ಪತ್ನಿ : ಎಲ್ಲಿಗೆ ಹೋಗ್ತಾ ಇದ್ದೀರಿ? ಹೊರಗೆ ಓಡಾಡಬಾರದು ಅಂತ ಗೊತ್ತಿಲ್ವೋ… ಎಲ್ಲೆಲ್ಲೂ ಲಾಕ್‌ ಡೌನ್‌!

ಪತಿ : ಒಂದಿಷ್ಟು ಮೈಕೈ ನೋವಿನ ಬಾಮ್ ಕೊಳ್ಳೋಣವೆಂದು ಹೊರಟಿದ್ದೇನೆ. ಲಾಕ್‌ ಡೌನ್‌ನಲ್ಲಿ ಎಲ್ಲೆಲ್ಲೂ ಲಾಠಿ ಚಾರ್ಜ್ ಆಗುತ್ತಿರುವುದರಿಂದ, ಇನ್ನು  ಮುಂದೆ ಸ್ಯಾನಿಟೈಝರ್‌ಗೆ ಡಿಮ್ಯಾಂಡ್‌ ಹೋಗಿ ಇದಕ್ಕೆ ಜಾಸ್ತಿ ಬರುತ್ತೆ ಅನ್ಸುತ್ತೆ.

ಗುಂಡನಿಗೆ ಮೊದಲಿನಿಂದಲೂ ಮನೆಯಲ್ಲಿ ಶೇವಿಂಗ್‌ ಮಾಡಿಕೊಳ್ಳಲು ಬರುತ್ತಿರಲಿಲ್ಲ. ಈಗಂತೂ ಎಲ್ಲೆಲ್ಲೂ ಲಾಕ್‌ ಡೌನ್‌ ಆಗಿ ಸೆಲೂನ್‌ ಮುಚ್ಚಿರುವುದರಿಂದ 2 ತಿಂಗಳಲ್ಲಿ ಗಡ್ಡ ದಾಡಿ, ಉದ್ದುದ್ದ ತಲೆಗೂದಲು ಬೆಳೆಸಿಕೊಂಡು ಬೈರಾಗಿಯಂತೆ ಆಗಿಹೋಗಿದ್ದ. ತರಕಾರಿ ತರಲೆಂದು ರಸ್ತೆಯಲ್ಲಿ ಹೋಗುತ್ತಿದ್ದವನನ್ನು ಬುದ್ಧಿಜೀವಿ ಪತ್ರಕರ್ತನೊಬ್ಬ ಅಡ್ಡಹಾಕುವುದೇ…?

“ಬಾಬಾ ತಗೊಳ್ಳಿ…. ಒಣಗಿದ ದೇಹ ನೋಡಿದ್ರೆ ಊಟ ಮಾಡಿ ಎಷ್ಟು ದಿನವಾಯಿತೋ ಏನೋ….” ಎಂದು 1 ಪ್ಯಾಕೆಟ್‌ ಆಹಾರ ಕೊಟ್ಟು, ಪಕ್ಕದಲ್ಲಿ ನಿಂತು ಸೆಲ್ಛಿ ಕ್ಲಿಕ್ಕಿಸಿಕೊಂಡ. ಹಾಗಲ್ಲ ಹೀಗೆ ಅಂತ ಗುಂಡ ಎಷ್ಟು ಸಲ ಹೇಳಲು ಯತ್ನಿಸಿದರೂ ಅವನು ಕೇಳಿಸಿಕೊಂಡರೆ ತಾನೇ…..ತರಕಾರಿ ಕೊಂಡು ಗುಂಡ ಮನೆಗೆ ಬಂದು ಫೇಸ್‌ ಬುಕ್‌ ನೋಡುತ್ತಾನೆ, ಅವನ ನೂರಾರು ಗೆಳೆಯರು ಲಿಂಕ್‌ ನೀಡಿ ಇವನು ಬೀದಿಯಲ್ಲಿ ನಿಂತು ಕೈಯಲ್ಲಿ ಆಹಾರ ಪೊಟ್ಟಣ ಹಿಡಿದಿರುವುದರ ಫೋಟೋ ಕೆಳಗೆ `ತಿನ್ನಕ್ಕೆ ಇಲ್ಲಾಂದ್ರೆ ನಮ್ಮ ಮನೆಗೆ ಬರಬಾರದಾ?’ ಅಂತ ಕ್ಯಾಪ್ಶನ್‌ ಬೇರೆ ಹಾಕುವುದೇ?

 

ಸಿಬ್ಬಂದಿ : ಸಾರಿ ಸಾರ್‌….. ನಾನು ಲೇಟಾಗಿ ಸ್ನಾನಕ್ಕೆ ಹೋಗಿದ್ದೆ. ಹೀಗಾಗಿ ನೀವು ಫೋನ್‌ ಮಾಡಿದಾಗ ರಿಸೀವ್ ‌ಮಾಡಲು ಆಗಲಿಲ್ಲ.

ಮ್ಯಾನೇಜರ್‌ : ಎಷ್ಟು ದಿನ ಅದೇ ಸುಳ್ಳು ಹೇಳ್ತೀಯ ಬಿಡಯ್ಯ…. ನಿನ್ನ ಹಾಗೇ ನಾನೂ ಪಾತ್ರೆ ಉಜ್ಜುತ್ತಿದ್ದೆ. ನನ್ನದು ಮೊದಲು ಮುಗಿದಿದ್ದರಿಂದ ನಿನ್ನ ವರ್ಕ್‌ ಎಲ್ಲಿತನಕ ಬಂದಿದೆ ಎಂದು ಕೇಳಲು ಫೋನ್‌ ಮಾಡಿದ್ದೆ!

ರೋಗಿ : ನಿನ್ನೆಯಿಂದ ನನಗೆ ಸೋಫಾದಲ್ಲಾಗಲಿ, ಚೇರ್‌ ಮೇಲಾಗಲಿ ಅಥವಾ ಕೆಳಗೆ ನೆಲದಲ್ಲಾಗಲಿ…. ಕೂರಲು ಆಗೋದೇ ಇಲ್ಲ…. ಅಷ್ಟು ನೋವಾಗ್ತಿದೆ!

 

ಡಾಕ್ಟರ್‌ : ಲಾಕ್‌ ಡೌನ್‌ ಇರುವಾಗ ಬೀದಿ ಸುತ್ತಾಟಕ್ಕೆ ಹೋಗಿದ್ರಿ ಅನ್ಸುತ್ತೆ….

ರೋಗಿ : ಹೌದು…. ಆದರೆ ನಾನು ಹೊರಗೆ ಹೋಗಿದ್ದೆ ಅಂತ ನಿಮಗೆ ಹೇಗೆ ಗೊತ್ತಾಯ್ತು? ಓಹೋ…. ಮೇನ್‌ ರೋಡಿಗೆ ನೀವು ಬಂದಿದ್ರಾ?

ಡಾಕ್ಟರ್‌ : ಅದಲ್ಲರೀ ಕರ್ಮ…… 1 ವಾರದಿಂದ ಬರುವ ಪ್ರತಿ ರೋಗಿಯೂ ಇಂಥದ್ದೇ ಕಂಪ್ಲೇಂಟ್‌ ಹೊತ್ಕೊಂಡು ಬರ್ತಿದ್ದಾರೆ.

 

ಗಿರೀಶ್‌ : ಸಾಕಾಯ್ತಪ್ಪ ಈ ಹಾಳು ಲಾಕ್‌ ಡೌನ್‌ ಸಹವಾಸ…. ಮನೆಯಲ್ಲಿ ಇರೋದೂ ಸಾಕು, ಗುಡಿಸುವ ಸಾರಿಸುವ ಅಂತ ಮಾಡೋದಲ್ಲದೆ ಈ ಹಾಳು ಪಾತ್ರೆ ಅದರ ಜಿಡ್ಡು ಉಜ್ಜಿ ಉಜ್ಜಿ ಕೈಗಳು ಬಿದ್ದುಹೋಗಿವೆ….

ಸುರೇಶ್‌: ಅದಕ್ಕೆ ಒಂದು ಉಪಾಯವಿದೆ…. ಹೆಂಡ್ತಿ ಮೇಲೆ ಬೇಜಾರು ಮಾಡಿಕೊಂಡು ಜಗಳ ಆಡಬೇಡ…. ಊಟಕ್ಕೆ ಬರೀ ತಿಳಿಸಾರೇ ಗತಿ ಅಷ್ಟೆ…..

ಗಿರೀಶ್‌: ಮತ್ತೆ ಈ ಹಾಳು ಜಿಡ್ಡು ಪಾತ್ರೆ ಉಜ್ಜೋದು ಹೇಗೆ ಅಂತೀನಿ….

ಸುರೇಶ್‌: ಒಂದು ಕೆಲಸ ಮಾಡು…. ಮಧ್ಯಾಹ್ನ 12 ಗಂಟೆ ಮೇಲೆ ಪಾತ್ರೆ ಉಜ್ಜು…. ಬಿಸಿಲಿನ ಝಳಕ್ಕೆ ಮೇಲಿನ ಟ್ಯಾಂಕ್‌ ಕಾದು ಹೋಗಿರುತ್ತೆ, ಆ ನೀರಿನ ಬಿಸಿಗೆ ಈಝಿಯಾಗಿ ಜಿಡ್ಡಿನ ಪಾತ್ರೆ ಉಜ್ಜಿಕೊಳ್ಳಬಹುದು!

 

ಗುಂಡ ಫೋನ್‌ ಮಾಡಲು ಬಾಲ್ಕನಿಗೆ ಬಂದವನೇ ಹೆಂಡತಿ ತನ್ನ ಅಮ್ಮನ ಬಳಿ ಗುಸುಗುಸು ಫೋನಿನಲ್ಲಿ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದ.

ಗುಂಡಿ : ನಾನೇನು ಕಡಿಮೆ ಅಂದುಕೊಂಡ್ಯಾ…..? ನಾನು ನಿನ್ನ ಮಗಳಮ್ಮ ನಿನಗಿಂತ ಒಂದು ಕೈ ಮೇಲು…. ದಿನಾ ಇವರ ಕೈಲಿ ಕಸ, ಮನೆ ಸಾರಿಸು, ಪಾತ್ರೆ ತೊಳಿ, ಬಟ್ಟೆ ಒಗೆಸು ಅಂತ ಎಲ್ಲಾ ಮಾಡಿಸ್ತಾ ಇದ್ದೀನಿ, ಗೊತ್ತಾಯ್ತಾ

ಬಂಡಿ : ಅಷ್ಟು ಮಾತ್ರ ಸಾಲದು ಕಣೆ…ನಾನು ನಿಮ್ಮಪ್ಪನ ಕೈಲಿ ಮಾಡಿಸಿದ ಹಾಗೆ ಹಳೆ ಟ್ರಂಕ್‌ನಲ್ಲಿ ಇರಿಸಿದ್ದ ಎಲ್ಲಾ ಉಲ್ಲನ್‌ ಬಟ್ಟೆ ಒಗೆಸಿಬಿಡು…. ಫ್ಯೂಸ್‌ ತೆಗೆದು ಕರೆಂಟ್‌ ಹೋಯ್ತು ಅಂತ ನೆನೆಸಿದ ರಾಶಿ ಬಟ್ಟೆ ಒಗೆಸು. ಹಾಗೇ ನಿಮ್ಮ ಮನೆ ಕೂಲರ್‌ರಿಪೇರಿ ಮಾಡಿಸು, ಫ್ಯಾನ್‌ ಒರೆಸಿದ ಮೇಲೆ ಸ್ಟೋರ್‌ ರೂಂ ಕ್ಲೀನ್‌ ಮಾಡ್ಸು! ನಾವು ಹೇಗೋ 2 ಮೈಲಿ ನಡೆದುಕೊಂಡೇ ನಿಮ್ಮ ಮನೆಗೆ ಬಂದುಬಿಡ್ತೇವೆ….. ಏನೇನು ಕಾರುಬಾರು ನಡೆಸಿದ್ದೀಯೋ ನೋಡೇ ಬಿಡ್ತೀನಿ….

ಗುಂಡಿ : ಹಾಗೆ ಎಮ್ಮೆ ಕರ್ಕೊಂಡು ಬಾ…. ಹಾಲು ಹಿಂಡಿಸಿ ಪನೀರ್‌ ಮಾಡ್ತೀನಿ!

ತಲೆ ತಿರುಗಿ ಬಿದ್ದು ಮೂರ್ಛೆ ಹೋದ ಗುಂಡನ ಮೇಲೆ ತಣ್ಣೀರು ಚಿಮುಕಿಸಲು ಅತ್ತೆ ಮಾವ ಬಂದಿದ್ದರು.

 

ಕಿಟ್ಟಿ ಕಿತ್ತುಹೋದ ಹಳೆ ಜೀನ್ಸ್ ಪ್ಯಾಂಟ್‌ನ ಝಿಪ್‌ ಹೊಲಿಯುತ್ತಾ ಬಹಳ ಹೊತ್ತಿನಿಂದ ಕೆಮ್ಮುತ್ತಾ ಕುಳಿತಿದ್ದ. ಅತ್ತೇ ಊರಿನಿಂದ ಮರಳಿದ, ಅಲ್ಲೇ ಹಾಲ್ ನಲ್ಲಿ ಮಲಗಿದ್ದ ಅವನ ತಾಯಿ 2 ನಿಮಿಷದ ಕೋಳಿ ನಿದ್ದೆ ಮುಗಿಸಿ ಎದ್ದು ಕುಳಿತರು.

ತಾಯಿ : ಮಗ, ನೀನು ಇಷ್ಟಪಟ್ಟವಳೊಡನೆ ನಿನ್ನ ಮದುವೆ ಮಾಡಿಸಿದೆ. ಬಹಳ ಚೆನ್ನಾಗಿ ನೋಡ್ಕೋತಾಳೆ ಅಂತಿದ್ದೆ. ಈಗ ನೋಡಿದ್ರೆ ನಿನ್ನ ಪ್ಯಾಂಟ್‌ ನೀನೇ ಹೊಲಿದುಕೊಳ್ಳುವ ಗತಿ ಬಂದಿದೆ… ಅದೂ ಇಷ್ಟು ಕೆಮ್ಮಲ್ಲಿ…

ಕಿಟ್ಟಿ : ಅಯ್ಯೋ ಕರ್ಮ! ಇದು ನನ್ನ ಪ್ಯಾಂಟ್‌ ಅಲ್ಲಮ್ಮ…. ಅವಳದೇ… 5-6 ಮುಗಿಸಿದ್ದೀನಿ, ಇದೇ ಕೊನೆಯದು….. ನಂತರ ಇನ್ನಷ್ಟೂ ಒಗೀಬೇಕು!

 

ಪತಿ : ಯಾಕೆ ನೀನು ಬಾಯಿಗೆ ಮಾಸ್ಕ್ ಹಾಕಿಕೊಳ್ಳದೆ ಹಾಗೇ ಹೊರಗೆ ಬಂದುಬಿಟ್ಟಿದ್ದೀಯಾ?

ಪತ್ನಿ : ಮತ್ತೆ…. ಆಗಾಗ ನನಗೆ ಕೋಪ ಬರುತ್ತೆ…. ನಾನು ಮುಖ ಊದಿಸಿಕೊಂಡಿದ್ದೇನೆ ಅಂತ ನಿಮಗೆ ಹೇಗೆ ಗೊತ್ತಾಗಬೇಕು?

 

ನಾಣಿ : ನಿನ್ನೆಯಿಂದ ಮೈ ಕೈ ನೋವು…. ನೋಡಿ ಡಾಕ್ಟ್ರೇ…

ಡಾಕ್ಟರ್‌ : ನಿನ್ನ ಮೈನಲ್ಲಿರುವ 265 ಮೂಳೆಗಳೂ ಚೆನ್ನಾಗೇ ಇದೆಯಲ್ಲ…. ಇನ್ನೇನಯ್ಯ ನಿನಗೆ ಧಾಡಿ!

ನಾಣಿ : ಮೆಲ್ಲಗೆ ಹೇಳಿ ಡಾಕ್ಟ್ರೇ…. ಹೊರಗೆ ನನ್ನ ನಾಯಿ ನಿಂತಿದೆ… 3 ದಿನ ಆಯ್ತು. ಅದಕ್ಕೆ ಊಟ ಹಾಕಿ…. ಎಲ್ಲಾದರೂ ನನ್ನ ಮೂಳೆ ಲೆಕ್ಕ ಕೇಳಿಸಿಕೊಂಡ್ರೆ ಬಲು ಕಷ್ಟ!

 

ಕಿಟ್ಟಿ ಬಸ್‌ ಸ್ಟೇಶನ್‌ ಮುಂದೆ ನಿಂತು ಸೂಸೂ ಮಾಡುತ್ತಿದ್ದ.

ಪೊಲೀಸ್‌ : ಏಯ್‌ ಹುಡುಗ, ಇಲ್ಲೆಲ್ಲ ಸೂಸೂ ಮಾಡಬಾರದು. ಮಾಡಿದ್ರೆ ಹಿಡ್ಕೊಂಡು ಹೋಗಿಬಿಡ್ತೀನಿ!

ಕಿಟ್ಟಿ : ಹಿಡ್ಕೊಳಿ ಪೊಲೀಸಪ್ಪ…. ಹೇಗೂ ಸುಮ್ನೆ ವೇಸ್ಟ್ ಆಗ್ತಿದಿ.

 

ತಿಮ್ಮ : ಗುಂಡ, ನಿನ್ನೆ ನಮ್ಮಜ್ಜಿ ಬಾವಿಗೆ ಬಿದ್ದವರೇ ಲಬೋ ದಿಬೋ ಅಂತ ಬಹಳ ಕೂಗಾಡ್ತಿದ್ರು…….

ಗುಂಡ : ಹೌದಾ….. ಪಾಪ, ಈಗ ಅವರು ಹೇಗಿದ್ದಾರೆ?

ತಿಮ್ಮ : ಈಗ ಬಾವಿಯಿಂದ ಏನೂ ಸೌಂಡ್‌ ಬರ್ತಿಲ್ಲ. ಅವರು ಬಹುಶಃ ಬೇಸಿಗೆಯ ಸೆಖೆಗೆ ಆರಾಮವಾಗಿ ಈಜಾಡಿಕೊಂಡು ಅಲ್ಲೇ ಸೆಟಲ್ ಆಗಿದ್ದಾರೆ ಅನ್ಸುತ್ತೆ.

 

ಸತೀಶ್‌ : ಪಾರ್ಟ್‌ಗೂ ಆರ್ಟ್‌ಗೂ ನಿನಗೆ ವ್ಯತ್ಯಾಸ ಗೊತ್ತೇ?

ಮಹೇಶ್‌ : ಅದೇನೋ ನೀನೇ ತುಸು ವಿವರಿಸಿ ಹೇಳಬಾರದೇ?

ಸತೀಶ್‌ : ಕಟ್ಟಿಕೊಂಡ ತಪ್ಪಿಗೆ ಹೆಂಡತಿ ಜೊತೆ ಸಂಸಾರ ನಡೆಸುವುದು `ಪಾರ್ಟ್‌ ಆಫ್‌ ಲಿವಿಂಗ್‌’ ಇದನ್ನು ಎಲ್ಲರೂ ಮಾಡ್ತಾರೆ ಬಿಡು. ಹೆಂಡತಿ ಇರುವಾಗಲೇ ಇನ್ನೊಬ್ಬ ಗರ್ಲ್ ಫ್ರೆಂಡ್‌ನ್ನೂ ಜೊತೆಗೆ ಸಂಭಾಳಿಸಿಕೊಂಡು ಬದುಕುವುದು ಇದೆಯಲ್ಲ, ಅದನ್ನೇ `ಆರ್ಟ್‌ ಆಫ್‌ ಲಿವಿಂಗ್‌’ ಅಂತಾರೆ!

ಮಹೇಶ್‌ : ಆರ್ಟ್‌ ವಿಷಯ ಪಾರ್ಟ್‌ಗೆ ಗೊತ್ತಾದ್ರೇ ಜೀವನವಿಡೀ ಆಮೇಲೆ ಡಾರ್ಟ್‌ ಸೇವಿಸಬೇಕಾಗುತ್ತೆ……..

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ