ನೀವು ಮೇಕಪ್ ಮಾಡಿಕೊಂಡ ಹಾಗೂ ಇರಬೇಕು, ಆದರೆ ಅದು ಹೆಚ್ಚಾಗಿ ಎದ್ದುಕಾಣಬಾರದೆಂದು ಬಯಸಿದರೆ, ಅದಕ್ಕಾಗಿ ಮಿನರಲ್ ಮೇಕಪ್ ಅನುಸರಿಸಿ. ಇದು ಲೇಟೆಸ್ಟ್ ಟ್ರೆಂಡ್ ಮಾತ್ರವಲ್ಲದೆ, ಪ್ರತಿಯೊಬ್ಬ ವಯೋಮಾನದವರೂ ಇಷ್ಟಪಟ್ಟು ಆರಿಸಿಕೊಳ್ಳುವಂಥದ್ದು. ಏಕೆಂದರೆ ಇದು ಮುಖಕ್ಕೆ ಹೆಚ್ಚಿನ ಕಾಂತಿ ಮಾತ್ರ ತಂದುಕೊಡುವುದಲ್ಲದೆ, ಚರ್ಮ ಸಂರಕ್ಷಣೆಯತ್ತಲೂ ಹೆಚ್ಚಿನ ನಿಗಾ ವಹಿಸುತ್ತದೆ. ಆದರೆ ಈಗಲೂ ಕೆಲವು ಮಹಿಳೆಯರಿಗೆ ಈ ಮಿನರಲ್ ಮೇಕಪ್ ಟ್ರೆಡಿಶನಲ್ ಮೇಕಪ್ ಹೌದೋ ಅಲ್ಲವೋ, ಅದಕ್ಕಿಂತಲೂ ಉತ್ತಮ ತಾನೇ? ಇದು ನೈಸರ್ಗಿಕ ಹೌದು ತಾನೇ…..? ಇತ್ಯಾದಿ ಸಂದೇಹಗಳು ಕಾಡುತ್ತವೆ.
ಇಂದಿನ ಸೌಂದರ್ಯ ತಜ್ಞೆಯರ ಅಭಿಪ್ರಾಯದಲ್ಲಿ ಮಿನರಲ್ ಮೇಕಪ್ ನೈಸರ್ಗಿಕ ವಸ್ತುಗಳಿಂದ ತಯಾರಾದುದು. ಇದರಲ್ಲಿ ಹೆವಿ ಕೆಮಿಕಲ್ಸ್ ನ್ನು ಖಂಡಿತಾ ಬೆರೆಸಿರುವುದಿಲ್ಲ. ಇದರಿಂದ ಚರ್ಮ ಎಂದಿಗೂ ಒರಟಾಗುವುದಿಲ್ಲ. ಇದರಲ್ಲಿ ಟ್ರೆಡಿಶನಲ್ ಕಾಸ್ಮೆಟಿಕ್ಸ್ ನ ಉತ್ತಮ ಅಂಶಗಳೂ ಬೆರೆತಿವೆ.
ಇದರ ಲಾಭಗಳು
ಸೂಕ್ಷ್ಮ ಸಂವೇದನಾಶೀಲ ತ್ವಚೆಯುಳ್ಳವರಿಗೂ ಇದು ಹಿತಕಾರಿ. ಇದರ ಕೆಲವು ಪ್ರಾಡಕ್ಟ್ಸ್ ಫ್ರೂಟ್, ಬೊಟ್ಯಾನಿಕಲ್ ಪ್ರಾಡಕ್ಟ್ಸ್ ಹಾಗೂ ವಿಟಮಿನ್‌ಗಳಿಂದ ತಯಾರಾಗುತ್ತವೆ. ಇದು ಆರೋಗ್ಯಕರ ಚರ್ಮಕ್ಕೆ ಪೂರಕ. ಇವುಗಳ ನಿಯಮಿತ ಬಳಕೆಯಿಂದ ಚರ್ಮದ ಮೇಲೆ ಸುಕ್ಕು, ಕಲೆ, ಡಾರ್ಕ್ ಸ್ಪಾಟ್ಸ್ ಇತ್ಯಾದಿಗಳಾಗುವುದಿಲ್ಲ.
ಸೌಂದರ್ಯ ತಜ್ಞೆಯರ ಪ್ರಕಾರ, ಮಿನರಲ್ ಮೇಕಪ್ ನ್ಯಾಚುರಲ್ SPF (ಸನ್‌ಸ್ಕ್ರೀನ್)ನ ಕೆಲಸವನ್ನೂ ಮಾಡುತ್ತದೆ. ಇದನ್ನು ಬಳಸುವುದರಿಂದ ಚರ್ಮದ ರೋಮ ರಂಧ್ರಗಳು ಕ್ಲೋಸ್‌ಆಗುವುದಿಲ್ಲ. ಓಪನ್ ಪೋರ್ಸ್ ಕಾರಣ ಅದು ಸಹಜವಾಗಿ ಉಸಿರಾಡಬಲ್ಲದು.
ಇದು ಬಹಳ ಲೈಟ್ ಆದಕಾರಣ, ಮುಖದ ಮೇಲೆ ಮಾಸ್ಕ್ ತರಹ ಕಾಣಿಸುವುದಿಲ್ಲ.
ಮುಖ್ಯವಾಗಿ ಗಮನಿಸಬೇಕಾದುದು, ಇದಕ್ಕೆ ಯಾವುದೇ ಎಕ್ಸ್ ಪೈರಿ ಡೇಟ್ ಇಲ್ಲ! ಖನಿಜ ಮೂಲಗಳಂದ ದೊರೆತ ನೈಸರ್ಗಿಕ ವಸ್ತುವಾದ್ದರಿಂದ ಹೆಚ್ಚು ಸುರಕ್ಷಿತ. ಹೀಗಾಗಿ ಅನೇಕ ವರ್ಷಗಳ ಕಾಲ ಬಳಸಬಹುದು. ಚರ್ಮಕ್ಕೆ ಹಾನಿ ಮಾಡುವಂತಹ ಯಾವ ಅಂಶ ಇದರಲ್ಲಿ ಇಲ್ಲ.
ಇದನ್ನು ಗಮನಿಸಿ
ಮಿನರಲ್ ಮೇಕಪ್ ಶ್ಯಾಮಲ ವರ್ಣದವರಿಗೆ ಹೆಚ್ಚು ಒಪ್ಪುವುದಿಲ್ಲ. ಆದ್ದರಿಂದ ಇದನ್ನು ಖರೀದಿಸುವ ಮೊದಲು ನಿಮ್ಮ ದೇಹದ ಚರ್ಮಕ್ಕೆ ಇದು ಒಪ್ಪುತ್ತದೋ ಇಲ್ಲವೋ ಎಂಬುದನ್ನು ನೇರವಾಗಿ ಸ್ಕಿನ್ ಸ್ಪೆಷಲಿಸ್ಟ್ ರ ಬಳಿಯೇ ಕೇಳಿ ತಿಳಿದುಕೊಳ್ಳಿ. ಎಷ್ಟೋ ಕಂಪನಿಗಳು ಇದೇ ಹೆಸರಲ್ಲಿ ಕೃತಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಅದರಲ್ಲಿ ನೈಸರ್ಗಿಕ ಅಂಶಗಳಿಲ್ಲದಿರುವುದರಿಂದ, ಅಂಥ ಪ್ರಾಡಕ್ಟ್ಸ್ ಬಳಸಿದಾಗ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ. ಹೀಗಾಗಿ ಸೌಂದರ್ಯ ಪ್ರಸಾಧನಗಳು ತುಸು ದುಬಾರಿಯಾದರೂ ಸರಿ, ಸ್ಟ್ಯಾಂಡರ್ಡ್ ಕಂಪನಿಗಳಿಂದಲೇ ಖರೀದಿಸಿ.
– ಜಿ. ಸರಿತಾ