ನನ್ನ ಸಮಾನರಾರಿಹರು?

`ಕಾನ್‌’ 68ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆಗೆಂದು ಹಾಸಿದ ರೆಡ್‌ ಕಾರ್ಪೆಟ್‌ ಮೇಲೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ಅತಿ ಗ್ಲಾಮರಸ್‌ ಆಗಿ ಬಳುಕುತ್ತಾ ಬಂದು ಪ್ರೇಕ್ಷಕರತ್ತ ಕೈ ಬೀಸಿ, ಫ್ಲೈಯಿಂಗ್‌ ಕಿಸ್‌ ಬೀರಿದಾಗ, ಆಕೆಯ ಬ್ಯೂಟಿ  ಬೋಲ್ಡ್ ನೆಸ್‌ಗೆ ಅಲ್ಲಿದ್ದರೆಲ್ಲ ಕ್ಲೀನ್‌ ಬೋಲ್ಡ್ ಆಗಿ ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿದ್ದೂ ತಟ್ಟಿದ್ದೇ! ಆದರೆ ಈ ಬಾರಿಯ ಫೆಸ್ಟಿವಲ್‌ನಲ್ಲಿ ಪ್ರೇಕ್ಷಕರು ಐಶ್‌ಗಿಂತ ಅವಳ ಮಗಳು ಆರಾಧ್ಯಾಳಿಗೇ ಹೆಚ್ಚು ಮನ್ನಣೆ ಇತ್ತರು.

ಈ ಸಮಾರಂಭದಲ್ಲಿ ಐಶ್‌ ಲೋರಿಯಲ್ ಪ್ಯಾರಿಸ್‌ನ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದಳು. ಆಕೆ ಜನಪ್ರಿಯ ಫ್ಯಾಷನ್ ಡಿಸೈನರ್‌ ಸಬ್ಯಸಾಚಿ ಡಿಸೈನ್‌ಗೊಳಿಸಿದ್ದ ಫ್ಲವರ್‌ ಪ್ಯಾಟರ್ನ್‌ವುಳ್ಳ ಆ್ಯಕ್ವಾ ಗ್ರೀನ್‌ ಔಟ್‌ಫಿಟ್‌ ಧರಿಸಿ ಮಿಂಚುತ್ತಿದ್ದಳು. ಐಶ್‌ಜೊತೆಗೆ ಸೋನಂ ಕಪೂರ್‌, ಮಲ್ಲಿಕಾ ಶೆರಾವತ್‌, ಕತ್ರೀನಾ  ಕೈಫ್‌ರಂಥ ರೂಪಸಿಯರೂ ಈ ಸಮಾರಂಭದ ಕಳೆ ಹೆಚ್ಚಿಸುವಲ್ಲಿ ಯಶಸ್ವಿಯಾದರು.

ajay devgan

ಅಜಯ್ ಮಾಚೋ ಲುಕ್ಸ್

ಬಹಳ ದಿನಗಳಿಂದ ಒಂದು ಹಿಟ್‌ ಚಿತ್ರ ನೀಡಲು ಹೆಣಗುತ್ತಿರುವ ಅಜಯ್‌ ದೇವಗನ್‌, ತನ್ನ ಮುಂದಿನ `ಶಿವಾಯ್‌’ ಚಿತ್ರದ ಫಸ್ಟ್ ಲುಕ್ಸ್ ಬಿಡುಗಡೆ ಮಾಡಿದ್ದಾನೆ. ಇದು ಈ ಚಿತ್ರ ಖಂಡಿತಾ 100% ಯಶಸ್ವಿಯಾಗಲಿದೆ ಎಂಬುದಕ್ಕೆ ಮುನ್ಸೂಚನೆಯಾಗಿದೆ. ಈ ಚಿತ್ರದಲ್ಲಿ ಅಜಯ್‌ ದೇಹವಿಡೀ ದೊಡ್ಡ ಗಾತ್ರದ ಟ್ಯಾಟೂ ಹಾಕಿಸಿಕೊಂಡು ಡಾರ್ಕ್‌ ಶೇಡ್ಸ್ ನಲ್ಲಿ ಮಿಂಚುತ್ತಿದ್ದಾನೆ. ಈ ಚಿತ್ರವನ್ನು ಅಜಯ್‌ ಖುದ್ದು ನಿರ್ದೇಶಿಸುತ್ತಿದ್ದಾನೆ. ಕಾಜೋಲ್‌ಗೆ ಇಲ್ಲಿ ಕ್ಯಾಮಿಯೇ ರೋಲ್ ‌ಇರುತ್ತದೆ. ನಾಯಕಿಯಾಗಿ ಆಯೇಷಾ ಇರುತ್ತಾಳೆ. 2017ರ ನ್ಯೂ ಇಯರ್‌ಗೆ ರಿಲೀಸ್‌ ಆಗಲಿರುವ ಈ ಚಿತ್ರ, ಹಿಮಾಲಯದ ದುರ್ಗಮ ಕಣಿವೆಗಳಲ್ಲಿ ಬಿರುಸಿನಿಂದ ಚಿತ್ರೀಕರಣ ನಡೆಸುತ್ತಿದೆ.

ಸೋಹಾಳಿಗೀಗ ಮಜವೇ ಮಜಾ!

1990ರ ಸನ್ನಿ ಡಿಯೋಲ್‌ನ `ಘಾಯ್‌’ ಸೂಪರ್‌ ಹಿಟ್‌ ಚಿತ್ರದ ಸೀಕ್ವೆಲ್ ಇದೀಗ `ಘಾಯ್‌ ಒನ್ಸ್ ಅಗೇನ್‌’ ಆಗಿ ಮೂಡಿಬರಲಿದ್ದು, ಇದರಲ್ಲಿ ಸೋಹಾ ಅಲಿಖಾನ್‌ ಮುಖ್ಯ ಪಾತ್ರದಲ್ಲಿದ್ದಾಳೆ. ಇದನ್ನು ಬಹಳ ಎಂಜಾಯ್‌ ಮಾಡುತ್ತಿರುವ ಈಕೆ, ಇದರಲ್ಲಿ ಡಾಕ್ಟರ್ ಪಾತ್ರ ವಹಿಸಿದ್ದಾಳೆ. ಈ ಚಿತ್ರ ಬಹಳ ಸೀರಿಯಸ್‌ ಆಗಿ ಮಾರಾಮಾರಿ ದೃಶ್ಯಗಳಿಂದ ವಿಜೃಂಭಿಸಲಿದೆ. ಚಿತ್ರದ ಮೊದಲ ಭಾಗವನ್ನು ಗಮನಿಸಿರುವ ಈಕೆಗೆ ಸನ್ನಿಡಿಯೋಲ್‌, ಓಂಪುರಿ, ಪ್ರಾಚೀ ದೇಸಾಯಿ ಮುಂತಾದರ ಜೊತೆ ಒಳ್ಳೆ ಮಜಾ ಸಿಗುತ್ತಿದೆಯಂತೆ.

ಕಲ್ಕಿಯ ಲವ್ ಅಫೇರ್

ಅನುರಾಗ್‌ ಕಶ್ಯಪ್‌ ಹುಮಾ ಕುರೇಶಿಯ `ಅಫೇರ್‌’ ಇನ್ನೂ ಹಸಿ ಹಸಿ ಇರುವಾಗಲೇ, ಈಗ ಕಲ್ಕಿ ಕೋಚ್‌ ಲೀನ್‌ ಸಹ ಲವ್ವಿನಲ್ಲಿ ಸಿಕ್ಕಿಬಿದ್ದಿದ್ದಾಳೆ. ಈಕೆ ಗುಲ್ಶನ್‌ ದೇವ್ ರಾಹುಲ್ ಜೊತೆ ತಿರುಗಾಡುತ್ತಿದ್ದು, ಅದು ರಿಯಲ್ ಅಲ್ಲದೇ ರೀಲ್ ಅನಿಸಿದೆ. ಕಲ್ಕಿ ಇದೀಗ ಸೋನಿ ರಜ್ದಾನ್‌ ನಿರ್ದೇಶನದ `ಲವ್ ಅಫೇರ್‌’ ಚಿತ್ರದಲ್ಲಿ ಗುಲ್ಶನ್‌ ಜೊತೆ ನಟಿಸುತ್ತಿದ್ದಾಳೆ. ನಿರ್ದೇಶಕರ ಮಗಳು ಪೂಜಾ ಭಟ್ ಇದರ ನಿರ್ಮಾಪಕಿ. 1959ರ ಬಹುಚರ್ಚಿತ ಮಾಣಿಕ್‌ಶಾನಾನಾತಿ ಪ್ರಕರಣವೇ ಇದರ ಮೂಲ. ಚಿತ್ರದ ನಾಯಕ ನೇವಿ ಕಮ್ಯಾಂಡರ್‌ ತನ್ನ ಬ್ರಿಟಿಷ್‌ ಪತ್ನಿಯ ಪ್ರೇಮಿಯನ್ನು ಕೊಲೆ ಮಾಡುವ ಕಥಾಹಂದರವಿದೆ. 1950ರ ಬಾಂಬೆ ಪರಿಸರವನ್ನು ಈ ಚಿತ್ರದಲ್ಲಿ ಗಮನಿಸಬಹುದಂತೆ.

ನ್ಯೂ ಡ್ರೀಮ್ ಗರ್ಲ್ ಪಟ್ಟದ ಖುಷಿ

ಬಾಲಿವುಡ್‌ನ ಎವರ್‌ ಗ್ರೀನ್‌ ಡ್ರೀಮ್ ಗರ್ಲ್ ಹೇಮಾಮಾಲಿನಿ ಇತ್ತೀಚೆಗೆ ನವ ನಾಯಕಿ ಶ್ರದ್ಧಾ ಕಪೂರ್‌(ಶಕ್ತಿ ಕಪೂರ್‌ ಮಗಳು) ಜೊತೆ ಯಾವುದೋ ಕಾರ್ಯಕ್ರಮದಲ್ಲಿ, ಡ್ಯಾನ್ಸ್ ಸಿನಿಮಾ ಕುರಿತು ಬಹಳ ಹೊತ್ತು ಮಾತನಾಡುತ್ತಿದ್ದರಂತೆ. ಸಿನಿಮಾ ನಟನೆಯಲ್ಲಿನ ಶ್ರದ್ಧಾಳ ಶ್ರದ್ಧೆ ಕುರಿತು ಪ್ರಶಂಸಿಸುತ್ತಾ, ಹೇಮಾ ಅವಳನ್ನು ಹೊಸ ಹುಡುಗಿಯರಲ್ಲಿ ನ್ಯೂ ಡ್ರೀಮ್ ಗರ್ಲ್ ಆಗಲು ನೀನೇ ಲಾಯಕ್ಕು ಎಂದು ಹೊಗಳಿದರಂತೆ! ಇದನ್ನು ಕೇಳಿ ಶ್ರದ್ಧಾ ಖುಷಿಯಿಂದ ಮೂಕಳಾಗಿ ಹಾಗೇ ನಿಂತುಬಿಟ್ಟಳಂತೆ. ತನ್ನ ಜೀವನದ ಅತ್ಯಮೂಲ್ಯ ಕಾಂಪ್ಲಿಮೆಂಟ್‌ ಇದು ಎಂದು ಹೇಮಾರ ಕಾಲಿಗೆರಗಿದ ಶ್ರದ್ಧಾ, ತಕ್ಷಣ ತನ್ನ ತಾಯಿಗೆ ಫೋನಾಯಿಸಿ ವಿಷಯ ತಿಳಿಸಿದಳಂತೆ.

anushka

ಸುದ್ದಿಗೆ ಗ್ರಾಸವಾಗಲಾರೆ

ತಾವು ಸದಾ ಸುದ್ದಿಯಲ್ಲಿರಬೇಕೆಂದು ಇಂದಿನ ಚಿತ್ರ ತಾರೆಯರು ಏನೆಲ್ಲ ಕಸರತ್ತು ಮಾಡುತ್ತಾರೆ, ಆದರೆ ಅನುಷ್ಕಾ ಶರ್ಮಾಳಿಗೆ ದಿನ ತನ್ನ ಕುರಿತು ಪೇಪರ್‌ನಲ್ಲಿ ಸುದ್ದಿ ಪ್ರಕಟಗೊಳ್ಳುವುದು ಬೇಕಿಲ್ಲವಂತೆ. ನಟಿಯರು ಅಂದಮೇಲೆ ಅವರಿಗೂ ಒಂದು ಖಾಸಗಿ ಬದುಕಿರುತ್ತದೆ, ಅದನ್ನು ಈ ಸಮಾಜಕ್ಕೆ ತಿಳಿಯದಂತೆ ಮುಚ್ಚಿಡಲು ಅವರಿಗೆ ಸಂಪೂರ್ಣ ಹಕ್ಕಿದೆ. ಈಕೆ ಈಗ ಹೇಳುತ್ತಿರುವುದು ತನ್ನ ಹಾಗೂ ವಿರಾಟ್‌ ಕೊಹ್ಲಿಯ ಅಫೇರ್‌ ಕುರಿತು ಎಂಬುದು ಎಲ್ಲರಿಗೂ ಗೊತ್ತಿರುವ ಗುಟ್ಟು. ಏಕೆಂದರೆ ಪೇಪರ್‌ ಸುದ್ದಿಯಲ್ಲಿ ಸದಾ ಇವರಿಬ್ಬರ ಬಗ್ಗೆ ಗುಸುಗುಸು ಇದ್ದೇ ಇರುತ್ತದೆ. ಹೀಗಾಗಿ ಅನುಷ್ಕಾ ತನ್ನ ಖಾಸಗಿ ಬದುಕನ್ನು ಮೀಡಿಯಾದಿಂದ ದೂರ ಇಡಬಯಸುತ್ತಾಳೆ. ಇಂದಿನ ನಟಿಯರು ಅಗತ್ಯಕ್ಕಿಂತಲೂ ಹೆಚ್ಚಿಗೆ ಎಕ್ಸ್ ಪೋಸ್‌ ಆಗಿ ಹೋಗಿದ್ದಾರೆ. ಅವರಿಗೂ ಮೀಡಿಯಾಗೂ ಮಧ್ಯೆ ಒಂದು ಬೌಂಡರಿ ಲೈನ್‌ ಅತ್ಯಗತ್ಯವಾಗಿ ಬೇಕು, ಆಗ ಮಾತ್ರ ಅವರ ಪ್ರೈವೆಸಿಗೆ ಭಂಗ ಆಗುವುದಿಲ್ಲ, ಎನ್ನುತ್ತಾಳೆ ಅನುಷ್ಕಾ.

kangna

ಕಂಗನಾಳ ಮದುವೆಯ ಶತಪದಿ

`ತನು ವೆಡ್ಸ್ ಮನು ರಿಟರ್ನ್ಸ್’ ಚಿತ್ರದಲ್ಲಿ ದ್ವಿಪಾತ್ರ ವಹಿಸಿದ ಕಂಗನಾ ಮುಂಬೈ ಮನು ಹಾಗೂ ಹರಿಯಾಣ್ವಿ ಭಾಷೆ ಮಾತನಾಡುವ ದತ್ತೋ ಪಾತ್ರ ಎರಡನ್ನೂ ನಿಭಾಯಿಸುವಲ್ಲಿ ಬಹಳ ಹೆಣಗಿದ್ದಾಳೆ. ದತ್ತೋ ಪಾತ್ರಕ್ಕಾಗಿ ಬಹಳ ಕಷ್ಟಪಟ್ಟ ಕಂಗನಾ, ಹರಿಯಾಣ್ವಿ ಭಾಷೆ ಮಾತನಾಡುವಾಗ ಎಲ್ಲಿ ತಪ್ಪಾಗುವುದೋ ಎಂದು ಹೆದರಿದ್ದಳಂತೆ. ಆದರೆ ಶೂಟಿಂಗ್‌ ಯೂನಿಟ್‌ನಲ್ಲಿ ಎಲ್ಲರೂ ಮನುಗಿಂತ ಹೆಚ್ಚಾಗಿ ದತ್ತೋ ಪಾತ್ರವನ್ನೇ ಮೆಚ್ಚತೊಡಗಿದಾಗ, ನಾನು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂದು ಮನರಿಕೆಯಾಯ್ತು ಎನ್ನುತ್ತಾಳೆ. ಈ ಚಿತ್ರದಲ್ಲಿ ಮದುವೆ ದೃಶ್ಯಕ್ಕಾಗಿ ಸಪ್ತಪದಿ ಶೂಟ್‌ ಮಾಡುವಾಗ, ಕಂಗನಾ ಇದಕ್ಕೆ ಎಷ್ಟು ಹೆಜ್ಜೆ ಹಾಕಬೇಕೆಂದು ಕೇಳಿದಳು. 7 ಎಂದು ಯಾರೋ ಹೇಳಿದಾಗ, ಬೇಕಾದರೆ 100 ಹೆಜ್ಜೆ ಹಾಕಿಬಿಡ್ತೀನಿ, ಈ ಶತಪದಿ ರೀಲ್‌‌ಗಷ್ಟೇ ಸೀಮಿತವಾಗಲಿ, ರಿಯಲ್‌ಗೆ ಬೇಡ ಎಂದಳಂತೆ!

sonakshi

ಸೋನಾಕ್ಷಿಯ ಹೊಸ ಐಟಂ ನಂಬರ್

ಬಾಲಿವುಡ್‌ನ ಇತರ ನಟಿಮಣಿಯರಂತೆ ಸೋನಾಕ್ಷಿ ಸಿನ್ಹಾ ಸಹ ಈಗ ಐಟಂ ಮಾಡಲು ರೆಡಿಯಾಗಿದ್ದಾಳೆ. ಈಗ ಈಕೆ ಉಮೇಶ್ ಶುಕ್ಲಾರ ಹೊಸ `ಆಲ್ ಈಸ್‌ ವೆಲ್‌’ ಚಿತ್ರದಲ್ಲಿ ಐಟಂ ನಂಬರ್‌ಗೆ ಹೆಜ್ಜೆ ಹಾಕಲು ಸಿದ್ಧಳಾಗಿದ್ದಾಳೆ. ಇದರಲ್ಲಿ ಇವಳ ಜೊತೆ ಹೆಜ್ಜೆ ಹಾಕುವವನು ಅಭಿಷೇಕ್‌ ಬಚ್ಚನ್‌. ಈಗಾಗಲೇ ಅಭಿಷೇಕ್‌ ಮತ್ತು ರಿಷಿ ಕಪೂರ್‌ ಈ ಐಟಂ ನಂಬರ್‌ನ ಮೊದಲ ಸ್ಟೆಪ್ಸ್ ಶುರು ಮಾಡಿಯಾಯ್ತು. ಹಾಡಿನ ಮಧ್ಯೆ ಸೋನಾಕ್ಷಿ ಸೇರಲಿದ್ದಾಳೆ, ಆಗಲೂ ಆಲ್ ವೆಲ್ ‌ಆಗಿರುತ್ತದೆಯೇ?

manisha

ಮರಳಿ ಬಂದ ಮನೀಷಾನಾ ನಮ್ಮ ಗುರಿ ತಲುಪುವಲ್ಲಿ ಸದೃಢರಾಗಿದ್ದರೆ, ಮಧ್ಯೆ ಏನೇ ಅಡಚಣೆಗಳು ಬಂದಿರಲಿ, ಆ ಗಮ್ಯ ಸೇರಲು ಯಾವುದೂ ಅಡ್ಡಿ ಎನಿಸದು. ಇದರ ಜೀವಂತ ಉದಾಹರಣೆ ಎಂದರೆ ಮನೀಷಾ ಕೋಯಿರಾಲ. ಕ್ಯಾನ್ಸರ್‌ನಂಥ ಗಂಭೀರ ಕಾಯಿಲೆ ಜೊತೆ  ಹೋರಾಡಿ, ಮನೀಷಾ ಬಾಲಿವುಡ್‌ಗೆ ಮತ್ತೆ ಮರಳಿದ್ದಾಳೆ. ಈಕೆಯ ರೀಎಂಟ್ರಿ ಸಹ ಭರ್ಜರಿಯಾಗಿದೆ, ಕಮಲ್ ಹಾಸನ್‌ರ ಪತ್ನಿಯಾಗಿ ಮುಂದಿನ ಚಿತ್ರದಲ್ಲಿ ನಟಿಸುತ್ತಿದಾಳೆ. ಈ ತಿಂಗಳ ಅಂತ್ಯದಲ್ಲಿ ಶೂಟಿಂಗ್‌ ಶುರುವಾಗಲಿದೆ. ಈ ಪಾತ್ರ ಸಣ್ಣದಾದರೂ ಅತಿ ಮಹತ್ವಪೂರ್ಣವಾದುದು. ಈಗಾಗಲೇ ಇವರಿಬ್ಬರೂ ಎಸ್‌. ಶಂಕರ್‌ ನಿರ್ದೇಶನದ `ಇಂಡಿಯನ್‌’ ಚಿತ್ರದಲ್ಲಿ ಒಂದಾಗಿದ್ದರು. ಈಗಿನ ಇವರ ಹೊಸ ಚಿತ್ರದ ಹೆಸರು `ತೂಂಗಾನಂ.’

madhuri

ಮಾಧುರಿಯ ಮಾಸದ ಮಾಧುರ್ಯ

ತನ್ನ ಜೀವನದ 48 ವಸಂತಗಳನ್ನು ದಾಟಿದ ಎವರ್‌ ಗ್ರೀನ್‌ ಗ್ಲಾಮರಸ್‌ ಹೀರೋಯಿನ್‌ ಮಾಧುರಿ ದೀಕ್ಷಿತ್‌ ಈಗಲೂ ಬಾಲಿವುಡ್‌ನಲ್ಲಿ ತನ್ನ ಮೋಡಿ ಉಳಿಸಿಕೊಂಡಿದ್ದಾಳೆ. ತನ್ನ ಇತ್ತೀಚಿನ `ಗುಲಾಬಿ ಗ್ಯಾಂಗ್‌’ ಚಿತ್ರ ತೋಪಾದರೂ, ಮಾಧುರಿ ಬಾಲಿವುಡ್‌ತೊರೆದು ದೂರ ಹೋಗಿಲ್ಲ. ಮಾಧುರಿ ಮೊದಲ ಬಾರಿ 1984ರಲ್ಲಿ ರಾಜಶ್ರೀ ಪ್ರೊಡಕ್ಷನ್ಸ್ ನ `ಅಬೋಧ್‌’ ಚಿತ್ರದಲ್ಲಿ ಡೆಬ್ಯು ಪಡೆದು, ತನ್ನ ಸಿನಿಪಯಣ ಆರಂಭಿಸಿದ್ದಳು. ವಯಸ್ಸು ಹೆಚ್ಚುತ್ತಿರುವುದು ನಿಜವಾದರೂ, ಅದರಿಂದ ತಾನೇನೂ ಭಯಪಡುವುದಿಲ್ಲ ಎನ್ನುತ್ತಾಳೆ. ಅದು ನನ್ನನ್ನು ಯಾವ ಸಾಧನೆಗೂ ಅಡ್ಡಿಪಡಿಸದು ಎನ್ನುತ್ತಾಳೆ. ವಯಸ್ಸು ಹೆಚ್ಚಿದಂತೆ ಪ್ರತಿಭೆ ಪರಿಪಕ್ವತೆ ಪಡೆಯುತ್ತದೆ ಎಂಬುದವಳ ವಿಶ್ವಾಸ. ಇದೀಗ ಮಾಧುರಿ ಆನ್‌ ಲೈನ್‌ ಡ್ಯಾನ್ಸ್ ಅಕಾಡೆಮಿ ಆರಂಭಿಸಿ ಬಿಝಿ ಆಗಿದ್ದಾಳೆ. ಇದಕ್ಕಾಗಿ ತನ್ನ ಅಭಿಮಾನಿಗಳೆಲ್ಲರಿಗೂ ಆಭಾರಿಯಾಗಿರುವ ಮಾಧುರಿ, “ಕಳೆದ ಮೇ 15 ನನ್ನ ಬರ್ತ್‌ಡೇ ಇತ್ತು. ಅದೇ ಹೊತ್ತಿಗೆ `ಡ್ಯಾನ್ಸಿಂಗ್‌ ವಿತ್‌ ಮಾಧುರಿ ವರ್ಷನ್‌- 2′ ಹಾಗೂ ಅದರ ಮೊಬೈಲ್ ‌ಆ್ಯಪ್‌ ಲಾಂಚ್‌ ಮಾಡಿದೆ. ಇದು ನನ್ನ ಪತಿಯ ಅನುಪಮ ಕಾಣಿಕೆ,” ಎನ್ನುತ್ತಾಳೆ.

saif ali

ಮಾಜಿ ಬಾಯ್ಫ್ರೆಂಡ್‌….. ಹಾಲಿ ಹಸ್ಬೆಂಡ್

ಕರೀನಾ ಇದೀಗ ತನ್ನ ಪತಿ ಸೈಫ್‌ ಅಲಿಖಾನ್‌ ಹಾಗೂ ಮಾಜಿ ಬಾಯ್‌ ಫ್ರೆಂಡ್‌ ಶಾಹಿದ್‌ ಕಪೂರ್‌ ಜೊತೆ ಒಟ್ಟಾಗಿ ಹೊಸ ಚಿತ್ರವೊಂದರಲ್ಲಿ ನಟಿಸಲಿದ್ದಾಳೆ. ಶಾಹಿದ್‌ ಕಪೂರ್‌ ಮದುವೆಯಾಗಲಿರುವ ಸುದ್ದಿ ತಿಳಿದು ಈ ಮೂವರೂ ಕಳೆದುಹೋದ ಹಳೆಯ ಸುದ್ದಿಯನ್ನು ಮರೆತುಬಿಟ್ಟರು. `ಉಡ್ತಾ ಪಂಜಾಬ್‌’ ಚಿತ್ರದಲ್ಲಿ ಶಾಹಿದ್‌ ಜೊತೆ ನಟಿಸಿದ ನಂತರ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸಲು ಇಬ್ಬರೂ ಒಪ್ಪಿದರು. ಈ ಬಾರಿ ಕರೀನಾ ಜೊತೆ ಸೈಫ್‌ ಸಹ ಇರುತ್ತಾನೆ. ಮೂವರನ್ನೂ ವಿಶಾಲ್ ಭಾರದ್ವಾಜ್‌ ತಮ್ಮ ಮುಂದಿನ, ಇನ್ನೂ ಹೆಸರಿಡದ ಚಿತ್ರಕ್ಕಾಗಿ ಬುಕ್‌ ಮಾಡಿದ್ದಾರೆ. ಸೈಫ್‌ ಈ ಚಿತ್ರದಲ್ಲಿ ಕರೀನಾಳೂ ಇರಲಿ ಎಂದನಂತೆ, ಶಾಹಿದ್ ಸಹ ಅವಳೇ ಈ ಪಾತ್ರಕ್ಕೆ ಸರಿ ಎಂದನಂತೆ.

ranveer

ಯಾವ ಕೆಲಸವೂ ಅರೆಬರೆ ಆಗಬಾರದು

ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಘಟನೆ, ಅವರು ಜೀವನವಿಡೀ ನೆನಪಿಡುವಂತೆ ಪ್ರಭಾವಶಾಲಿಯಾಗಿರುತ್ತದೆ. ಇಂಥದೇ ಒಂದು ಘಟನೆಯನ್ನು ನಟ ರಣಬೀರ್‌ ತನ್ನ ಚಿತ್ರದ ಪ್ರಮೋಶನ್‌ ಸಂದರ್ಭದಲ್ಲಿ ಮೀಡಿಯಾ ಜೊತೆ ಹಂಚಿಕೊಂಡ.  ಈತ ಒಮ್ಮೆ ಮನೆಯಿಂದ `ಜೋಧಾ ಅಕ್ಬರ್‌’ ಚಿತ್ರಕ್ಕೆ ನೈಟ್‌ ಶೋಗೆಂದು ತಡವಾಗಿ ಹೊರಟಿದ್ದನಂತೆ. ಚಿತ್ರ ಅರ್ಧ ಮುಗಿದು ಇಂಟರ್‌ವೆಲ್ ‌ಬಿಟ್ಟಾಗ, ಬಹಳ ಸುಸ್ತು ನಿದ್ದೆ ಬರ್ತಿದೆ ಎಂದು ಎದ್ದು  ಮನೆಗೆ ಬಂದುಬಿಟ್ಟನಂತೆ. ಮಗ ಸ್ವತಃ ನಟನಾಗಿ, ಒಂದು ಸಿನಿಮಾದಿಂದ ಅರ್ಧದಲ್ಲೇ ಎದ್ದುಬಂದದ್ದು ತಂದೆ ರಿಷಿ ಕಪೂರ್‌ಗೆ ಅಸಾಧ್ಯ ಸಿಟ್ಟು ತರಿಸಿದೆ. ಒಬ್ಬ ಕಲಾವಿದನಾಗಿ ಬೇರೆ ಕಲಾವಿದರನ್ನು ಗೌರವಿಸದೆ ಅರ್ಧದಲ್ಲೇ ಬಿಟ್ಟು ಬಂದದ್ದು ಮಹಾ ತಪ್ಪು ಎಂದು ಮಗನನ್ನು ಚೆನ್ನಾಗಿ ಗದರಿಸಿದರಂತೆ. ಅಂದಿನಿಂದ ಎಂದೂ ಯಾವ ಕೆಲಸವನ್ನೂ ಅರ್ಧಂಬರ್ಧ ಮಾಡುವುದಿಲ್ಲ ಎಂದು ನಗುತ್ತಾನೆ, ಲವರ್‌ ಬಾಯ್‌ ರಣಬೀರ್‌.

malaika

ಅಯ್ಯೋ……ಹೀಗಾಗಬಾರದಿತ್ತು!

ಮಲೈಕಾ ಅರೋರಾ ಒಂದು ರಿಯಾಲಿಟಿ ಶೋ ಹಾಡಿಗಾಗಿ ಶೂಟ್‌ ಮಾಡುತ್ತಿದ್ದಾಗ, ಡ್ಯಾನ್ಸಿನ ಮಧ್ಯೆ ಆಕೆಯ ವಾರ್ಡ್‌ ರೋಬ್‌ಮಾಲ್ ಫಂಕ್ಷನ್‌ ಆಗಿಹೋಯಿತು. ಅಸಲಿಗೆ ನಡೆದದ್ದೆಂದರೆ, ಕಲರ್ಸ್‌ ಟಿ.ವಿ. ಚಾನೆಲ್‌‌ನ `ಇಂಡಿಯಾಸ್‌ ಗಾಟ್‌ ಟ್ಯಾಲೆಂಟ್‌’ಗಾಗಿ, ಸ್ಟೇಜ್‌ ಮೇಲೆ ಒಂದು ಐಟಂ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಗ, ಮೇಲ್ಭಾಗದಲ್ಲಿ ಧರಿಸಿದ್ದ ಬ್ಲೌಸ್‌ ಇದ್ದಕ್ಕಿದ್ದಂತೆ ಬಿಚ್ಚಿಕೊಂಡು, ಒಳವಸ್ತ್ರ ಹೊರಗಿಣುಕಿತು! ತಕ್ಷಣ ಅದನ್ನು ಗುರುತಿಸಿದ ಸಹನರ್ತಕಿಯರು ಆಕೆಯನ್ನು ಕವರ್‌ ಮಾಡಿ. ಆಭಾಸ ಆಗುವುದನ್ನು ತಪ್ಪಿಸಿದರು. ಆಗ ಅಲ್ಲಿ ಜಡ್ಜ್ ಗಳಾದ ಕರಣ್‌ ಜೋಹರ್‌ ಮತ್ತು ಕಿರಣ್‌ ಖೇರ್‌ ಸಹ ಇದ್ದರು. `ಅಯ್ಯೋ….. ಹೀಗಾಯಿತಲ್ಲ’ ಎಂದು ಎಲ್ಲರೂ ಬೇಸ್ತು ಬಿದ್ದರು. ಆದರೆ ಅದಕ್ಕಿಂತಲೂ ಶಾಕಿಂಗ್‌ ನ್ಯೂಸ್‌ ಎಂದರೆ, ಆ ಜಡ್ಜ್ ಗಳ ಹಿಂದೆ ಮಲೈಕಾ ಕೂಡ ಬಂದು ನಿಂತಿದ್ದಳು! ನಡೆದದ್ದಿಷ್ಟೆ, ಮಲೈಕಾ ತರಹವೇ ಇದ್ದ ಪೂಜಾ ಎಂಬ ಅಭ್ಯರ್ಥಿ ಸ್ಟೇಜ್‌ ಮೇಲೆ ನರ್ತಿಸುವಾಗ ಈ ಆಭಾಸ ನಡೆದಿತ್ತಂತೆ.

deepshikha

ಕೋಟಿ ಕೊಟ್ಟು ಸೋಡಾ ಚೀಟಿ ತಗೋ!

ಇಲ್ಲಿನ ಡೈವೋರ್ಸ್‌ ಪ್ರಕರಣ ತುಸು ವಿಭಿನ್ನವಾಗಿದೆ. ಗಂಡನಿಂದ ಹೆಂಡತಿ ವಿಚ್ಛೇದನ ಕೇಳಿದಾಗ ಆತ 1.5 ಕೋಟಿ ಕೊಟ್ಟು ಆಮೇಲೆ ಡೈವೋರ್ಸ್‌ ತಗೋ ಎಂದನಂತೆ. ಇದೇನು ವಿಷಯ? ಹಿಂದಿ ಕಿರುತೆರೆಯ ನಟಿ ದೀಪ್‌ ಶಿಖಾ ತನ್ನ 2ನೇ ಗಂಡ ಕೇಶವನಿಂದ ಬಿಡುಗಡೆ ಕೇಳಿದಳು. ಬಹಳ ದಿನಗಳಿಂದ ಇಬ್ಬರ ಮಧ್ಯೆ ವಿರಸವಿತ್ತು. ಹೀಗಾಗಿ ಆಕೆ ಹೊಸ ಬಾಯ್‌ ಫ್ರೆಂಡ್ ನೋಡಿಕೊಂಡಳು. ಹೀಗಾಗಿ ಆಕೆ ಕೇಶವನನ್ನು ಡೈವೋರ್ಸ್‌ ನೀಡುವಂತೆ ಕೇಳಿದಳು. ದಾಂಪತ್ಯ ಮುರಿಯಲು ಇಚ್ಛಿಸದ ಆತ, ಹಾಗಿದ್ದರೆ 1.5 ಕೋಟಿ ಜೀವನಾಂಶ ನೀಡಿ ಅದನ್ನು ಪಡೆ ಎಂದನಂತೆ. ಕೇಶವ್ ಹೇಳುವುದೆಂದರೆ, 2 ವರ್ಷಗಳಿಂದ ದೀಪ್‌ ಶಿಖಾಳ ಧಾರಾವಾಹಿಯಲ್ಲಿ ಸಂಭಾವನೆ ಇಲ್ಲದೆ ನಟಿಸಿದೆ, ನಂತರ ಮದುವೆಯಾದೆವು. ಈಗ ದಾಂಪತ್ಯ ಮುರಿಯುತ್ತಿರುವುದರಿಂದ ಅವಳೇ 1.5 ಕೋಟಿ ಕೊಡಲಿ ಎನ್ನುತ್ತಿದ್ದಾನೆ. ಆಕೆ ಪ್ರಕಾರ, ನಾನು ನಮ್ಮ ಕುಟುಂಬಕ್ಕಾಗಿ ಸಂಪಾದಿಸುವ ಮಹಿಳೆ. ಮೊದಲನೇ ಗಂಡನನ್ನು ಬಿಟ್ಟಾಗಲೂ ಆತನಿಂದ ಜೀವನಾಂಶ ಪಡೆಯಲಿಲ್ಲ, ಮನೆಯವರಿಂದಲೂ ಆರ್ಥಿಕ ನೆರವು ಪಡೆಯುತ್ತಿಲ್ಲ. ಹೀಗಿರುವಾಗ ಈತನಿಗೆ 1.5 ಕೋಟಿ ಕೊಟ್ಟುಬಿಟ್ಟರೆ ನಾನು ಬೀದಿಗೆ ಬರಬೇಕಾಗುತ್ತದೆ ಎನ್ನುತ್ತಾಳೆ.

ನಗಿಸುವುದು ಸುಲಭದ ಕೆಲಸವಲ್ಲ

ಟಿ.ವಿ.ಯಲ್ಲಿ ಬರುತ್ತಿರುವ `ಭಾಭೀಜಿ ಘರ್‌ ಪರ್‌ ಹೈ’ ಹೊಸ ಧಾರಾವಾಹಿಯಲ್ಲಿ ಪ್ರಧಾನ ಕಮೆಡಿಯನ್‌ ಆಗಿರುವ ಅಂಗೂರಿ ದೇವಿ ಅರ್ಥಾತ್‌ ಶಿಲ್ಪಾ ಶಿಂಧೆ ಹೇಳುವುದೆಂದರೆ, ಕಾಮಿಡಿ ಮಾಡುವುದೆಂದರೆ ದೊಡ್ಡ ಸವಾಲೇ ಸರಿ. ಮುಖ್ಯವಾಗಿ ಈ ಧಾರಾವಾಹಿಯ ಕಥೆ ಕಾನ್ಪುರ್‌ ನಗರದ್ದು. ಮುಂಬೈ ಮೂಲದವಳಾದ ನಾನು ಆ ಶೈಲಿಯಲ್ಲಿ ಮಾತನಾಡುವುದು ಬಹಳ ಕಷ್ಟವಾಯ್ತು. ನಮ್ಮ ಧಾರಾವಾಹಿಯ ನಿರ್ಮಾಪಕ, ನಿರ್ದೇಶಕ, ಸಂಭಾಷಣಾಕಾರರು ಈ ನಿಟ್ಟಿನಲ್ಲಿ ನನಗೆ ತುಂಬಾ ನೆರವು ನೀಡಿದ್ದಾರೆ. ಈಕೆಯ ಪಾತ್ರವನ್ನು ಮೊದಲು ರಶ್ಮಿ ದೇಸಾಯಿ (ಉತರನ್‌ ಖ್ಯಾತಿಯ) ಮಾಡುವುದೆಂದಿತ್ತು, ಆಕೆಯ ಡೇಟ್ಸ್ ಹೊಂದದ ಕಾರಣ, ಅದು ಶಿಲ್ಪಾಳಿಗೆ ಸಿಕ್ಕಿತು.

ಕಾಮಿಡಿ ಒಂದೇ ನನಗೆ ಗೊತ್ತಿರುವುದು

ಕಲರ್ಸ್‌ ಟಿ.ವಿ.ಯ ಜನಪ್ರಿಯ ಕಾಮಿಡಿ ನೈಟ್‌ ವಿತ್‌ ಕಪಿಲ್ ‌ಶೋನ ಗುತ್ತಿಗೆ ಪಾತ್ರಧಾರಿ ಸುನೀವ್ ‌ಗ್ರೋವರ್‌ ಹೇಳುವುದೆಂದರೆ, ನನಗೆ ಕಾಮಿಡಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನಗೆ ಮಾಮೂಲಿ ಅಳುಮೂಂಜಿ ಧಾರಾವಾಹಿಗಳೆಂದರೆ ಅಲರ್ಜಿ. ನನಗೆ ಸಾಲ ಬಾಕಿ ಕಟ್ಟಲು ಹಣ ಇಲ್ಲದಿದ್ದಾಗಲೂ, ನಾನಂತೂ ಧಾರಾವಾಹಿಯಲ್ಲಿ ನಟಿಸುವವನಲ್ಲ. ಅಂಥ ಪರಿಸ್ಥಿತಿ ಬಂದರೆ ಪೆಟ್ಟಿಗೆ ಅಂಗಡಿಯಲ್ಲಿ ಟೀ ಮಾರ್ತೀನಿ, ಎಂದು ಸಹಜ ದನಿಯಲ್ಲಿ ನಗಿಸುತ್ತಾನೆ (ಳೆ)!

ಸತತ ಸಂಘರ್ಷದ ಸತ್ಛಲ

`ರಜಿಯಾ ಸುಲ್ತಾನಾ’ ಧಾರಾವಾಹಿಯ ಸುಲ್ತಾನ್‌ ಮಗನ ಪಾತ್ರಧಾರಿ ಆಗಿರುವ ಅಂಕಿತ್‌ ಅರೋರಾ, ಬಹಳ ಸಂಘರ್ಷಗಳ ನಂತರ ಈ ಮಟ್ಟ ಮುಟ್ಟಿದ್ದಾನೆ. “ನನಗೆ ಮನೆಯಿಂದ ಯಾವ ನೆರವು ಸಿಗಲಿಲ್ಲ. ನನ್ನ ತಾಯಿ ತಂದೆ 2005ರಲ್ಲಿ ನೈನಿತಾಲ್‌ನಲ್ಲಿ ತಮ್ಮ ಮನೆಮಠ ಮಾರಿಬಿಟ್ಟಿದ್ದರು. ಅವರ ಕನಸು ನನಸಾಗಿಸುವುದೇ ನನ್ನ ಕರ್ತವ್ಯ.

“ಹೀಗಾಗಿ ಒಳ್ಳೆ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದೆ, ಆದರೆ ಅಪ್ಪಾಜಿಗೆ ಬಿಸ್‌ನೆಸ್‌ನಲ್ಲಿ ಬಹಳ ನಷ್ಟವಾದ್ದರಿಂದ ನಾನು ವಾಪಸ್‌ ಊರಿಗೆ ಹೋಗಬೇಕಾಯ್ತು. ಆಗ ನೆಂಟರಿಷ್ಟರು, ಗೆಳೆಯರೂ ಕೈಬಿಟ್ಟರು. ಕೊನೆಗೆ ಮನೆಮನೆಗೆ ಪೇಪರ್‌ ಹಂಚಿ, ಹಂತಹಂತವಾಗಿ ಮೇಲೇರಿ ಈಗ ಸೀರಿಯಲ್ ಹಂತ ತಲುಪಿದ್ದೇನೆ,” ಎನ್ನುತ್ತಾನೆ  ಅಂಕಿತ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ