ಕನ್ನಡ ಚಿತ್ರರಂಗ ಇದೀಗ ಮುಹೂರ್ತಗಳ ಸಂಭ್ರಮವನ್ನು ಆಚರಿಸುತ್ತಿದೆ. ಆಷಾಢಕ್ಕೂ ಮೊದಲೇ ಮುಹೂರ್ತದ ಮಳೆ ಸುರಿಯುತ್ತಿದೆ. ಪರಂಪರೆಯಾಗಿ ನಡೆದುಕೊಂಡು ಬಂದಿರುವವಂತೆ, ಸಿನಿಮಾ ಮಂದಿ ಆಷಾಢ ಮಾಸದಲ್ಲಿ ಯಾವುದೇ ಚಿತ್ರವನ್ನು ಪ್ರಾರಂಭ ಮಾಡುವುದಿಲ್ಲ. ಹಾಗಾಗಿ ಆಷಾಢ ಮಾಸ ಬರುವುದಕ್ಕೆ ಮೊದಲೇ ತಮ್ಮ ಹೊಸ ಸಿನಿಮಾಗೆ ಮುಹೂರ್ತ ಫಿಕ್ಸ್ ಮಾಡಿಬಿಡುತ್ತಾರೆ. ಈ ವರ್ಷ ಸಿನಿಮಾರಂಗಕ್ಕೆ ಹೊಸಬರ ಆಗಮನ ಹೆಚ್ಚಾಗುತ್ತಿರುವುದರ ಜೊತೆಗೆ ರಾಜಕೀಯ ರಂಗದ ಧುರೀಣರ ಮಕ್ಕಳು ರಾಜಕೀಯ ರಣರಂಗವನ್ನು ಬಿಟ್ಟು ಸಿನಿಮಾ ರಂಗದಲ್ಲಿ ಹೋರಾಟಕ್ಕೆ ಇಳಿಯುತ್ತಿರುವುದು ವಿಶೇಷ.
ರಾಜಕಾರಣಿ ರೇವಣ್ಣ ಅವರ ಪುತ್ರ ಅನೂಪ್ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. `ಲಕ್ಷ್ಮಣ' ಎಂದು ಚಿತ್ರಕ್ಕೆ ನಾಮಕರಣ ಮಾಡಲಾಗಿದೆ. ಕನ್ನಡದ ಯಶಸ್ವೀ ನಿರ್ದೇಶಕ ಆರ್. ಚಂದ್ರು ನಿರ್ದೇಶಿಸುತ್ತಿದ್ದಾರೆ.
`ಲಕ್ಷ್ಮಣ' ಸಿನಿಮಾ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆದಿದೆ. ಸ್ಯಾಂಡಲ್ ವುಡ್‌ನ ಟಾಪ್ ಸ್ಟಾರ್‌ಗಳು, ನಿರ್ದೇಶಕರು, ನಿರ್ಮಾಪಕರು, ನಟರು ಎಲ್ಲರೂ ಆಗಮಿಸಿ `ಲಕ್ಷ್ಮಣ' ಚಿತ್ರದ ನವ ನಾಯಕ ಅನೂಪ್‌ಗೆ ಶುಭ ಕೋರಿದ್ದಾರೆ.
ಸ್ಟಾರ್ ಆಗುವ ಎಲ್ಲ ಲಕ್ಷಣಗಳನ್ನೂ ಹೊಂದಿರುವ ಅನೂಪ್ ತನ್ನ ಮೊದಲ ಚಿತ್ರದಲ್ಲೇ ರಫ್ ಅಂಡ್ ಟಫ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ರಾಜಕಾರಣಿ ಎಚ್.ಎಂ. ರೇವಣ್ಣ ತುಂಬು ಹೃದಯದಿಂದಲೇ ತಮ್ಮ ಮಗ ಅನೂಪ್‌ನನ್ನು ಒಬ್ಬ ಒಳ್ಳೆಯ ನಟನಾಗಿ ಸಿನಿಮಾ ರಂಗದಲ್ಲಿ ಬೆಳಗಲಿ ಎಂದು ಹಾರೈಸುತ್ತಾರೆ. ತನ್ನ ಬೆರಳು ಹಿಡಿದು ನಡೆಯುತ್ತಿದ್ದ ಹುಡುಗ ತನ್ನ ಭುಜದೆತ್ತರಕ್ಕೆ ಬೆಳೆದಾಗ ಅವನ ಭವಿಷ್ಯ ರೂಪಿಸಲು ತಂದೆ ಪರಿತಪಿಸುತ್ತಾನೆ. ಹಾಗೆಯೇ ನನ್ನ ಮಗ ಅನೂಪ್ ಒಬ್ಬ ಕಲಾವಿದನಾಗಿ ಕಲಾಸೇವೆ ಮಾಡಲು ಬಯಸುತ್ತಿದ್ದಾನೆ. ಮಕ್ಕಳು ಇಷ್ಟಪಟ್ಟ ಕ್ಷೇತ್ರವನ್ನು ಪ್ರೋತ್ಸಾಹಿಸುವುದು ತಂದೆಯಾದ ನನ್ನ ಕರ್ತವ್ಯ. ಎಲ್ಲ ರೀತಿಯ ತರಬೇತಿ ಪಡೆದು ಬೆಳ್ಳಿತೆರೆಗೆ ಬಂದಿದ್ದಾನೆ. ಅನೂಪ್‌ನನ್ನು ಹಾರೈಸಿ ಎಂದು ರೇವಣ್ಣ ಕನ್ನಡಿಗರ ಮಡಿಲಲ್ಲಿ ತಮ್ಮ ಮಗನನ್ನು ಹಾಕಿದ್ದಾರೆ.
`ಲಕ್ಷ್ಮಣ' ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಯಶಸ್ವಿ ನಿರ್ದೇಶಕ ಆರ್. ಚಂದ್ರು ಮಾತನಾಡುತ್ತಾ, ``ಸಣ್ಣ ಹಳ್ಳಿಯಿಂದ ಬಂದ ಒಬ್ಬ ರೈತನ ಮಗ ನಾನು. ಸಿನಿಮಾರಂಗ ಮತ್ತು ಮಾಧ್ಯಮರಂಗ ನನ್ನನ್ನು ರಾಜ್ಯ ಪ್ರಶಸ್ತಿಯವರೆಗೂ ಕರೆದುಕೊಂಡು ಹೋಗಿದೆ. ತೆಲುಗು ಚಿತ್ರರಂಗದಲ್ಲೂ ನಿರ್ದೇಶಕನಾಗಿ ಗುರುತಿಸಿಕೊಳ್ಳುವಂತೆ ಎಲ್ಲರೂ ಪ್ರೋತ್ಸಾಹಿಸಿದ್ದೀರಿ. ಬದುಕು ನಿಂತ ನೀರಾಗಬಾರದು, ಹರಿವ ನೀರಾಗಬೇಕು ಎಂಬಂತೆ ನನಗಿಷ್ಟೆಲ್ಲಾ ಕೊಟ್ಟ ನಿಮಗೆಲ್ಲ ನಾನೊಂದು ಪುಟ್ಟ ಕೊಡುಗೆಯಾಗಿ ಅನೂಪ್‌ನನ್ನು ಪರಿಚಯಿಸಿ ಅರ್ಪಿಸುತ್ತಿದ್ದೇನೆ.'' ಎಂದು ಭಾವುಕರಾಗಿ ಹೇಳುತ್ತಾರೆ.
ಅದ್ಧೂರಿಯಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ಆರಂಭ ಫಲಕ ತೋರಿಸಿ ಟೀಸರ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಹೊಸ ಪ್ರತಿಭೆಗಳಿಗೆ ಗಾಡ್ ಫಾದರ್ ಆಗಿರುವ ಆರ್. ಚಂದ್ರು `ಲಕ್ಷ್ಮಣ' ಚಿತ್ರದ ಬಗ್ಗೆ ತುಂಬಾನೆ ಉತ್ಸಾಹದಿಂದ ನಮ್ಮೊಂದಿಗೆ ಮಾತನಾಡಿದರು.
`ಗುರಿ ಇಟ್ರೆ ಮುಟ್ದೇ ಬಿಡೋಲ್ಲಾ.... ಗೆರೆ ಹಾಕಿದ್ರೆ ದಾಟಕ್ಕೆ ಬಿಡೋಲ್ಲ....' ಇದು ನಮ್ಮ `ಲಕ್ಷ್ಮಣ' ಚಿತ್ರದ ಡೈಲಾಗ್ ಎಂದು ಖುಷಿಯಿಂದ ಹೇಳಿಕೊಂಡ ಚಂದ್ರು ಅವರು `ಲಕ್ಷ್ಮಣ' ಚಿತ್ರದ ಬಗ್ಗೆ ಇನ್ನಷ್ಟು ವಿಷಯ ಹೊರ ಹಾಕಿದರು.