ ಸುಧಾರಾಣಿ ತನ್ನ ವಯಸ್ಸಿಗೆ ತಕ್ಕಂತೆ ಪಾತ್ರ ನಿರ್ವಹಿಸಿ ಮಿಂಚಿದಂಥ ಕನ್ನಡದ ಹುಡುಗಿ. `ಮೈಸೂರು ಮಲ್ಲಿಗೆ’ಯಾಗಿ ಅಭಿನಯ ನೀಡಿದಳು. ರಾಜ್ಯ ಪ್ರಶಸ್ತಿ ಪಡೆದಳು. ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದಳು.  ಇಂದು ಸುಧಾರಾಣಿ ಒಂದು ಹೆಣ್ಣು ಮಗುವಿನ ತಾಯಿ, ತನ್ನೆತ್ತರಕ್ಕೆ ಮಗಳು ಬೆಳೆಯುತ್ತಿದ್ದರೂ ಸುಧಾರಾಣಿ ಮಾತ್ರ ಎವರ್‌ ಗ್ರೀನ್‌ ಆಗಿಯೇ ಕಂಗೊಳಿಸುತ್ತಾಳೆ. `ವಾಸ್ತು ಪ್ರಕಾರ’ ಚಿತ್ರದಲ್ಲಿ ಅನಂತ್‌ ನಾಗ್‌ ಪತ್ನಿಯಾಗಿ ಮಿಂಚಿದ್ದ ಸುಧಾ ತನಗೊಪ್ಪುವಂಥ ಪಾತ್ರ ಸಿಕ್ಕರೆ ಮಾತ್ರ ನಟಿಸುವ ಅಭ್ಯಾಸ ಇಟ್ಟುಕೊಂಡಿದ್ದಾಳೆ. ಆಗಾಗ್ಗೆ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುವ ಸುಧಾ ಶಿವಣ್ಣನ ಜೊತೆಗೆ ಚಿನ್ನದ ಆಭರಣದ ಜಾಹೀರಾತಿನಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಳು. ಇದೀಗ `ಲವ್ ಯೂ ಆಲಿಯಾ’ ಚಿತ್ರದಲ್ಲೂ ಸುಧಾರಾಣಿ ಗಮನಾರ್ಹ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಪರಭಾಷೆಯಿಂದ ಜನಪ್ರಿಯ ನಟಿಯರನ್ನು ಕರೆತಂದು ಆ್ಯಕ್ಟ್ ಮಾಡಿಸುವ ಕೆಲವು ನಿರ್ದೇಶಕರು ಅಂಥ ಪಾತ್ರಗಳನ್ನು ಸುಧಾರಾಣಿಗೂ ಕೊಡಲಿ ಎಂದಷ್ಟೇ ಹೇಳಬಹುದು.

pic-gk

ವಂಶೋದ್ಧಾರಕನಾಗಿ ವಿಜಯ ರಾಘವೇಂದ್ರ

ರಥಸಪ್ತಮಿ ಅರವಿಂದ್‌ಎಂದೇ ಖ್ಯಾತರಾಗಿದ್ದ ಅರವಿಂದ್‌ ಚಿತ್ರ ನಿರ್ಮಾಣಕ್ಕಿಳಿದಾಗ ತಮ್ಮ ಮೊದಲ  ಚಿತ್ರವನ್ನು ಹಳ್ಳಿ ಸೊಗಡಿನ  ಬ್ಯಾಗ್‌ ರೌಂಡ್‌ ಇಟ್ಟುಕೊಂಡು ಸಿನಿಮಾ ಶುರು ಮಾಡಿದರು. `ವಂಶೋದ್ಧಾರಕ’ ಚಿತ್ರದಲ್ಲಿ ವಿಜಯ ರಾಘವೇಂದ್ರ ಮತ್ತು ಮೇಘನಾ ರಾಜ್‌ ಜೋಡಿಯಾಗಿ  ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದು, ಮೊದಲ ಪ್ರಿಂಟ್‌ ಬಂದಾಗ ಅರವಿಂದ್‌ ಅವರು ತಮ್ಮ ಚಿತ್ರ ಜನರಿಗೆ ಖಂಡಿತ ಹಿಡಿಸುತ್ತೆ ಎಂದು ನಂಬಿಕೊಂಡು ಸೆನ್ಸಾರ್‌ ಮುಂದೆ ಹೋದಾಗ ಒಂದೇ ಒಂದು ಕಟ್‌ ಕೊಡುವುದರ ಮೂಲಕ ಚಿತ್ರಕ್ಕೆ ಸರ್ಟಿಫಿಕೇಟ್‌ ಪಡೆದರು. ಬಹಳ ದಿನಗಳ ನಂತರ ತಾರೆ ಲಕ್ಷ್ಮಿ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸದ್ಯದಲ್ಲೇ `ವಂಶೋದ್ಧಾರಕ’ ತೆರೆ ಕಾಣಲಿದೆ.

Nabha+Natesh

ಸ್ಯಾಂಡಲ್ವುಡ್ ಪಟಾಕಿ….

ಕನ್ನಡ ಸಿನಿಮಾ ರಂಗದಲ್ಲೀಗ ಹೊಸ ಹುಡುಗಿಯರದೇ ದರ್ಬಾರು. ಇತ್ತೀಚೆಗೆ `ವಜ್ರಕಾಯ’ ಚಿತ್ರದಲ್ಲಿ ಕಾಣಿಸಿಕೊಂಡ ನಭಾ ನಟೇಶ್‌ ತನ್ನ ಬಿಂದಾಸ್‌ ಲುಕ್ಸ್ ನಿಂದ ಪ್ರೇಕ್ಷಕರನ್ನು ಸೆರೆಹಿಡಿದ್ದಾಳೆ. ಕುದುರೆ ಸವಾರಿ ಮಾಡುತ್ತಾ ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ಬಾಯಲ್ಲಿ ಬೀಡಿ ಕಚ್ಚಿಕೊಂಡು ತೆರೆ ಮೇಲೆ ಎಂಟ್ರಿ ಕೊಟ್ಟಾಗಲೇ ನಭಾ ಇಂಡಸ್ಟ್ರಿಯಲ್ಲಿ ಭದ್ರವಾಗಿ ತಳವೂರುತ್ತಾಳೆ ಎಂದು ಎಲ್ಲರಿಗೂ ಮನದಟ್ಟಾಗಿತ್ತು. ನಭಾ ನಟೇಶ್‌ ತನ್ನ ಮೊದಲ ಚಿತ್ರದಲ್ಲಿ ಟಾಮ್ ಬಾಯ್‌ ಲುಕ್ಕಿಂದ ಕ್ಲಿಕ್‌ ಆದಳು. ಹ್ಯಾಟ್ರಿಕ್‌ ಹೀರೋ ಶಿವಣ್ಣ ಜೊತೆ ನಟಿಸಿ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಳು. ಹೆಚ್ಚು ಪ್ರಚಾರವಿಲ್ಲದೇ ಬಂದಂಥ ನಭಾ ತನ್ನ ಮೊದಲ ಚಿತ್ರದಲ್ಲೇ ಧೂಳೆಬ್ಬಿಸಿ ಜನಪ್ರಿಯಳಾಗುತ್ತಿದ್ದಾಳೆ. ಟಾಮ್ ಬಾಯ್‌ ತರಹದ ರೋಲ್ ಗಳಿಗೆ ಬ್ರಾಂಡ್‌ ಆದರೂ ಆಶ್ಚರ್ಯವಿಲ್ಲ.

veerapan

ಕಿಲ್ಲಿಂಗ್ ವೀರಪ್ಪನ್‌….!

ರಾಮ್ ಗೋಪಾಲ್ ವ‌ರ್ಮ ಖ್ಯಾತ ನಿರ್ದೇಶಕ. ಹಿಂದಿ, ತೆಲುಗು ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿರುವ ವರ್ಮ ಕನ್ನಡದ ನಟಿಯರತ್ತ ಗಮನಹರಿಸುತ್ತಲೇ ಇರುತ್ತಾರೆ. ಈ ಮೊದಲು ಸುದೀಪ್‌ರನ್ನು ಹಿಂದಿ ಚಿತ್ರರಂಗಕ್ಕೆ `ರಣ್‌’ ಚಿತ್ರದ ಮೂಲಕ ಪರಿಚಯಿಸಿದ್ದರು. ಈಗ `ಕಿಲ್ಲಿಂಗ್‌ ವೀರಪ್ಪನ್‌’ ಎನ್ನುವ ಹೊಸ ಚಿತ್ರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ಚಿತ್ರದ ಪ್ರಮುಖ ಆಕರ್ಷಣೆ ಶಿವರಾಜ್‌ ಕಮಾರ್‌. ಈ ಚಿತ್ರದ ಪತ್ರಿಕಾಗೋಷ್ಠಿ ಅದ್ಧೂರಿಯಾಗಿ ನಡೆದಿದ್ದಷ್ಟೇ ಅಲ್ಲ, ಶಿವಣ್ಣ ಅವರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನದಲ್ಲಿ ಫೋಟೋಗಳು ರಾರಾಜಿಸುತ್ತಿದ್ದವು. `ಕಿಲ್ಲಿಂಗ್‌ ವೀರಪ್ಪನ್‌’ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಶಿವಣ್ಣನವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ವೀರಪ್ಪನನ್ನು ಹಿಡಿಯುವ ಪಾತ್ರ ಅವರದಾಗಿದೆ ಎನ್ನಲಾಗಿದೆ. ವೀರಪ್ಪನ್‌ ಪಾತ್ರಧಾರಿ ಥೇಟ್‌ ವೀರಪ್ಪನ್‌ನಂತೆ ಕಾಣುವುದು ಕೂಡಾ ಅಷ್ಟೇ ವಿಶೇಷವಾಗಿದೆ. ಮೊದಲ ಬಾರಿಗೆ ಶಿವಣ್ಣ ಬಹುಭಾಷಾ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.

Nikhil-Gowda-Photos

ಮಿಂಚಾಗಿ ಬಂದ ನಿಖಿಲ್ ಗೌಡ

ತಾರೆಯರ ಪುತ್ರರು ತಾರೆಯರಾಗುತ್ತಾರೆ. ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಾರೆ ಎನ್ನುವ ಕಾಲ ಹೊರಟುಹೋಯಿತು. ಈಗ ರಾಜಕಾರಣಿ ಮಕ್ಕಳು ಬಣ್ಣದ ಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಬರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರ್‌ ಸ್ವಾಮಿಯವರ ಪುತ್ರ ನಿಖಿಲ್ ‌ಗೌಡ ಸಿನಿಮಾ ನಟನಾಗಬೇಕೆಂದು ತಾರೆಯರನ್ನು ನೋಡಿ ಆಸೆಪಟ್ಟವರಲ್ಲ. ಚಿಕ್ಕ ಹುಡುಗನಿಂದಲೇ ಅಭಿನಯದ ಕಡೆ ಒಲವು ತೋರಿದಂಥ ಹುಡುಗ. ತಾನೊಬ್ಬ ನಟನಾಗಬೇಕಂದು ಅಪ್ಬನ  ಮುಂದೆ ಹೇಳಿಕೊಂಡಾಗ ಖುಷಿ ಖುಷಿಯಾಗಿಯೇ ಒಪ್ಪಿಗೆ ನೀಡಿದರು. ಏಕೆಂದರೆ ಸಿನಿಮಾ ನಿರ್ಮಾಣದಲ್ಲಿ ಅನುಭವ ಹೊಂದಿದ್ದ ಕುಮಾರಸ್ವಾಮಿಯವರಿಗೆ ನಟನಾಗಬೇಕೆಂಬ ಆಸೆ ಇತ್ತಂತೆ. ತಮ್ಮ ಕನಸನ್ನು ಮಗ ನನಸು ಮಾಡಲಿ ಎಂದು ಪ್ರೋತ್ಸಾಹಿಸಿದರು. ನಿಖಿಲ್ ‌ನಟನೆಗೆ ಬೇಕಾದ ಎಲ್ಲ ವಿದ್ಯೆ ಕಲಿತರು. ಚಿನಕುರುಳಿಯಂತೆ ಮಾತನಾಡುವ ನಿಖಿಲ್ ‌ಗೌಡ `ಜಾಗ್ವಾರ್‌’ ಎನ್ನುವ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

shooting

ಬದಲಾದ ಟೈಟಲ್ `ರಿಂಗ್ರೋಡ್‌’

ಪ್ರಿಯಾ ಬೆಳ್ಳಿಯಪ್ಪ ಮತ್ತು ಎಲ್ಲ ಹುಡುಗಿಯರು ಸೇರಿಕೊಂಡು ಮಾಡಿದಂಥ ಚಿತ್ರ `ರಿಂಗ್‌ ರೋಡ್‌ ಶುಭಾ’ ಅನೇಕ ಕಾರಣಗಳಿಂದ ಟೈಟಲ್ ಬದಲಾವಣೆ ಆಗುತ್ತಲೇ ಇದೆ. ಇದು ಶುಭಾಳ ಕಥೆಯಲ್ಲವೆಂದು ಹೇಳಿಕೊಂಡಿದ್ದರೂ, ಶುಭಾ ಹೆಸರನ್ನು ಟೈಟಲ್ ನಿಂದ ತೆಗೆಯುವುದು ಅನಿವಾರ್ಯವಾಯಿತು. ಶುಭಾ ಹೋಗಿ ಸುಮಾ ಬಂದಳು. ಶುಭಾ ಎಂದಿದ್ದ ಕಡೆ ಸುಮಾ ಎಂದು ಮತ್ತೆ ಮರುಜೋಡಿಸಲಾಯಿತು. ಎಲ್ಲ ಸರಿಹೋಯಿತು ಎನ್ನುವಾಗ `ರಿಂಗ್‌ ರೋಡ್‌’ ಎಂದಷ್ಟೆ ಇದ್ದ ಟೈಟಲ್ ಜೊತೆ ಇದು ಸುಮಾಳ ಕಥೆ ಎನ್ನುವ ಟ್ಯಾಗ್‌ ಲೈನ್‌ನ್ನು ವಾಣಿಜ್ಯ ಮಂಡಳಿ ತಿರಸ್ಕರಿಸಿತು. ಲಕ್ಷಾಂತರ ರೂಪಾಯಿ ಸುರಿದು  ಪಬ್ಲಿಸಿಟಿಗೆಂದು ಪ್ರಿಂಟ್‌ ಹಾಕಿದ್ದ ಪೋಸ್ಟರ್‌ ವ್ಯರ್ಥವಾಯಿತು. ಸದ್ಯಕ್ಕೀಗ ಎಲ್ಲವನ್ನು ಕಿತ್ತುಹಾಕಿ ಚಿತ್ರದ ಟೈಟಲ್ `ರಿಂಗ್‌ ರೋಡ್‌’ ಎಂದಷ್ಟೇ ಆಗಿದೆ. ಜುಲೈ ಹತ್ತರಂದು ಬಿಡುಗಡೆಯಾಗಬೇಕಿದ್ದ `ರಿಂಗ್‌ ರೋಡ್‌’ ಮುಂದಕ್ಕೆ ಹೋಯಿತು. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಪ್ರಿಯಾ ಬೆಳ್ಳಿಯಪ್ಪ ಹೇಳುತ್ತಾರೆ.

ganesh

ಗಣಿ ಈಗ ಪಟಾಕಿ

ಗೋಲ್ಡನ್‌ ಸ್ಟಾರ್‌ ಗಣೇಶ್‌ ರೊಮ್ಯಾಂಟಿಕ್‌ ಹೀರೋ ಆಗಿ ಬ್ರ್ಯಾಂಡ್‌ ಆದರು. ರಫ್‌ ಅಂಡ್‌ ಟಫ್‌ ಪಾತ್ರಕ್ಕೆ ಇವರು ಸೂಟ್ ಆಗತ್ತಾರಾ ಎನ್ನುವ ಅನುಮಾನವನ್ನು ನಿರ್ದೇಶಕ ಮಂಜು ಸ್ವರಾಜ್‌ ದೂರ ತಳ್ಳಿದ್ದಾರೆ. ಮಂಜು ನಿರ್ದೇಶನದ ಹೊಸ ಚಿತ್ರದಲ್ಲಿ ಗಣೇಶ್‌ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಅದಕ್ಕೆ ತಕ್ಕ ಹಾಗೆ ಅವರು ಮೀಸೆ ಬಿಟ್ಟಿದ್ದಾರೆ. ತೂಕ ಹೆಚ್ಚಿಸಿಕೊಂಡಿದ್ದಾರೆ. ಬಾಡಿ ಲಾಂಗ್ವೇಜ್‌ ಬದಲಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ `ಪಟಾಕಿ’ ಎಂದು ಹೆಸರಿಡಲಾಗಿದೆ. ಖ್ಯಾತ ನಿರ್ಮಾಪಕ ಎಸ್‌.ಪಿ. ಬಾಬು ಅವರು ನಿರ್ಮಾಣ ಮಾಡುತ್ತಿದ್ದಾರೆ. ಗಣೇಶನ ಹುಟ್ಟುಹಬ್ಬದ ದಿನ ಈ ಚಿತ್ರ ಮುಹೂರ್ತ ಕಂಡುಕೊಂಡಿತು. ಗಣೇಶನ ಈ ಹೊಸ ಲುಕ್‌ ನಿಜಕ್ಕೂ ಪಟಾಕಿಯಂತೆ ಸೌಂಡ್‌ ಮಾಡುವುದೇ? ಕಾದು ನೋಡೋಣ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ