ಸನಾತನ ವೈದಿಕ ಧರ್ಮದ ಮೂರ್ತಿಮಂತ ಜಲರೂಪೀ ಪ್ರತೀಕವೇ ಗಂಗಾನದಿ. ಗಂಗೆ ನಮ್ಮ ದೇಶದ ಜೀವ ನದಿ, ಧರ್ಮ ನದಿ, ಆಧ್ಯಾತ್ಮ ನದಿ, ದೇವ ನದಿ. ನಮ್ಮ ಶಾಸ್ತ್ರ-ಪುರಾಣಗಳಲ್ಲಿ ಗಂಗೆಗೆ ಕೊಟ್ಟಿರುವ ಮಹತ್ವ ಬೇರಾವ ತೀರ್ಥಕ್ಕೂ ನದಿಗೂ ಇಲ್ಲ. ಗಂಗೆಯು ಸಾಕ್ಷಾತ್ ಮಹಾವಿಷ್ಣುವಿನ ಪಾದಮೂಲದಿಂದ ಜನಿಸಿ, ಚತುರ್ಮುಖನ ಕಮಂಡಲುವಿನಲ್ಲಿ ನೆಲೆಸಿ, ದೇವಲೋಕದಲ್ಲಿ ಸಂಚರಿಸಿ, ಮಹಾದೇವನ ಜಟಾಮೂಲದಿಂದ ಭುವಿಗೆ ಅವತರಿಸಿ, ದರ್ಶನ-ಸ್ಪರ್ಷ-ಸ್ಮರಣ ಮಾತ್ರದಿಂದ ಪಾಪಗಳನ್ನು ಪರಿಹರಿಸುವ ಮಹಾ ಸಾಮರ್ಥ್ಯವನ್ನು ಪಡೆದಿರುವ ಮಹಾನದಿ.
ಹಿಂದೂ ಧರ್ಮಾನುಯಾಯಿಯಾದ ಪ್ರತಿಯೊಬ್ಬನಿಗೂ ಇರುವ ಆಸೆ ಜೀವನದಲ್ಲಿ ಒಮ್ಮೆಯಾದರೂ ಗಂಗಾಸ್ನಾನ ಮಾಡುವುದು. ನಮ್ಮ ಧರ್ಮದ ಆಂತರಿಕ ಪ್ರಭೇದಗಳಾದ ವೈದಿಕ, ವೈಷ್ಣವ, ಶೈವ, ಶಾಕ್ತ, ಸೌರ, ಗಾಣಪತ್ಯ ಮೊದಲಾದ ಎಲ್ಲರಿಗೂ ಗಂಗೆ ಪರಮ ಪವಿತ್ರ. ಗಂಗಾಜಲವು ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿ ಇದ್ದೇ ಇರುತ್ತದೆ. ಕಾಶಿಯಲ್ಲಿ ಗಂಗಾಸ್ನಾನ ಮಾಡಿ ದೇಹ ತ್ಯಜಿಸಿದವರನ್ನು ಸಾಕ್ಷಾತ್ ರುದ್ರದೇವರೇ ತಾರಕ ಮಂತ್ರೋಪದೇಶ ಮಾಡಿ ಮೋಕ್ಷ ಮಾರ್ಗಕ್ಕೆ ಕೊಂಡೊಯ್ಯುತ್ತಾರೆಂದು ನಮ್ಮ ಪುರಾಣಗಳು ಸಾರುತ್ತವೆ.
ದರ್ಶನಾತ್ ಸ್ಪರ್ಷನಾತ್ ಪಾನಾತ್ ತಥಾ ಗಂಗೇತಿ ಕೀರ್ತನಾತ್ ।
ಪುನಾತಿ ಪುಣ್ಯಪುರುಷಾನ್ ಶತಶೋಽಥ ಸಹಸ್ರಶಃ ।। (ಅಗ್ನಿಪುರಾಣ)
ದರ್ಶನದಿಂದ, ಸ್ಪರ್ಷದಿಂದ, ಪಾನದಿಂದ ಮತ್ತು ಗಂಗಾ-ಗಂಗಾ ಎಂದು ಸ್ಮರಣೆ ಮಾಡುವುದರಿಂದ, ಅಂತಹ ಪುಣ್ಯವಂತರಾದ ಪುರುಷರ ನೂರು, ಸಾವಿರಾರು ಪೂರ್ವಜರನ್ನು ಸಹ ಗಂಗೆಯು ಪಾವನಗೊಳಿಸುತ್ತಾಳೆ (ಉದ್ಧರಿಸುತ್ತಾಳೆ).

ಪ್ರತ್ಯಕ್ಷವಾಗಿ ಗಂಗೆಯ ಸಾನ್ನಿಧ್ಯ ದೊರಕದಿದ್ದರೂ, ಕೇವಲ ಗಂಗಾ-ಗಂಗಾ ಎಂದು ನಾಮಸ್ಮರಣೆಯನ್ನು ಮಾಡಿದರೂ ಗಂಗಾಸ್ನಾನ ಫಲ ದೊರಕುತ್ತದೆ.
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ ।
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ।। (ಪದ್ಮಪುರಾಣ)
ನೂರಾರು ಯೋಜನಗಳಷ್ಟು ದೂರದಿಂದಲೂ, ಯಾರು ಗಂಗಾ-ಗಂಗಾ ಎಂದು ಸ್ಮರಣೆ ಮಾಡುತ್ತಾರೋ, ಅವನು ಸರ್ವಪಾಪಗಳಿಂದಲೂ ಮುಕ್ತನಾಗಿ ವಿಷ್ಣುಲೋಕಕ್ಕೆ ಹೋಗುತ್ತಾನೆ.
ಗಂಗೆಯನ್ನು "ಸರ್ವತೀರ್ಥಮಯೀ", ಎಲ್ಲ ಪವಿತ್ರ ತೀರ್ಥಗಳನ್ನು ತನ್ನಲ್ಲಿ ಸಮಾಹಿಸಿಕೊಂಡವಳು ಎಂದು ಕರೆಯಲಾಗಿದೆ. ಗಂಗಾಸ್ನಾನ ದರ್ಶನ ಸ್ಮರಣೆಯಿಂದ ಎಲ್ಲ ತೀರ್ಥಗಳಲ್ಲಿ ಮಿಂದ ಫಲ ಬರುತ್ತದೆ. ಗಂಗಾನದಿಯ ಜಲವನ್ನು ಶಾಸ್ತ್ರಗಳಲ್ಲಿ ಬ್ರಹ್ಮದ್ರವ, ಧರ್ಮದ್ರವವೆಂದು ಕೊಂಡಾಡಲಾಗಿದೆ. ಆದ್ದರಿಂದ ಗಂಗಾನದಿಯು ಬ್ರಹ್ಮವಸ್ತುವಿನ ವಿಭೂತಿರೂಪಳೇ ಆಗಿರುತ್ತಾಳೆ.
ವಿಷ್ಣುಪಾದಾಬ್ಜ ಸಂಭೂತೇ ಗಂಗೇ ತ್ರಿಪಥಗಾಮಿನಿ ।
ಬ್ರಹ್ಮದ್ರವೇತಿ ವಿಖ್ಯಾತಾ ಪಾಪಂ ಮೇ ಹರ ಜಾಹ್ನವಿ ।।
ಮಹಾವಿಷ್ಣುವಿನ ಪಾದಪದ್ಮಗಳಿಂದ ಹುಟ್ಟಿ, ಬ್ರಹ್ಮದೇವನ ಕಮಂಡಲುವಿನಲ್ಲಿ ನೆಲೆಸಿರುವ ಕಾರಣ ಬ್ರಹ್ಮದ್ರವವೆಂದು ವಿಖ್ಯಾತಳಾದ, ಸ್ವರ್ಗ-ಭೂಮಿ-ಪಾತಾಳ ಹೀಗೆ ಮೂರು ಲೋಕಗಳಲ್ಲಿ ಸಂಚರಿಸುವ, ಜುಹ್ನು ಮಹರ್ಷಿಯ ಪುತ್ರಿಯಾದ ಗಂಗಾದೇವಿಯೇ ನನ್ನ ಸಮಸ್ತ ಪಾಪಗಳನ್ನು ನಾಶಮಾಡು.

ಸಮಸ್ತ ಲೊಕ ಕಲ್ಯಾಣಕ್ಕಾಗಿ, ಸಜ್ಜನರ ಉದ್ಧಾರಕ್ಕಾಗಿ, ಪಾಪಗಳನ್ನು ಪರಿಹರಿಸುವದಕ್ಕಾಗಿ ಗಂಗಾದೇವಿಯು ಸ್ವರ್ಗದಿಂದ ಭೂಮಿಗೆ ಅವತರಿಸಿದ ಪುಣ್ಯದಿನವೇ ಗಂಗಾ ಜಯಂತೀ. ಇದನ್ನು ಗಂಗಾ ದಶಹರಾ, ಭಾಗೀರಥಿ ಜಯಂತೀ, ದಶಹರ ದಶಮೀ ಎಂದೂ ಕರೆಯಲಾಗುತ್ತದೆ. ಪ್ರತಿವರ್ಷ ಜ್ಯೇಷ್ಠಮಾಸ ಶುಕ್ಲಪಕ್ಷ ದಶಮೀ ತಿಥಿಯಂದು ಗಂಗಾ ದಶಹರಾ ಆಚರಿಸಲಾಗುತ್ತದೆ.
ದಶಮೀ ಶುಕ್ಲಪಕ್ಷೇ ತು ಜ್ಯೇಷ್ಠಮಾಸೇ ಬುಧೇಽಹನಿ ।
ಅವತೀರ್ಣಾ ಯತಃ ಸ್ವರ್ಗಾತ್ ಹಸ್ತರ್ಕ್ಷೇ ಚ ಸರಿದ್ವರಾ ।। (ವರಾಹ ಪುರಾಣ)





