ಸೌಂದರ್ಯ ಹೆಚ್ಚಿಸಿಕೊಳ್ಳುವುದರಿಂದ ಕೇವಲ ಸಂತಸ ಹೆಚ್ಚುವುದು ಮಾತ್ರವಲ್ಲದೆ, ಅದು ಆತ್ಮವಿಶ್ವಾಸ ಹೆಚ್ಚಿಸಿ ಪ್ರಪಂಚವನ್ನು ಎದುರಿಸಲು ನಶಕ್ತಿ ತುಂಬುತ್ತದೆ. ಆದರೆ ಇಂದಿನ ದಿನಗಳಲ್ಲಿ ಎಲ್ಲೆಲ್ಲೂ ಮಾಲಿನ್ಯ, ಕಲಬೆರಕೆಯ ಆಹಾರ, ಜಂಕ್‌ ಫುಡ್‌, ಹೆಚ್ಚುತ್ತಿರುವ ಟೆನ್ಶನ್‌ಗಳಿಂದಾಗಿ ಚರ್ಮ ಎಲ್ಲಕ್ಕೂ ಹೆಚ್ಚಾಗಿ ಪ್ರಭಾವಿತಗೊಳ್ಳುತ್ತದೆ. ಇಷ್ಟು ಮಾತ್ರವಲ್ಲ, ರಾತ್ರಿ ಬಹಳ ಹೊತ್ತು ನಿದ್ದೆ ಮಾಡದೆ ಇರುವುದು ಹಾಗೂ ನಮ್ಮ ಆಧುನಿಕ ಜೀವನಶೈಲಿಯ ದುರಭ್ಯಾಸಗಳಿಂದಾಗಿಯೂ ಚರ್ಮವನ್ನು ನಿರ್ಜೀವಗೊಳಿಸುವ ಜೊತೆಯಲ್ಲೇ ಮೊಡವೆ ಆ್ಯಕ್ನೆಗಳಿಗೂ ಗುರಿಯಾಗುತ್ತೇವೆ. ಮೊಡವೆಗಳು ಹೆಚ್ಚಾಗುವ ಇಂಥ ದುರಭ್ಯಾಸಗಳನ್ನು ತ್ಯಜಿಸಿದರೆ ಫ್ಲಾ ಲೆಸ್‌ ಚರ್ಮ ನಿಮ್ಮದಾಗಲಿದೆ.

ಮತ್ತೆ ಮತ್ತೆ ಮುಖ ಮುಟ್ಟಿಕೊಳ್ಳುವುದು : ನಮ್ಮ ಕೈ ದಿನವಿಡೀ ಸಾವಿರಾರು ಬ್ಯಾಕ್ಟೀರಿಯಾಗಳ ಸಂಪರ್ಕಕ್ಕೆ ಬರುತ್ತಿರುತ್ತದೆ. ಹಾಗೇಂತ ಪ್ರತಿ ಸಲ ನಾವು ಡೆಟಾಲ್ ಲೋಶನ್‌ನಲ್ಲಿ ಕೈ ತೊಳೆಯಲಿಕ್ಕಾಗದು. ಹೀಗಾಗಿ ಗೊತ್ತಿದ್ದೋ ಇಲ್ಲದೆಯೋ ಅಂಥ ಬ್ಯಾಕ್ಟೀರಿಯಾ ಸೋಂಕಿತ ಕೈಗಳಿಂದ ಮುಖ ಮುಟ್ಟಿಕೊಳ್ಳುತ್ತಲೇ ಇರುತ್ತೇವೆ. ಈ ರೀತಿ ನಾವು ನಮ್ಮ ಮುಖದ ಚರ್ಮಕ್ಕೆ  ಸತತ ಬ್ಯಾಕ್ಟೀರಿಯಾ, ಧೂಳು, ಕೊಳಕನ್ನು ರವಾನಿಸುತ್ತಿರುತ್ತೇವೆ. ಅದು ಮೊಡವೆಗಳು ಉಂಟಾಗಲು ಪ್ರಧಾನ ಕಾರಣ.

ತಪ್ಪು ವಿಧಾನಗಳಿಂದ ಸ್ಕ್ರಬ್ಮಾಡುವಿಕೆ : ನೀವು ಮತ್ತೆ ಮತ್ತೆ ಮುಖವನ್ನು ಸ್ಕ್ರಬ್‌ ಮಾಡಿಕೊಳ್ಳುವುದರಿಂದ ಅಥವಾ ಟವೆಲ್‌ನಿಂದ ಒರೆಸುವುದರಿಂದ ನಿಮ್ಮ ಮುಖ ಚರ್ಮದ ರೋಮರಂಧ್ರಗಳನ್ನು ಶುಚಿಗೊಳಿಸುತ್ತಿದ್ದೇವೆ ಎಂದು ಭಾವಿಸುತ್ತೀರಿ, ಆದರೆ ವಾಸ್ತವವೇ ಬೇರೆ. ಹೀಗೆ ಮಾಡಿ ನೀವು ನಿಮ್ಮ ಚರ್ಮಕ್ಕೆ ಹಾನಿ ಮಾಡುತ್ತಿರುತ್ತೀರಿ. ಇದರ ಬದಲಿಗೆ ಅತಿ ಮೃದುವಾಗಿ ವಾರಕ್ಕೆ 1-2 ಸಲ ಸ್ಕ್ರಬ್‌ ಮಾಡಿದರೆ ಸಾಕು.

ಕೊಳಕಾದ ಮೇಕಪ್ಬ್ರಶ್ ಬಳಕೆ : ಎಷ್ಟೋ ಸಲ ಸೋಮಾರಿತನದಿಂದಾಗಿ ನಾವು ನಮ್ಮ ಮೇಕಪ್‌ ಬ್ರಶ್ಶನ್ನು ಶುಚಿಗೊಳಿಸದೆಯೇ ಅವಸರದಲ್ಲಿ ಅದನ್ನು ಹಾಗೇ ಬಿಟ್ಟು, ಮತ್ತೆ ಮತ್ತೆ ಬಳಸುತ್ತಲೇ ಇರುತ್ತೇವೆ. ನಮ್ಮನ್ನು ಬಿಟ್ಟರೆ ಬೇರೆ ಯಾರೂ ಈ ಬ್ರಶ್‌ ಬಳಸುತ್ತಿಲ್ಲ, ಹಾಗಿರುವಾಗ ತೊಂದರೆ ಇಲ್ಲ ಎಂದು ಹಗುರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಇದು ತಪ್ಪು. ಬ್ರಶ್‌ನಲ್ಲಿ ತುಂಬಿಕೊಂಡ ಧೂಳು, ಕೊಳಕು, ಬ್ಯಾಕ್ಟೀರಿಯಾ, ಅಳಿದುಳಿದ ಮೇಕಪ್‌ ಸಾಮಗ್ರಿ ಎಲ್ಲಾ ಸೇರಿ ಎರಡನೇ ಸಲ ಬಳಸುವಾಗ ನಮ್ಮ ಚರ್ಮಕ್ಕೆ  ಹಾನಿ ಮಾಡುತ್ತದೆ. ಹೀಗಾಗಿ ಚರ್ಮ ಸೋಂಕಿಗೆ ಒಳಗಾಗಿ, ಮೊಡವೆಗಳು ಆಗುತ್ತವೆ.

ವ್ಯಾಯಾಮದ ನಂತರ ಸ್ನಾನ ಮಾಡದಿರುವಿಕೆ : ವ್ಯಾಯಾಮದ ನಂತರ ಧಾರಾಳ ಬೆವರುತ್ತೇವೆ. ಹೊರಗಿನ ಮಾಲಿನ್ಯ, ಧೂಳು ಮಣ್ಣು, ಇನ್ನಿತರ ಬ್ಯಾಕ್ಟೀರಿಯಾ ಕೂಡಿಕೊಂಡು ದೇಹ ಗಲೀಜಾಗುತ್ತದೆ. ಸೋಮಾರಿತನಕ್ಕೆ ನಾವು ಸ್ನಾನ ಮಾಡದೆ ಇದ್ದರೆ ಇವೆಲ್ಲದರ ಕೂಡುವಿಕೆಯ ಪರಿಣಾಮವಾಗಿ ಮೊಡವೆ ಹೆಚ್ಚುತ್ತದೆ. ಹೀಗಾಗಿ ವ್ಯಾಯಾಮ, ಲಾಂಗ್‌ ವಾಕ್‌, ಜಾಗಿಂಗ್‌ ನಂತರ ಸ್ನಾನ ಅನಿವಾರ್ಯ.

ಅಪೂರ್ಣ ನಿದ್ದೆ : ನಾವು ಸರಿಯಾಗಿ ನಿದ್ದೆ ಮಾಡದೆ ಇರುವುದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡ ಹೆಚ್ಚುತ್ತದೆ. ಇದರ ನೇರ ಪರಿಣಾಮ ಚರ್ಮದ ಮೇಲಾಗುತ್ತದೆ. ಹೀಗಾಗಿ ಸ್ವಸ್ಥ ಚರ್ಮ ಮತ್ತು ಮೊಡವೆಗಳಿಂದ ಮುಕ್ತಿ ಬೇಕಿದ್ದರೆ ನಿಮ್ಮ ನಿದ್ದೆ ಅಪೂರ್ಣ ಆಗದಿರಲಿ.

ಮೊಡವೆ ಜಿಗುಟುವಿಕೆ : ಮೊಡವೆಗಳ ಜೊತೆ ಯಾವುದೇ ರೀತಿಯ ತರಲೆ ಮಾಡಲು ಹೋಗಬಾರದು. ಕೆಲವರಿಗಂತೂ ಮೊಡವೆಗಳನ್ನು ಸದಾ ಜಿಗುಟುತ್ತಿರುವುದೇ ಒಂದು ಟೈಂಪಾಸ್‌. ಇದರಿಂದಾಗಿ ಚರ್ಮದ ಸೋಂಕು ಹೆಚ್ಚಾಗಿ ಅಂಥ ಮೊಡವೆ ಮುಖದ ತುಂಬಾ ಹರಡುವ ಸಾಧ್ಯತೆ ಹೆಚ್ಚು.  ಹೀಗೆ ಒಣಗಿದ ಮೊಡವೆಗಳು ಉಗುರಿನ ಸ್ಪರ್ಶದ ಕಾರಣ, ಕಲೆಗಳನ್ನು ಹಾಗೇ ಉಳಿಸಿಬಿಡುತ್ತವೆ. ಇಂಥ ದುಸ್ಸಾಹಸ ಬೇಡ.

ಸನ್ಎಕ್ಸ್ ಪೋಶರ್‌ : ತೀವ್ರ ಬಿಸಿಲಿನಲ್ಲಿ ಹೆಚ್ಚಾಗಿ ಓಡಾಡುವುದರಿಂದಲೂ ಮೊಡವೆಗಳು ಹೆಚ್ಚಾಗುತ್ತವೆ. ತೀವ್ರ ಬಿಸಿಲಿನ ಓಡಾಟ ಟ್ಯಾನಿಂಗ್‌ ಉಂಟು ಮಾಡುತ್ತದೆ, ಜೊತೆಗೆ ಚರ್ಮ ಬಲು ಡ್ರೈ ಆಗುತ್ತದೆ. ಇದರಿಂದಾಗಿ ಚರ್ಮದೊಳಗಿನ ಜೀವಸತ್ವ ನಶಿಸಿ, ಮೊಡವೆಗಳಾಗಲು ದಾರಿ ಆಗುತ್ತದೆ. ಹೀಗಾಗಿ ತೀವ್ರ ಬಿಸಿಲಿಗೆ ಹೋಗು ಮೊದಲು ಮುಖ ಕವರ್‌ ಮಾಡಿ ಅಥವಾ 30-40 SPFನ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಿ.

ಸದಾ ಒತ್ತಡದಲ್ಲಿ ಮುಳುಗಿರುವುದು : ಯಾರಿಗೆ ಹೆಚ್ಚಿನ ಮೊಡವೆಗಳ ಕಾಟವಿದೆಯೋ, ಅಂಥವರು ಹೆಚ್ಚು ಹೆಚ್ಚಾಗಿ ಮಾನಸಿಕ ಒತ್ತಡಕ್ಕೆ ಸಿಲುಕಬಾರದು. ಏಕೆಂದರೆ ಒತ್ತಡದಲ್ಲಿ ಮೊಡವೆಗಳು ಇನ್ನಷ್ಟು ಹೆಚ್ಚುತ್ತವೆ. ಒತ್ತಡದಿಂದ ಪಾರಾಗಲು ಎಂಥ ಪರಿಸ್ಥಿತಿ ಬಂದರೂ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳಬಾರದು. ನೀವು ಎಷ್ಟು ಖುಷಿಯಿಂದ ಇರುತ್ತೀರೋ, ಮೊಡವೆಗಳು ನಿಮ್ಮಿಂದ ಅಷ್ಟೆ ದೂರ ಸರಿಯುತ್ತವೆ.

ತಪ್ಪು ಆಹಾರ ಕ್ರಮ : ಮೊಡವೆಗಳ ಮತ್ತೊಂದು ಮುಖ್ಯ ಕಾರಣವೆಂದರೆ, ಮನಬಂದಂತೆ ಆಹಾರಾಭ್ಯಾಸ ಬೆಳೆಸಿಕೊಳ್ಳುವುದು, ಇಷ್ಟ ಬಂದಾಗ ತಿನ್ನುವುದು, ಜಂಕ್‌ ಫುಡ್‌, ಫಾಸ್ಟ್ ಫುಡ್‌ ಇತ್ಯಾದಿಗಳಿಗೆ ಮೊರೆಹೋಗಿ ಪೌಷ್ಟಿಕ ಆಹಾರ ಮರೆತೇಬಿಡುತ್ತೇವೆ. ಇಂಥವನ್ನೆಲ್ಲ ತೊರೆದು ಆರೋಗ್ಯಕರ ಆಹಾರ ಕ್ರಮ ಬೆಳೆಸಿಕೊಳ್ಳಿ. ಫೈಬರ್‌ಯುಕ್ತ ಆಹಾರ ಸೇವಿಸಿ. ಆದಷ್ಟೂ ಫ್ಯಾಟ್‌ ಫುಡ್‌, ಎಣ್ಣೆ ಅಂಶದ ಆಹಾರ ಕಡಿಮೆ ಮಾಡಿ. ದಿನಕ್ಕೆ 10-12  ಗ್ಲಾಸ್‌ ನೀರು ಕುಡಿಯಿರಿ. ಇದರಿಂದ ನಿಮ್ಮ ಜೀರ್ಣಶಕ್ತಿ. ಎಷ್ಟೋ ವರ್ಧಿಸುತ್ತದೆ, ಹೊಟ್ಟೆ ಹಗುರ ಎನಿಸುತ್ತದೆ. ಹೀಗಾಗಿ ಚರ್ಮ ಕಲೆರಹಿತ, ಹೊಳೆಹೊಳೆಯುತ್ತಾ ಇರುತ್ತದೆ. ತಾಜಾ ಹಸಿ  ತರಕಾರಿಗಳನ್ನು ಮೊಳಕೆಕಾಳಿನೊಡನೆ ಸಲಾಡ್‌ ಆಗಿ ಹೆಚ್ಚು ಸೇವಿಸಿ. ಹಣ್ಣು ಹಂಪಲು ಧಾರಾಳ ಇರಲಿ. ಡ್ರಿಂಕ್ಸ್ ಮುಟ್ಟದೆ, ಕಾಫಿ/ಟೀ ಬಿಟ್ಟು ಗ್ರೀನ್‌ ಟೀ ಸೇವಿಸಿ.

ಗಿರಿಜಾಂಬಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ